ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಗ್ಗೆ ಮಾರಿ ಬದುಕುವ ಪರಿ

Last Updated 19 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಜಾತ್ರೆ, ಸಂತೆ, ಕಲ್ಯಾಣ ಮಂಟಪಗಳ ಬಳಿ, ಹಬ್ಬ ಹರಿದಿನಗಳ ಸಂಭ್ರಮದಲ್ಲಿ ರಸ್ತೆಯ ಆಜುಬಾಜು, ಆಟದ ಮೈದಾನದ  ಹೊರಬದಿ, ಖಾಲಿ ಸೈಟು ಹೀಗೆ ಸಿಕ್ಕ  ಪುಟ್ಟ ಜಾಗದಲ್ಲೇ ಪುಡಿಕಾಸು ಗಳಿಸುವ ರಾಜಸ್ತಾನದ ಮಂದಿಯನ್ನು ನಾವು ಕಾಣುತ್ತಿರುತ್ತೇವೆ.

ಕೈಕಸುಬು, ಕಲೆಗಾರಿಕೆ ಮತ್ತು ವ್ಯಾಪಾರಿ ಹಿನ್ನೆಲೆಯಿರುವ ಕುಟುಂಬಗಳವು. ತಮ್ಮ ಮೂಲ ಕುಟುಂಬ ಸಂಸ್ಕೃತಿ ಉಳಿಸಿಕೊಂಡೇ ಅವರು ತಮ್ಮ ಕಾಯಕದಲ್ಲಿ ತೊಡಗಿರುತ್ತಾರೆ. ವಿವಿಧ ವಿನ್ಯಾಸದ ಬಲೂನು (ಪುಗ್ಗೆ)  ಮಾರಾಟದಲ್ಲಿ ಅವರು ಪಳಗಿದ್ದಾರೆ. ದೊಡ್ಡ ಆಕೃತಿಯ  ಮೀನು, ಏರೋಪ್ಲೇನ್,  ಬಫೂನ್    ಇತ್ಯಾದಿ ಸಿಕ್ಕಿಸಿ  ಮಹಿಳೆಯರೂ   ವ್ಯಾಪಾರಕ್ಕಾಗಿ ಹೊರಟಾಗ  ಬುಗ್ಗೆಯಂತೆ ಚಿಮ್ಮಿದ ಬಣ್ಣದ ಕಾರಂಜಿಯಂತಹ  ನೋಟ ಸೃಷ್ಟಿಸಿಬಿಡುತ್ತಾರೆ.

***
ಒಂದು ಮುಂಜಾನೆ ಸೂರ್ಯನ ತಿಳಿ ಬೆಳಕು  ಮರ, ದೊಡ್ಡ ಕಟ್ಟಡಗಳ, ಸಂದಿನಿಂದ ನುಸುಳಿ ಬರುವ ಮೊದಲೇ ತೆಗೆದ ಚಿತ್ರವಿದು.  ಕೆ.ಆರ್.ರಸ್ತೆಯ  ಜೈನ್ ಭವನದ  ಆಚೆ ಬದಿಯ ಎದುರು ರಸ್ತೆಯ ಪಾದಚಾರಿ ದಾರಿಯಂಚಿನಲ್ಲಿ, ತನ್ನೆರಡು ಮಕ್ಕಳೊಂದಿಗೆ ಜನಜಂಗುಳಿ ಹೆಚ್ಚಾಗುವ  ನಿರೀಕ್ಷೆಯಲಿರುವ  ಒಬ್ಬ ಬಲೂನ್ ವ್ಯಾಪಾರಿ ಮಹಿಳೆಯ ಈ  ‘ಟೈಂ ಪಾಸ್’  ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿರುವವರು, ವಿಕಾಸ್ ಶಾಸ್ತ್ರಿ.

ಪ್ರತಿಷ್ಠಿತ ಸಂಸ್ಥೆಯೊಂದರ ಮಾನವ ಸಂಪನ್ಮೂಲ ವಿಭಾಗದಲ್ಲಿ ದುಡಿಯುತ್ತಿರುವ  ಅವರು, ವನ್ಯಜೀವಿ,  ಪ್ರಕೃತಿ, ಪರ್ವತಾರೋಹಣ ಮತ್ತು ಸ್ಟ್ರೀಟ್‌ ಫೋಟೊಗ್ರಫಿ ಛಾಯಾಗ್ರಹಣ ವಿಭಾಗಗಳಲ್ಲಿ ಕಳೆದ 12 ವರ್ಷಗಳಿಂದಲೂ ತೊಡಗಿಸಿಕೊಂಡಿದ್ದಾರೆ. ಇಲ್ಲಿ ಅವರು ಬಳಸಿದ ಕ್ಯಾಮೆರಾ ಕೆನಾನ್ 70 ಆ,  ಲೆನ್ಸ್ 18-135 ಎಂ.ಎಂ. ಜೂಮ್, ಅಪರ್ಚರ್  ಎಫ್ 8,  ಷಟರ್ ವೇಗ   1/100  ,  ISO 200.

(ಛಾಯಾಗ್ರಾಹಕ:  ವಿಕಾಸ್ ಶಾಸ್ತ್ರಿ ಮೊಬೈಲ್: 99452 44055 ಇಮೇಲ್: sastry.vikas@gmail.com)

ಈ ಛಾಯಾಚಿತ್ರದೊಂದಿಗೆ ತಾಂತ್ರಿಕ  ಹಾಗೂ ಕಲಾತ್ಮಕ ವಿಶ್ಲೇಷಣೆ.. ಇಂತಿವೆ:
* ಈ ಬಗೆಯ ರಸ್ತೆ ಬದಿ ವರ್ಣ ಛಾಯಾಚಿತ್ರದ ಒಂದು ಮುಖ್ಯ ಗುಣವೆಂದರೆ,  ಸರಿಯಾಗಿ ಫೋಕಸ್ ಆದ ಆಕರ್ಷಕ ಬಣ್ಣದ ವಸ್ತುವೊಂದು  ನೋಡುಗನ ದೃಷ್ಟಿಯನ್ನು ಒಮ್ಮೆಲೇ ತನ್ನೆಡೆ ಸೆಳೆಯುವುದು ( Entry point)  ಹಾಗೂ ಚಿತ್ರದ ಚೌಕಟ್ಟಿನಲ್ಲಿ ಕಂಡುಬರುವ ಇತರೆ ಪೂರಕ ವಸ್ತುಗಳೂ ಸಾಕಷ್ಟು ಚೆನ್ನಾಗಿಯೇ ಕಂಡುಬರುವುದೂ ಅವಶ್ಯಕ.  ರಂಗು ರಂಗಿನ ವಿವಿಧಾಕೃತಿಯ ಪುಗ್ಗೆಗಳು  ಇಲ್ಲಿ  ಮುಖ್ಯ ವಸ್ತುವಿನ  ಕೆಲಸ ಮಾಡಿವೆ.   ರಸ್ತೆ ಬದಿಯಲ್ಲಿಯೇ ಬಣ್ಣದ ಕಾರಂಜಿ ಚಿಮ್ಮಿದಂತೆ ಅವುಗಳನ್ನು ಆಕರ್ಷಕವಾಗಿ  ಸೆರೆಹಿಡಿಯಲಾಗಿವೆ.

*ಚೌಕಟ್ಟಿನಲ್ಲಿರುವ   ಇತರ ಪೂರಕ ಅಂಶಗಳು ಎಂದರೆ, ಕೈಯಲ್ಲಿ ಪುಟ್ಟ ಟ್ರಾನ್ಸಿಸ್ಟರ್ ಹಿಡಿದು ತಲ್ಲೀನಳಾದ ತಾಯಿ, ಅವರದೇ ಹುಡುಗಾಟಿಕೆಯಲ್ಲಿ  ತೊಡಗಿರುವ ಮಕ್ಕಳು. ಈ ಮೂವರೂ ಸರಿಯಾಗಿ ಫೋಕಸ್ ಆಗಿಲ್ಲ. ಅಥವಾ ಕೊಂಚ ಅಲುಗಾಡಿದಂತೆಯೂ ಕಾಣಿಸುತ್ತಾರೆ.    ದೂರದಿಂದ ಜೂಂ ಲೆನ್ಸಿನಲ್ಲಿ ಕ್ಲಿಕ್ಕಿಸುವಾಗ  ಅಪರ್ಚರ್ 8 ರ ಬದಲು 11 ನ್ನು ಅಳವಡಿಸಿದ್ದರೆ, ಲೆನ್ಸಿನ ಸಂಗಮ ವಲಯ (Depth of Fie*d)    ಹೆಚ್ಚಿ,  ನಾಲ್ಕು ಅಡಿ ಅಂತರದಲ್ಲಿರುವ ಎಲ್ಲಾ ವಸ್ತುಗಳನ್ನೂ ಉತ್ತಮವಾಗಿ ಫೋಕಸ್ ಮಾಡಿ ಬಿಡಬಹುದಿತ್ತು.

* ಮೇಲಿನಂತೆ ಫೋಕಸ್  ಉತ್ತಮಗೊಂಡರೂ,  ಜೊತೆಯಲ್ಲಿಯೇ ಆ ಮೂವರು ಅಲುಗಾಡಿದಂತೆ ಕಾಣಿಸುವುದನ್ನು   ಸರಿಪಡಿಸದಿದ್ದರೆ ತಾಂತ್ರಿಕವಾಗಿ ಚಿತ್ರ ಯಾಕೋ ಸರಿ ಇಲ್ಲ ಎನ್ನಿಸಬಹುದು. ಅದಕ್ಕೆ ಪರಿಹಾರವೆಂದರೆ, ಷಟರ್ ವೇಗವನ್ನು 1/ 100 ಸೆಕೆಂಡ್  ಬದಲು, 1/ 250 ಸೆಕೆಂಡ್‌ಗೆ ಹೆಚ್ಚಿಸುವುದು.

* ಈ ಎರಡೂ  ತಿದ್ದುಪಡಿಗಳನ್ನು ಮಾತ್ರ ಮಾಡಿಬಿಟ್ಟರೆ ಸಾಲದು, ಚಿತ್ರ ಅಂಡರ್ ಎಕ್ಸ್‌ಫೋಕಸ್ಡ್‌   ಆಗಿ ಕಪಾಗುತ್ತದೆ! ಚಿತ್ರದ  ಒಟ್ಟಾರೆ ಎಕ್ಸ್ ಪೋಶರ್  ಸರಿದೂಗಿಸಲು,  ಮತ್ತೊಂದು ಆಯಾಮವಾದ  ISO ಸೆನ್ಸಿಟಿವಿಟಿಯನ್ನು 600  ಅಥವಾ ತುಸು  ಹೆಚ್ಚು ಇರಿಸಬೇಕಾಗುತ್ತದೆ.  ಆಗ ಪುಗ್ಗೆಗಳೂ, ಮಕ್ಕಳೂ, ಮಹಿಳೆಯೂ ಸ್ಫುಟವಾಗಿ ಕಂಡು,  ಈ ದೃಶ್ಯದ ಮೆರುಗು ಮತ್ತಷ್ಟು ಹೆಚ್ಚುವುದು.

* ಮೇಲಿನ ತಾಂತ್ರಿಕ ಸುಧಾರಣೆಯ ಅವಶ್ಯಕತೆ ಇದ್ದರೂ, ಕಲಾತ್ಮಕವಾಗಿ ಈ ಚಿತ್ರ ಗೆದ್ದಿದೆ. ಅದಕ್ಕೆ ಎರಡು ಕಾರಣಗಳಿವೆ :

*ವಿಕಾಸ್ ಶಾಸ್ತ್ರಿಯವರ  ಛಾಯಾಚಿತ್ರ ಕಲಾಕೌಶಲ ಇಲ್ಲಿ ಉತ್ತಮವಾದ ಚಿತ್ರ ಸಂಯೋಜನೆಯ ಮೂಲಕ ಮನಸ್ಸಿಗೆ ತಾಟುತ್ತದೆ. ನೋಡುಗನ ದೃಷ್ಟಿ, ಬಣ್ಣಗಳ ಆಕರ್ಷಣೆಯಿಂದ ಪುಗ್ಗೆಗಳ ಆಕರ್ಷಣೆಗೆ ತಟ್ಟನೆ ನಾಟಿದರೂ, ಅವಕ್ಕೆ ತಾಗಿದ ಬಿದಿರು ಕೋಲಿನ ಜೊತೆ ಪುಟ್ಟಮಗುವಿನೆಡೆ ಜಾರುತ್ತದೆ. ನಂತರ ತಾಯಿ, ಹುಡುಗನನ್ನೂ ಸವರಿ, ಎಡದಂಚಿನ ಗಂಟೊಂದರ ಮೇಲೆ ಹಾರಿ, ಹಿನ್ನೆಲೆಯ ಕಾಂಪೌಂಡ್ ಕಂಬದ ಹಾಗೂ ಅಲ್ಲಿಂದ ಒಂದರ ಪಕ್ಕ ಮತ್ತೊಂದು ಕಬ್ಬಿಣದ ಲಂಬ ಸರಳುಗಳನ್ನೆಲ್ಲಾ ದಾಟುತ್ತದೆ. ಕಣ್ಣುಗಳು ನೀಲಿ ಬಣ್ಣದ ಮೀನಿನ ಅಥವಾ ಇತರ ಪುಗ್ಗೆಗಳ ಉಬ್ಬು ತಗ್ಗುಗಳನ್ನೆಲ್ಲಾ ಮತ್ತೆ ಮತ್ತೆ ಸವರಿ, ಚೌಕಟ್ಟಿನೊಳಗಿನ  ದೃಷ್ಟಿಯ ಸಂಚಾರದೊಂದಿಗೆ, ನೋಡುಗನ ಮನಸ್ಸನ್ನೂ  ಸೆಳೆಯು ತ್ತದೆ. ಹೀಗೆ,  ನೋಡುಗನಲ್ಲಿ ಪದೇಪದೇ ತನ್ನನ್ನು  ನೋಡುವ ಅಭಿಲಾಷೆಯನ್ನೂ ಪ್ರೇರೇಪಿಸುವ ಕುತೂಹಲಕಾರಿ ಗುಣ ಈ ಛಾಯಾಚಿತ್ರದಲ್ಲಿ ಮೂಡಿಬಂದಿದೆ.

*ಮತ್ತೊಂದು ಕಾರಣವೆಂದರೆ, ಮೊದಲು ನಿರೂಪಿಸಿದ  ‘ತಾಂತ್ರಿಕ’ ಕೊರತೆಗೆ ವ್ಯತಿರಿಕ್ತವಾದದ್ದು! ತಿಳಿದೋ, ತಿಳಿಯದೆಯೋ, ‘ಔಟ್ ಆಫ್ ಫೋಕಸ್’  ತಂತ್ರ ಇಲ್ಲಿ ಉಪಕಾರಿಯಾಗಿದೆ. ಇಂದಿನ ಮಾಡರ್ನ್  ಜೀವನವೇ ‘ಫೋಕಸ್ಸಾಗಿರುವ’  ಆ ಬಣ್ಣ ಬಣ್ಣದ ಬಾಳಿಕೆ ಬಾರದ ಪುಗ್ಗೆಗಳಂತೆ ದೂರದಿಂದ ನೋಡಲು ಚೆಂದ. ಎಷ್ಟು ಹೊತ್ತಿಗಾದರೂ ಠುಸ್ ಗುಟ್ಟಿ ಬಿಡಬಲ್ಲುದು. ಆದರೆ  ಅವುಗಳ ಹಿಂದಿರುವ ಫೋಕಸ್‌ಗೆ ಸಿಗದ  ಚಟುವಟಿಕೆಯಲ್ಲಿ ತೊಡಗಿದ ಆ ಪುಟ್ಟ ಮಕ್ಕಳ ಮತ್ತು  ಟ್ರಾನ್ಸಿಸ್ಟರ್ ಸಂಗೀತದಲ್ಲಿ ಮೈಮರೆತಂತಿರುವ ತಾಯಿಯ ಸಂದರ್ಭಗಳು ಬದುಕಿನ ಸಂತೋಷವನ್ನು ಅನನ್ಯವಾಗಿಸಿದೆ. ಸ್ಥಾಯಿಭಾವದ (*ife *ess)   ಛಾಯಾಚಿತ್ರವೊಂದರ ಮೂಲಕ ಇಡೀ ಜೀವನದರ್ಶನವನ್ನೇ ಮಾಡಿಸಬಲ್ಲ ಶಕ್ತಿ ಇಲ್ಲಿ ಅಡಗಿದೆ ಎಂಬುದೂ ಗಮನಾರ್ಹ. ಅದಕ್ಕೆ ವಿಕಾಸ್ ಶಾಸ್ತ್ರಿ ಅಭಿನಂದನಾರ್ಹರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT