ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ: ಬಿಸಿಲ ಧಗೆ ನಡುವೆ ಕಾವೇರಿದ ಪ್ರಚಾರ

ಕಾಂಗ್ರೆಸ್‌–ಬಿಜೆಪಿ ನೇರ ಸ್ಪರ್ಧೆ; ಎರಡೂ ಕ್ಷೇತ್ರಗಳ ಉಭಯ ಪಕ್ಷಗಳ ಅಭ್ಯರ್ಥಿಗಳಿಂದ ಇಂದು ನಾಮಪತ್ರ ಸಲ್ಲಿಕೆ
Last Updated 19 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಮೈಸೂರು: ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆ ಪ್ರಚಾರ ಬಿಸಿಲ ಧಗೆಯ ನಡುವೆಯೂ ಕಾವೇರಿದ್ದು, ಕೇವಲ ಒಂದು ವರ್ಷದ ಚುಕ್ಕಾಣಿಗಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ಜಿದ್ದಾಜಿದ್ದಿನ ಪೈಪೋಟಿಗಿಳಿದಿವೆ. 
 
ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಒಂದು ಸುತ್ತು ಬಿರುಸಿನ ಪ್ರಚಾರ ನಡೆಸಿದ್ದು ಉಭಯ ಪಕ್ಷಗಳ ಪ್ರಮುಖರು ಕ್ಷೇತ್ರಗಳಲ್ಲಿ ಬೀಡುಬಿಟ್ಟಿದ್ದಾರೆ. ಯಡಿಯೂರಪ್ಪ ಅವರು ಮೂರು ದಿನಗಳಿಂದ ನಗರದಲ್ಲಿ ವಾಸ್ತವ್ಯ ಹೂಡಿದ್ದಾರೆ. 
 
ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಸಲು ಮಾರ್ಚ್‌ 21 ಕಡೆಯ ದಿನ. ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಾ ಕಣದಿಂದ ಜೆಡಿಎಸ್‌ ಪಕ್ಷವು ಹಿಂದೆ ಸರಿದಿರುವುದರಿಂದ ಏ. 9ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಅಷ್ಟು ಮಾತ್ರವಲ್ಲದೆ; ತಂತ್ರಗಾರಿಕೆ ಬದಲಾಯಿಸುವಂತೆ ಮಾಡಿದೆ. 
 
‘ಒಂದು ವರ್ಷದ ಚುಕ್ಕಾಣಿಗಾಗಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ನೊಂದಿಗೆ ಜಿದ್ದಾಜಿದ್ದಿಗೆ ಇಳಿಯುವುದಿಲ್ಲ. ವರಿಷ್ಠರ ಸೂಚನೆಯಂತೆ ಪಕ್ಷವು ತಟಸ್ಥವಾಗಿರಲಿದೆ. ಯಾವುದೇ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ’ ಎಂದು ಜೆಡಿಎಸ್‌ನ ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಎನ್.ನರಸಿಂಹಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
 
ನಂಜನಗೂಡು ಮೀಸಲು ಕ್ಷೇತ್ರದಲ್ಲಿ ಹಿಂದೆ ಕಾಂಗ್ರೆಸ್‌ನಿಂದ ಗೆದ್ದು ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವಿ.ಶ್ರೀನಿವಾಸಪ್ರಸಾದ್‌ ‘ಹ್ಯಾಟ್ರಿಕ್‌’ ಸಾಧನೆ ಮೇಲೆ ಕಣ್ಣಿಟ್ಟಿದ್ದಾರೆ. 2013ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಕಳಲೆ ಕೇಶವಮೂರ್ತಿ ಎದುರು ಗೆದ್ದಿದ್ದ ಪ್ರಸಾದ್‌, 2008ರಲ್ಲಿ ಕೇವಲ 708 ಮತಗಳಿಂದ ಬಿಜೆಪಿಯ ಎಸ್‌.ಮಹದೇವಯ್ಯ ಅವರನ್ನು ಮಣಿಸಿದ್ದರು. ಕಳೆದ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಕೇಶವಮೂರ್ತಿ ಈ ಬಾರಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. 
 
ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಚಾರದ ಉಸ್ತುವಾರಿಯನ್ನು ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರಿಗೆ ವಹಿಸಲಾಗಿದೆ. ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಒಬ್ಬ ಸಚಿವ, ಗ್ರಾಮ ಪಂಚಾಯಿತಿಗೆ ಒಬ್ಬ ಶಾಸಕ ಹಾಗೂ ಪಕ್ಷದ ಪದಾಧಿಕಾರಿಗಳು, ಜಿಲ್ಲೆಯ ಮುಖಂಡರನ್ನು ನೇಮಿಸಲಾಗಿದೆ.

ಶ್ರೀನಿವಾಸಪ್ರಸಾದ್‌ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದಾರೆ. 
ಕಾಂಗ್ರೆಸ್ ರಣತಂತ್ರಕ್ಕೆ ಪ್ರತಿತಂತ್ರ ರೂಪಿಸುವಲ್ಲಿ ಬಿಜೆಪಿ ನಿರತವಾಗಿದೆ.

ಪ್ರಚಾರದ ಉಸ್ತುವಾರಿಯನ್ನು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ವಿಧಾನ ಪರಿಷತ್‌ ಸದಸ್ಯ ವಿ.ಸೋಮಣ್ಣ ನೋಡಿಕೊಳ್ಳುತ್ತಿದ್ದಾರೆ. 15 ಮಾಜಿ ಸಚಿವರ ತಂಡವನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಮಾಜಿ ಸಚಿವರ ನೇತೃತ್ವದಲ್ಲಿ ಪ್ರಚಾರ ನಡೆಯುತ್ತಿದೆ.  
 
ಜೆಡಿಎಸ್‌ ಕಾರ್ಯಕರ್ತರು ಹಾಗೂ ಸಾಂಪ್ರದಾಯಿಕ ಮತದಾರರನ್ನು ಸೆಳೆದುಕೊಳ್ಳಲು ಉಭಯ ಪಕ್ಷಗಳು ರಹಸ್ಯ ಕಾರ್ಯಾಚರಣೆ ನಡೆಸುತ್ತಿವೆ.  ಆಡಳಿತಾರೂಢ ಕಾಂಗ್ರೆಸ್‌ ಪಕ್ಷವು ನಂಜನಗೂಡು ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಮತ್ತು ಪ್ರತಿಪಕ್ಷ ಬಿಜೆಪಿಯು ಸವಾಲಾಗಿ ಸ್ವೀಕರಿಸಿವೆ.   
 
**
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ: ಮಹಿಳಾ ಮತದಾರರೇ ಹೆಚ್ಚು
ಚಾಮರಾಜನಗರ:
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸೋಮವಾರ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಚಿವರಾಗಿದ್ದ ದಿ.ಎಚ್.ಎಸ್‌. ಮಹದೇವಪ್ರಸಾದ್‌ ಅವರ ಪತ್ನಿ ಗೀತಾ ಮಹದೇವಪ್ರಸಾದ್‌ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಸಿ.ಎಸ್‌.ನಿರಂಜನಕುಮಾರ್‌ ನಾಮಪತ್ರ ಸಲ್ಲಿಸಲಿದ್ದಾರೆ.

ಕರ್ನಾಟಕದ ಮೊದಲ ಮಹಿಳಾ ಸ್ಪೀಕರ್‌ ಆದ ಕೆ.ಎಸ್‌. ನಾಗರತ್ನಮ್ಮ ಅವರಂಥ ಧೀಮಂತ ರಾಜಕಾರಣಿಯನ್ನು ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಗುಂಡ್ಲುಪೇಟೆ ಕ್ಷೇತ್ರಕ್ಕಿದೆ. 14 ಚುನಾವಣೆ ಕಂಡಿರುವ ಈ ಕ್ಷೇತ್ರದಲ್ಲಿ ನಾಗರತ್ನಮ್ಮ ಸೇರಿದಂತೆ ಇಲ್ಲಿಯವರೆಗೆ ಮೂವರು ಮಹಿಳೆಯರು ಸ್ಪರ್ಧಿಸಿದ್ದಾರೆ.

1994ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಡಾ.ಗಿರಿಜಾ ಮಹೇಶನ್‌ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸರೋಜಾ ಶಂಕರ್‌ ಸ್ಪರ್ಧಿಸಿದ್ದರು. ನಂತರದ ಚುನಾವಣೆಗಳಲ್ಲಿ ಮಹಿಳೆಯರು ಸ್ಪರ್ಧಿಸಿಲ್ಲ. ಕ್ಷೇತ್ರದಲ್ಲಿ ಒಟ್ಟು 1,98,879 ಮತದಾರರು ಇದ್ದಾರೆ. ಈ ಪೈಕಿ 99,155 ಪುರುಷರು, 99,707 ಮಹಿಳೆಯರು ಮತ್ತು 17 ಇತರೆ ಮತದಾರರು ಇದ್ದಾರೆ. ಪುರುಷರಿಗಿಂತ 552 ಮಹಿಳಾ ಮತದಾರರು ಹೆಚ್ಚಿದ್ದಾರೆ.

ನಿರಂಜನಕುಮಾರ್‌ ಅವರು 2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. 2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಅಖಾಡಕ್ಕೆ ಇಳಿದಿದ್ದರು. ಈ ಎರಡೂ ಚುನಾವಣೆಯಲ್ಲಿ ಮಹದೇವಪ್ರಸಾದ್ ಅವರ ವಿರುದ್ಧವೇ ಸೋತಿದ್ದರು.

**
ಶ್ರೀನಿವಾಸಪ್ರಸಾದ್‌ ಅವರ ಸ್ವಪ್ರತಿಷ್ಠೆಯಿಂದ ಬರಗಾಲದಲ್ಲಿಯೂ ಉಪಚುನಾವಣೆ ಎದುರಿಸುವಂತಾಗಿದೆ. ಅವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ
ಡಾ.ಎಚ್‌.ಸಿ.ಮಹದೇವಪ್ಪ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ

2013ರ ವಿಧಾನಸಭಾ ಚುನಾವಣೆಯಲ್ಲಿ ಪಡೆದ ಮತ

ನಂಜನಗೂಡು
- ವಿ.ಶ್ರೀನಿವಾಸಪ್ರಸಾದ್‌
(ಕಾಂಗ್ರೆಸ್‌–50,784)
- ಕಳಲೆ ಕೇಶವಮೂರ್ತಿ
(ಜೆಡಿಎಸ್‌–41,843)

ಗುಂಡ್ಲುಪೇಟೆ
- ಎಚ್.ಎಸ್‌.ಮಹದೇವಪ್ರಸಾದ್‌
(ಕಾಂಗ್ರೆಸ್‌–73,723)
- ಸಿ.ಎಸ್‌.ನಿರಂಜನಕುಮಾರ್‌
(ಕೆಜಿಪಿ–66,048)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT