ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಣಿಮೇಖಲೆ’ ಕಥಾ ಸಂಕಲನ ಲೋಕಾರ್ಪಣೆ

Last Updated 20 ಮಾರ್ಚ್ 2017, 6:02 IST
ಅಕ್ಷರ ಗಾತ್ರ

ದಾವಣಗೆರೆ: ‘ತೆರೆಮರೆಯಂತೆ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದ ಹಿರಿಯ ಕಥೆಗಾರ ಬುಳಸಾಗರ ಪಾಂಡುರಂಗಯ್ಯ ಅವರ ಕಥಾ ಸಂಕಲನಗಳನ್ನು ಕೃತಿ ರೂಪದಲ್ಲಿ ಬಿಡುಗಡೆ ಮಾಡುತ್ತಿರುವುದು ಪ್ರಶಂಸನೀಯ’ ಎಂದು ಕಥೆಗಾರ ಡಾ.ಲೋಕೇಶ್ ಅಗಸನಕಟ್ಟೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ರೋಟರಿ ಬಾಲಭವನದಲ್ಲಿ ನವಜ್ಯೋತಿ ಸಾಂಸ್ಕೃತಿಕ ಸೇವಾಸಂಸ್ಥೆ ಹರಪನಹಳ್ಳಿ, ಪ್ರಗತಿಪರ ಸಾಹಿತ್ಯ ಪರಿಷತ್ತು ಹಾಗೂ ಕಾವ್ಯ ಮಂಡಳ ಸಹಯೋಗದಲ್ಲಿ ಭಾನುವಾರ ನಡೆದ ಜಿಲ್ಲೆಯ ಹಿರಿಯ ಕಥೆಗಾರರಾದ ಬುಳಸಾಗರ ಪಾಂಡುರಂಗಯ್ಯ ಅವರ ‘ಮಣಿಮೇಖಲೆ’ ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಕುರಿತು ಅವರು ಮಾತನಾಡಿದರು.

‘55 ವರ್ಷಗಳಿಂದ ಕಥೆ, ಸಣ್ಣಕಥೆ ಗಳನ್ನು ಬರೆಯುತ್ತ ತಮ್ಮದೆ ಓದುಗ ಜಗತ್ತು ಬೆಳೆಸಿಕೊಂಡ ಪಾಂಡುರಂಗಯ್ಯ ಅವರನ್ನು ಸಾಹಿತಿಗಳು, ಸಾಹಿತ್ಯ ಅಕಾಡೆಮಿ ಗುರುತಿಸಲು ಸಾಧ್ಯವಾಗಿರ ಲಿಲ್ಲ. ಇಳಿವಯಸ್ಸಿನಲ್ಲಿ ಅವರ ಮೊದಲ ಕಥಾ ಸಂಕಲನ ಓದುಗರ ಕೈ ಸೇರುತ್ತಿರು ವುದು ಸಂತಸ ಸಂಗತಿ.

ಅಕಾಡೆಮಿಯಲ್ಲಿ ಗುರುತಿಸಿಕೊಂಡವರು ಬೇಗ ಬೆಳೆದು ಸಾಹಿತ್ಯಲೋಕದಲ್ಲಿ ಪರಿಚಿತರಾಗುತ್ತಾರೆ. ಆದರೆ, ಅಕಾಡೆಮಿಯಾಚೆಗೂ ಸಾಹಿತ್ಯಕೃಷಿ ಮಾಡುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು’ ಎಂದು ಹೇಳಿದರು.

‘ಪಾಂಡುರಂಗಯ್ಯ ಅವರ ಒಟ್ಟು ಕಥೆಗಳ ಕಥನ ಶೈಲಿ ಬಹಳ ಅಪರೂಪವಾಗಿದೆ. ಲೇಖಕನ ಬದ್ಧತೆ ಏನು? ಎಂಬುದನ್ನು ‘ಮಣಿಮೇಖಲೆ’ ವಿವರಿಸುತ್ತದೆ. ‘ಅವಳ ಕಥೆ’ ಹಾಗೂ ‘ಮಣಿಮೇಖಲೆ’ ಕಥೆಗಳು ಇಡೀ ಸಂಕಲನದ ಜೀವನಾಡಿಯಾಗಿವೆ.

ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಭಾರತೀಯ ಸಂಸ್ಕೃತಿಯನ್ನು ಕಟ್ಟಿಕೊಡುತ್ತವೆ. ಸಾಹಿತ್ಯ, ಇತಿಹಾಸ, ತತ್ವಜ್ಞಾನವನ್ನು ಅರಿತಿರುವ ಪಾಂಡುರಂಗಯ್ಯ ಅವರು ತಮ್ಮ ಕಥೆಗಳಲ್ಲಿ ಮನುಷ್ಯನ ಘನತೆಯನ್ನು ವ್ಯಾಖ್ಯಾನಿಸಿದ್ದಾರೆ’ ಎಂದು ಅವರು ಪುಸ್ತಕ ಕುರಿತು ವಿವರಿಸಿದರು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ತರಳಬಾಳು ತ್ರೈಮಾಸಿಕ ಸಂಪಾದಕ ಡಾ.ನಾ. ಲೋಕೇಶ, ‘ವಿದ್ಯುನ್ಮಾನ ಮಾಧ್ಯಮಗಳ ಭರಾಟೆಯಲ್ಲಿ ಓದುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಆದರೆ, ಪಾಂಡುರಂಗಯ್ಯ ಅವರ ಕಥೆಗಳು ಯುವ ಓದುಗ ಸಮುದಾಯವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅವರ ಕಥೆ ಹಾಗೂ ಸಣ್ಣಕಥೆಗಳು ಸಿಮೀತ ಅವಧಿಯಲ್ಲಿ ಓದುಗರ ಮನ ಗೆಲ್ಲುತ್ತಿವೆ’ ಎಂದು ಹೇಳಿದರು.

ಪಾಂಡುರಂಗಯ್ಯ ಅವರು ವಿವಿಧ ಪತ್ರಿಕೆ ಹಾಗೂ ನಿಯಲಿಕಾಲಿಕೆಗಳಿಗೆ ಬರೆದ 150ಕ್ಕೂ ಕಥೆಗಳು ಓದುಗ ಜಗತ್ತನ್ನು ಸೃಷ್ಟಿಸಿವೆ. ವಿಭಿನ್ನ ಬರವಣಿಗೆ ಶೈಲಿ ಮೂಲಕ ಪ್ರಕಟಗೊಂಡಿರುವ ಕಥೆಗಳು ಕಥಾ ಸಂಕಲನ ರೂಪದಲ್ಲಿ ಓದುಗರ ಕೈ ಸೇರಲಿ ಎಂದರು.

ದಾವಣಗೆರೆ ಜಿಲ್ಲಾ ಎಂಟನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಪ್ರೊ.ಎಸ್‌.ಬಿ. ರಂಗನಾಥ್‌ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಎಚ್.ಮಂಜುನಾಥ್, ಪ್ರಗತಿಪರ ಸಾಹಿತ್ಯ ಪರಿಷತ್ತಿನ ಜಿ.ಮುದ್ದುವೀರಸ್ವಾಮಿ ಹಿರೇಮಳಲಿ, ಕಾವ್ಯ ಮಂಡಳದ ನಾಗರಾಜ ಸಿರಿಗೆರೆ ಹಾಗೂ ಹಿರಿಯ ಕಥೆಗಾರ ಬುಳಸಾಗರ ಪಾಂಡುರಂಗಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT