ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಮ ಅಭಿವೃದ್ಧಿ ನಿಗಮ ಸ್ಥಾಪಿಸಲು ಆಗ್ರಹ

ಶಿವಣಗಿಯಲ್ಲಿ ಕೊರಮ,- ಕೊರಚ ಸಮಾಜದ ಜಾಗೃತಿ ಸಮಾವೇಶ: ನೂಲಿಯ ಚಂದಯ್ಯ ಮೂರ್ತಿ ಪ್ರತಿಷ್ಠಾಪನೆ
Last Updated 20 ಮಾರ್ಚ್ 2017, 6:23 IST
ಅಕ್ಷರ ಗಾತ್ರ

ವಿಜಯಪುರ: ರಾಜ್ಯದಲ್ಲಿ  ಕೊರಮ, ಕೊರಚ ಜನಾಂಗದವರು ಸುಮಾರು 25 ಲಕ್ಷ ಇದ್ದಾರೆ. ಮನೆ, ಶಿಕ್ಷಣ ಹಾಗೂ ಉದ್ಯೋಗ ಇಲ್ಲದ ಈ ಜನಾಂಗದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಸರ್ಕಾರಕ್ಕೆ ಒತ್ತಾಯಿಸಿದರು.

ತಾಲ್ಲೂಕಿನ ಶಿವಣಗಿಯಲ್ಲಿ ನೂಲಿಯ ಚಂದಯ್ಯ ಟ್ರಸ್ಟ್ ಕಮಿಟಿ, ಕರ್ನಾಟಕ ಪ್ರದೇಶ ಕುಳುವ ಸಮಾಜ ಹಾಗೂ ಕೊರಮರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ಭಾನುವಾರ ನಡೆದ ಕೊರಮ,-ಕೊರಚ ಸಮಾಜದ ಜನಜಾಗೃತಿ ಸಮಾವೇಶ, ನೂಲಿಯ ಚಂದಯ್ಯನವರ ಮೂರ್ತಿ ಪ್ರತಿಷ್ಠಾಪನೆ, ಮಂದಿರ ಉದ್ಘಾಟನೆ ಹಾಗೂ ವೃಷಭೇಂದ್ರ ಬಸವ ನೂಲಿಯ ಚಂದಯ್ಯ ಸ್ವಾಮೀಜಿ ಪಟ್ಟಾಭಿಷೇಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಮಾಜಕ್ಕಾಗಿ ಇಲ್ಲಿಯವರೆಗೆ ಶಾಲೆ, ಸಮುದಾಯ ಭವನ, ದೇವಸ್ಥಾನ, ಜಗದ್ಗುರುಗಳ ಪಟ್ಟಾಭಿಷೇಕ ಆಗಿರಲಿಲ್ಲ. ಈಗ ಪಟ್ಟಾಭಿಷೇಕ ಆಗಿದೆ. ಜಗದ್ಗುರು ಪೀಠಕ್ಕೆ ಸುಮಾರು 10 ಎಕರೆ ಭೂಮಿ ಬೇಡಿಕೆಯೂ ಇದೆ. ಬರಿ ಸಮಾವೇಶ ಮಾಡಿದರೆ ಸಾಲದು, ಮುಂಬರುವ ದಿನಗಳಲ್ಲಿ ಕೊರಮ ಸಮಾಜದಿಂದ ಕನಿಷ್ಟ 8 ಜನ ಶಾಸಕರನ್ನು ಗೆಲ್ಲಿಸಬೇಕು ಎಂದರು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಸ್ವಾಭಿಮಾನದಿಂದ ಬದುಕಬೇಕು ಎಂದು ಹೇಳಿದರು.

ಮುಧೋಳ ಶಾಸಕ ಗೋವಿಂದ ಕಾರಜೋಳ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನೂಲಿಯ ಚಂದಯ್ಯನವರ ಸ್ಮಾರಕ ಜೀರ್ಣೋ ದ್ಧಾರಕ್ಕಾಗಿ ₹ 25 ಲಕ್ಷ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿ ದ್ದೇನೆ. ಆದರೆ, ಈ ಸಮಾಜದ ಮುಖಂ ಡರು ಮಂದಿರ ನಿರ್ಮಾಣಕ್ಕೆ ನೀಡಿದ್ದಾರೆ ಎಂದು ತಪ್ಪಾಗಿ ತಿಳಿಸಿದಿದ್ದಾರೆ. ನಾನು ಹಣ ನೀಡಿದ್ದು ಮಂದಿರ ನಿರ್ಮಾಣಕ್ಕೆ ಅಲ್ಲ. ಸ್ಮಾರಕ ನೀರ್ಣೋದ್ಧಾರಕ್ಕೆ ಎಂದು ಸ್ಪಷ್ಟಪಡಿಸಿದರು.

ವರ್ಗ ರಹಿತ ಸಮಾಜದ ನೂಲಿಯ ಚಂದಯ್ಯನವರ ಆಶಯವಾಗಿತ್ತು. ಶರಣರ ವಿಚಾರ ಇಂದು ಅರ್ಥೈಸಿಕೊಳ್ಳಲು ಆಗಿಲ್ಲ. ಮನುಷ್ಯರಿಂದ ಮನುಷ್ಯರ ಶೋಷಣೆ ಆಗಬಾರದು ಎಂಬ ಶರಣರ ಕನಸು ನನಸು ಮಾಡಲು ಇಂದಿನ ಯುವಕರು ಮುಂದೆ ಬರಬೇಕು ಎಂದರು.

ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಸಮಾನತೆಯ ಹರಿಕಾರ ಅಣ್ಣ ಬಸವಣ್ಣನವರು ದುಡಿದು ತಿನ್ನಿ, ಹಸಿದವರಿಗೂ ಅನ್ನ ಕೊಡಿ ಎಂದರಲ್ಲದೆ ಜಾತಿಯತೆಯನ್ನು ಹೋಗಲಾಡಿಸಲು ಯತ್ನಿಸಿದರು ಎಂದು ಹೇಳಿದರು.

ಬಸವ ಧರ್ಮ ಉತ್ತಮವಾದ ಧರ್ಮ, ಅಣ್ಣ ಬಸವಣ್ಣನವರ ವಿಚಾರ ಧಾರೆಗಳು ಜಗತ್ತಿನ ಎಲ್ಲ ಭಾಷೆಗಳಲ್ಲಿ ತರ್ಜುವೆ ಆಗಿದ್ದರೆ. ಇಂದು ಬಸವ ಧರ್ಮ ಉತ್ತುಂಗಕ್ಕೆ ಏರುತ್ತಿತ್ತು. ತಕ್ಕ ಪ್ರಚಾರ ಸಿಗದ ಕಾರಣ ಉತ್ತುಂಗಕ್ಕೆ ಏರಿಲ್ಲ ಎಂದು ವಿಷಾದಿಸಿದರು.

ಸಮಾವೇಶದಲ್ಲಿ ಶಿವಣಗಿಯ ನೂಲಿಯ ಚಂದಯ್ಯ ಗುರುಪೀಠದ ವೃಷಭೇಂದ್ರ ಬಸವ ನೂಲಿಯ ಚಂದಯ್ಯ ಮಹಾ ಸ್ವಾಮೀಜಿ ಪಟ್ಟಾಭಿಷೇಕ ಸಂಭ್ರಮದಿಂದ ನೆರವೇರಿತು.

ಇಳಕಲ್ ಚಿತ್ತರಗಿ ಸಂಸ್ಥಾನಮಠದ ಮಹಾಂತ ಮಹಾಸ್ವಾಮೀಜಿ, ಕಲಬುರ್ಗಿಯ ಗುರು ಸಿದ್ದೇಶ್ವರ ಸ್ವಾಮೀಜಿ, ಕಲ್ಲಿನಾಥ ದೇವರು, ಒಪ್ಪತ್ತೇಶ್ವರ ಮಹಾಸ್ವಾಮೀಜಿ, ಗುರು ಬಸವ ಶಿವಾಚಾರ್ಯರು, ಭಾರತೀರೂಢ ಸ್ವಾಮೀಜಿ, ಆಲಮೇಲ ಹಾಗೂ ಮಮದಾಪೂರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಮಾಜಿ ಸಚಿವರಾದ ಎಂ.ಸಿ. ಮನಗೂಳಿ, ಎಸ್.ಕೆ. ಬೆಳ್ಳುಬ್ಬಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕ ವಿಠ್ಠಲ ಕಟಕದೊಂಡ, ಚಂದ್ರಪ್ಪ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ನಿವೃತ್ತ ಜಿಲ್ಲಾಧಿಕಾರಿ ಹಾಗೂ ಕೊರಮ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಎಸ್.ಟಿ. ಅಂಜನ್‌ಕುಮಾರ ಉಪಸ್ಥಿತರಿದ್ದರು.

ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನಾ ಕಲಾವಿದ ಪರಶುರಾಮ ಬಜಂತ್ರಿ ಹಾಗೂ ಸ್ಥಳೀಯ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು. ಬಸವಂತ್ರಾಯ ಹೂಗಾರ ತಬಲಾ ಸಾಥ್‌ ನೀಡಿದರು. ಸಿದ್ದು ಹಂಚನಾಳ ಕಾರ್ಯಕ್ರಮ ನಿರೂಪಿಸಿದರು.

*
ಸಮಾಜದಲ್ಲಿ ಇರುವುದು ಎರಡೇ ಜಾತಿ, ಒಂದು ಗಂಡು, ಇನ್ನೊಂದು ಹೆಣ್ಣು ಜಾತಿ. ಅಂದಾಗ ಮಾತ್ರ ಶರಣರು ಬಯಸಿದ ನಾಡು ಕಟ್ಟಲು ಸಾಧ್ಯ.
-ಗೋವಿಂದ ಕಾರಜೋಳ,
ಶಾಸಕ, ಮುಧೋಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT