ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ನೆನಪುಗಳು, ಹೊಸ ಸವಾಲುಗಳು

Last Updated 19 ಮಾರ್ಚ್ 2017, 19:30 IST
ಅಕ್ಷರ ಗಾತ್ರ

–ಯು. ವಿಮಲ್‌ ಕುಮಾರ್‌

*

ನೂರಾರು ವರ್ಷಗಳ ಭವ್ಯ ಇತಿಹಾಸವಿರುವ ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಪಂದ್ಯಗಳನ್ನು ಬರ್ಮಿಂಗ್‌ ಹ್ಯಾಮ್‌ಗೆ ಹೋಗಿ ಅನೇಕ ಬಾರಿ ನೋಡಿದ್ದೇನೆ. ಅಲ್ಲಿ ಪದಕ ಗೆದ್ದಿರುವ ಪ್ರಕಾಶ್‌ ಪಡುಕೋಣೆ, ಪುಲ್ಲೇಲ ಗೋಪಿಚಂದ್‌,  ಚೀನಾದ ಲಿಯಾನ್‌ ಡಾನ್‌, ಲೀಗ್ ಚೊಂಗ್ ವೀ, ಚೆನ್‌ ಲಾಂಗ್ ಹೀಗೆ ಹಲವಾರು ಸಾಧಕರ ಜತೆಗೆ ಮಾತನಾಡಿದ್ದೇನೆ.

ಆದರೆ ಈ ಬಾರಿಯ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ ಯಾವಾಗ ಬರುತ್ತದೆಯೋ ಎಂದು ಕಾತರದಿಂದ ಕಾಯುತ್ತಿದ್ದೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿದ್ದವು.

ಒಬ್ಬ ಕ್ರೀಡಾಪಟುವಿನ ಕೋಚ್‌ ಆಗಿ  ಇಂಗ್ಲೆಂಡ್‌ಗೆ  ಹೋಗಬೇಕಾಗಿ ಬಂತು. ನಿಮಗೆಲ್ಲಾ ಗೊತ್ತಿರುವಂತೆ ಸೈನಾ ನೆಹ್ವಾಲ್‌ಗೆ ತರಬೇತು ನೀಡುತ್ತಿದ್ದೇನೆ. ಸೈನಾ ಜೊತೆ ಹೋಗಿ ಆಕೆಗೆ ಮಾರ್ಗದರ್ಶನ ಮಾಡಲು ಕಾಯುತ್ತಿದ್ದೆ. ಇನ್ನೊಂದು ಮುಖ್ಯ ಕಾರಣ ಪ್ರಕಾಶ್‌ ಪಡುಕೋಣೆ.

ಪ್ರಕಾಶ್‌ ಅವರ ಹೆಸರು ಎತ್ತಿದರೆ ನಾನು ಬ್ಯಾಡ್ಮಿಂಟನ್ ಆಡಲು ಆರಂಭಿಸಿದ ದಿನಗಳು ನೆನಪಾಗುತ್ತವೆ. 1974ರಲ್ಲಿ 14 ವರ್ಷದ ಒಳಗಿನವರ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದೆ. ಅದೇ ವರ್ಷ ರ್‍ಯಾಂಕಿಂಗ್‌ನಲ್ಲಿಯೂ ಅಗ್ರಸ್ಥಾನ ಲಭಿಸಿತ್ತು. ಆಗ ಅವರು ನನ್ನ ಬೆನ್ನು ತಟ್ಟಿ ಇನ್ನೂ ದೊಡ್ಡ ಸಾಧನೆ ಮಾಡು ಎಂದು  ಹಾರೈಸಿದ್ದರು.

ಪ್ರಕಾಶ್‌ ಅವರನ್ನು ನಾನು ಭೇಟಿಯಾದ ವೇಳೆಗೆ ಅವರು ಬ್ಯಾಡ್ಮಿಂಟನ್‌ನಲ್ಲಿ ಉತ್ತಮ ಹೆಸರು ಮಾಡಿದ್ದರು. ಮುಂದಿನ ಐದಾರು ವರ್ಷಗಳಲ್ಲಿ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿ ಯನ್‌ಷಿಪ್‌ನ ಸಿಂಗಲ್ಸ್‌ನಲ್ಲಿ ಚಿನ್ನ ಜಯಿಸಿದ್ದರು. ಈಡೀ ದೇಶವೇ ಅವರ ಸಾಧನೆಗೆ ಹೆಮ್ಮೆ ಪಟ್ಟಿತ್ತು. ಆ ಸುಂದರ ನೆನಪುಗಳಿಗೆಲ್ಲಾ ಈಗ 35 ವರ್ಷಗಳ ಇತಿಹಾಸ.

ಇದನ್ನೆಲ್ಲಾ ಈಗ ನಿಮ್ಮೊಡನೆ ಹಂಚಿಕೊಳ್ಳಲು ವಿಶೇಷ ಕಾರಣವಿದೆ. ಆಲ್‌ ಇಂಗ್ಲೆಂಡ್ ಟೂರ್ನಿಯ ಸಂಘಟಕರು ಮತ್ತು ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್  ಈ ಸಲದ ಟೂರ್ನಿಗೆ ಪ್ರಕಾಶ್‌ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿತ್ತು. ನನ್ನ ಬ್ಯಾಡ್ಮಿಂಟನ್‌ನಲ್ಲಿನ ಸಾಧನೆಗೆ  ಪ್ರೇರಕ ಶಕ್ತಿಯಾದ ಪ್ರಕಾಶ್‌   ಜೊತೆ ಇಂಗ್ಲೆಂಡ್‌ಗೆ ಹೋಗಿದ್ದರಿಂದ ಟೂರ್ನಿ ತುಂಬಾ ವಿಶೇಷವೆನಿಸಿತ್ತು.

(ಬರ್ಮಿಂಗ್‌ ಹ್ಯಾಮ್‌ನಲ್ಲಿರುವ ನ್ಯಾಷನಲ್‌ ಬ್ಯಾಡ್ಮಿಂಟನ್‌  ಮ್ಯೂಸಿಯಮ್‌ಗೆ ಪ್ರಕಾಶ್‌ ಪಡುಕೋಣೆಯವರು ಇದೇ ಮಾರ್ಚ್‌ ಎರಡನೇ ವಾರ ಭೇಟಿ ನೀಡಿದ್ದರು.)

ಇವೆಲ್ಲಾ ಸುಂದರ ನೆನಪುಗಳನ್ನು ಬದಿಗೆ ಸರಿಸಿ ಈಗ ಆಟದ ವಿಷಯಕ್ಕೆ ಬರೋಣ. 

ಪ್ರಕಾಶ್‌ ಹಾಗೂ ಗೋಪಿಚಂದ್‌ ಅವರು ಆಲ್‌ ಇಂಗ್ಲೆಂಡ್‌ನಲ್ಲಿ ಪದಕ ಗೆದ್ದ ಬಳಿಕ ಇಂಥ ಸಾಧನೆ ಮಾಡಲು ಭಾರತದ ಮಹಿಳೆಯರಿಂದ ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆ ನನ್ನನ್ನು ಪದೇ ಪದೇ ಕಾಡುತ್ತಿತ್ತು.  ಸೈನಾ  ನನ್ನ ಕೊರಗು ದೂರ ಮಾಡಿದ್ದರು.

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸೈನಾ ಕಂಚಿನ ಪದಕ ಜಯಿಸಿದ ಬಳಿಕ   ಬ್ಯಾಡ್ಮಿಂಟನ್‌ ಅಭಿಮಾನಿಗಳು ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದಾರೆ. ಪ್ರತಿ ಟೂರ್ನಿಯಲ್ಲಿಯೂ ಪ್ರಶಸ್ತಿ ಗೆಲ್ಲಬೇಕೆಂದು ಬಯಸುತ್ತಾರೆ. ಅದೇ ರೀತಿ ರಿಯೊ ಒಲಿಂಪಿಕ್ಸ್‌ನಲ್ಲಿ ಸಿಂಧು ಬೆಳ್ಳಿ ಗೆದ್ದ ಬಳಿಕವೂ ಅವರಿಂದಲೂ ಮತ್ತಷ್ಟು ದೊಡ್ಡ ಸಾಧನೆಗೆ ಕಾಯುತ್ತಿದ್ದಾರೆ.

ರಿಯೊ ಒಲಿಂಪಿಕ್ಸ್‌ ಕೆಲ ತಿಂಗಳುಗಳ ಹಿಂದಷ್ಟೇ ಮುಗಿದಿದೆ. ಸಿಂಧು ಪದಕ ಗೆದ್ದ ಸಂಭ್ರಮ ಇನ್ನೂ ನಮ್ಮಲ್ಲಿದೆ. ಸೈನಾ ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೋತರೂ ಅವರ ಸಾಧನೆಗಳನ್ನು ಜನ ಮರೆತಿಲ್ಲ. ಆದ್ದರಿಂದ ಆಲ್‌ ಇಂಗ್ಲೆಂಡ್‌ನಲ್ಲಿ  ಇಬ್ಬರೂ ಆಟಗಾರ್ತಿಯರು ಪದಕ ಗೆಲ್ಲಬೇಕೆಂದು ಬಯಸಿದ್ದರು.

ಇವರಿಬ್ಬರೂ ನಿರೀಕ್ಷೆಗೆ ತಕ್ಕ ಹಾಗೆ ಆಡಲಿಲ್ಲ. ಹೊಡೆತಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ, ದೀರ್ಘ ರ್‍ಯಾಲಿಗಳನ್ನು ಸಿಡಿಸುವ ವಿಷಯದಲ್ಲಿ ಎಡವಿದರು. ಇದಕ್ಕಿಂತ ದೊಡ್ಡ ಲೋಪವಾಗಿ ಕಂಡಿದ್ದು ಫಿಟ್‌ನೆಸ್ ಸಮಸ್ಯೆ.

ವಿದೇಶಿ ಆಟಗಾರರು ಮಾದರಿ
ನಮ್ಮವರು ಕೌಶಲ ಕಲಿತುಕೊಳ್ಳುವ ವಿಷಯದಲ್ಲಿ ತುಂಬಾ ಜಾಣರಿದ್ದಾರೆ. ಹೊಸ ಹೊಸ ವಿಧಾನಗಳನ್ನು ಬೇಗನೆ ತಿಳಿದುಕೊಳ್ಳುತ್ತಾರೆ. ಆದರೆ ಫಿಟ್‌ನೆಸ್‌ ಸಂಬಂಧಿಸಿದಂತೆ ಸಾಕಷ್ಟು ಸುಧಾರಣೆ ಆಗಬೇಕಿದೆ.

ದಕ್ಷಿಣ ಕೊರಿಯಾ, ಡೆನ್ಮಾರ್ಕ್‌, ಥಾಯ್ಲೆಂಡ್‌, ಇಂಡೊನೇಷ್ಯಾ, ಚೀನಾ ದೇಶಗಳ ಕ್ರೀಡಾಪಟುಗಳು ದೈಹಿಕವಾಗಿ  ಬಲಿಷ್ಠರಾಗಿರುತ್ತಾರೆ. ನಮ್ಮವರೂ ಉತ್ತಮ ಫಿಟ್‌ನೆಸ್‌ ಹೊಂದಿದ್ದಾರೆ. ಆದರೆ ಇದು ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಿಗೆ ಅಗತ್ಯವಿರುವಷ್ಟು ಅಲ್ಲ. ಭಾರತದ ಮಟ್ಟಿಗೆ ಈಗಿರುವಷ್ಟು ಫಿಟ್‌ನೆಸ್ ಸಾಕು.
ವಿವಿಧ ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಚೀನಾ ತೈಪೆಯ ತಾಯ್‌ ಜು ಯಿಂಗ್, ಸ್ಪೇನ್‌ನ ಕ್ಯಾರೊಲಿನ್ ಮರಿನ್‌, ದಕ್ಷಿಣ ಕೊರಿಯಾದ ಸುಂಗ್ ಜಿ ಹುಯಾನ್‌, ಸನ್ ಯು, ಚೀನಾದ ಲೀ ಕ್ಸುರಿಯೆ ಹೀಗೆ ಅನೇಕ ಆಟಗಾರ್ತಿಯರು  ಆಟದ ಕೌಶಲದ ಜೊತೆಗೆ ದೈಹಿಕವಾಗಿಯೂ ಬಲಿಷ್ಠರು.

ಆದ್ದರಿಂದ ಪದೇ ಪದೇ ಗಾಯದ ಸಮಸ್ಯೆ ಎದುರಾಗುವುದಿಲ್ಲ. ಆದರೆ ಸೈನಾ ಇತ್ತೀಚಿಗೆ ಪದೇ ಪದೇ ಗಾಯದ ಸಮಸ್ಯೆ ಎದುರಿಸುತ್ತಿರುವ ಕಾರಣ ಸರಿಯಾಗಿ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಮಂಡಿನೋವಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ. ನಿತ್ಯ ಫಿಸಿಯೊ ಮಸಾಜ್‌ ಮಾಡಿದರೂ ಮೊದಲಿನ ರೀತಿಯಲ್ಲಿ ಇನ್ನೂ ಆಡಲು ಸಾಧ್ಯವಾಗಿಲ್ಲ. ಆಗಿರುವ ಗಾಯದಿಂದ ಚೇತರಿಸಿಕೊಳ್ಳಲು ಮೂರ್ನಾಲ್ಕು ತಿಂಗಳು ಅಗತ್ಯವಿದೆ.

ಬದಲಾಗಬೇಕಿದೆ ದೃಷ್ಟಿಕೋನ
ಭಾರತದ ಬ್ಯಾಡ್ಮಿಂಟನ್‌ನಲ್ಲಿ ಹೊಸ ರೀತಿಯಲ್ಲಿ ಚರ್ಚೆ ಶುರುವಾಗಿದೆ. ಶ್ರೀಕಾಂತ್‌, ಅಜಯ್‌ ಜಯರಾಮ್, ಪ್ರಣಯ್‌, ಸಮೀರ್‌ ವರ್ಮಾ, ಸಾಯಿ ಪ್ರಣೀತ್‌, ಸಿಂಧು, ಸೈನಾ, ತನ್ವಿ ಲಾಡ್‌, ರುತ್ವಿಕಾ ಶಿವಾನಿ, ತುಳಸಿ ಹೀಗೆ ಅನೇಕರು ಸಿಂಗಲ್ಸ್‌ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಆದರೆ ಡಬಲ್ಸ್‌ ವಿಭಾಗದಲ್ಲಿ ನಮ್ಮ ಸಾಧನೆ ಏನು ಎನ್ನುವ ಪ್ರಶ್ನೆ ಎದುರಾದಾಗ ನೆನಪಾಗುವುದು ಬೆರಳೆಣಿಯಯಷ್ಟೇ ಜನ. ಇಷ್ಟು ವರ್ಷ ಒಂದಾಗಿ ಆಡುತ್ತಿದ್ದ ಅಶ್ವಿನಿ ಪೊನ್ನಪ್ಪ ಹಾಗೂ ಜ್ವಾಲಾ ಗುಟ್ಟಾ ಈಗ ಬೇರೆ ಜೊತೆಗಾರ್ತಿಯರನ್ನು ಹುಡುಕಿಕೊಂಡಿದ್ದಾರೆ. ಸಿಂಗಲ್ಸ್‌ನಲ್ಲಿ ಆಗಿರುವಷ್ಟು ಸಾಧನೆ ಡಬಲ್ಸ್‌ನಲ್ಲಿ ಆಗಿಲ್ಲ.
ಆದರೆ ನಾವು ಮಾಡುತ್ತಿರುವ ತಪ್ಪನ್ನು ಬೇರೆ ದೇಶಗಳು ಮಾಡುತ್ತಿಲ್ಲ. ಸಿಂಗಲ್ಸ್‌ ವಿಭಾಗಕ್ಕೆ ಕೊಡುತ್ತಿರುವಷ್ಟೇ ಪ್ರಾಮುಖ್ಯತೆ ಡಬಲ್ಸ್‌ಗೂ ನೀಡುತ್ತಿರುವ ಕಾರಣ ಸಮತೋಲನದಲ್ಲಿ ಸಾಗುತ್ತಿದೆ. ಆದರೆ ನಮ್ಮಲ್ಲಿ ಆ ರೀತಿ ಆಗುತ್ತಿಲ್ಲ.

ಇದು ಇಂದು, ನಿನ್ನೆಯ ಸಮಸ್ಯೆಯೇನಲ್ಲ. ನಾವು ಆಡುತ್ತಿದ್ದಾಗಿನ ದಿನಗಳಿಂದಲೂ ಆಟಗಾರರ ಮನಸ್ಥಿತಿ ಹೀಗೆಯೇ ಬೆಳೆದುಕೊಂಡು ಬಂದಿದೆ. ಸಿಂಗಲ್ಸ್‌ನಲ್ಲಿ ಸಾಧನೆ ಮಾಡಿದರಷ್ಟೇ ಎಲ್ಲರೂ ಗುರುತಿಸುತ್ತಾರೆ. ಡಬಲ್ಸ್‌ ಸಾಧಕರಿಗೆ ಗೌರವ ಅಷ್ಟಕ್ಕಷ್ಟೇ ಎನ್ನುವ ಭಾವನೆ ಬಹುತೇಕ ಜನರಲ್ಲಿದೆ. ಇದೆಲ್ಲವೂ ಬದಲಾಗಬೇಕು.
ಇದಕ್ಕೆ ಕೇವಲ ಕ್ರೀಡಾಪಟುಗಳನ್ನಷ್ಟೇ ಟೀಕಿಸುವುದು ಸರಿಯಲ್ಲ. ಬ್ಯಾಡ್ಮಿಂಟನ್‌  ಆಡಳಿತ ನೋಡಿಕೊಳ್ಳವವರು ಡಬಲ್ಸ್ ವಿಭಾಗಕ್ಕೂ ಪ್ರತ್ಯೇಕ ಕೋಚ್‌ ನೇಮಿಸಬೇಕು. ತರಬೇತಿಗೆ ವಿದೇಶಕ್ಕೆ ಕಳುಹಿಸುವ ವ್ಯವಸ್ಥೆ ಮಾಡಬೇಕಿದೆ.

ಜೂನಿಯರ್‌ ವಿಭಾಗದಲ್ಲಿ ಹೊಸ ಭಾಷ್ಯ
ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಭಾರತದ ಸೀನಿಯರ್‌ ಸ್ಪರ್ಧಿಗಳು ಜೂನಿಯರ್ ಹಂತದಿಂದಲೇ ತಮ್ಮಲ್ಲಿನ ಪ್ರತಿಭೆಯನ್ನು ಸಾಬೀತು ಮಾಡಿದವರು. ಅವರ ಹಾದಿಯಲ್ಲಿ ಈಗಿನ ಜೂನಿಯರ್ ಸ್ಪರ್ಧಿಗಳೂ ಸಾಗುತ್ತಿದ್ದಾರೆ. ವಿಶ್ವ ರ್‍ಯಾಂಕ್‌ನಲ್ಲಿ ಲಕ್ಷ್ಯ ಸೇನ್ ಅಗ್ರಸ್ಥಾನ ಪಡೆದಿದ್ದು ಇದಕ್ಕೊಂದು ನಿದರ್ಶನ.

ಅದರಂತೆಯೇ ಸಿರಿಲ್‌ ವರ್ಮಾ, ಕಾರ್ತಿಕೇಯ ಗುಲ್ಶನ್‌ ಕುಮಾರ್, ಆಕರ್ಷಿ ಕಶ್ಯಪ್‌, ಇರಾ ಶರ್ಮಾ. ಕೃಷ್ಣ ಪ್ರಸಾದ್ ಗರಗ್‌, ಧ್ರುವ ಕಪಿಲಾ ಹೀಗೆ ಅನೇಕ ಪ್ರತಿಭೆಗಳು ಜೂನಿಯರ್ ಹಂತದಲ್ಲಿ ಉತ್ತಮ ಸಾಮರ್ಥ್ಯ ನೀಡುತ್ತಿದ್ದಾರೆ.

ಇವೆಲ್ಲಾ ಇತ್ತೀಚಿನ ಐದಾರು ವರ್ಷಗಳಲ್ಲಿ ಆದ ಬದಲಾವಣೆಗಳು. ಒಲಿಂಪಿಕ್ಸ್‌ನಲ್ಲಿ ಸೈನಾ ಪದಕ ಗೆದ್ದ ಬಳಿಕ ಬ್ಯಾಡ್ಮಿಂಟನ್ ರ್‍ಯಾಕೆಟ್‌ ಹಿಡಿದ ಸಾಕಷ್ಟು ಕ್ರೀಡಾಪಟುಗಳಿದ್ದಾರೆ. ಈ ಕ್ರೀಡೆಯಲ್ಲಿ ಮುಂದುವರಿದರೆ ಉತ್ತಮ ಭವಿಷ್ಯವಿದೆ ಎಂಬುದು ಅವರಿಗೆಲ್ಲಾ ಮನವರಿಕೆಯಾಗಿದೆ. ಒಲಿಂಪಿಕ್ಸ್‌ನಲ್ಲಿ ಸಿಂಧು ಪದಕ ಗೆದ್ದ ಮೇಲೆ ಈ ಕ್ರೀಡೆಯತ್ತ ಹೆಚ್ಚು ಜನ ಆಕರ್ಷಿತರಾಗಿದ್ದಾರೆ. ಅದಕ್ಕೆ ತಕ್ಕ ಹಾಗೆ ದೇಶದ ಮೂಲೆಮೂಲೆಗಳಲ್ಲಿ ಕ್ಲಬ್‌ಗಳು ಹುಟ್ಟಿಕೊಂಡಿವೆ. ಹಲವು ಕ್ಲಬ್‌ಗಳು ಈ ಅವಕಾಶವನ್ನು ಹಣ ಮಾಡಲು ಬಳಸಿಕೊಳ್ಳುತ್ತಿರುವುದು ಬೇಸರದ ಸಂಗತಿ. ಇನ್ನೂ ಕೆಲ ಕ್ಲಬ್‌ಗಳು ಪ್ರತಿಭಾನ್ವಿತರನ್ನು ಆಯ್ಕೆ ಮಾಡಿ ಉಚಿತ ತರಬೇತಿ ನೀಡಲು  ಅವಕಾಶ ಕೂಡ ಕೊಡುತ್ತಿವೆ ಎನ್ನುವುದು ಸಮಾಧಾನದ ವಿಷಯ.

**

ಸವಿ ನೆನಪುಗಳ ಜೊತೆಯಲ್ಲಿ

ಪ್ರಕಾಶ್ ಸರ್‌ ಜೊತೆ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ಗೆ ಹೋದಾಗ ಅಲ್ಲಿ ಲಭಿಸಿದ ಗೌರವ, ಅವರಿಗೆ ಈಗಲೂ ಉಳಿದಿರುವ ಜನಪ್ರಿಯತೆ ಕಂಡು ಅಚ್ಚರಿಯಾಯಿತು.

ಪಂದ್ಯ ನೋಡಲು ಬಂದ ಅಭಿಮಾನಿಗಳಿಗೆ ಪ್ರಕಾಶ್‌ ಹೆಸರಿನಲ್ಲಿ ಪ್ರತ್ಯೇಕ ಗ್ಯಾಲರಿ ನಿರ್ಮಿಸಲಾಗಿತ್ತು. ಅದೇ ಗ್ಯಾಲರಿಯಲ್ಲಿ ಕುಳಿತು ಅವರು ಪಂದ್ಯಗಳನ್ನು ವೀಕ್ಷಿಸಿದರು. ಅವರಿಂದ ಹಸ್ತಾಕ್ಷರ ಪಡೆಯಲು ಸಾಕಷ್ಟು ಜನ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದು ವಿಶೇಷ. ಫೋಟೊ ತೆಗೆಸಿಕೊಳ್ಳಲು ಕೂಡ ಕಾಯುತ್ತಿದ್ದರು.

ಆಲ್‌ ಇಂಗ್ಲೆಂಡ್‌ನ ದಿಗ್ಗಜರ ಜೊತೆ  ಬ್ಯಾಡ್ಮಿಂಟನ್‌ ಕುರಿತು ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಸಿದರು. ಬರ್ಮಿಂಗ್‌ಹ್ಯಾಮ್‌ನಲ್ಲಿ ಇರುವ ರಾಷ್ಟ್ರೀಯ ಬ್ಯಾಡ್ಮಿಂಟನ್ ವಸ್ತು ಸಂಗ್ರಹಾಲಯದ ಮುಂದೆ ನಿಂತು ಹಳೆಯ ನೆನಪುಗಳನ್ನು ಹಂಚಿಕೊಂಡರು. 

ಇದನ್ನೆಲ್ಲಾ ನೋಡಿದಾಗ ಅವರ ಸಾಧನೆಯ ಬಗ್ಗೆ ನನ್ನಲ್ಲಿ ಹೆಮ್ಮೆಯ ಭಾವ ಮೂಡಿತು. ಅವರಿಂದ ಭೇಷ್‌ ಎನಿಸಿಕೊಂಡಿದ್ದ ದಿನಗಳನ್ನು ನೆನಪಿಸಿಕೊಂಡು ನನ್ನೊಳಗೆ ಖುಷಿಪಟ್ಟೆ.

(ಲೇಖಕರು 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಈಗ ಸೈನಾ ನೆಹ್ವಾಲ್‌ ಅವರಿಗೆ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT