ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಸ್ತಿ ನೆಪ: ನೀರು ಪೂರೈಕೆಯಲ್ಲಿ ವ್ಯತ್ಯಯ

24x7 ಕುಡಿಯುವ ನೀರಿನ ಯೋಜನೆ ಪ್ರಾರಂಭವಾಗುವುದನ್ನು ಕುತೂಹಲದಿಂದ ಕಾಯುತ್ತಿರುವ ನಗರದ ಜನತೆ
Last Updated 20 ಮಾರ್ಚ್ 2017, 6:39 IST
ಅಕ್ಷರ ಗಾತ್ರ

ಗದಗ: ಬೇಸಿಗೆ ಆರಂಭವಾಗಿದ್ದೇ ತಡ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಪ್ರಾರಂಭವಾಗಿದೆ. ನೀರಿಗಾಗಿ ಪ್ರತಿದಿನವೂ ಜನ ಸಮಸ್ಯೆ ಎದುರಿಸುತ್ತಿದ್ದು, ಬೇಸಿಗೆಯಲ್ಲಿ ಪರಿಸ್ಥಿತಿ ಹೇಗೆ ಎಂಬ ಆತಂಕ ಕಾಡುತ್ತಿದೆ.

ಗದಗ–ಬೆಟಗೇರಿ ಅವಳಿ ನಗರದ ಜನತೆಗೆ ಕುಡಿಯುವ ನೀರು ಪೂರೈಸುವ ಏಕೈಕ ಮೂಲವೇ ತುಂಗಭದ್ರಾ ನದಿ. ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಬಳಿ ಹರಿದಿರುವ ತುಂಗಭದ್ರಾ ನದಿಯಿಂದ ನೀರು ಮೇಲೆತ್ತಿ, ಅಲ್ಲಿಂದ 60 ಕಿ.ಮೀ ದೂರದಲ್ಲಿರುವ ಗದುಗಿಗೆ ನೀರು ಪೂರೈಸಲಾಗುತ್ತದೆ. 1985ರಿಂದ ತುಂಗಭದ್ರಾ ನದಿಯಿಂದ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

ಬರ, ಮಳೆ ಕೊರತೆಯಿಂದ  ಕಳೆದ ಒಂದು ದಶಕದಿಂದ ಸತತವಾಗಿ ಬೇಸಿಗೆಯಲ್ಲಿ ತುಂಗಭದ್ರಾ ನದಿ ಪಾತ್ರ ಬತ್ತುತ್ತಿದೆ. ಹೀಗಾಗಿ ಪ್ರತಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸುತ್ತದೆ. ಜತೆಗೆ ನಗರಕ್ಕೆ ನೀರು ಪೂರೈಸಲು ಅಳವಡಿಸಲಾಗಿರುವ ಪೈಪ್‌ಲೈನ್‌ಗಳು ಮೂರು ದಶಕಗಳಷ್ಟು ಹಳೆಯವು. ಹೀಗಾಗಿ  ಸೋರಿಕೆ ಪ್ರಮಾಣ ಹೆಚ್ಚಿದೆ. ಇವು ಪದೇ ಪದೇ ದುರಸ್ತಿಗೆ ಬರುವುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.

24 ಸಾವಿರ ಮನೆಗಳು
ನಗರಸಭೆ ಅಂಕಿ ಅಂಶದ ಪ್ರಕಾರ, ಗದಗ-–ಬೆಟಗೇರಿ ಅವಳಿ ನಗರದಲ್ಲಿ ಒಟ್ಟು 24,559 ಮನೆಗಳಿದ್ದು, ನಗರದ ಜನಸಂಖ್ಯೆ ಅನುಗುಣವಾಗಿ  ಪ್ರತಿ ನಿತ್ಯ ನೀರು ಪೂರೈಸಬೇಕಾದರೆ ಅಂದಾಜು 45 ಎಂಎಲ್‌ಡಿ (450 ಲಕ್ಷ ಲೀಟರ್‌) ನೀರು ಬೇಕಾಗುತ್ತದೆ. ಸರಾಸರಿ ವಾರಕ್ಕೊಮ್ಮೆ ನೀರು ಪೂರೈಸುವ ರೀತಿಯಲ್ಲಿ, ಪ್ರತಿ ನಿತ್ಯ ಸರಾಸರಿ 14 ಎಂಎಲ್‌ಡಿ ನೀರು ಪೂರೈಸುವಂತೆ ನಗರಸಭೆ ಜಲಮಂಡಳಿ ಜತೆ ಒಪ್ಪಂದ ಮಾಡಿಕೊಂಡಿದೆ.

ನೀರಿನ ಕೊರತೆ, ತಾಂತ್ರಿಕ ಸಮಸ್ಯೆಯಿಂದ ನಗರಕ್ಕೆ ಸದ್ಯ ಪ್ರತಿ ನಿತ್ಯ 9ರಿಂದ 10 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. ನಿತ್ಯ ಸರಾಸರಿ 90 ಲಕ್ಷ ಲೀಟರ್ ನೀರು ಪೂರೈಕೆಯಾದರೆ, ಇದರಲ್ಲಿ 10 ಲಕ್ಷ ಲೀಟರ್ ಸೋರಿಕೆಯಾಗಿ ಚರಂಡಿ ಪಾಲಾಗುತ್ತಿದೆ.

ಪೈಪ್‌ಲೈನ್‌ ತುಂಬಾ ಹಳೆಯದಾಗಿದ್ದರಿಂದ ಸೋರಿಕೆ ಹೆಚ್ಚಿ, ಅಪಾರ ಪ್ರಮಾಣದ ನೀರು ಪೋಲಾಗುತ್ತಿತ್ತು. ಇತ್ತೀಚೆಗೆ ಡಂಬಳದ ಪಾಪನಾಶಿಯ ಜಲಸಂಗ್ರಹಗಾರದಿಂದ ಗದುಗಿನ  ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜುವರೆಗೆ ಇದ್ದ ತುಂಗಭದ್ರಾ ನದಿ ನೀರು ಪೂರೈಸುವ ಹಳೆಯ ಪೈಪ್‌ಲೈನ್‌ ಅನ್ನು ಹೊಸದಾಗಿ ಅಳವಡಿಸಲಾಗಿರುವ 24x7 ಕುಡಿಯುವ ನೀರಿನ ಪೈಪ್‌ಲೈನ್‌ ಜತೆಗೆ ಜೋಡಿಸಲಾಗಿದೆ.

ಇದರಿಂದ ನೀರು ಸೋರಿಕೆ ಪ್ರಮಾಣ ಗಣನೀಯವಾಗಿ ತಗ್ಗಿದೆ. ಸರಾಸರಿ 10ರಿಂದ 12 ದಿನಗಳಿಗೊಮ್ಮೆ ನೀರು ಪೂರೈಸಲು ಸಾಧ್ಯವಾಗಿತ್ತು. ತುಂಗಭದ್ರಾ ನದಿಯಿಂದ ನಗರಕ್ಕೆ ನೀರು ಪೂರೈಸುವ  ಪೈಪ್‌ಲೈನ್‌ ಮಾರ್ಗ ಸಾಕಷ್ಟು ಉದ್ದವಾಗಿರುವುದರಿಂದ (ಅಂದಾಜು 60 ಕಿ.ಮೀ) ಈ ಮಾರ್ಗದಲ್ಲಿ ನೀರಿನ ಹರಿವಿನ ಒತ್ತಡ ತುಂಬಾ ಕಡಿಮೆ ಇದೆ. ಇದು ಕೂಡ ನೀರು ಪೂರೈಕೆ ವಿಳಂಬವಾಗಲು ಮತ್ತೊಂದು ಕಾರಣ ಎನ್ನುತ್ತಾರೆ ನಗರಸಭೆ ಸದಸ್ಯ ಕೃಷ್ಣಾ ಪರಾಪೂರ.

₹1.50 ಕೋಟಿ ಆದಾಯ ನಿರೀಕ್ಷೆ: ನಗರಸಭೆಯು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ನೀರು ಸರಬರಾಜು ಮತ್ತು ಅದಕ್ಕೆ ಸಂಬಂಧಿಸಿದ ಶುಲ್ಕದ ಮೂಲಕ ಅಂದಾಜು ₹1.50 ಕೋಟಿ ಆದಾಯ ನಿರೀಕ್ಷಿಸಿದೆ. ಜತೆಗೆ, ನಗರದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸಲು ₹54 ಲಕ್ಷ ಮೀಸಲಿಟ್ಟಿದೆ.

ಕುಡಿಯುವ ನೀರು ಪೂರೈಸುವ ವಿತರಣಾ ವ್ಯವಸ್ಥೆಯಲ್ಲಿನ ಸಮಸ್ಯೆ ಇತ್ಯರ್ಥಪಡಿಸುವುದು, ಹಳೆಯ ಪೈಪ್‌ಲೈನ್‌ ಬದಲಿಸುವ, ವಿಸ್ತರಿಸುವ ಹಾಗೂ ಇತರೆ ಕಾಮಗಾರಿಗಳಿಗಾಗಿ ₹ 90 ಲಕ್ಷ ವೆಚ್ಚ ಮಾಡಲು ನಿರ್ಧರಿಸಿದೆ.

ಜಲಮಂಡಳಿ ಮೇಲೆ ಆರೋಪ: ನಗರಕ್ಕೆ ನೀರು ಪೂರೈಕೆಯಲ್ಲಿ ಪದೇ ಪದೇ ವ್ಯತ್ಯಯವಾಗಲು ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎನ್ನುತ್ತಾರೆ ನಗರಸಭೆ ಸದಸ್ಯರು. ಫಿಲ್ಟರ್ ಬೆಡ್, ಪೈಪ್‌ಲೈನ್‌ ದುರಸ್ತಿ, ಜಾಕ್ವೆಲ್ ಕ್ಲೀನಿಂಗ್‌ಗಾಗಿ ಕಳೆದ ಸಾಲಿನಲ್ಲಿ ಜಲಮಂಡಳಿಗೆ ₹ 2 ಕೋಟಿ ಅನುದಾನ ಬಿಡುಗಡೆಯಾಗಿದ್ದರೂ,  ಇದರಲ್ಲಿ ₹1 ಕೋಟಿ ಮಾತ್ರ ಬಳಸಿಕೊಳ್ಳಲಾಗಿದೆ. ಪೈಪ್‌ಲೈನ್‌ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡದ ಹಿನ್ನೆಲೆಯಲ್ಲಿ ಸಮಸ್ಯೆ ಉಲ್ಬಣಿಸಿದೆ ಎನ್ನುವುದು ಸದಸ್ಯರ ಆರೋಪ.

18ದಿನದಲ್ಲಿ 3 ಬಾರಿ ವ್ಯತ್ಯಯ, 8 ದಿನ ನೀರು ಪೂರೈಕೆ
ಮಾರ್ಚ್‌ ತಿಂಗಳಲ್ಲಿ ಇದುವರೆಗೆ ಅಂದರೆ ಕಳೆದ 18 ದಿನಗಳಲ್ಲಿ ಮೂರು ಬಾರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಪ್ರತಿ ಬಾರಿ ಸಮಸ್ಯೆ ಕಾಣಿಸಿಕೊಂಡಾಗಲೂ ಜಲಮಂಡಳಿಯವರು ಅದನ್ನು ಸರಿಪಡಿಸಲು 2ರಿಂದ 3 ದಿನ ತೆಗೆದುಕೊಳ್ಳುತ್ತಾರೆ. ಒಮ್ಮೆ ದುರಸ್ತಿಗೆ ಬಂದರೆ 4ದಿನ ನೀರು ಪೂರೈಕೆಯಾಗುವುದಿಲ್ಲ. ಹೀಗಾಗಿ ಕಳೆದ 18 ದಿನಗಳಲ್ಲಿ ಸರಾಸರಿ 8 ದಿನ ನೀರು ಪೂರೈಕೆಯಾಗಿದೆ.

ಈ ತಿಂಗಳಲ್ಲಿ ಎರಡು ಬಾರಿ ಡಂಬಳ ಪಂಪ್‌ಹೌಸ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದ ನೀರೆತ್ತುವ ಕಾರ್ಯ ಸ್ಥಗಿತಗೊಂಡಿತ್ತು. ಅದರ ಬೆನ್ನಲ್ಲೇ ಅಂದರೆ, ಮಾ.15ರ ರಾತ್ರಿ ಮತ್ತೆ ನೀರು ಪೂರೈಸುವ 24 ಇಂಚಿನ ಎಂ.ಎಸ್. ಮುಖ್ಯ ಕೊಳವೆ ಡಂಬಳ-–ಗದಗ ಮಾರ್ಗ ಮಧ್ಯದ  ಕದಾಂಪುರ ಗ್ರಾಮದಲ್ಲಿ ಒಡೆಯಿತು. ಇದರಿಂದ ಮತ್ತೆ ನೀರು ಪೂರೈಕೆಯಲ್ಲಿ ಮೂರು ದಿನ ವ್ಯತ್ಯಯವಾಯಿತು.

ಡಂಬಳ ಪಂಪ್‌ಹೌಸ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಾಗ, ಅಲ್ಲಿನ ಪಾಪನಾಶಿಯ ಜಲಸಂಗ್ರಹಗಾರದಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣದ ಆಧಾರದ ಮೇಲೆ, ನಗರಸಭೆಯು ನಗರದಲ್ಲಿ ಮುಂದಿನ ಪ್ರದೇಶಗಳಿಗೆ  ನೀರು ಪೂರೈಕೆ ಮಾಡುತ್ತದೆ. ಬೆಟಗೇರಿಯ ಕೆಲವು ಪ್ರದೇಶಗಳು ಸೇರಿ, ನಗರದ ಕೆಲವು ಬಡಾವಣೆಗಳಿಗೆ ನೀರು ಪೂರೈಕೆಯಾಗಿ ಸದ್ಯ ಸರಾಸರಿ 20 ದಿನ ಕಳೆದಿದೆ.

*
ತುಂಗಭದ್ರಾ ನದಿ ಪಾತ್ರ ಬತ್ತಿದೆ. ಹಮ್ಮಿಗೆ ಬ್ಯಾರೇಜ್‌ನಿಂದ ನೀರು ಬಿಡಿಸಿ, ಕೊರ್ಲಹಳ್ಳಿಯಲ್ಲಿ ನೀರೆತ್ತಲಾಗುತ್ತಿದೆ. ಪೈಪ್‌ಲೈನ್‌ ದುರಸ್ತಿಯಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
-ಎಲ್‌.ಜಿ ಪತ್ತಾರ,
ನಗರಸಭೆ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT