ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜಾರ–ಸಹಾ ಜೊತೆಯಾಟದ ಚಿತ್ತಾರ

ರಾಂಚಿ ಟೆಸ್ಟ್: ಆತಿಥೇಯರ ಬಳಗದಲ್ಲಿ ಜಯದ ಕನಸು ಚಿಗುರಿಸಿದ ಚೇತೇಶ್ವರ್ ದ್ವಿಶತಕ–ವೃದ್ಧಿಮಾನ್ ಶತಕ
Last Updated 19 ಮಾರ್ಚ್ 2017, 19:20 IST
ಅಕ್ಷರ ಗಾತ್ರ

ರಾಂಚಿ: ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ (202; 525ಎ, 21ಬೌಂ) ಮತ್ತು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ವೃದ್ಧಿಮಾನ್‌ ಸಹಾ  (117; 233ಎ, 8ಬೌಂ, 1ಸಿ) ನಡುವಣ ಸುಂದರ ಜೊತೆಯಾಟ ಭಾನುವಾರ ಜಾರ್ಖಂಡ್‌ ಅಭಿಮಾನಿಗಳ ಮನ ಗೆದ್ದಿತು.

ಆಸ್ಟ್ರೇಲಿಯಾ ಬೌಲರ್‌ಗಳಿಗೆ ಸಿಂಹಸ್ವಪ್ನರಾದ ಇವರು ಬಾರ್ಡರ್‌–ಗಾವಸ್ಕರ್‌ ಸರಣಿಯ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡಕ್ಕೆ ಮುನ್ನಡೆ ತಂದು ಕೊಟ್ಟರು.

ಜಾರ್ಖಂಡ್‌ ರಾಜ್ಯ ಕ್ರಿಕೆಟ್‌ ಸಂಸ್ಥೆ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವಿರಾಟ್‌ ಕೊಹ್ಲಿ ಪಡೆ 210 ಓವರ್‌ಗಳಲ್ಲಿ 9 ವಿಕೆಟ್‌ಗೆ 603ರನ್‌ ಗಳಿಸಿ ಡಿಕ್ಲೇರ್‌ ಮಾಡಿ ಕೊಂಡಿತು. ಆತಿಥೇಯರು ಪ್ರಸ್ತುತ ಸರಣಿ ಯಲ್ಲಿ ಇನಿಂಗ್ಸ್‌ವೊಂದರಲ್ಲಿ ಗಳಿಸಿದ ಗರಿಷ್ಠ ಮೊತ್ತ ಇದಾಗಿದೆ.

152ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಶುರು ಮಾಡಿರುವ ಕಾಂಗರೂಗಳ ನಾಡಿನ ತಂಡ ದಿನ ದಾಟದ ಅಂತ್ಯಕ್ಕೆ 7.2 ಓವರ್‌ಗಳಲ್ಲಿ 2 ವಿಕೆಟ್‌ಗೆ 23ರನ್‌ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ. ಡೇವಿಡ್‌ ವಾರ್ನರ್‌ (14) ಮತ್ತು ನೇಥನ್‌ ಲಾಯನ್‌ (2) ವಿಕೆಟ್‌ ಉರು ಳಿಸಿರುವ ಸ್ಪಿನ್ನರ್‌ ರವೀಂದ್ರ ಜಡೇಜ, ವಿರಾಟ್‌ ಪಡೆಯ ಗೆಲುವಿನ ಕನಸಿಗೆ ಬಲ ತುಂಬಿದ್ದಾರೆ.

ಪೂಜಾರ ದ್ವಿಶತಕ ವೈಭವ: ಭಾರತ ತಂಡ ಶನಿವಾರ 320 ರನ್‌ ಕಲೆಹಾಕು ವಷ್ಟರಲ್ಲಿ ಪ್ರಮುಖ ಐದು ವಿಕೆಟ್‌ಗಳನ್ನು ಕಳೆದು ಕೊಂಡಿದ್ದರಿಂದ ಮುನ್ನಡೆಯ ಹಾದಿ ಕಠಿಣ ಅನಿಸಿತ್ತು. ಆದರೆ ಪೂಜಾರ ಮತ್ತು ವೃದ್ಧಿಮಾನ್‌ ಏಳನೇ ವಿಕೆಟ್‌ಗೆ ದಾಖಲೆಯ ಜೊತೆ ಯಾಟವಾಡಿ (199) ಪಂದ್ಯದ ಚಿತ್ರಣ ಬದಲಿಸಿದರು.

ಸುಮಾರು 11 ಗಂಟೆ ಕಾಲ ಕ್ರೀಸ್‌ನಲ್ಲಿದ್ದ ಪೂಜಾರ ‘ಮ್ಯಾರಥಾನ್‌’ ಇನಿಂಗ್ಸ್‌ ಕಟ್ಟಿದರು. ಆಸ್ಟ್ರೇಲಿಯಾ ಆಟ ಗಾರರ ‘ಕೆಣಕುವ ತಂತ್ರಗಳಿಗೆ’ ಬ್ಯಾಟ್‌ ಮೂಲಕವೇ ಉತ್ತರ ನೀಡಿದ ಸೌರಾಷ್ಟ್ರದ ಬ್ಯಾಟ್ಸ್‌ಮನ್‌, ಯಾವ ಹಂತದಲ್ಲೂ ಏಕಾಗ್ರತೆ ಕಳೆದುಕೊಳ್ಳಲಿಲ್ಲ. ಶನಿವಾರ 130ರನ್‌ ಗಳಿಸಿ ಮಿಂಚಿದ್ದ ಅವರು ಭಾನುವಾರವೂ ರಾಂಚಿಯ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸಿದರು.

ನೇಥನ್‌ ಲಾಯನ್‌ ಬೌಲ್‌ ಮಾಡಿದ  149ನೇ ಓವರ್‌ನ ಕೊನೆಯ ಎಸೆತದಲ್ಲಿ ಒಂದು ರನ್‌ ಗಳಿಸಿದ ಚೇತೇಶ್ವರ್‌ 150ರನ್‌ ಪೂರೈಸಿದರು. ಇದಕ್ಕಾಗಿ ಅವರು ತೆಗೆದುಕೊಂಡಿದ್ದು 391 ಎಸೆತ. ಪೂಜಾರಾಗೆ ಪಶ್ಚಿಮ ಬಂಗಾಳದ ವೃದ್ಧಿಮಾನ್‌ ಸೂಕ್ತ ಬೆಂಬಲ ನೀಡಿದರು. ಆರಂಭದಲ್ಲಿ ತಾಳ್ಮೆಯಿಂದ ಎದುರಾಳಿ ಬೌಲರ್‌ಗಳನ್ನು ಎದುರಿಸಿದ ಸಹಾ ಅವ ಕಾಶ ಸಿಕ್ಕಾಗಲೆಲ್ಲಾ ಚೆಂಡನ್ನು ಬೌಂಡರಿ ಗೆರೆ ದಾಟಿಸುವುದನ್ನು  ಮರೆಯಲಿಲ್ಲ.

ಲಾಯನ್‌ ಬೌಲ್‌ ಮಾಡಿದ 153ನೇ ಓವರ್‌ನ ಮೊದಲ ಎಸೆತವನ್ನು ಮಿಡ್‌ ವಿಕೆಟ್‌ನತ್ತ ಸಿಕ್ಸರ್‌ ಬಾರಿಸಿದ ಅವರು ಸ್ಟೀವನ್‌ ಓ ಕೀಫ್‌ ಹಾಕಿದ ಮರು ಓವರ್‌ನ (154) ಮೂರನೇ ಎಸೆತದಲ್ಲಿ ಒಂದು ರನ್‌ ಗಳಿಸಿ ಅರ್ಧಶತಕ ದಾಖಲಿಸಿದರು.

ಅಂಪೈರ್‌ ತಪ್ಪು ನಿರ್ಣಯ: ಪೂಜಾರ 158ರನ್‌ ಗಳಿಸಿದ್ದ ವೇಳೆ ಅಂಪೈರ್‌  ಇಯಾನ್‌ ಗೌಲ್ಡ್‌  ಔಟ್‌ ಎಂದು ತೀರ್ಪು ನೀಡಿದ್ದರು.  ಲಾಯನ್‌ ಬೌಲ್‌ ಮಾಡಿದ 155ನೇ ಓವರ್‌ನ ನಾಲ್ಕನೇ ಎಸೆತ  ಪೂಜಾರ ಅವರ ಪ್ಯಾಡ್‌ಗೆ ಬಡಿದಿತ್ತು.  ಆಸ್ಟ್ರೇಲಿಯಾ ಆಟಗಾರರ ಎಲ್‌ಬಿಡಬ್ಲ್ಯು ಮನವಿಯನ್ನು  ಇಯಾನ್‌ ಪುರಸ್ಕರಿಸಿದರು.   ಆಗ ಪೂಜಾರ ಡಿಆರ್‌ಎಸ್‌ ಮೊರೆ ಹೋದರು. ಟಿ.ವಿ. ರಿಪ್ಲೇಯಲ್ಲಿ ಚೆಂಡು ವಿಕೆಟ್‌ನಿಂದ ಆಚೆ ಸಾಗುತ್ತಿದ್ದುದು ಸ್ಪಷ್ಟವಾಗಿತ್ತು. ಹೀಗಾಗಿ ಇಯಾನ್‌  ತೀರ್ಪು ಬದಲಿಸಿದರು.

ಇದರಿಂದ ಹತಾಶರಾದಂತೆ ಕಂಡ ಆಸ್ಟ್ರೇಲಿಯಾ ನಾಯಕ ಸ್ಮಿತ್‌, ಪೂಜಾರ ಮತ್ತು ಸಹಾ ಅವರ ವಿಕೆಟ್‌ ಪಡೆಯಲು    ಬೌಲಿಂಗ್‌ನಲ್ಲಿ ಪದೇ ಪದೇ ಬದಲಾವಣೆ ಮಾಡಿದರೂ ಪ್ರಯೋಜನವಾಗಲಿಲ್ಲ. ಊಟದ ವಿರಾಮಕ್ಕೂ ಮುನ್ನ ಶತಕದ ಜೊತೆಯಾಟ ಪೂರೈಸಿದ  ಭಾರ ತದ ಬ್ಯಾಟ್ಸ್‌ಮನ್‌ಗಳು ಆ ನಂತರದ ಅವಧಿಯಲ್ಲೂ ಆಸ್ಟ್ರೇಲಿಯಾದ ಬೌಲರ್‌ ಗಳ ತಾಳ್ಮೆಗೆ ಸವಾಲಾದರು. ಚಹಾ ವಿರಾಮದ ವೇಳೆ  ಪೂಜಾರ 190 ರನ್‌ ಗಳಿಸಿದ್ದರೆ, ವೃದ್ಧಿಮಾನ್‌ ಖಾತೆಯಲ್ಲಿ 99 ರನ್‌ ಗಳಿದ್ದವು. ಗ್ಲೆನ್‌ ಮ್ಯಾಕ್ಸ್‌ವೆಲ್‌ ಬೌಲ್‌ ಮಾಡಿದ 189ನೇ ಓವರ್‌ನ ಮೊದಲ ಎಸೆತವನ್ನು ಸ್ಕ್ವೇರ್‌ ಲೆಗ್‌ನತ್ತ ಬಾರಿಸಿ ಒಂದು ರನ್‌ ಕಲೆಹಾಕಿದ ವೃದ್ಧಿಮಾನ್‌ ಶತಕದ ಸಂಭ್ರಮ ಆಚರಿಸಿದರು. 

ಲಾಯನ್‌  ಎಸೆದ 192ನೇ ಓವರ್‌ನ ಮೂರನೇ ಎಸೆತದಲ್ಲಿ ಒಂದು ರನ್‌ ಗಳಿಸಿದ ಪೂಜಾರ ದ್ವಿಶತಕದ ಗಡಿ ಮುಟ್ಟಿದರು.  ಇದರೊಂದಿಗೆ ಟೆಸ್ಟ್‌ನಲ್ಲಿ ಮೂರು ಬಾರಿ ದ್ವಿಶತಕ ದಾಖಲಿಸಿದ ಸಾಧನೆಗೂ ಅವರು ಭಾಜನರಾದರು. 200ರ ಗಡಿ ಮುಟ್ಟಿದ ಬಳಿಕ ಬಿರುಸಿನ ಆಟಕ್ಕೆ ಮುಂದಾದ ಅವರು ಈ ಮೊತ್ತಕ್ಕೆ ಎರಡು ರನ್‌ ಸೇರಿಸಿ ಲಾಯನ್‌ಗೆ ವಿಕೆಟ್‌ ಒಪ್ಪಿಸಿದರು. ಇದರೊಂದಿಗೆ 199 ರನ್‌ಗಳ  ಏಳನೇ ವಿಕೆಟ್‌ ಜೊತೆ ಯಾಟಕ್ಕೂ ತೆರೆ ಬಿತ್ತು. ಇದರ ಬೆನ್ನಲ್ಲೇ ಸಹಾ ಕೂಡ ಪೆವಿಲಿಯನ್‌ ಸೇರಿಕೊಂಡರು. 117 ರನ್‌ ಗಳಿಸಿ ಆಡುತ್ತಿದ್ದ ಅವರು 197ನೇ ಓವರ್‌ನ ಮೊದಲ ಎಸೆತದಲ್ಲಿ ಓ ಕೀಫ್‌ಗೆ ವಿಕೆಟ್‌ ಒಪ್ಪಿಸಿದರು.

ಜಡೇಜ ಮಿಂಚು: ಪೂಜಾರ ಮತ್ತು ಸಹಾ ಔಟಾದ ಬಳಿಕ ರವೀಂದ್ರ ಜಡೇಜ ಅಂಗಳದಲ್ಲಿ ಮಿಂಚು ಹರಿಸಿದರು. 55 ಎಸೆತಗಳನ್ನು ಎದುರಿಸಿದ ಅವರು 5 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 5 4ರನ್‌ ಗಳಿಸಿ ಔಟಾಗದೆ ಉಳಿದರು. ಹೀಗಾಗಿ ತಂಡ 600ರ ಗಡಿ ದಾಟಿತು.

ದ್ರಾವಿಡ್‌ ದಾಖಲೆಮೀರಿದ ಪೂಜಾರ
ಚೇತೇಶ್ವರ ಪೂಜಾರ ಭಾನುವಾರ ವಿಶಿಷ್ಠ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡರು.ಅವರು ಟೆಸ್ಟ್‌ ಪಂದ್ಯದ ಇನಿಂಗ್ಸ್‌ ವೊಂದರಲ್ಲಿ ಹೆಚ್ಚು ಎಸೆತಗಳನ್ನು ಎದುರಿಸಿದ ಭಾರತದ ಮೊದಲ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು.ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪೂಜಾರ  ಒಟ್ಟು 525 ಎಸೆತಗಳನ್ನು ಆಡಿದರು. ಈ ಮೂಲಕ ಕರ್ನಾಟಕದ ರಾಹುಲ್‌ ದ್ರಾವಿಡ್‌ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದರು. 2004ರಲ್ಲಿ ರಾವಲ್ಪಿಂಡಿಯಲ್ಲಿ ನಡೆದಿದ್ದ  ಪಾಕಿಸ್ತಾನ ವಿರುದ್ಧದ ಪಂದ್ಯ ದಲ್ಲಿ ದ್ರಾವಿಡ್‌ 495 ಎಸೆತಗಳನ್ನು ಆಡಿದ್ದು ಇದುವರೆಗಿನ ದಾಖಲೆಯಾಗಿತ್ತು.

ಸ್ಕೋರ್‌ಕಾರ್ಡ್‌

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌  451  (137.3  ಓವರ್‌ಗಳಲ್ಲಿ) 
ಭಾರತ  ಪ್ರಥಮ ಇನಿಂಗ್ಸ್‌   9 ಕ್ಕೆ 603ಡಿಕ್ಲೇರ್ಡ್‌ (210  ಓವರ್‌ಗಳಲ್ಲಿ)

(ಶನಿವಾರದ ಅಂತ್ಯಕ್ಕೆ 130 ಓವರ್‌ಗಳಲ್ಲಿ 6ಕ್ಕೆ 360)

ಚೇತೇಶ್ವರ ಪೂಜಾರ ಸಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಬಿ ನೇಥಲ್‌ ಲಾಯನ್‌  202
ವೃದ್ಧಿಮಾನ್‌ ಸಹಾ ಸಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಬಿ ಸ್ಟೀವ್‌ ಓ ಕೀಫ್‌  117
ರವೀಂದ್ರ ಜಡೇಜ ಔಟಾಗದೆ  54
ಉಮೇಶ್‌ ಯಾದವ್‌ ಸಿ ಡೇವಿಡ್‌ ವಾರ್ನರ್‌ ಬಿ ಸ್ಟೀವ್‌ ಓ ಕೀಫ್‌  16
ಇಶಾಂತ್‌ ಶರ್ಮಾ ಔಟಾಗದೆ  00
ಇತರೆ: (ಬೈ–14, ಲೆಗ್‌ ಬೈ–5) 19
ವಿಕೆಟ್‌ ಪತನ: 7–527 (ಪೂಜಾರ; 193.2), 8–541 (ಸಹಾ; 196.1), 9–595 (ಉಮೇಶ್‌; 208.2)
ಬೌಲಿಂಗ್‌:   ಜೋಶ್‌ ಹ್ಯಾಜಲ್‌ವುಡ್‌ 44–10–103–1, ಪ್ಯಾಟ್‌ ಕಮಿನ್ಸ್‌ 39–10–106 –4, ಸ್ಟೀವ್‌ ಓ ಕೀಫ್‌ 77–17–199–3, ನೇಥನ್‌ ಲಾಯನ್‌ 46–2–163–1, ಗ್ಲೆನ್‌ ಮ್ಯಾಕ್ಸ್‌ವೆಲ್‌ 4–0–13–0.

ಆಸ್ಟ್ರೇಲಿಯಾ ಎರಡನೆ ಇನಿಂಗ್ಸ್‌  2ಕ್ಕೆ 23       (7.2  ಓವರ್‌ಗಳಲ್ಲಿ) 

ಡೇವಿಡ್‌ ವಾರ್ನರ್‌ ಬಿ ರವೀಂದ್ರ ಜಡೇಜ  14
ಮ್ಯಾಟ್‌ ರೆನ್‌ಷಾ ಬ್ಯಾಟಿಂಗ್‌  07
ನೇಥನ್‌ ಲಾಯನ್‌ ಬಿ ರವೀಂದ್ರ ಜಡೇಜ  02
ವಿಕೆಟ್‌ ಪತನ: 71–17 (ವಾರ್ನರ್‌; 5.1), 2–23 (ಲಾಯನ್‌; 7.2).
ಬೌಲಿಂಗ್‌:   ಆರ್‌. ಅಶ್ವಿನ್‌ 4–0–17–0, ರವೀಂದ್ರ ಜಡೇಜ 3.2–1–6–2.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT