ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾನ ಸುಧೆಯಲ್ಲಿ ಮಿಂದ ‘ಹಾವೇರಿ’

‘ಪ್ರೀತ್ಸೇ’ ಎಂದ ಹೇಮಂತ್‌, ಹೃದಯ ಮೀಟಿದ ‘ತಂಬೂರಿ’ಯ ನಾದ
Last Updated 20 ಮಾರ್ಚ್ 2017, 6:49 IST
ಅಕ್ಷರ ಗಾತ್ರ

ಹಾವೇರಿ: ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಮತದಲ್ಲಿ ಮೇಲ್ಯಾವುದೋ ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ ಕೀಳ್ಯಾವ್ದು ಮೇಲ್ಯಾವುದೋ... ಹಹಹಹಾ...’  ವರ್ಣರೂಪ ಕಂಡ ‘ಸತ್ಯ ಹರಿಶ್ಚಂದ್ರ’ ಸಿನಿಮಾದ ಹಾಡನ್ನು ವೇದಿಕೆಯ ಮೇಲೆ ಗಾಯಕರು ಹಾಡುತ್ತಿದ್ದರೆ, ಕೆಳಗೆ ಸೇರಿದ ಶ್ರೋತೃಗಳ ಪೈಕಿ ಹಲವರು ಹೆಜ್ಜೆ ಹಾಕಿದರು, ಇನ್ನೂ ಕೆಲವರು ಕುಳಿತಲ್ಲೇ ಚಪ್ಪಾಳೆ ಹೊಡೆದರು, ಎಲ್ಲೆಡೆ ಸಂಭ್ರಮದ ಅಲೆ ತುಂಬಿತ್ತು. ಆಗ ಸಮಯ ಮಧ್ಯರಾತ್ರಿ 1 ಗಂಟೆ 40 ನಿಮಿಷ.

–ಇದು ಹಾವೇರಿ ಜಿಲ್ಲಾ ಉತ್ಸವದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದ ವೇದಿಕೆಯಲ್ಲಿ ಶನಿವಾರ ಸಂಜೆ ಸಿನಿಮಾ ಹಿನ್ನೆಲೆ ಗಾಯಕ ಹೇಮಂತ್ ಹಾಗೂ ತಂಡದವರು ನಡೆಸಿಕೊಟ್ಟ ‘ಸಂಗೀತ ಸಂಜೆ’ಯಲ್ಲಿ ಜನತೆಯ ಸಂಭ್ರಮ. ‘ಹಾವೇರಿ ಉತ್ಸವ’ದ ಯಶಸ್ಸಿನ ಝಲಕ್‌.

ಯಾಲಕ್ಕಿ ಕಂಪಿನ ನಗರದಲ್ಲಿ ಸಂಗೀತದ ಇಂಪಿನ ಅಲೆಯನ್ನು ಸೃಷ್ಟಿಸಿತ್ತು. ಎಲ್ಲೆಲ್ಲೂ ನೃತ್ಯ, ಕರತಾಡತನ. ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ಡಾ. ವೆಂಕಟೇಶ ಎಂ.ವಿ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮತ್ತಿತರರು ಕೊನೆ ತನಕ ಸಾಕ್ಷಿಯಾದರು.

ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವ ನೀರಲಗಿ ಸೇರಿದಂತೆ ಕೆಲವು ರಾಜಕಾರಣಿಗಳು, ಅಧಿಕಾರಿಗಳೂ ಹೆಜ್ಜೆ ಹಾಕಿದರು. ಬಿಸಿಲ ಬೇಗೆಯನ್ನು ಗಾನದ ಬೆಳದಿಂಗಳಲ್ಲಿ ಮರೆತರು.

ಇದಕ್ಕೂ ಮೊದಲು ಶಂಕರನಾಗ್ ಅವರನ್ನು ಸ್ಮರಿಸಿಕೊಂಡ ಗಾಯಕ ಹೇಮಂತ್‌, ‘ನಾನು ಅವರನ್ನು ದಿವಂಗತ ಎನ್ನುವುದಿಲ್ಲ. ಏಕೆಂದರೆ ಅವರು ಕನ್ನಡಿಗರೊಳಗೆ ಸದಾಕಾಲ ಜೀವಂತ’ ಎನ್ನುತ್ತಲೇ, ‘ಸಂತೋಷಕ್ಕೆ ಹಾಡು ಸಂತೋಷಕ್ಕೆ...’ ಹಾಡಿದರು. ಶಿಳ್ಳೆ, ಕೇಕೆಗಳ ನಡುವೆ ಜನ ಕುಣಿದು ಕುಪ್ಪಳಿಸಿದರು. ಇದಕ್ಕೂ ಮೊದಲು ಹೇಮಂತ್ ತಾವೇ ಹಾಡಿ ಪ್ರಶಸ್ತಿಗೆ ಭಾಜನರಾದ ‘ಪ್ರೀತ್ಸೇ ಪ್ರೀತ್ಸೆ...’ ಹಾಡಿದರು. ಜನರೇ ಕೋರಸ್ ನೀಡಿದರು.

ಒಂದು ಪದ ನಾನು, ಇನ್ನೊಂದು ಪದ ನೀವು ಎಂದು ಜನರ ಜೊತೆಯೇ ಹಾಡಿದಾಗ ಹೊಸ ಸಂಚಲನ ಮೂಡಿತು. ಮತ್ತೆ ಮತ್ತೆ ಹಾಡುವಂತೆ ಒತ್ತಾಯ ಕೇಳಿಬಂತು. ಅವುಗಳು ಮಾತ್ರವಲ್ಲದೇ, ‘ಮಾತಡಕಿಲ್ವಾ ಬುಲ್ ಬುಲ್’ ಸೇರಿದಂತೆ ಹಲವು ಹಾಡುಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದವು.

‘ಅಂಬಿಕಾ, ಚಳಿ ತಾಳೆನು ಅಂಬಿಕಾ’ ಹಾಡಿಗೆ ‘ಹಾವೇರಿಯ ಹುಡುಗಿ’ ಎಂದು ಸೇರಿಸಿ ಹಾಡಿದಾಗ ಚಪ್ಪಾಳೆಯ ಅಬ್ಬರ. ಅಲ್ಲದೇ, ಎಲ್ಲರೂ ಮೊಬೈಲ್‌ ಲೈಟ್‌ಆನ್ ಮಾಡಿಕೊಂಡ ನರ್ತಿಸುವಂತೆ ಹೇಳಿದಾಗ, ಕಾಡಿನ ಮಧ್ಯೆ ಬೆಳದಿಂ ಗಳಲ್ಲಿ ಬೆಳಗುವ ಮಿಂಚು ಹುಳಗಳಂತೆ ಕ್ರೀಡಾಂಗಣ ಭಾಸವಾಯಿತು. ಇಂತಹ ಅನೇಕ ಪ್ರಯೋಗಗಳ ಮೂಲಕ ಹೇಮಂತ್ ಮನಗೆದ್ದರು.

‘ಜೋಗಿ’ ಚಿತ್ರದ ಮೂಲಕ ಖ್ಯಾತಿ ಪಡೆದ ಸುನಿತಾ, ‘ಎಲ್ಲೋ ಜೋಗಪ್ಪ..’ ಹಾಡಿನ ಮೂಲಕ ಮನಗೆದ್ದರು. ಹಾವೇರಿಯ ಜನತೆಯ ಹುರುಪನ್ನು ಕಂಡ ಅವರು, ‘ಮಧ್ಯರಾತ್ರಿಯಾಗಿದೆ. ನಿಮಗೇನು ಮನೆ– ಮಠ ಇಲ್ವೇ?’ ಎಂದು ಛೇಡಿಸಿದರು.

ಉತ್ಸವದಲ್ಲಿ ಸೆಲ್ಫಿ ಕ್ರೇಜ್‌...!
ಜಿಲ್ಲಾ ಉತ್ಸವದಲ್ಲಿ ಜನತೆಯ ‘ಸೆಲ್ಫಿ’ ಕ್ರೇಜ್‌ ತೀವ್ರವಾಗಿತ್ತು. ಖ್ಯಾತ ಗಾಯಕ ಹೇಮಂತ್, ಸುನೀತಾ, ಪತ್ರಕರ್ತರಾದ ಪಾಟೀಲ ಪುಟ್ಟಪ್ಪ, ಹಿರಿಯ ಕಲಾ ವಿದರು, ತಜ್ಞರು ಸೇರಿದಂತೆ ತಮ್ಮ ಅಚ್ಚುಮೆಚ್ಚಿನವರ ಜೊತೆ ಯುವಕ–ಯುವತಿಯರು ‘ಸೆಲ್ಫಿ’ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದರು.

ಇನ್ನೂ ಕೆಲವರು ಪ್ರದರ್ಶನಕ್ಕಿಟ್ಟ ವಿವಿಧ ವಸ್ತುಗಳ ಮುಂದೆ, ಜಾತ್ರೆಯಂತೆ ಕಾಣುತ್ತಿರುವ ಆಟಿಕೆಗಳ ಮುಂದೆ, ವಿವಿಧ ಭಂಗಿಗಳಲ್ಲಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.ಹೀಗೆ ಕಂಡ ಕಂಡಲ್ಲಿ ‘ಸೆಲ್ಫಿ’ ಹಾವಳಿ ಜೋರಾಗಿತ್ತು. ಈ ನಡುವೆಯೇ ಕಾರ್ಯ ಕ್ರಮವು ಜಿಲ್ಲಾ ಉಸ್ತುವಾರಿ ಸಚಿವರ ಫೇಸ್‌ಬುಕ್‌ನಲ್ಲಿ ಪ್ರಸಾರ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT