ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 12 ಡೆಂಗಿ ಪ್ರಕರಣ ಪತ್ತೆ

ಕೀಟ ಜನ್ಯ ರೋಗಗಳ ನಿಯಂತ್ರಣ, ಅರಿವು ಕಾರ್ಯಾಗಾರ
Last Updated 20 ಮಾರ್ಚ್ 2017, 6:30 IST
ಅಕ್ಷರ ಗಾತ್ರ

ಗದಗ: ಕೀಟ ಜನ್ಯ ರೋಗಗಳಾದ ಮಲೇರಿಯಾ, ಡೆಂಗಿ, ಚಿಕುನ್  ಗುನ್ಯಾ ನಿಯಂತ್ರಣ ಕುರಿತು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಪಿ.ಎಚ್. ಕಬಾಡಿ ಹೇಳಿದರು.

ಜಿಲ್ಲಾಡಳಿತ ಭವನದ ಆರೋಗ್ಯ ಇಲಾಖೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ ಆಶ್ರಯದಲ್ಲಿ ‘ಕೀಟಜನ್ಯ ರೋಗಗಳ ನಿಯಂತ್ರಣ’ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು.

ಗದಗ ಜಿಲ್ಲೆಯಲ್ಲಿ 2017 ಫೆಬ್ರುವರಿವರೆಗೆ ಮಲೇರಿಯಾ, ಡೆಂಗಿ ತಲಾ 12, ಚಿಕುನ್ ಗುನ್ಯಾ 11 ಪ್ರಕರಣಗಳು ಕಂಡುಬಂದಿವೆ ಎಂದರು. ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಪ್ರತಿನಿತ್ಯ ಮನೆ ಮನೆಗೆ ಭೇಟಿ ನೀಡಿ, ಜ್ವರ ಸಮೀಕ್ಷಾ ಕಾರ್ಯ ಕೈಗೊಳ್ಳುತ್ತಿದ್ದಾರೆ. ಜ್ವರ ಬಂದವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ಕಳುಹಿಸುತ್ತಿದ್ದಾರೆ. ಆರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದರು.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸಲಾಗುತ್ತಿದೆ. 2016ರಲ್ಲಿ ಒಂದು ಸಾವಿರ ಜನಸಂಖ್ಯೆಗೆ ಎರಡಕ್ಕಿಂತ ಹೆಚ್ಚು ಮಲೇರಿಯಾ ಪ್ರಕರಣಗಳು ಕಂಡುಬಂದ ಗ್ರಾಮಗಳನ್ನು ಆಯ್ಕೆ ಮಾಡಿ ಪ್ರಥಮ, ದ್ವಿತೀಯ ಹಾಗೂ ವಿಶೇಷ ಸುತ್ತು ಸೇರಿದಂತೆ ಮೂರು ಬಾರಿ ಡಿಡಿಟಿ ಸಿಂಪಡಣಾ ಕಾರ್ಯ ಕೈಗೊಳ್ಳಲಾಗಿದೆ. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಾರ್ವಜನಿಕರಿಗೆ ಅರಿವು ಮೂಡಿಸಲು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಡೆಂಗಿ ದಿನ ಆಚರಣೆ ಹಾಗೂ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ ತಂಡಗಳು ಕೊಳಚೆ, ಕಟ್ಟಡ   ಪ್ರದೇಶ, ಕೈಗಾರಿಕಾ, ಕಾರ್ಖಾನೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ  ಸಂಚರಿಸಿ ಅರಿವು ಮೂಡಿಸಲಾಗಿದೆ. 36 ಗ್ರಾಮ ಸಭೆ ಹಾಗೂ 33 ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ. ಕೀಟಜನ್ಯ ರೋಗಗಳ ಕುರಿತು ಸಾರ್ವಜನಿಕ ಸ್ಥಳಗಳಲ್ಲಿ ಗೋಡೆ ಬರಹ ಬರೆಸಲಾಗಿದೆ ಎಂದು ವಿವರಿಸಿದರು.

ಕೀಟಜನ್ಯ ರೋಗಗಳ ಕುರಿತು ಚಿತ್ರಗಳನ್ನು ಗ್ರಾಮ, ತಾಲ್ಲೂಕು ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಕೇಂದ್ರಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಚಿತ್ರ ಫಲಕಗಳನ್ನು ಹಾಕಲಾಗಿದೆ ಎಂದು ಅವರು ತಿಳಿಸಿದರು.

ವಾರ್ತಾ ಇಲಾಖೆಯ ಅಂಜನಾ ಕುಬೇರ ಉದ್ಘಾಟಿಸಿದರು. ಶಿಕ್ಷಣಾಧಿಕಾರಿ ಸುರೇಶ, ಆರ್.ಸಿ.ಎಚ್. ಅಧಿಕಾರಿ ಡಾ.ಎಸ್.ಎಂ. ಹೊನಕೇರಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ಕೆ. ಭಜಂತ್ರಿ, ಕೀಟಜನ್ಯ ಶಾಸ್ತ್ರಜ್ಞ ಲಿಂಗರಾಜ ಹಿರೇಗೌಡ್ರ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT