ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿನಲ್ಲಿ ಅಂಚೆ ಇಲಾಖೆಯ ಪರೀಕ್ಷೆ ಬರೆದು ಉತ್ತೀರ್ಣರಾದವರಲ್ಲಿ ಹೆಚ್ಚಿನವರು ಹಿಂದಿ ಭಾಷಿಗರು!

Last Updated 19 ಮಾರ್ಚ್ 2017, 14:52 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ಪೋಸ್ಟಲ್ ಸರ್ವೀಸ್ ಪರೀಕ್ಷೆ ಬರೆಯುವ ಉದ್ಯೋಗಾರ್ಥಿಗಳಿಗೆ ತಮಿಳು ಭಾಷೆಯ ಅರಿವು ಇರಬೇಕಾದುದು ಕಡ್ಡಾಯ. ಈ ಪರೀಕ್ಷೆಯಲ್ಲಿ 25 ಅಂಕಗಳ ಪ್ರಶ್ನೆಗಳು ತಮಿಳು ಭಾಷಾ ಅರಿವಿನ ಬಗ್ಗೆಯೇ ಇರುತ್ತದೆ. ಆದಾಗ್ಯೂ, ಈ ಪರೀಕ್ಷೆ ಕಠಿಣವಾಗಿತ್ತು ಎಂದು ಪರೀಕ್ಷೆ ಬರೆದ ಕೆಲವು ಉದ್ಯೋಗಾರ್ಥಿಗಳ ಅಭಿಪ್ರಾಯ.

ಆದರೆ ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ಅದರಲ್ಲಿ ಅತೀ ಹೆಚ್ಚು ಅಂಕ ಗಳಿಸಿದವರು ತಮಿಳುನಾಡಿನ ಉದ್ಯೋಗಾರ್ಥಿಗಳು ಆಗಿರಲಿಲ್ಲ. 100 ಅಂಕಗಳ ಪರೀಕ್ಷೆಯಲ್ಲಿ 70ಕ್ಕಿಂತಲೂ ಹೆಚ್ಚು ಅಂಕ ಗಳಿಸಿದವರು ಮಹಾರಾಷ್ಟ್ರ ಮತ್ತು ಹರಿಯಾಣದ ಉದ್ಯೋಗಾರ್ಥಿಗಳಾಗಿದ್ದರು!.

ತಮಿಳುನಾಡಿನ ಅಂಚೆ ಇಲಾಖೆ ವಿಭಾಗದಲ್ಲಿ ಖಾಲಿ ಇರುವ 300 ಹುದ್ದೆಗಳಿಗಾಗಿ ಕಳೆದ ನವೆಂಬರ್ ತಿಂಗಳಲ್ಲಿ  ಪರೀಕ್ಷೆ ನಡೆಸಲಾಗಿತ್ತು. ಆ ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ತಮಿಳುನಾಡಿನಲ್ಲಿರುವ ಉದ್ಯೋಗಾರ್ಥಿಗಳಲ್ಲಿ ಹೆಚ್ಚಿನವರು ಅನುತ್ತೀರ್ಣರಾಗಿದ್ದರು.

ತಮಿಳುನಾಡು ಅಂಚೆ ಇಲಾಖೆಯ ಪೋರ್ಟಲ್‍ನಲ್ಲಿ ಕಳೆದ ಮಂಗಳವಾರ ಫಲಿತಾಂಶ ಪ್ರಕಟವಾಗಿತ್ತು. ಇದರಲ್ಲಿ ವಿದ್ಯಾರ್ಥಿಗಳು ಪಡೆದ ಅಂಕ, ವಿದ್ಯಾರ್ಥಿಗಳ ಹೆಸರು ಮತ್ತು ಮೊಬೈಲ್ ಸಂಖ್ಯೆ ನೀಡಲಾಗಿತ್ತು.

ತಮಿಳುನಾಡಿನ ಕೆಲವೊಂದು ವಿದ್ಯಾರ್ಥಿಗಳು ಈ ಉದ್ಯೋಗಾರ್ಥಿಗಳ ಅಂಕಪಟ್ಟಿಗಳನ್ನು ಗಮನಿಸಿ, ಮುಂದಿನ ಪರೀಕ್ಷೆಗಾಗಿ ಸಲಹೆ ಸೂಚನೆ ಪಡೆಯುವುದಕ್ಕಾಗಿ ಆ ವ್ಯಕ್ತಿಗಳಿಗೆ ಫೋನ್ ಮಾಡಿದಾಗ ಅವರು ತಮಿಳುನಾಡಿನವರು ಅಲ್ಲ ಎಂಬುದು ಗೊತ್ತಾಗಿದೆ.

ಈ ವಿಷಯದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉದ್ಯೋಗಾರ್ಥಿಯೊಬ್ಬರು ತಮಿಳುನಾಡಿನವರು ಮಾತ್ರ ಈ ಪರೀಕ್ಷೆ ಬರೆಯಬಹುದು ಎಂಬ ನಿಯಮವೇನೂ ಇಲ್ಲ. ಆದರೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದರೆ ಅವರಿಗೆ ತಮಿಳು ಭಾಷೆಯ ಬಗ್ಗೆ ಸಾಮಾನ್ಯ ಅರಿವು ಇರಲೇಬೇಕು. ಹೀಗಿರುವಾಗ ತಮಿಳು ಭಾಷೆ ಬಗ್ಗೆ ಏನೇನೂ ಗೊತ್ತಿಲ್ಲದ ಹರಿಯಾಣ ಮತ್ತು ಮಹಾರಾಷ್ಟ್ರದ ಉದ್ಯೋಗಾರ್ಥಿಗಳು ಹೇಗೆ ಇಷ್ಟೊಂದು ಅಂಕಗಳನ್ನು ಗಳಿಸಿದರು? ನಮಗೆ ಅನ್ಯಾಯವಾಗಿದೆ ಈ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT