ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್ 22ರಂದು ‘ದಲಿತರ ದಿನ’

12 ಪೊಲೀಸ್‌ ಉಪ ವಿಭಾಗಗಳಲ್ಲಿ ವಿಶೇಷ ಸಭೆ
Last Updated 20 ಮಾರ್ಚ್ 2017, 5:40 IST
ಅಕ್ಷರ ಗಾತ್ರ

ಮಂಗಳೂರು: ಪಶ್ಚಿಮ ವಲಯ ಐಜಿಪಿ ಕಚೇರಿ ವ್ಯಾಪ್ತಿಯಲ್ಲಿರುವ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಚಿಕ್ಕಮ ಗಳೂರು ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಜನರ ಕುಂದು ಕೊರತೆ ಆಲಿ ಸುವುದಕ್ಕಾಗಿ ಬುಧವಾರ ಪೊಲೀಸ್ ಇಲಾಖೆ ‘ದಲಿತರ ದಿನ’ ಆಚರಿಸ ಲಾಗುತ್ತಿದೆ.

ದಲಿತರ ಅಹವಾಲುಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಒದಗಿ ಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ದಲಿತರ ದಿನವನ್ನು ಆಚರಿಸ ಲಾಗುತ್ತಿದೆ. ಪಶ್ಚಿಮ ವಲಯ ಐಜಿಪಿ ಕಚೇರಿ ವ್ಯಾಪ್ತಿಯಲ್ಲಿರುವ ನಾಲ್ಕು ಜಿಲ್ಲೆಗಳ 12 ಪೊಲೀಸ್ ಉಪ ವಿಭಾಗಗಳಲ್ಲಿ ಬುಧವಾರ ಏಕಕಾಲಕ್ಕೆ ವಿಶೇಷ ಸಭೆಗಳು ನಡೆಯಲಿವೆ.

ಎಸ್‌ಸಿ ಮತ್ತು ಎಸ್‌ಟಿ ಜನರಿಗೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆಯಲ್ಲಿ ಇರುವ ಎಲ್ಲ ಬಗೆಯ ಪ್ರಕರಣಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸುವಂತೆ ಪಶ್ಚಿಮ ವಲಯ ಐಜಿಪಿ ಪಿ.ಹರಿಶೇಖರನ್‌ ನಾಲ್ಕು ಜಿಲ್ಲೆಗಳ ಪೊಲೀಸ್‌ ಅಧೀಕ್ಷಕರಿಗೆ (ಎಸ್‌ಪಿ) ನಿರ್ದೇಶನ ನೀಡಿದ್ದಾರೆ.

‘ಗೃಹ ಇಲಾಖೆಯ ಸೂಚನೆಯಂತೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಯಾ ಜಿಲ್ಲೆಗಳಲ್ಲಿ ಎಸ್‌ಪಿಗಳ ಮೇಲು ಸ್ತುವಾರಿಯಲ್ಲಿ ದಲಿತರ ದಿನ ನಡೆಯ ಲಿದೆ. ಉಪ ವಿಭಾಗಗಳ ಮಟ್ಟದಲ್ಲಿ ನಡೆಯುವ ಸಭೆಯಲ್ಲಿ ಡಿವೈಎಸ್‌ಪಿ ಅಥವಾ ಅದಕ್ಕಿಂತ ಹಿರಿಯ ಅಧಿಕಾ ರಿಗಳು ಹಾಜರಿದ್ದು, ಅಹವಾಲು ಆಲಿಸು ವುದು ಕಡ್ಡಾಯ.

ಎಸ್‌ಸಿ ಮತ್ತು ಎಸ್‌ಟಿ ಜನರಿಗೆ ನ್ಯಾಯ ದೊರಕಿಸುವ ಉದ್ದೇಶ ದಿಂದ ಈ ಕ್ರಮ ಕೈಗೊಳ್ಳಲಾಗಿದೆ. ದಲಿತ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಈ ಸಮುದಾಯದ ಜನರು, ಚುನಾಯಿತ ಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳ ಮುಖಂಡರಿಗೆ ಸಭೆಗೆ ಆಹ್ವಾನ ನೀಡುವಂತೆ ಸೂಚಿಸಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆಯಾ ಪೊಲೀಸ್‌ ಉಪ ವಿಭಾಗಗಳ ವ್ಯಾಪ್ತಿಯಲ್ಲಿ  ಎಸ್‌ಸಿ ಮತ್ತು ಎಸ್‌ಟಿ  ಜನರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಮತ್ತು ಅವುಗಳು ದಾಖಲಾಗಲು ಕಾರಣವಾದ ವಿಚಾರಗಳ ಕುರಿತು ಸಭೆಯಲ್ಲಿ ಪರಿಶೀಲನೆ ನಡೆಯಲಿದೆ. ಈ ಎರಡೂ ವರ್ಗದ ಜನರಿಗೆ ರಕ್ಷಣೆ ನೀಡಲು ಪೊಲೀಸ್‌ ಮತ್ತು ಕಂದಾಯ ಅಧಿಕಾರಿಗಳು ನಿರಾಕರಿಸಿರುವ ಪ್ರಕರಣಗಳಿದ್ದರೆ ಅವುಗಳ ಬಗ್ಗೆಯೂ ಪರಾಮರ್ಶೆ ನಡೆಸಲಾಗುವುದು ಎಂದು ಹೇಳಿದರು.

ಎಸ್‌ಸಿ ಮತ್ತು ಎಸ್‌ಟಿ ಜನರ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ತೆರೆದಿರುವ ರೌಡಿಪಟ್ಟಿಗಳ ಬಗ್ಗೆಯೂ ವಿಶೇಷ ಸಭೆಯಲ್ಲಿ ಪರಿಶೀಲನೆ ನಡೆಯಲಿದೆ. ಈ ವರ್ಗದ ಜನರ ವಿರುದ್ಧ ದಾಖಲಾದ ಅಪರಾಧ ಪ್ರಕರಣಗಳು ಸಮರ್ಥನೀಯವಲ್ಲ ಎಂದು ಕಂಡುಬಂದಲ್ಲಿ, ಅಂತಹ ಪ್ರಕರಣ ಗಳನ್ನು  ವಿಚಾರಣೆಯಿಂದ ಹಿಂದಕ್ಕೆ ಪಡೆಯಲು ಗೃಹ ಇಲಾಖೆಗೆ ಪ್ರಸ್ತಾವ ಗಳನ್ನು ಸಲ್ಲಿಸಿದ್ದರೆ ಅವುಗಳ ಬಗ್ಗೆಯೂ ಪರಿಶೀಲಿಸಲಾಗುವುದು. 

ಎಸ್‌ಸಿ ಮತ್ತು ಎಸ್‌ಟಿ ಜನರ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ ವಿಶೇಷ ನ್ಯಾಯಾಲಯಕ್ಕೆ ವಹಿಸಿದ ಪ್ರಕರಣಗಳು ಮತ್ತು ಅವುಗಳ ವಿಚಾರಣೆಯಲ್ಲಿನ ಪ್ರಗತಿಯ ಕುರಿತು ಪರಾಮರ್ಶೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT