ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಕ್ಕರ್‌ ಕರ್ನಾಟಕಕ್ಕೆ ವರವಾಗುವರೇ?

Last Updated 18 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಲೋಕಸಭೆ ಚುನಾವಣೆ ಬಳಿಕ ಮುಖ್ಯಮಂತ್ರಿ ಸ್ಥಾನದಿಂದ ಕೇಂದ್ರ ಸಚಿವರಾಗಿ ಪದೋನ್ನತಿ ಹೊಂದಿದ್ದ ಮನೋಹರ ಪರಿಕ್ಕರ್‌ ಇದೀಗ ಮತ್ತೆ ಗೋವಾದ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ರಾಜ್ಯಕ್ಕೆ ಮರಳಿದ್ದಾರೆ.

40ರಲ್ಲಿ ಕೇವಲ 13 ಸ್ಥಾನ ಗೆದ್ದ ಬಿಜೆಪಿ, ಸರ್ಕಾರ ರಚಿಸಲು ಪ್ರಾದೇಶಿಕ ಪಕ್ಷಗಳ ಬೆಂಬಲ ಕೋರಿದಾಗ, ‘ಪರಿಕ್ಕರ್‌ ನೇತೃತ್ವ ಇರುವುದಾದರೆ ಬೆಂಬಲ ನೀಡಲು ಸಿದ್ಧ’ ಎಂದು ಮಹಾರಾಷ್ಟ್ರವಾದಿ ಗೋಮಾಂತಕ್‌ ಪಕ್ಷ ಹಾಗೂ ಗೋವಾ ಫಾರ್ವರ್ಡ್‌ ಪಕ್ಷಗಳು ಕೋರಿದ್ದವು. ಅಂಥ ಕೋರಿಕೆ ಬಂದಿದ್ದೇ ತಡ, ‘ನಾವು ಬಯಸಿದ್ದೂ ಅದನ್ನೇ’ ಎಂಬಂತೆ ಪಕ್ಷದ ಹೈಕಮಾಂಡ್‌ ತಡಮಾಡದೆ ಅವರನ್ನು ಮರಳಿ ಗೋವಾಗೆ ಕಳುಹಿಸಿಯೇ ಬಿಟ್ಟಿದೆ.

28 ತಿಂಗಳುಗಳ ಕಾಲ ರಕ್ಷಣಾ ಸಚಿವರಾಗಿದ್ದ ಪರಿಕ್ಕರ್‌ ವಾರಾಂತ್ಯಕ್ಕೆ ಗೋವಾಗೆ ತೆರಳುವ ಪರಿಪಾಠ ಇರಿಸಿಕೊಂಡು, ಮಾತೃರಾಜ್ಯದೊಂದಿಗಿನ ನಂಟನ್ನು ಮುಂದುವರಿಸಿಕೊಂಡೇ ಇದ್ದವರು. ಮುಖ್ಯಮಂತ್ರಿಯಾಗಿ ಲಕ್ಷ್ಮಿಕಾಂತ್‌ ಪರ್ಸೇಕರ್‌ ಇದ್ದರೂ ಸರ್ಕಾರ ಮತ್ತು ಪಕ್ಷದ ಪ್ರತಿ ನಿರ್ಧಾರದ ಹಿಂದೆ ‘ರಕ್ಷಣಾ ಸಚಿವರ’ ಹಸ್ತಕ್ಷೇಪ ಇದ್ದೇ ಇರುತ್ತದೆ ಎಂಬಷ್ಟು ನಿಯಂತ್ರಣ ಸಾಧಿಸಿದ್ದು ಗುಟ್ಟಾಗೇನೂ ಉಳಿದಿರಲಿಲ್ಲ.

ಕಳೆದ ಫೆಬ್ರುವರಿ 4ರಂದು ಗೋವಾ ವಿಧಾನಸಭೆಗೆ ನಡೆದ ಚುನಾವಣೆಗಾಗಿ ರಾಜ್ಯದಾದ್ಯಂತ ಸುತ್ತಾಡಿ ಪ್ರಚಾರ ನಡೆಸಿದ್ದ ಪರಿಕ್ಕರ್‌, ‘ಪಕ್ಷದಲ್ಲಿ ನನ್ನ ಪಾತ್ರವೇ ಮಹತ್ವದ್ದು’ ಎಂಬುದನ್ನು ಸಾರಿದ್ದರು. ‘ಪಕ್ಷ ಮತ್ತೆ ಬಹುಮತ ಗಳಿಸಿದರೆ ಕೇಂದ್ರದಲ್ಲಿರುವವರನ್ನೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗುತ್ತದೆ’ ಎಂದು, ಅದಕ್ಕೆ ಪುಷ್ಟಿ ನೀಡುವಂತೆ ವರಿಷ್ಠ ನಿತಿನ್‌ ಗಡ್ಕರಿ ಅವರು ಪರಿಕ್ಕರ್‌ರನ್ನು ಮರಳಿ ಕಳುಹಿಸಿಕೊಡುವ ಸುಳಿವನ್ನೂ ನೀಡಿದ್ದರು.

ಈ ಹಿಂದೆ ಮೂರು ಬಾರಿ (2000, 2002 ಮತ್ತು 2012ರಲ್ಲಿ)  ಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವ ಪರಿಕ್ಕರ್‌, 1994ರಲ್ಲಿ ಮೊದಲ ಬಾರಿಗೆ ತಮ್ಮ ಹುಟ್ಟೂರು ಮಪುಸಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1999ರಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲೂ ಕುಳಿತ ಅನುಭವಿ.

ಪುಟ್ಟದಾದ ಕರಾವಳಿ ರಾಜ್ಯದಲ್ಲಿ ಕಾಂಗ್ರೆಸ್‌ನ ಚಕ್ರಾಧಿಪತ್ಯವನ್ನು ಕೊನೆಗಾಣಿಸಿ ಬಿಜೆಪಿಯನ್ನು ಅಧಿಕಾರದತ್ತ ತರುವಲ್ಲಿ ಶ್ರಮಿಸಿದ ಪರಿಕ್ಕರ್‌, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮತ್ತು ಹಗರಣಗಳಿಂದ ದೂರ ಉಳಿದಿದ್ದಲ್ಲದೆ, ಜನರಿಗೆ ಹತ್ತಿರವಾಗಿ ಇರುವ ಮುಖ್ಯಮಂತ್ರಿ ಎಂದೇ ಕರೆಸಿಕೊಂಡವರು.

‘ಮುಖ್ಯಮಂತ್ರಿ ಎಂದರೆ ಇಷ್ಟೊಂದು ಸರಳವಾಗಿರುತ್ತಾರಾ’ ಎಂದೇ ಜನ ಹುಬ್ಬೇರಿಸುವಷ್ಟರ ಮಟ್ಟಿಗೆ ಸರಳವಾಗಿ ಇರುವುದಲ್ಲದೆ, ಸಾಮಾನ್ಯ ಜನರೊಂದಿಗೆ ಬೆರೆಯುವುದನ್ನೂ ರೂಢಿಸಿಕೊಂಡು ಜನಜನಿತರಾದವರು.

ಶಾಲಾ ಶಿಕ್ಷಣದ ಅವಧಿಯಿಂದಲೇ ರಾಷ್ಟೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರ ಸಮರ್ಪಣಾ ಮನೋಭಾವವನ್ನು ಕಂಡ ಸಂಘ, ಬಿಜೆಪಿಯತ್ತ ಸಾಗುವಂತೆಯೂ ಸಲಹೆ ನೀಡಿ ರಾಜ್ಯದಲ್ಲಿ ಪಕ್ಷವನ್ನು ಬೆಳೆಸಲು ಪ್ರೇರೇಪಿಸಿತ್ತು. 1955ರ ಡಿಸೆಂಬರ್‌ 13ರಂದು ಮಧ್ಯಮ ವರ್ಗದಲ್ಲಿ ಜನಿಸಿದ ಪರಿಕ್ಕರ್‌, 12ನೇ ತರಗತಿವರೆಗೆ ಮರಾಠಿ ಮಾಧ್ಯಮದಲ್ಲಿ ಶಿಕ್ಷಣ ಪಡೆದರು.

1978ರಲ್ಲಿ ಪ್ರತಿಷ್ಠಿತ ಮುಂಬೈ ಐಐಟಿಯಿಂದ ಮೆಟಲರ್ಜಿಕಲ್‌ ಎಂಜಿನಿಯರಿಂಗ್‌ ಪದವೀಧರ. ಅಲ್ಲದೆ, ಐಐಟಿ ಪದವಿ ಪಡೆದ ಮೊದಲ ಮುಖ್ಯಮಂತ್ರಿ ಎಂದೂ ಕರೆಸಿಕೊಂಡವರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪತ್ನಿ ಮೇಧಾ 2001ರಲ್ಲಿ ಸಾವಿಗೀಡಾಗಿದ್ದಾರೆ. ಇಬ್ಬರು ಪುತ್ರರ ಪೈಕಿ ಹಿರಿಯವರಾದ ಉತ್ಪಲ್‌, ಮಿಚಿಗನ್‌ ಸ್ಟೇಟ್‌ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದರೆ, ಕಿರಿಯ ಮಗ ಅಭಿಜಿತ್‌ ಉದ್ಯಮಿಯಾಗಿದ್ದಾರೆ.

‘ಬಹುಶಃ ರಕ್ಷಣಾ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸದಿರುವಿಕೆಯೇ ಇವರನ್ನು ಮತ್ತೆ ರಾಜ್ಯಕ್ಕೆ ಕಳುಹಿಸಲು ಕಾರಣವಾಗಿರಬಹುದು’ ಎಂಬ ಗುಸುಗುಸು ಪಕ್ಷದಲ್ಲಿಯೇ ಕೇಳಿಬಂದಿದೆ. ಆದರೆ, ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಹೊಸದರಲ್ಲಿ ಇಲಾಖೆಯಲ್ಲಿನ ನ್ಯೂನತೆಗಳನ್ನು ಪತ್ತೆ ಮಾಡಲು ಡಜನ್‌ನಷ್ಟು ಸಮಿತಿಗಳನ್ನು ರಚಿಸಿ, ಆ ಸಮಿತಿಗಳ ಶಿಫಾರಸಿನಂತೆಯೇ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲೆತ್ನಿಸಿದ ಕೀರ್ತಿಗೂ ಪಾತ್ರರಾಗಿರುವುದು ಮುಚ್ಚಿಡಲಾರದ ಸತ್ಯ.

ಗಡಿಯಲ್ಲಿರುವ ಪಠಾಣ್‌ಕೋಟ್‌ನ ವಾಯುನೆಲೆಯ ಮೇಲೆ ಪಾಕಿಸ್ತಾನಿ ಉಗ್ರರು ಆಘಾತಕಾರಿ ದಾಳಿ ನಡೆಸಿದಾಗ ಅಷ್ಟೇ ಸಮರ್ಥವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ  ಉಗ್ರರ ನೆಲೆಗಳ ಮೇಲೆ ‘ನಿರ್ದಿಷ್ಟ ದಾಳಿ’ ನಡೆಸಲು ಕೈಗೊಂಡ ಸರ್ಕಾರದ ನಿರ್ಣಯವನ್ನು ಸಮರ್ಥಿಸಿಕೊಂಡ ‘ಹೆಗ್ಗಳಿಕೆ’ಗೂ ಇವರು ಪಾತ್ರರಾಗಿದ್ದಾರೆ.

ಭ್ರಷ್ಟಾಚಾರಕ್ಕೆ ಹೇರಳ ಅವಕಾಶಗಳಿರುವ ರಕ್ಷಣಾ ಇಲಾಖೆಯ ಜವಾಬ್ದಾರಿಯನ್ನು ನಿರ್ವಹಿಸಿದ ಈ ಹಿಂದಿನ ಕೆಲವು ಸಚಿವರ ವಿರುದ್ಧ ಗುರುತರವಾದ ಆರೋಪಗಳು ಕೇಳಿಬಂದಿವೆ. ಆದರೆ, ಎರಡು ವರ್ಷಕ್ಕೂ ಅಧಿಕ ಕಾಲದ ಅಧಿಕಾರದ ಅವಧಿಯನ್ನು ಅಂಥ ಆರೋಪಗಳಿಗೆ ಅವಕಾಶ ಇಲ್ಲದಂತೆ ನೋಡಿಕೊಂಡಿರುವ ಪರಿಕ್ಕರ್‌, ಅನೇಕ ರಾಷ್ಟ್ರಗಳೊಂದಿಗೆ ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮತ್ತು ಸಹಕಾರದ ಒಪ್ಪಂದಗಳನ್ನೂ ಮಾಡಿಕೊಂಡು ಭಾರತೀಯ ಸೇನೆ ಬಲಗೊಳ್ಳಲು ಪ್ರತ್ಯಕ್ಷವಾಗಿ ಕಾರಣರಾಗಿದ್ದಾರೆ ಎಂದು ಪಕ್ಷದೊಳಗಿನ ಮುಖಂಡರೇ ಹಾಡಿಹೊಗಳಿರುವುದು ಕೇಳಿಬಂದಿದೆ.

ದೆಹಲಿಗೆ ಬಂದು ಅಧಿಕಾರ ಸ್ವೀಕರಿಸಿದ ವೇಳೆ ಉಳಿದುಕೊಳ್ಳಲು ಸರ್ಕಾರದ ಅಧಿಕೃತ ಬಂಗಲೆ ದೊರೆಯದಿದ್ದಾಗ, ನೌಕಾಪಡೆಯ ವಸತಿಗೃಹದಲ್ಲಿ ಆರು ತಿಂಗಳು ವಾಸವಿದ್ದು, ತಮ್ಮ ಸಂಬಳದಿಂದಲೇ ಬಾಡಿಗೆಯನ್ನೂ ಪಾವತಿಸಿ ಪಾರದರ್ಶಕತೆ ಪ್ರತಿಪಾದಿಸಿದವರು ಪರಿಕ್ಕರ್‌. ಗೋವಾದ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ ಖಜಾನೆಯಿಂದ ಅನಗತ್ಯ ಖರ್ಚು ಮಾಡಿ, ತೆರಿಗೆದಾರರ ಹಣ ದುರುಪಯೋಗ ಮಾಡಿಕೊಂಡ ಆರೋಪವನ್ನೂ ಅವರು ಎದುರಿಸಿದ್ದಿದೆ.

ಗೋಧ್ರಾ ಘಟನೆ ನಂತರ ಗುಜರಾತ್‌ನಲ್ಲಿ ನಡೆದ ಗಲಭೆಗಳು ದೇಶದಾದ್ಯಂತ ಚರ್ಚೆಗೆ ಒಳಗಾಗಿ ಬಿಜೆಪಿಗೆ ಇರಿಸುಮುರಿಸು ಉಂಟುಮಾಡಿದಾಗ, ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬ ನಿಲುವನ್ನು ವರಿಷ್ಠರು ತಳೆದಿದ್ದರು. ಆಗ ‘ಮೋದಿ ಮಹತ್ವ’ದ ಬಗ್ಗೆ ಮನವರಿಕೆ ಮಾಡಿಕೊಟ್ಟವರಲ್ಲಿ ಪರಿಕ್ಕರ್‌ ಸಹ ಒಬ್ಬರು.

ಅಂದಿನಿಂದಲೇ ಪರಿಕ್ಕರ್‌ ಅವರು ಮೋದಿ ಆಪ್ತರ ಸಾಲಿಗೆ ಸೇರಿದ್ದರು ಎಂಬುದು ಪಕ್ಷದಲ್ಲಿ ಆಗ ಕೇಳಿಬಂದ ಮಾತು. ಅದಕ್ಕೆ ಪುಷ್ಟಿ ನೀಡುವಂತೆಯೇ ಆಪ್ತನಿಗೆ ರಾಷ್ಟ್ರಮಟ್ಟದಲ್ಲಿ ಸ್ಥಾನಮಾನ ನೀಡಿದ್ದ ಮೋದಿ, ಇದೀಗ ದಿಢೀರ್‌ ಅವರನ್ನು ಬಿಟ್ಟುಕೊಟ್ಟಿದ್ದರ ಹಿಂದಿನ ಮರ್ಮವಾದರೂ ಏನು ಎಂಬುದು ಅರ್ಥವಾಗುತ್ತಿಲ್ಲ.

ಈ ಕುರಿತ ಚರ್ಚೆಗಳು ಮುಂದುವರಿದಿದ್ದರೂ, ಅತ್ತ ಪರಿಕ್ಕರ್‌ ಮಾತ್ರ ಮುಗುಳ್ನಗುತ್ತಲೇ, ‘ನಾನು ಮೊದಲಿನಿಂದಲೂ ದೆಹಲಿಗೆ ಹೋಗಲು ಬಯಸಿದ್ದೇ ಕಡಿಮೆ. ಒಂದೊಮ್ಮೆ ಅಲ್ಲೇ ಉಳಿದುಕೊಂಡಿದ್ದರೆ ಗೋವಾದ ರುಚಿರುಚಿಯಾದ ಮೀನಿನ ಊಟ ಮಾಡುವ ಭಾಗ್ಯದಿಂದ ವಂಚಿತನಾಗುತ್ತಿದ್ದೆ’ ಎಂದು ಹೇಳುವ  ಮೂಲಕ ಗೋವಾ ಬಗೆಗಿನ ಪ್ರೇಮವನ್ನು ಹೊರಹಾಕಿದ್ದಾರೆ.

ನೆರೆಯ ಕರ್ನಾಟಕ ಮತ್ತು ಗೋವಾದಲ್ಲಿ ವಾಸಿಸುತ್ತಿರುವ ಕನ್ನಡಿಗರ ಬಗ್ಗೆ ಔದಾರ್ಯವನ್ನು ಪ್ರದರ್ಶಿಸದೆ ನಿಕೃಷ್ಟವಾಗಿ ನಡೆದುಕೊಂಡಿರುವ ಪರಿಕ್ಕರ್‌, ಮತ್ತೆ ಮುಖ್ಯಮಂತ್ರಿಯಾಗಿರುವುದು ಮಹಾದಾಯಿ ನದಿಯಲ್ಲಿ ತನ್ನ ಪಾಲಿನ ನೀರನ್ನು ಪಡೆಯಲು ಹೋರಾಡುತ್ತಿರುವ ಕರ್ನಾಟಕಕ್ಕೆ ವರವಾಗಲಿ ಎಂಬುದು ಕನ್ನಡಿಗರ ಆಶಯವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT