ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ದಲಿತೋತ್ತರ ಕಾವ್ಯದ ಹೊಸ ನುಡಿಗಟ್ಟು

ವಿಮರ್ಶೆ
Last Updated 19 ಮಾರ್ಚ್ 2017, 6:17 IST
ಅಕ್ಷರ ಗಾತ್ರ

ಕಸಬಾರಿಗೆ ಪಾದ  
ಲೇ: ಬಸವರಾಜ್ ಹೃತ್ಸಾಕ್ಷಿ
ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ, ವಯಾ ಎಮ್ಮಿಗನೂರು, ಬಳ್ಳಾರಿ–583113

ಚಡ್ಡಿಗೋಸೆಯ ಹಾಕಿ ಕಡ್ಡಿ ಬಾರಿಗೆ ಹಿಡಿದು
ಊರ ಕವಳೆಯ ಕಣ ಬಳೆದು
ಕಾಳು ಕೇರಿ ಹಸನು ಮಾಡಿ ತರುವ ಅವ್ವ
ಹಾಳೂರ ಒಡ್ಡಿನ ಮೇಲೆ ಸತ್ತು ಬಿದ್ದ ಎಮ್ಮೆಗೆ
ಮುತ್ತಿಕೊಂಡ ಕುಲ್ಡು ನೊಣದಂತೆ ಬಾನದ ಗಡಿಗೆ ಮುಂದೆ
ಕಾಲು ಚಾಚಿ ಮಲಗಿದ್ದಾಳೆ ಏಕೆ?
(ಒಬ್ಬ ಅವ್ವ ಇರಲಿ, ಈ ಬಿಸಿಲ ಕೂಸುಗಳಿಗೆ)

ಹೀಗೆ ತನ್ನೂರಿನ ನಿಗಿಕೆಂಡದ ಬಯಲಿಗೆ ಹೊಗೆಯಾದ ಬದುಕಿನ ತಲ್ಲಣವನ್ನು, ಅದಕ್ಕೆ ಆಹುತಿಯಾಗಿ ಬೂದಿ ಉಂಡೆಗಳಂತೆ ಉಳಿದ ಜೀವಗಳನ್ನು ತಮ್ಮ ಮೊದಲ ಕವನ ಸಂಕಲನ ‘ಕಸಬಾರಿಗೆ ಪಾದ’ದಲ್ಲಿ ಬಿಡಿ ಬಿಡಿಯಾಗಿ ಚಿತ್ರಿಸುತ್ತಾರೆ ಬಸವರಾಜ್ ಹೃತ್ಸಾಕ್ಷಿ. 39 ಕವಿತೆಗಳಿರುವ ಈ ಸಂಕಲನದ ರಚನೆಗಳ ಮೂಲಕ ಬಸವರಾಜ್ – ಕನ್ನಡ ದಲಿತೋತ್ತರ ಕಾವ್ಯಕ್ಕೆ ಹೊಸದೊಂದು ನುಡಿಗಟ್ಟು ಸೇರಿಸುತ್ತಲೇ, ಸಮುದಾಯಗಳ ಬದಲಾದ ಸಾಂಸ್ಕೃತಿಕ ಸಂಕರ ಸ್ಥಿತಿಯನ್ನು ಭಿನ್ನವಾಗಿ ನಿರೂಪಿಸುತ್ತಾರೆ. ಕರ್ನಾಟಕದ ಉತ್ತರ ಭಾಗದಿಂದ ಮುಂಬಯಿ, ಗೋವಾ, ಬೆಂಗಳೂರಿಗೆ ಬರುವ ರಾತ್ರಿ ರೈಲು, ಬಸ್ಸಿನ ತುಂಬ ಉಸಿರಾಡುವ ಮೂಟೆಗಳಂತೆ ಕುಕ್ಕರಿಸಿ ಗುಳೆ ಬರುವವರ ಅನಿಶ್ಚಿತ ನಾಳೆಗೆ ಕವಿ ಸ್ಪಂದಿಸುವ ಬಗೆ ಮೇಲಿನ ಕವಿತೆಯಲ್ಲಿದೆ.

ಜಾತಿಯ ಬದಲಾದ ಸ್ವರೂಪ, ರಾಜಕೀಯವಾಗಿಯೂ ಮತ್ತು ಸಾಂಸ್ಕೃತಿಕವಾಗಿಯೂ ಒಬ್ಬ ಬರಹಗಾರ ತನ್ನನ್ನು ತಾನು ಕೇಳಿಕೊಳ್ಳಲೇಬೇಕಾದ, ಬಗೆಹರಿಸಿಕೊಳ್ಳಲೇಬೇಕಾದ ಅಥವಾ ತೆಗೆದುಕೊಳ್ಳಲೇಬೇಕಾದ ನಿಲುವಿನಂತೆ ಎರಗಿದೆ. ಹೀಗಾಗಿ ಚಳವಳಿಗಳ ಸಂಪರ್ಕವಿಲ್ಲದ, ಮಧ್ಯಮ ವರ್ಗದ ನಗರ ಪ್ರದೇಶದಿಂದ ಬಂದ, ಮೂರನೆಯ ತಲೆಮಾರಿನ ದಲಿತ ಬರಹಗಾರರಿಗೆ ಸಮೂಹದೊಂದಿಗಿನ ಒಡನಾಟವೇ ಮುಖ್ಯವಾಗಿ, ಜಾತಿಯೊಂದು ಸ್ಥಗಿತ ಸ್ಥಿತಿಯಂತೆ ಕಂಡರೆ; ಮತ್ತದನ್ನು ದಿನಾಲೂ ಬಸ್ಸಿನಲ್ಲಿ, ಗುಡಿಗಳಲ್ಲಿ, ಕೆರೆಗಳಲ್ಲಿ, ಶಾಲೆಗಳಲ್ಲಿ, ಚಹಾದ ಅಂಗಡಿಗಳಲ್ಲಿ ಎದುರುಗೊಳ್ಳುತ್ತ, ಕೇಂದ್ರ ವಸ್ತುವಾಗಿಸಿಕೊಂಡು ಬರವಣಿಗೆಗೆ ಇಳಿದ ಗ್ರಾಮೀಣ ಬರಹಗಾರರಿಗೆ ಅದೊಂದು ಅಷ್ಟಪದಿಯಂತೆ ಗಂಟುಬೀಳುವ ದೈನಂದಿನ ರಾಜಕಾರಣವಾಗಿದೆ. ಆದರೆ, ಇವರೆಡರ ನಡುವಣ ಸ್ಥಿತಿಯಲ್ಲಿರುವ ಬಸವರಾಜ್, ಅತ್ತ ಅಪ್ಪನ ದಲಿತ ಜನಪದ ಸ್ಮೃತಿಯನ್ನು ಬಸಿದುಕೊಳ್ಳಲಾಗದೆ, ಇತ್ತ ತಾನು ಹೊಟ್ಟೆಪಾಡಿಗಾಗಿ ನಂಬಿಕೊಂಡಿರುವ ವೃತ್ತಿಯೊಂದಿಗೆ ದತ್ತವಾದ ಕ್ರಿಶ್ಚ್ಯಾನಿಟಿಯ ಆಚರಣೆಗಳನ್ನೂ ಪಾಲಿಸಲಾಗದ ಸಂಕರತನವೇ ಬಹುಶಃ ಅವರ ಕಾವ್ಯಕ್ಕೆ ಒಂದು ತರಹದ ಸಂಕೀರ್ಣತೆಯನ್ನು ಒದಗಿಸಿದೆ. ಶಾಲಾ ದಿನಗಳಲ್ಲಿ ಸರಕಾರಿ ಹಾಸ್ಟೆಲ್‌ನಲ್ಲಿದ್ದ ಕಾರಣ, ದಲಿತ ಸಂಘರ್ಷ ಸಮಿತಿಯ ಚಟವಟಿಕೆಗಳ ಪರಿಚಯ ಮತ್ತು ಜಗ ಕಾಣುವ ಬಗೆಯನ್ನು ಕಂಡುಕೊಂಡಿದ್ದಾರೆ. ಜಾತಿಯ ಕಾರಣಕ್ಕೆ ತನಗಾದ ಅವಮಾನ ಮತ್ತು ತನ್ನ ಹೆಸರಿನ ಜತೆ ‘ಹೃತ್ಸಾಕ್ಷಿ’ ಸೇರಿದ ಕುರಿತಾದ ಸಾಂಸ್ಕೃತಿಕ ಹಿನ್ನೆಲೆಯನ್ನು ಹೇಳಿಕೊಂಡಿದ್ದಾರೆ. ಹೀಗಾಗಿ ಸರ್ಕಾರಗಳ ಜನವಿರೋಧಿ ನೀತಿಯನ್ನು, ಪಕ್ಷ ರಾಜಕಾರಣದ ರೀತಿಯನ್ನು ಮತ್ತು ಜಾತಿವ್ಯವಸ್ಥೆಯನ್ನು ಸ್ಥಿರಗೊಳಿಸಬಯಸಿ, ಅವುಗಳ ಹೆಸರಿನಲ್ಲಿ ಯೋಜನೆ–ಕಾರ್ಯಕ್ರಮಗಳನ್ನು ರೂಪಿಸಿ, ಜನಪ್ರಿಯಗೊಳಿಸಲು ತಿಣುಕಾಡುತ್ತಿರುವುದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಈ ಸಂಕಲನದ ಶೀರ್ಷಿಕೆಯನ್ನು ಗಮನಿಸಬಹುದು.

ಕೊಳೆತು ನಾರುವ ಭೂಮಿಗರ್ಭ
ಗಟಾರವಾಗಿ ಗಲ್ಲಿಗಳ ನರನಳಿಕೆಯಲಿ ಹರಿವಾಗ
ಕೈಹಾಕಿ ಕಿಲುಬು ಶುದ್ಧ ಮಾಡುವ ಪಾವನ ಕರಗಳು
ಅದಾವ ಕೋನದಿಂದ ಪಂಜದಂತೆ ಕಾಣುವವೋ ಜನರಿಗೆ
ಕಸಬಾರಿಗೆ ಪಾದದವರು
ಕೂರಿಗೆಯ ಕೈಗಳವರು
ಹೊತ್ತು ತಿರುಗುವ ಹೊಟ್ಟೆ ಜಗದ ಹೊಲಸಿನ ಮಟ್ಟೆ
ಊರದಾರಿಯಲಿ ನಡೆದರೆ
ಶುದ್ಧ ಗಾಳಿಯೊಂದು ನಿಮಗಾಗಿ ಉಲಿಯುವುದಿಲ್ಲವೇ?
(ಕಸಬಾರಿಗೆ ಪಾದದವರು)

‘ಗಂಗೆ ಬಾರೆ’ ಮತ್ತು ‘ಪೆಂಡಾಲಿನ ಮೈಕಿನೊಳಗಿಂದ’ ಕವಿತೆಗಳು ಕೂಡ ಈ ಕ್ಷಣದ ಆಕಳ, ನದಿ, ಆಹಾರದ ರಾಜಕಾರಣವನ್ನು ಸೆರೆ ಹಿಡಿದಿವೆ.
ಇಲ್ಲಿ ಪ್ರೇಮ ಕವಿತೆಗಳಿವೆ, ನೋವಿನ ಕವಿತೆಗಳಿವೆ, ಪ್ರಾದೇಶಿಕ ಆಹಾರದ ಕುರಿತಾದ, ಅರ್ಪಿತ ಕವಿತೆಗಳಲ್ಲದೆ ಲಯದಿಂದ ಕೂಡಿದ ಹಾಡಬಹುದಾದ ಕವಿತೆಯೂ ಈ ಸಂಕಲನದಲ್ಲಿವೆ. ಕುವೆಂಪುರವರ ಕಾವ್ಯದ ಪಡಿಯಚ್ಚಿನಂತೆ ಬರೆಯಲು ಮೊದಲು ಮಾಡಿ, ಆಫ್ರಿಕನ್ ಕಾವ್ಯ ಮಾದರಿಯನ್ನು ಓದಿಕೊಂಡು ಈಗ ಸ್ವಂತಿಕೆಯ ಹುಡುಕಾಟದಲ್ಲಿರುವ ಬಸವರಾಜ್, ಬಗೆಹರಿಸಿಕೊಳ್ಳಬೇಕಾದ ಹಲವು ಸಮಸ್ಯೆಗಳಿವೆ. ಬರಹಗಾರನೊಬ್ಬನಿಗೆ, ಅವನೊಡನಾಡುವ ಪರಿಸರ ಮತ್ತು ಓದು ಅವನ ಬರಹಕ್ಕೆ ವಸ್ತು, ಭಾಷೆಯನ್ನು ಒದಗಿಸಿದರೆ, ಜಗದ ಕೆಲ ಸಮುದಾಯಗಳ ಬದುಕು ವಸ್ತುವಾಗಿ, ರೂಪಕವಾಗಿ ಬಿಡುತ್ತದೆ. ಗತದ ನೋವಿನ ನೆನಪು ಸಹ ಅಂತಹ ಬರಹಗಾರನ ಭಾಷೆಯನ್ನು ರೂಪಿಸುತ್ತದೆ. ಆದರೆ, ಕೆಲಸದ ಕಾರಣ ಹಳ್ಳಿಗಳಿಂದ ಪಟ್ಟಣಗಳಿಗೆ ವಲಸೆ ಬಂದು, ತಮ್ಮ ಕುಲ ವೃತ್ತಿ, ದೈನಂದಿನ ಬದುಕಿನ ವಿಧಾನ, ಮನೆನುಡಿಯಿಂದ ದೂರವಿದ್ದು, ಒಂದರ್ಥದಲ್ಲಿ ವಿಸ್ಮೃತಿಗೊಳಗಾದವನಂತೆ ಜೀವಿಸುವ ಸೃಜನಶೀಲನೊಬ್ಬನಿಗೆ ತನ್ನ ಸಾಂಸ್ಕೃತಿಕ ನೆನಪನ್ನು ಹಿಂಪಡೆಯುವ ದಾರಿ ಯಾವುದು? ವೃತ್ತಿ ಆಧರಿಸಿ ಚಲಾವಣೆಗೆ ಬಂದ ಆಚರಣೆಗಳಿಂದಲೇ ದೂರವಾಗಿ ಅನ್ಯನಾಗುವಿಕೆ, ಎಷ್ಟರಮಟ್ಟಿಗೆ ಅವನ ಬರಹಕ್ಕೆ ಭಾಷೆ ಮತ್ತು ಹೂರಣವನ್ನು ಒದಗಿಸಬಲ್ಲದು? ಚಹಾ ಅಂಗಡಿಯಲ್ಲಿ ಇತರೆ ಸಮುದಾಯದ ಗ್ರಾಹಕರಂತೆ ತಮಗೂ ಗಾಜಿನ ಗ್ಲಾಸಿನಲ್ಲಿ ಚಹಾ ಕೊಡಬೇಕೆಂದು ಕೆಳಜಾತಿಗಳು ದನಿಯೆತ್ತಿದ್ದಾಗ, ಅದಕ್ಕೆ ಮೇಲ್ಜಾತಿಗಳ ವಿರೋಧವಿತ್ತು. ಮತ್ತು ಇದರಿಂದ ಚಹಾ ಮಾರುವವ ಇಕ್ಕಟ್ಟಿಗೆ ಸಿಲುಕುತ್ತಿದ್ದ. ಆದರೆ, ಬಳಸಿ ಎಸೆಯುವ ಲೋಟದ ಅವತಾರದಲ್ಲಿ ಬಂದ ಜಾಗತೀಕರಣ, ಕೆಳಗಿನವರು–ಮೇಲಿವನರು ಬಂದು ಬಾಯಿ ಎತ್ತದಂತೆ ಮಾಡಿದ್ದಲ್ಲದೆ, ಚಹಾ ಮಾರುವವನನ್ನು ನಿರಾಳಗೊಳಿಸಿದೆ. ಈ ಸಮೀಕರಣವನ್ನು ಅರ್ಥಮಾಡಿಕೊಳ್ಳುವ, ಮತ್ತದನ್ನು ಕಾವ್ಯದಲ್ಲಿ ಸೆರೆ ಹಿಡಿಯಬೇಕಾದ ಜರೂರು ಈಗ ಬರೆಯುತ್ತಿರುವ ಎಲ್ಲರ ಮೇಲಿದೆ. ಈ ಜವಾಬ್ದಾರಿಯ ಅರಿವಿರುವ ಬಸವರಾಜ್, ಈ ಸಂಕಲನದಲ್ಲಿ ಅಲ್ಲಲ್ಲಿ ಇದನ್ನು ಸಂಧಿಸಿದ್ದಾರೆ.

ಇನ್ನೊಂದು ಕಾರಣಕ್ಕೆ ಈ ಸಂಗ್ರಹ ಮುಖ್ಯವಾಗುತ್ತದೆ. ಹೊಸಗನ್ನಡ ಕಾವ್ಯದಲ್ಲಿ ಬೈಬ್ಲಿಕಲ್ ಇಮೇಜರಿಗಳನ್ನು ಕಾವ್ಯದಲ್ಲಿ ತಂದಂತಹ ಹಲವು ಉದಾಹರಣೆಗಳು ಇವೆ. ಇತ್ತೀಚೆಗೆ ಬರೆಯುತ್ತಿರುವವರಲ್ಲಿ ಇಂತಹ ಬೈಬ್ಲಿಕಲ್ ಇಮೆಜರಿಗಳನ್ನು (ವಸ್ತುವಾಗಿಯೂ) ವಿ.ಎಂ. ಮಂಜುನಾಥ ಹಲವು ಕಡೆ ತಂದಿದ್ದಾರೆ. ಆದರೆ, ಅವು ಬಹುಮಟ್ಟಿಗೆ ರೊಮ್ಯಾಂಟಿಕ್ ಆದ ಪಾಶ್ಚಾತ್ಯ ಅನುಭವಗಳಾಗಿ ಭಾಸವಾಗುತ್ತವೆ. ಬಸವರಾಜ್, ದಲಿತೋತ್ತರ ಕಾವ್ಯಕ್ಕೆ ಸೇರಿಸುವ ಇಮೇಜರಿಗಳು ಶಬ್ದವಾಗಿ ಬೈಬ್ಲಿಕಲ್ ಅನಿಸಿದರೂ, ಅವುಗಳು ಇಲ್ಲೆಲ್ಲೋ ನಮ್ಮ ನಾಡಿನ ಕಡುದಾರಿದ್ರ್ಯದ ಕೊಂಪೆಗಳಂತೆ ಚಿತ್ರಿತವಾಗುತ್ತವೆ. ತುಂಬ ಶಕ್ತವಾದ ಈ ಕೆಳಗಿನ ‘ನೆಡದಿರು ಶಿಲುಬೆಯನು ನನ್ನ ಗೋರಿಯ ಮೇಲೆ’ ಕವಿತೆಯ ಸಾಲುಗಳೇ ಇದಕ್ಕೆ ಪುರಾವೆ.

ಸಖಿ, ನೀನು ನಡೆದುಬಿಟ್ಟೆ ಈವ್‌ಳಂತೆ...
ಜ್ಞಾನದ ಸೇಬಿನಂಥ ಒಂದು ಮುತ್ತು ತುಟಿಯ ಮೇಲೆ ಒತ್ತಿ
ಆದರೆ ನಾನು ಪಾಪಿಷ್ಟ ಆದಾಮನಾದೆ

ನಾನು ಬೆಳಕಿನತ್ತ ಮುಖಮಾಡಿದರೆ
ಕತ್ತಲೆ ನನ್ನ ಬೆನ್ನು ಚುಚ್ಚುವ ಚೂರಿಯಾಗುತ್ತದೆ
ಸೂಡಾನಿನಲ್ಲೋ ಇಥಿಯೋಪಿಯಾದಲ್ಲೋ ತಾಂಜಾನಿಯಾದಲ್ಲೋ
ಕೂಗುವ ಹಸಿದ ಹೊಟ್ಟೆಯ ಕೂಗು
ದನಿಯಾಗುತ್ತದೆ ನನ್ನ ಗಂಟಲಿಗೆ

ನಾನೊಬ್ಬ ಕಂದುಬಣ್ಣದ ನೀಗ್ರೋ ನನ್ನ ದೇಶದಲ್ಲಿ
ಕ್ಯಾಮರಾದ ನೆಗೆಟಿವ್ ಫಿಲ್ಮ್ ನಂತೆ ನನ್ನ ಬಣ್ಣಗೇಡಿ ಕನಸುಗಳು
ಬೀದಿ ಚೌಕಗಳಲ್ಲಿ ತಟ್ಟೆ ಬಡಿಯುತ್ತ
ಒದರುತ್ತವೆ ಅನ್ನ... ಅನ್ನ ಎಂದು

ಬಂಡಾಯದ ಅಬ್ಬರವಿಲ್ಲದೆ, ದಲಿತಕಾವ್ಯದ ವಾಚ್ಯತೆಯಿಂದ ಮುಕ್ತವಾದ, ಆದರೆ ಬಹುಮುಖ್ಯವಾಗಿ ಸೇಡಿನ ಭಾಷೆಯ ಆಚೆಗೆ ಒಂದು ವಿಷಾದದ ಸಾಮೂಹಿಕ ನಿಟ್ಟಿಸಿರಿನಂತೆ ಗೋಚರಿಸುವ ಬಸವರಾಜ್ ಅವರ ಕವಿತೆ, ನಿಜಕ್ಕೂ ಪಾಪಿಯೊಬ್ಬನ ನಿವೇದನೆಯಂತೆ, ಹರಾಮಿಯೊಬ್ಬನ ಪ್ರಾರ್ಥನೆಯಂತೆ ಇದೆ.

ರಾಯಚೂರಿನಲ್ಲಿ ಒಂದು ದಶಕ ಕಾಲ ಕ್ರಿಯಾಶೀಲವಾಗಿದ್ದ ಕ್ರಾಂತಿಕಾರಿ ಚಳವಳಿ ಮತ್ತದರ ಭಾಗವಾಗಿದ್ದ ಗೆಳೆಯನೊಬ್ಬನನ್ನು ಉದ್ದೇಶಿಸುವಂತಿರುವ ‘ಕ್ರಾಂತಿ ಸನಿಹದಲ್ಲೇ ಇದೆ’ ಕವಿತೆಯ ಆರಂಭದ ಸಾಲುಗಳು ಬಂಡಾಯದ ದನಿಯಂತೆ ಕೇಳಿಸಿದರೂ, ಅದರ ಒಟ್ಟು ಆಶಯದಲ್ಲಿ, ಕ್ರಾಂತಿಯ ಪ್ರಕ್ರಿಯೆಯಲ್ಲಿ ತಲುಪಬಹುದಾದ ಹತಾಶೆಯನ್ನು ನುಡಿಯುತ್ತದೆ.

ಕಾಮ್ರೇಡ್, ಈಗ ನಿಜವಾಗಿಯೂ ಕ್ರಾಂತಿಯಾಗಲೇಬೇಕು
ಇರುವೆಯ ಕಣ್ಣೊಳಕ್ಕೆ ಕಸುರು ಬಿದ್ದಿದೆ ಒಂದು ಗುಡ್ಡ
ಆ ಗುಡ್ಡದ ಮೇಲೆ ಆನೆಗಳು ಓಡಾಡುತಿವೆ
ತೂಮು ಹುಳದ ಬಾಲ ಮುರಿದು
ಚಿಟ್ಟೆಯ ಮರ್ಮದೊಳಗೆ ಸರಳು ಜಡಿದು
ರಸ ಸೂರ್ಯಾಡಲಾಗಿದೆ ದಾರಿ ತುಂಬ

ಮಾನವ ಸರಪಳಿ ನಗರದ ಒಂದು ಮೂಲೆಯಲಿ
ಮುಟುರಾದ ಅಂಗಿಗೆ ಇಸ್ತ್ರಿ ತಿಕ್ಕಿಸುವುದಿಲ್ಲ
ಕ್ರಾಂತಿಯವರೆಗೆ
ಪಣ ತೊಟ್ಟು ಹೋಗಿದ್ದಾರೆ ನಮ್ಮ ಮಿತ್ರರು
ರಕ್ತವನು ಬೇಡಿ ಕರಪತ್ರ ಛಾಪಿಸಲು

ಮೊದಲ ಸಂಕಲನದಲ್ಲಿಯೇ ಹಲವು ಸವಾಲುಗಳನ್ನು ಎದುರಿಸಿ, ಕಾವ್ಯದ ಗಟ್ಟಿತನವನ್ನು ತೋರಿರುವ ಕವಿ ಬಸವರಾಜ್, ಕಣ್ಣೀರು ಮಾರುವ ದಲ್ಲಾಲಿಯಾಗಬಯಸದೆ, ‘ಬರಿ ಮನುಷ್ಯರೇ ತುಂಬಿರುವ ಈ ಭೂಮಿಯಲಿ / ಒಂದು ಹಿಡಿ ಮನುಷ್ಯತ್ವದ ಕಡ...’ ಪಡೆಯಲು ಕವಿತೆಯ ಜಾಡು ಹಿಡಿದಿದ್ದಾರೆ. ತನ್ನ ಸಮುದಾಯದ ಮೌಖಿಕ ಪರಂಪರೆಯ ಅಗೇವು ಹೊಕ್ಕು ಪಡೆಯಬಹುದಾದ ನಿಧಿ, ಮತ್ತದನ್ನು ಮುಂದಿನ ಕಂತಿನಲ್ಲಿ ಹಂಚುವ ಬಗೆಯ ಕುರಿತು ನಿರೀಕ್ಷೆಯಂತೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT