ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸು ಮಾರುವ ಮಾರಿ

ಕವಿತೆ
Last Updated 18 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಊರಿಗೇ ಮಾರಿ ಬಂದಂತೆ
ಹರಿದು ಬಂದಿತು ಮಕ್ಕಳ ಪಾಲಿಗೆ ಉರಿಮಾರಿ.
 
ಇಂಗ್ಲಿಷಿನ ಮೋಹಕ್ಕೆ ಸಿಲುಕಿದ ಅಪ್ಪ ಅಮ್ಮರ ಭ್ರಮೆಗೆ
ಅನುಗಾಲವು ನೀರೆರೆಯುವ ಕನಸುಗಳ ಮೃಗಜಲಬಿತ್ತಿ
ಸುತ್ತಲಿನ ಹತ್ತು ಹಲವಾರು ಶಾಲೆಗಳ ಹಾಳುಸುರಿವ ಕೊಂಪೆ ಮಾಡಿ
ಬಂತು ಬಂತದೋ ಬಂತು ಕನಸು ಮಾರುವ ಕಾನ್ವೆಂಟ್ ಮಾರಿ.
 
ಬಾಳಿನಲಿ ಜೋಡಿಯಾಗದ ಗಂಡ ಹೆಂಡಿರು ಕೂಡಿ
ಅನುಗಾಲವು ಕಿತ್ತಾಡುವ ಅಂತರಂಗವ ಮುಚ್ಚಿ
ಹೊತ್ತು ಮಾರುವ ಸರಕಿನ ಬಣ್ಣಬಣ್ಣದ ಮೂಟೆ ಬಿಚ್ಚಿ
ಬಂತು ಬಂತದೋ ಸೂಟುಬೂಟು ಸಮವಸ್ತ್ರದ ಕೂಗುಮಾರಿ.
 
ಇರುವನೊಬ್ಬ ಮಗನು ಇಂಜಿನಿಯರೇ ಆಗಬೇಕು
ಇರುವ ಒಬ್ಬಳೇ ಮಗಳು ಡಾಕ್ಟರಾಗಿ ಮೆರೆಯಬೇಕು
ಕೆಎಎಸ್ ಕೆಪಿಎಸ್ ಐಎಎಸ್ ಐಪಿಎಸ್
ಮಾರುವಾ ಬಂಡಿತುಂಬ ಎಲ್ಲವೂ ಕೊಳ್ಳುವ ಸರಕು
 
ಹೊರಗಿನ ನಾಮಫಲಕ ಎದ್ದು ತೋರಿದೆ ಇಂಟರ್‌ನ್ಯಾಷನಲ್
ಬಂದವರ ಕಣ್ಸೆಳೆದು ಬರುವವರ ಮನಸೆಳೆದು
ಮೂರು ಹೊತ್ತೂ ಮಾರುತ್ತಿದೆ ಕನಸುಗಳ ಸುತ್ತಿಸುತ್ತಿ
 
ಕೋರಗೆರೆಯ ಕನ್ನಡಶಾಲೆ
ಆರುನೂರರ ಅಂಕಿಸಂಖ್ಯೆಯ ಮಕ್ಕಳಶಾಲೆ
ಕಡವಗೆರೆಯ ಬಡಮಕ್ಕಳ ಶಾಲೆ
ಬಿಸಿಯೂಟದ ಹಸುಮಕ್ಕಳ ನಿಜದುಣಿಸಿನ ಶಾಲೆ
 
ಹಸಿವಿಗನ್ನವನಿಕ್ಕಿ ಅರಿವ ಬಿತ್ತಿ ಭರವಸೆಯ ಬೆಳೆವ
ಸುತ್ತಲಿನ ಹತ್ತಾರು ಹಳ್ಳಿಗಳ
ನೆಲದೊಡಲಿನ ದನಿಪದಗಳ ಕನ್ನಡಂಗಳ
ಉಕ್ಕಿ ಉಲಿಯುವ ನಕ್ಕು ಕಲಿಯುವ ಕನ್ನಡಶಾಲೆ
ಅರೆಬರೆಯಾಗುವ ಕರಕರಗುತ ಸೊರಸೊರಗುತ
ಆರಕ್ಕೆ ಏರದ ಮೂರಕ್ಕೆ ಇಳಿಯದ
ಮೂಲ ಮಾಧ್ಯಮ ಬೋಧೆಯ ಕನ್ನಡ ಶಾಲೆ
ಹೆಸರಿಲ್ಲದೆ ಉಸಿರಾಡಿವೆ ಉಸಿರಿಲ್ಲದೆ ಹೆಸರಾಡಿವೆ ಶಾಲೆ
 
ಮಕ್ಕಳ ಶಿಕ್ಷಣ ಹಕ್ಕಿನ ಕಾಯ್ದೆಯ ನೆರಳಿನ ಗಿಡುಗ
ರವರವ ರವ್ವನೆ ಹಾರುತ ಬಂತು
ಕೂಲಿಕುಂಬಳಿಯವರ ಕನಸಿಗೆ ರೆಕ್ಕೆಯ ಕಟ್ಟಿತು
 
ಸೂಟುಬೂಟಿನ ಮಮ್ಮಿಡ್ಯಾಡಿಯ
ಗುಡ್‌ ಮಾರ್ನಿಂಗು ಗುಡ್ ಈವಿನಿಂಗು
ಪಂಜರಗಿಳಿಗಳ ಕಂಠಪಾಠದ ದನಿಮೊಳಗು
ಹಬ್ಬಿತು ಹರಿಯಿತು ಹಳ್ಳಿಗಾಡಿನ ಮಕ್ಕಳಲಿ
ಹಳದಿಯ ಬಣ್ಣದ ಹಸಿರಿನ ಫಲಕದ
ಓಮ್ನಿಗಳಲ್ಲಿ ‘ಕುರಿಗಳು ಸಾರ್ ಕುರಿಗಳು’
ಕಿಕ್ಕಿರಿದೊಟ್ಟಿದ ವ್ಯಾನುಗಳಲ್ಲಿ ಮಕ್ಕಳು ಮರಿಗಳು
ಆಹಾ ಓಹೋ ಸಮವಸ್ತ್ರದ ಅಳುಮುಂಜಿಗಳು
ಮಾತಲಿ ನಗುವಲಿ ಗುಡ್ ಬಾಯ್ ಟಾಟಾ ಅವ್ವಗಳು
 
ಬಡವರ ಬಗ್ಗರ ಕನ್ನಡ ಮಕ್ಕಳ
ಬಡಶಾಲೆಗಳೆಲ್ಲ ಮುಚ್ಚಿದವು
ಕುರುಡರು ಕುಂಟರು ಬಾಯಿಲ್ಲದ ಬಾಲೆಯರು
ಅವರು ಇವರು ಸೊಲ್ಲೆತ್ತದ ಸೂತಪುತ್ರರು
ಜೀತಕೆ ನಡೆದರು ಕ್ವಾರಿಯ ಬಂಡೆಗೆ
ಇಟ್ಟಿಗೆ ಮಾಡುವ ಸುಟ್ಟುರಿಯುವ ಗೂಡಿಗೆ
 
ಕಾನ್ವೆಂಟ್ ಸೇರಿದ ಮಕ್ಕಳು ಮರೆತರು
ನಲಿ–ಕಲಿ ಹಾಡಿನ ತುತ್ತೂರಿ
ಒಂದು ಎರಡು ಬಾಳೆಲೆ ಹರಡು
ಮೂರು ನಾಲ್ಕು ಅನ್ನ ಹಾಕು
ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕೆ ನೀರಿಲ್ಲ
 
ಸುತ್ತಮುತ್ತಲ ಬದುಕ ನೋಡುವ
ಇತಿಹಾಸದ ಗತ ಪುಟಗಳ ಎದೆಯ ಕಣ್ಣಲಿ ಕಾಣುವ
ಸರ್ವ ಜನಾಂಗದ ಶಾಂತಿಯ ತೋಟವ
ಹಾಡುತ ಅರಿಯುವ ಅರಿಯುತ ಬಾಳುವ
ಪದಗಳು ಮರೆತವು
ರೈನ್ ರೈನ್ ಗೋ ಅವೇ ಗೋ ಅವೇ
ಅರ್ಥವಾಗದ ರೈಮು ರೀಮಿಗೆ
ಲೆಫ್ಟು ರೈಟಿನ ಪಾದಪದಗಳು 
ಉಸಿರು ಸಿಕ್ಕಿದ ಒನ್‌ಒನ್ ಝಾ ಒನ್‌ಗಳು
ಸಾವಿರವಿದ್ದೂ ಸೊಲ್ಲೇ ಇಲ್ಲದ ಸರೀಸೃಪಗಳು
 
ಕನ್ನಡದಲಿ ಅತ್ತರೆ ಹತ್ತು
ತೂಕಡಿಸಿದರೆ ಐವತ್ತು
ಮರೆತು ಮಲಗಿದರೆ ನೂರು
ದಂಡ ತೆರುವ ದಂಡಗಾಡಿನ ಮಕ್ಕಳು
ನೂರು ಇನ್ನೂರಾಗಿ ಇನ್ನೂರು ನಾನ್ನೂರಾಗುವ
ಗುಣಾಕಾರದ ಲೆಕ್ಕಾಚಾರಿಗಳ ಕಾನ್ವೆಂಟುಗಳು
 
ಹೊರಗೆ ಬೃಂದಾವನ ಒಳಗೆ ಲೊಳಲೊಟ್ಟೆ
ತೋರಿಕೆಗೆ ಬಿಳಿತೊಗಲಿನ ವ್ಯವಹಾರ
ಒಳಗೆ ಸಾಮರಸ್ಯವಿಲ್ಲದ ಸಂಸಾರ
ಹಣಹೆಚ್ಚಿದಷ್ಟು ಗುಣಮರೆತ ಬಡಿವಾರ
ತೋರಿಕೆಯಲಿ ಗಂಡ–ಹೆಂಡತಿ
ಕೂಡಿಕೆಯಲಿ ಮಿಂಡಗರತಿ
ಕಾಮಕಿಚ್ಚಾಗಿ ಕಿಚ್ಚು ಹುಚ್ಚಾಗಿ ಸ್ವೈರವೆಂಬುದು ಸ್ವರತಿ
ಶಿಕ್ಷಣದ ದಂಧೆಯಲಿ ದಂದಾದುಂದಿಯ ಆತ್ಮರತಿ
ಅವಳ ತಿನ್ನದ ಇವನು ಇವನ ತಿನ್ನದ ಅವಳು
ಸೇಡಿಗೆ ಸೇಡು ಮಸೆದು ಮಕ್ಕಳಬಾಳಿಗೆ ಮೃತ್ಯುಕೂಪ
ತಿನ್ನುವ ಅನ್ನಕೆ ವಿಷವ ಹಾಕಿ ಮಕ್ಕಳ ಬಾಳು 
ಉರಿನಂಜಿಗೆ ಧೂಪ
ಊರಿಗೆ ಮಾರಿ ಬಂದಂತೆ
ಹರಿದು ಬಂದಿತು ಮಕ್ಕಳ ಪಾಲಿಗೆ ಉರಿಮಾರ

                        -ಪ್ರೊ. ಎಸ್.ಜಿ. ಸಿದ್ಧರಾಮಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT