ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧವಾಗಿದೆ ದೇಶದ ಉದ್ದದ ಸುರಂಗಮಾರ್ಗ

ಚಿನಾನಿ–ನಸ್ರಿ ನಡುವಣ ಅವಳಿ ಸುರಂಗ
Last Updated 19 ಮಾರ್ಚ್ 2017, 12:58 IST
ಅಕ್ಷರ ಗಾತ್ರ
ADVERTISEMENT

ಚೆನಾನಿ (ಉಧಂಪುರ): ಜಮ್ಮು ಮತ್ತು ಶ್ರೀನಗರ ಹೆದ್ದಾರಿಯಲ್ಲಿ ನಿರ್ಮಿಸಿರುವ ದೇಶದ ಅತ್ಯಂತ ಉದ್ದದ ಅವಳಿ ಸುರಂಗಗಳಲ್ಲಿ ವಾಹನಗಳ ಪರೀಕ್ಷಾರ್ಥ ಚಾಲನೆ ಯಶಸ್ವಿಯಾಗಿದೆ. ಈ ತಿಂಗಳ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಸುರಂಗಗಳನ್ನು ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

‘ಐಎಲ್‌ ಅಂಡ್ ಎಫ್‌ಎಸ್‌’ ಕಂಪೆನಿ, 2011ರ ಮೇ 23ರಂದು ಈ ಕಾಮಗಾರಿಯನ್ನು ಆರಂಭಿಸಿತ್ತು. ‘ಜಮ್ಮು ಮತ್ತು ಶ್ರೀನಗರದ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ–1ರಲ್ಲಿ ಚಳಿಗಾಲದ ಕೆಲವು ದಿನ ಹಿಮದ ಕಾರಣ ಸಂಚಾರ ಬಹುತೇಕ ಸ್ಥಗಿತಗೊಳ್ಳುತ್ತದೆ. ಆದರೆ ಈ ಸುರಂಗ ಸಂಚಾರಕ್ಕೆ ಲಭ್ಯವಾದರೆ, ವರ್ಷದ ಎಲ್ಲಾ ದಿನಗಳಲ್ಲೂ ವಾಹನಗಳ ಓಡಾಟ ಸಾಧ್ಯವಾಗುತ್ತದೆ. ಚೆನಾನಿ ಮತ್ತು ನಸ್ರಿ ನಡುವೆ ಈ ಸುರಂಗ ನಿರ್ಮಿಸಲಾಗಿದೆ. ಈ ಎರಡೂ ಪಟ್ಟಣಗಳ ನಡುವೆ ಈಗ ಇರುವ ರಸ್ತೆಯ ಅಂತರ 41 ಕಿ.ಮೀ. ಈ ಸುರಂಗದಿಂದಾಗಿ ಈ ಅಂತರ 10.9 ಕಿ.ಮೀಗೆ ಇಳಿಯಲಿದೆ. ಇದರಿಂದ ಜಮ್ಮು ಮತ್ತು ಶ್ರೀನಗರ ನಡುವಿನ 286 ಕಿ.ಮೀ ಅಂತರವನ್ನು ಎರಡೂವರೆ ಗಂಟೆಯಲ್ಲಿ ಕ್ರಮಿಸಲು ಸಾಧ್ಯವಾಗುತ್ತದೆ. ಈ ಸುರಂಗವನ್ನು ಬಳಸುವುದರಿಂದ ಪ್ರತಿದಿನ ₹ 27 ಲಕ್ಷದಷ್ಟು ಇಂಧನ ಉಳಿತಾಯವಾಗಲಿದೆ. ಈ ಕಾಮಗಾರಿಯಲ್ಲಿ ಒಟ್ಟು 4,000 ಕಾರ್ಮಿಕರು ದುಡಿದಿದ್ದು, ಅವರಲ್ಲಿ ಶೇ 94ರಷ್ಟು ಸ್ಥಳೀಯರೇ ಆಗಿದ್ದರು’ ಎಂದು ಐಎಲ್‌ ಅಂಡ್ ಎಫ್‌ಎಸ್‌ ಹೇಳಿದೆ.

ಒಂದರಲ್ಲಷ್ಟೇ ಸಂಚಾರ

9.2 ಕಿ.ಮೀ ಸುರಂಗದ ಉದ್ದ; ಮುಖ್ಯ ಸುರಂಗ: 13 ಮೀಟರ್‌ ಎತ್ತರ, ತುರ್ತು ಸುರಂಗ: 6 ಮೀಟರ್‌ ಎತ್ತರ.

ಮುಖ್ಯ ಸುರಂಗದಲ್ಲಿ  ಮಾತ್ರ ಸಂಚಾರಕ್ಕೆ ಅವಕಾಶ ಇರುತ್ತದೆ. ತುರ್ತು ಸಂದರ್ಭಗಳಲ್ಲಷ್ಟೇ ತುರ್ತು ಸುರಂಗವನ್ನು  ಬಳಸಲಾಗುತ್ತದೆ.

ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆ

* ಒಂದೇ ಕಡೆ ಸುರಂಗದ ಸಮಸ್ತ ವ್ಯವಸ್ಥೆಗಳನ್ನೂ ನಿಗಾವಣೆ ಮತ್ತು ನಿರ್ವಹಣೆ ಮಾಡುವ ಸೌಲಭ್ಯ

* ಅತ್ಯಾಧುನಿಕ ಅಗ್ನಿಶಾಮಕ ಸಾಧನಗಳು

* ದಿನದ 24 ಗಂಟೆಯೂ ಬೆಳಕಿನ ವ್ಯವಸ್ಥೆ

* 124 ಸಿ.ಸಿ.ಟಿ.ವಿ ಕ್ಯಾಮೆರಾಗಳು

* ಎಫ್‌ಎಂ ರೇಡಿಯೊ ಸಂಕೇತ

* ಮೊಬೈಲ್‌ ಸಂಪರ್ಕ ಸೇವೆ

* ಗಾಳಿಯ ಸರಾಗ ಸಂಚಾರಕ್ಕೆ ವ್ಯವಸ್ಥೆ

* 1,200ಮೀಟರ್‌ ಸಮುದ್ರಮಟ್ಟದಿಂದ ಸುರಂಗ ಇರುವ ಪ್ರದೇಶದ ಎತ್ತರ

* ₹3,720ಕೋಟಿ ಯೋಜನೆಯ ವೆಚ್ಚ

* 50 ಕಿ.ಮೀ/ಗಂಟೆ ಸುರಂಗದಲ್ಲಿ ಗರಿಷ್ಠ ವೇಗ ಮಿತಿ

* 5 ಮೀಟರ್ ವಾಹನಗಳ ಗರಿಷ್ಠ ಎತ್ತರ ಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT