ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಸ್ಮಾರಕ ಒತ್ತುವರಿ ತೆರವಿಗೆ ಸಿದ್ಧತೆ

ಜಿಲ್ಲಾ ಉಸ್ತುವಾರಿ ಸಚಿವ, ಜನಪ್ರತಿನಿಧಿಗಳ ಬೆಂಬಲ; ಜಿಲ್ಲಾಡಳಿತ, ಮಹಾನಗರ ಪಾಲಿಕೆ ಜಂಟಿ ಕಾರ್ಯಾಚರಣೆ
Last Updated 20 ಮಾರ್ಚ್ 2017, 6:21 IST
ಅಕ್ಷರ ಗಾತ್ರ

ವಿಜಯಪುರ: ಆದಿಲ್‌ಶಾಹಿ ಅರಸದ ಕಾಲದ ಐತಿಹಾಸಿಕ ಸ್ಮಾರಕಗಳನ್ನು ಒತ್ತುವರಿ ಮಾಡಿಕೊಂಡಿರುವವರನ್ನು ತೆರವುಗೊಳಿಸಿ ನಮ್ಮ ಭವಿಷ್ಯದ ಪೀಳಿಗೆಗೆ ಸ್ಮಾರಕಗಳನ್ನು ಸಂರಕ್ಷಿಸಿಸಲು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಕ್ರಾಂತಿಕಾರಕ ಹೆಜ್ಜೆ ಇಟ್ಟಿವೆ.

ಹೌದು, ಪ್ರಾಚೀನ ನಗರವನ್ನು ಸುತ್ತುವರಿದಿರುವ ಐತಿಹಾಸಿಕ ಮಹತ್ವ ವುಳ್ಳ ಕೋಟೆಗೋಡೆ, ಸ್ಮಾರಕಗಳು, ಕಂದಕವನ್ನು ಒತ್ತುವರಿ ಮಾಡಿ ಮನೆ, ಹೋಟೆಲ್‌, ಬಾರ್‌ ಅಂಡ್‌ ರೆಸ್ಟೋ ರೆಂಟ್‌ ಮಾಡಿಕೊಂಡಿರುವ ಒತ್ತುವರಿ ದಾರರನ್ನು ತೆರವುಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಮತ್ತು ಜನಪ್ರತಿನಿಧಿಗಳು  ಮಾರ್ಚ್‌ 4ರಂದು ನಡೆದಿದ್ದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚಿಸಿದ್ದರು.

ಜನಪ್ರತಿನಿಧಿಗಳ ಸೂಚನೆಯ ಮೇರೆಗೆ ಜಿಲ್ಲಾಡಳಿತ ಮತ್ತು ಮಹಾ ನಗರ ಪಾಲಿಕೆ ಜಂಟಿಯಾಗಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಈಗಾಗಲೇ ಜಿಪಿಎಸ್‌ ಸರ್ವೇ ಕೈಗೊಂಡಿದೆ.

ಬ್ರಿಟೀಷ್‌ ಕಾಲದಲ್ಲಿನ ವಿಜಯಪುರ ನಗರದ ನಕ್ಷೆ ಹಾಗೂ ಭಾರತೀಯ ಪುರಾತತ್ವ ಇಲಾಖೆಯ(ಎಎಸ್‌ಐ) ನಿಯಮಾವಳಿಗಳ ಆಧಾರದ ಮೇಲೆ ಸ್ಮಾರಕಗಳು ಎಲ್ಲೆಲ್ಲಿ ಉತ್ತುವರಿಯಾಗಿದೆ ಎಂಬುದನ್ನು ತಜ್ಞರು ಜಿಪಿಎಸ್‌ ಸರ್ವೇ ಮೂಲಕ ಪತ್ತೆ ಹಚ್ಚುವ ಕಾರ್ಯ ಆರಂಭಿಸಿದ್ದಾರೆ ಎಂದು ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪಾಲಿಕೆ ವತಿಯಿಂದ ಸರ್ವೇ ಕಾರ್ಯ ವೇಗವಾಗಿ ನಡೆದಿದೆ. ಅರ್ಧ ದಷ್ಟು ಸರ್ವೇ ಕಾರ್ಯ ಮುಗಿದಿದೆ. ಈಗಾಗಲೇ 700 ಅಕ್ರಮ ಕಟ್ಟಡಗಳನ್ನು ಪತ್ತೆ ಹಚ್ಚಲಾಗಿದೆ. ಸರ್ವೇ ಪೂರ್ಣ ಗೊಂಡ ಬಳಿಕ ಎಲ್ಲ ಒತ್ತುವರಿದಾರರಿಗೆ ಮಾರ್ಚ್‌ 25ರಿಂದ ನೋಟಿಸ್‌ ನೀಡ ಲಾಗುವುದು. ಬಳಿಕ ತೆರವು ಕಾರ್ಯಾ ಚರಣೆ ಆರಂಭಿಸಲಾಗುವುದು ಎಂದರು.

ಭಾರತೀಯ ಪುರಾತತ್ವ ಇಲಾಖೆಯ ಪ್ರಕಾರ ಕೋಟೆಗೋಡೆ, ಸ್ಮಾರಕಗಳು ಮತ್ತು ಕಂದಕಗಳ ಸುತ್ತಲಿನ 14ರಿಂದ 16 ಮೀಟರ್‌ ವರೆಗಿನ ಜಾಗದ ವರೆಗೆ ಇರುವ ಕಟ್ಟಡಗಳನ್ನು ಒತ್ತುವರಿ ಎಂದು ಪರಿಗಣಿಸಿ ತೆರವುಗೊಳಿಸಿ, ಗಡಿ ಗುರುತಿಸಲಾಗುವುದು ಎಂದರು.

ಒತ್ತುವರಿ ತೆರವುಗೊಳಿಸಿದ ಬಳಿಕ ಅರ್ಹರಿಗೆ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ‘ಜಿ ಪ್ಲಸ್‌ ಒನ್‌’ ಮಾದರಿ ಮನೆಗಳನ್ನು ನೀಡಲು ಜಿಲ್ಲಾ ಉಸ್ತುವಾರಿ ಸಚಿವರು ಉದ್ದೇಶಿಸಿದ್ದಾರೆ. ಈ ಸಂಬಂಧ ಇಟ್ಟಂಗಿಹಾಳದಲ್ಲಿ 31 ಎಕರೆ, ಅಲ್‌ಅಮೀನ್‌ ಕಾಲೇಜು ಬಳಿ 30 ಎಕರೆ ಜಾಗವನ್ನು ಗುರುತಿಸ ಲಾಗಿದ್ದು, ಈ ಎರಡು ಸ್ಥಳದಲ್ಲಿ 3,750 ಮನೆಗಳನ್ನು  ನಿರ್ಮಿಸಿ, ತೆರವುಗೊಂಡ ಒತ್ತುವರಿದಾರರಿಗೆ ನೀಡಲಾಗುವುದು ಎಂದು ಹೇಳಿದರು.

ಒತ್ತಡಕ್ಕೆ ಮಣಿಯುವರೇ?
ಸ್ಮಾರಕ, ಕೋಟೆಗೋಡೆ ಒತ್ತುವರಿ ಮಾಡಿಕೊಂಡಿರುವವರಲ್ಲಿ ಕೇವಲ ಬಡವರಿಲ್ಲ. ಶ್ರೀಮಂತರು, ಹೋಟೆಲ್‌, ಬಾರ್‌ ಮತ್ತು ರೆಸ್ಟೋರೆಂಟ್‌ ಮಾಲೀಕರು ಇದ್ದಾರೆ ಎನ್ನಲಾಗಿದೆ. ಇವರ ವಿರುದ್ಧವೂ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾಗಿದೆ. 

ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಂಡಿರುವ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಈ ಸಂದರ್ಭದಲ್ಲಿ ಎದುರಾಗಬಹುದಾದ ಒತ್ತಡಗಳಿಗೆ ಮಣಿಯುತ್ತರೆಯೋ ಅಥವಾ ಕಾರ್ಯಾಚರಣೆಯನ್ನು ಕೈಗೊಂಡು ಸ್ಮಾರಕಗಳ ರಕ್ಷಣೆಗೆ ನಿಜವಾದ ಕಾಳಜಿ ವ್ಯಕ್ತಪಡಿಸುತ್ತರೆಯೋ ಎಂಬುದು ನಗರದ ಜನತೆಯ ಕುತೂಹಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT