ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಹಂತದ ‘ರೇ ಯೋಜನೆ’ಗೆ ಒಪ್ಪಿಗೆ

ಜಿಲ್ಲಾಧಿಕಾರಿ ಹಾಗೂ ಶಾಸಕರ ನೇತೃತ್ವದಲ್ಲಿ ಜಿಲ್ಲಾ ಸಮನ್ವಯ ಸಮಿತಿ ಸಭೆ
Last Updated 20 ಮಾರ್ಚ್ 2017, 5:56 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದಲ್ಲಿನ ಕೊಳಚೆ ಪ್ರದೇಶಗಳಲ್ಲಿ ರಾಜೀವ್ ಆವಾಸ್ ಯೋಜನೆಯಡಿ (ರೇ) ಎರಡನೇ ಹಂತದಲ್ಲಿ 693 ಮನೆಗಳ ನಿರ್ಮಾಣಕ್ಕೆ ನಗರಸಭಾ ವ್ಯಾಪ್ತಿಯ ಜಿಲ್ಲಾ ಸಮನ್ವಯ ಸಮಿತಿಯು ಒಪ್ಪಿಗೆ ನೀಡಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ನಗರಸಭೆ ಅಧ್ಯಕ್ಷ  ಮಂಜು ನಾಥ್ ಗೊಪ್ಪೆ ಅವರನ್ನು ಒಳಗೊಂಡ ಜಿಲ್ಲಾ ಸಮನ್ವಯ ಸಮಿತಿ ಸಭೆ, ವಸತಿ ನಿರ್ಮಾಣಕ್ಕೆ ಅನುಮೋದನೆ ನೀಡಿತು.

ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ‘ಚಿತ್ರದುರ್ಗ ನಗರದಲ್ಲಿನ ಕೊಳಚೆ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ ಮಾಡಲು ರಾಜೀವ್ ಆವಾಸ್ ಯೋಜನೆಯಡಿ ₹ 3.30 ಲಕ್ಷ ಸಹಾಯಧನದಡಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಎಸ್‌ಸಿ ಎಸ್‌ಟಿ ಫಲಾನುಭವಿಗಳು ಶೇ 10ರಷ್ಟು ವಂತಿಗೆ ಹಾಗೂ ಇತರೆಯವರು ಶೇ 12ರಷ್ಟು ವಂತಿಗೆ ಭರಿಸಬೇಕಾಗುತ್ತದೆ.

ನಗರದ ಕೊಳಚೆ ಪ್ರದೇಶಗಳಲ್ಲಿ ವಾಸವಿರುವವರಿಗೆ ಎಷ್ಟು ಮನೆಗಳು ಬೇಕೆಂದು ಅಂದಾಜು ಪಟ್ಟಿಯನ್ನು ಪಡೆದುಕೊಂಡು   ಕೇಂದ್ರ ನಗರಾಭಿವೃದ್ದಿ ಸಚಿವರಿಂದ ಹೆಚ್ಚುವರಿಯಾಗಿ ಮನೆಗಳನ್ನು ಮಂಜೂರು ಮಾಡಿಸಲು ಅನುಕೂಲವಾಗಲಿದೆ’ ಎಂದರು.

ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿ, ‘ಚಿತ್ರದುರ್ಗ ನಗರದಲ್ಲಿ ಘೋಷಿಸಲಾದ 8 ಕೊಳಚೆ ಪ್ರದೇಶ ಗಳಲ್ಲಿ ರಾಜೀವ್ ಆವಾಸ್ ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡಲು 1,563 ಫಲಾನುಭವಿಗಳಿಗೆ ಅನುಮೋದನೆ ನೀಡಲಾಗಿದೆ. ಮೊದಲ ಹಂತದಲ್ಲಿ 730 ಫಲಾನುಭವಿಗಳಿಗೆ ಮನೆ ನಿರ್ಮಾಣ ಅನುಮೋದನೆ ನೀಡಲಾಗಿತ್ತು. ಇದರಲ್ಲಿ ಬಹುತೇಕ ಮನೆಗಳು ಮುಕ್ತಾಯದ ಹಂತದಲ್ಲಿದೆ.

ಈ ಮನೆಗಳ ನಿರ್ಮಾಣಕ್ಕೆ ಮರಳಿನ ಬದಲಾಗಿ ಕೃತಕ ಮರಳು ಬಳಕೆ ಮಾಡುತ್ತಿರುವ ಬಗ್ಗೆ ಆಕ್ಷೇಪಿಸಿದ್ದು, ಈ ಫಲಾನುಭವಿಗಳಿಗೆ ಬೇಕಾದ ಮರಳನ್ನು ಹಂಚಿಕೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ ‘ಕೊಳಚೆ ನಿರ್ಮೂಲನ ಮಂಡಳಿಯಿಂದ ಚಿತ್ರದುರ್ಗ ನಗರದ ಕೊಳೆಗೇರಿಗಳಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ವಿವರ ನೀಡಿದಲ್ಲಿ ಹೆಚ್ಚುವರಿಯಾಗಿ ಮನೆಗಳನ್ನು ಮತ್ತು ರಸ್ತೆ, ಚರಂಡಿ ನಿರ್ಮಾಣಕ್ಕೆ ಅನುದಾನ   ತರಲು ಅನುಕೂಲವಾಗಲಿದೆ’ ಎಂದರು.

‘ಹಾಲಿ ಬೇಡಿಕೆ ಪ್ರಕಾರ ನಗರದಲ್ಲಿ 6,038 ಮನೆಗಳನ್ನು ನೀಡಿದಲ್ಲಿ ಬಹುತೇಕ ಬೇಡಿಕೆ ಈಡೇರಿದಂತಾಗುತ್ತದೆ. ಮನೆಗಳ ನಿರ್ಮಾಣ  ಬಾಕಿ ಇರುವುದರಿಂದ ಇನ್ನೂ ಆರು ತಿಂಗಳು ವಿಸ್ತರಣೆ ಮಾಡಿಸಬೇಕು’ ಎಂದು ಎಂಜಿನಿಯರ್‌ ಅವರಿಗೆ ಸೂಚಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ ‘ರೇ’ ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ಯೋಜನೆ ಯನ್ನು ಸರ್ವರಿಗೂ ಸೂರು ಎಂದು ಪರಿಷ್ಕರಣೆ ಮಾಡಲಾಗಿದೆ. ಇದರಲ್ಲಿ ಯಾವುದೇ ಮೀಸಲಾತಿ ಇರುವುದಿಲ್ಲ. ಅರ್ಜಿದಾರರು ಕೊಳಚೆ ಪ್ರದೇಶದ ನಿವಾಸಿಯಾಗಿರಬೇಕು’ ಎಂದು ಹೇಳಿದರು.

‘ಚಿತ್ರದುರ್ಗ ನಗರದಲ್ಲಿ ನಗರ ಆಶ್ರಯದಡಿ ಸುಮಾರು 20 ಸಾವಿರ ಕ್ಕಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು ಅರ್ಜಿಗಳನ್ನು ಪರಿಶೀಲನೆ ನಡೆಸಿ ಬಜೆಟ್ ಅಧಿವೇಶನದ ನಂತರ  ನಗರ ಆಶ್ರಯ ಸಮಿತಿ ಸಭೆ ಕರೆಯಬೇಕು’ ಎಂದು  ಶಾಸಕರು ತಿಳಿಸಿದರು.

ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಪ್ರಸನ್ನ ಕುಮಾರ್, ಪೌರಾಯುಕ್ತ ಚಂದ್ರಪ್ಪ, ಕೊಳಚೆ ನಿರ್ಮೂಲನ ಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪಾಟೀಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT