ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರೀದಿ ದಾಹ ತಣಿಸುವ ‘ಗಾಂಧಿಬಜಾರ್’

ನಗರದ ಹೃದಯಭಾಗದಲ್ಲಿರುವ ಈ ಮಾರುಕಟ್ಟೆಯಲ್ಲಿ ಏನುಂಟು, ಏನಿಲ್ಲ!
Last Updated 20 ಮಾರ್ಚ್ 2017, 6:14 IST
ಅಕ್ಷರ ಗಾತ್ರ

ಶಿವಮೊಗ್ಗ:  ‘ಈ ವಸ್ತುನಾ... ಗಾಂಧಿಬಜಾರ್‌ನಲ್ಲಿ ಒಂದು ಸಲ ಕೇಳಿ ನೋಡಿ, ಸಿಗಬಹುದು...’ – ಇದು ಶಿವಮೊಗ್ಗದ ನಾಗರಿಕರ ನಡುವೆ ಚಿರಪರಿಚಿತ ಮಾತು. ಈ ವಾಕ್ಯ ನಗರದ ಜನನಿಬಿಡ ಪ್ರದೇಶ ಗಾಂಧಿ ಬಜಾರ್‌ನ ಜನಪ್ರಿಯತೆಗೆ ಸಾಕ್ಷಿ.

ಅಗತ್ಯವಾದ ಕೆಲವು ವಸ್ತುಗಳು ನಗರದ ಎಲ್ಲೇ ಹುಡುಕಾಡಿದರೂ ದೊರಕದೇ ಇರಬಹುದು. ಆದರೆ, ನಗರದ ಹೃದಯಭಾಗದಲ್ಲಿ ಇರುವ ಗಾಂಧಿಬಜಾರ್‌ನಲ್ಲಿ ಸಿಗುತ್ತವೆ ಎಂಬ ದೃಢ ವಿಶ್ವಾಸದ ಜನರದ್ದು.

ಗಾಂಧಿ ಬಜಾರ್‌ನಲ್ಲಿ ಏನು ಸಿಗುತ್ತದೆ ಎನ್ನುವುದಕ್ಕಿಂತ, ಏನು ಸಿಗುವುದಿಲ್ಲ ಎಂದು ಕೇಳಬಹುದು. ಮನೆಗೆ ಅಗತ್ಯವಿರುವ ವಸ್ತುಗಳು, ತರಕಾರಿ, ಹೂ, ಹಣ್ಣುಗಳು, ಮಕ್ಕಳ ಪಠ್ಯ ಪುಸ್ತಕಗಳು, ಆಟಿಕೆ ಸಾಮಗ್ರಿಗಳು, ಎಲೆಕ್ಟ್ರಾನಿಕ್ ವಸ್ತುಗಳು, ಕಿರಾಣಿ ವಸ್ತುಗಳು, ಚಿನ್ನಾಭರಣಗಳು, ವಿವಿಧ ವಿನ್ಯಾಸದ ಬಟ್ಟೆಗಳು ಸೇರಿದಂತೆ ಎಲ್ಲ ಸಾಮಗ್ರಿಗಳೂ ಗಾಂಧಿಬಜಾರ್‌ನಲ್ಲಿ ಲಭ್ಯ. ಮದುವೆಗೆ ಅವಶ್ಯಕತೆ ಇರುವ ಪರಿಕರಗಳಿಗಂತೂ ಗಾಂಧಿಬಜಾರ್ ಪ್ರಖ್ಯಾತಿ.
ಮೆರವಣಿಗೆಯ ಕೇಂದ್ರ ಮಾರ್ಗ:  ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮ

ಗಳಿಗೆ ಗಾಂಧಿಬಜಾರ್‌ ಶಿವಮೊಗ್ಗದಲ್ಲಿ ಕೇಂದ್ರಸ್ಥಾನ ತನ್ನದಾಗಿಸಿಕೊಂಡಿದೆ. ರಾಜಕೀಯ ಪಕ್ಷಗಳ ಸಭೆ, ಸಮಾರಂಭ ಗಾಂಧಿಬಜಾರ್‌ನ ಪ್ರವೇಶದ್ವಾರ ಶಿವಪ್ಪನಾಯಕ ವೃತ್ತದಲ್ಲಿ ನಡೆಯುತ್ತವೆ.

ಗಣೇಶೋತ್ಸವದ ಸಂದರ್ಭದಲ್ಲಿ ಗಣೇಶನ ಮೂರ್ತಿಯ ಮೆರವಣಿಗೆಗೆ ಗಾಂಧಿ ಬಜಾರೇ ಹೈಲೈಟ್. ಬಜಾರ್ ರಸ್ತೆಯಲ್ಲಿ ಗಣೇಶ ಮೂರ್ತಿ ವೀಕ್ಷಿಸಲು ಜನರು ಪ್ರತಿವರ್ಷ ತಂಡೋಪತಂಡ ವಾಗಿ ಜಮಾಯಿಸುತ್ತಾರೆ. 

ಬಸವೇಶ್ವರ ದೇವಾಲಯ, ಕಾಳಿ, ಕನ್ನಿಕಾ, ರೇಣುಕಮ್ಮ ದೇವಾಲಯ, ಜೈನ ದೇವಾಲಯ ಹಾಗೂ ಜಾಮಿಯಾ ಮಸೀದಿ ಗಾಂಧಿಬಜಾರ್‌ ಪ್ರದೇಶದಲ್ಲಿ ಇವೆ. ಖರಿದೀಗೆಂದು ಬಂದವರು ದೇವಾಲಯಗಳಿಗೆ ಭೇಟಿ ನೀಡಿ, ಭಕ್ತಿ, ಭಾವ ಪ್ರದರ್ಶಿಸುತ್ತಾರೆ.

ಮಾರಿ ಹಬ್ಬಕ್ಕೂ ಇಲ್ಲೇ ಚಾಲನೆ:  ಮೂರು ವರ್ಷಗಳಿಗೊಮ್ಮೆ ನಡೆಯುವ ನಗರದ ಗ್ರಾಮದೇವತೆ ಮಾರಿ ಹಬ್ಬ ಕಳೆಗಟ್ಟುವುದೂ ಇದೇ ಗಾಂಧಿ
ಬಜಾರ್‌ನಲ್ಲಿ. ಹಬ್ಬದ ಸಂದರ್ಭದಲ್ಲಿ, ಕೋಟೆ ರಸ್ತೆಯ ಮಾರಮ್ಮ ದೇವಿ ಮೂರ್ತಿಯನ್ನು ಪೂಜಿಸಿ, ಒಂದು ದಿನ ಈ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಆ ಸಮಯದಲ್ಲಿ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗುತ್ತದೆ. ಆಗ ಬಜಾರ್‌ನ ಎಲ್ಲೆಡೆ ಕೇವಲ ಭಕ್ತರದ್ದೇ ಕಾರುಬಾರು.

ಓಣಿಯಲ್ಲಿವೆ ವಿಶೇಷ ಕ್ಯಾಂಟೀನ್‌ಗಳು: ಗಾಂಧಿಬಜಾರ್‌ನ ಓಣಿಯಲ್ಲಿ ಸಣ್ಣ ಸಣ್ಣ ಕ್ಯಾಂಟೀನ್‌ಗಳಿವೆ. ಇಲ್ಲಿ ತಿಂಡಿಪ್ರಿಯರಿಗೆ ಕಡಿಮೆ ದರದಲ್ಲಿ ರುಚಿಯಾದ ತಿನಿಸುಗಳು ಲಭ್ಯವಿದೆ. ತಿನಿಸುಗಳ ಸವಿಯಲೆಂದೇ ಯುವಜನತೆ ಗಾಂಧಿಬಜಾರ್‌ಗೆ ಬರುತ್ತಾರೆ.
 

ಹಬ್ಬದ ಸಂದರ್ಭದಲ್ಲಿ ಕಳೆ:  ಹಿಂದೂ, ಮುಸ್ಲಿಂ, ಕ್ರೈಸ್ತ ಯಾವುದೇ ಧರ್ಮವಿರಲಿ. ಹಬ್ಬದ ಸಮಯದಲ್ಲಿ ಗಾಂಧಿ ಬಜಾರ್‌ನ ಕಳೆಯೇ ವಿಶಿಷ್ಟ. ಇಲ್ಲಿನ ಸಂಚಾರ ಅಸ್ತವ್ಯಸ್ತವಾಗುತ್ತದೆ. ಜನಸಂದಣಿ ದ್ವಿಗುಣವಾಗುತ್ತದೆ. ಖರೀದಿ ಭರಾಟೆ ಜೋರಾಗಿ ನಡೆಯುತ್ತದೆ.

ಗಾಂಧಿಬಜಾರ್‌ನಲ್ಲಿ ಹೆಜ್ಜೆಹೆಜ್ಜೆಗೂ ಚಿನ್ನಾಭರಣ ಅಂಗಡಿ, ಪಾತ್ರೆ, ಬಟ್ಟೆ, ಕಿರಾಣಿ ಅಂಗಡಿಗಳು ಕಾಣಸಿಗುತ್ತವೆ. ಅಲ್ಲದೆ, ವಾಣಿಜ್ಯ ಸಂಕೀರ್ಣದಲ್ಲಿ ಎಲ್ಲಾ ತರಹದ ಅಂಗಡಿಗಳು ಒಂದೇ ಕಡೆ ನೋಡಬಹುದು. ಇನ್ನು ಪಕ್ಕದಲ್ಲಿರುವ ಓಣಿಗಳಲ್ಲೂ  ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಿವೆ.

‘ಗಾಂಧಿಬಜಾರ್‌ನಲ್ಲಿ ಎಲ್ಲ ವಸ್ತುಗಳು ಒಂದೇ ಕಡೆ ದೊರೆಯುತ್ತವೆ. ನಮ್ಮ ಸಮಯವೂ ಉಳಿತಾಯವಾಗುತ್ತದೆ. ಬೇರೆಡೆ ಅಲೆಯುವುದು ತಪ್ಪುತ್ತದೆ. ಒಂದೇ ಪ್ರದೇಶದಲ್ಲಿ ಉತ್ತಮ ವಸ್ತುಗಳು ದೊರೆಯುವ ಕಾರಣ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಖಾಸಗಿ ಕಂಪೆನಿ ಉದ್ಯೋಗಿ ಹರೀಶ್ ರಾವ್ ಮಡೆನೂರು.

‘ತರಕಾರಿ, ಹಣ್ಣು, ಚಿನ್ನಾಭರಣ ವಸ್ತುಗಳು, ಮಕ್ಕಳಿಗೆ ಸಮವಸ್ತ್ರ ಸೇರಿದಂತೆ ಗೃಹೋಪಯೋಗಿ ವಸ್ತುಗಳು ಒಂದೇ ಸ್ಥಳದಲ್ಲಿ ದೊರೆಯುತ್ತವೆ. ಉತ್ತಮ ಗುಣಮಟ್ಟದಿಂದ ಹಿಡಿದು, ಕಚ್ಚಾ ವಸ್ತುಗಳೂ ಗಾಂಧಿಬಜಾರ್‌ನಲ್ಲಿ ಲಭ್ಯವಿದೆ. ಹಾಗಾಗಿ, ಎಲ್ಲಾ ವರ್ಗದ ಜನರೂ ಇಲ್ಲಿ ಖರೀದಿ ಮಾಡಲು
ಇಷ್ಟಪಡುತ್ತಾರೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದವರು ನಾಗರಿಕ ಧನಂಜಯ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT