ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳಿಗೆಗಳಲ್ಲಿ ಗಮನ ಸೆಳೆದ ‘ವೈವಿಧ್ಯ’

‘ಹಾವೇರಿ ಜಿಲ್ಲಾ ಉತ್ಸವ’ ಪ್ರಯುಕ್ತ ನಗರದ ಮುನ್ಸಿಪಲ್ ಮೈದಾನದಲ್ಲಿ ಅಂಗಡಿಗಳ ಸಾಲು
Last Updated 20 ಮಾರ್ಚ್ 2017, 6:53 IST
ಅಕ್ಷರ ಗಾತ್ರ

ಹಾವೇರಿ: ಒಂದೆಡೆ ಕಲೆಯ ಮೆರುಗು, ಇನ್ನೊಂದೆಡೆ ವಿವಿಧ ಯೋಜನೆಗಳ ಮಾಹಿತಿ, ಮತ್ತೊಂದಡೆ ರೈತರು ಬೆಳೆದ ಕೃಷಿ ಉತ್ಪನ್ನಗಳು, ಮಹಿಳೆಯರೇ ಸಿದ್ಧಗೊಳಿಸಿದ ಉತ್ಪನ್ನಗಳು, ವಿವಿಧ ಮಾರಾಟ ಮಳಿಗೆಗಳು, ತರಹೇವಾರಿ ವಸ್ತುಗಳ ಪ್ರದರ್ಶನ...

‘ಹಾವೇರಿ ಜಿಲ್ಲಾ ಉತ್ಸವ’ದ ಅಂಗವಾಗಿ ನಗರದ ಮುನ್ಸಿಪಲ್ ಮೈದಾನದಲ್ಲಿ ಹಾಕಲಾದ ಮಳಿಗೆಗಳಲ್ಲಿ ಕಂಡು ಬಂದ ವಿವಿಧ ವಸ್ತು ಪ್ರದರ್ಶನಗಳು ಗಮನ ಸೆಳೆದವು. ತೋಟಗಾರಿಕಾ ಇಲಾಖೆಯ ವತಿಯಿಂದ ಹೂವಿನಲ್ಲಿ ತಾಜ್‌ಮಹಲ್ ನಿರ್ಮಿಸಲಾಗಿತ್ತು. ತರಕಾರಿಯಲ್ಲಿ ರಚಿಸಿದ ನವಿಲು, ಮೊಸಳೆ, ಮೀನು ಮತ್ತಿತರ ಚಿತ್ರಣಗಳು ಚಿತ್ತಾಕರ್ಷಕವಾಗಿತ್ತು.

ಕುಂಬಳಕಾಯಿಯಲ್ಲಿ ಕೆತ್ತನೆ ಮಾಡಿದ ಬಸವೇಶ್ವರ, ಯೇಸು, ಮೈಲಾರ ಮಹದೇವ, ಸರ್ವಜ್ಞ, ಕನಕದಾಸರು ಸೇರಿದಂತೆ ಮಹನೀಯರ ಚಿತ್ರಗಳು,  ಮೀನು, ಹಕ್ಕಿ, ಹಂಸಗಳು ಕುತೂಹಲ ಮೂಡಿಸಿದವು. ಆರ್ಕಿಡ್, ದರ್ಬೇರಾ, ಕಾರ್ನೇಶನ್, ಲಿಲ್ಲಿ, ಬರ್ಡ್‌ ಆಫ್‌ ಪ್ಯಾರಡೈಸ್‌, ಸೇವಂತಿಗೆ, ಗುಲಾಬಿ, ಸುಗಂಧರಾಜ ಮತ್ತಿತರ ದೇಶ–ವಿದೇಶದ ಹೂವುಗಳು ಹೆಂಗಳೆಯರ ಚಿತ್ತ ಸೆಳೆದವು.

ಜಯದೇವ ಅಗಡಿ ಮತ್ತಿತರ ರೈತರು ಬರದ ನಡುವೆಯೂ ಹೊಲದಲ್ಲಿ ಬೆಳೆದ ಭರ್ಜರಿ ಗಾತ್ರದ ಬಾಳೆ, ಪಪ್ಪಾಯಿ, ಟೊಮೆಟೊ ಮತ್ತಿತರ ಫಲವಸ್ತು ಹಾಗೂ ತರಕಾರಿಗಳು ಬಿಸಿಲ ಬೇಗೆಯ ನಡುವೆ ಅಚ್ಚರಿ ಮೂಡಿಸುವಂತಿತ್ತು. ಉಪ್ಪಿನಕಾಯಿ, ಮೆಣಸಿನ ಪುಡಿ ಮತ್ತಿತರ ಉತ್ಪನ್ನಗಳೂ ಇದ್ದವು.
ಅರಣ್ಯ ಇಲಾಖೆಯು ಕೃಷ್ಣ ಮೃಗ ಮತ್ತಿತರ ವನ್ಯಜೀವಿಗಳು, ಹೆಬ್ಬೇವು, ಮಾವು ಮತ್ತಿತರ ಗಿಡಗಳ ಪ್ರದರ್ಶನ ಇಟ್ಟಿದ್ದರು.

ಪೊಲೀಸ್ ಇಲಾಖೆಯು  ಜಾರಿಗೆ ತಂದ ‘ಸಬ್ ಬೀಟ್‌’ ವ್ಯವಸ್ಥೆ, ಸಂಚಾರ ನಿಯಮ, ಕಾನೂನು ಸುವ್ಯವಸ್ಥೆ, ಭದ್ರತೆಯ ಕ್ರಮಗಳ ಬಗ್ಗೆ ಮಾಹಿತಿ ನೀಡಿರುವುದು ‘ಜನಸ್ನೇಹಿ ಪೊಲೀಸ್’ನ ಇನ್ನೊಂದು ಹೆಜ್ಜೆಯಾಗಿತ್ತು. ಕಾಗಿನಲೆ ಅಭಿವೃದ್ಧಿ ಪ್ರಾಧಿಕಾರವು ಪ್ರವಾಸಿಗರ ಗಮನಸೆಳೆಯಲು ಯತ್ನಿಸಿತು.

ಆರೋಗ್ಯ , ರೇಷ್ಮೆ , ಜವಳಿ, ಸಮಾಜ ಕಲ್ಯಾಣ , ಕೃಷಿ  ಸೇರಿದಂತೆ ವಿವಿಧ ಇಲಾಖೆಗಳು ಸರ್ಕಾರಿ ಯೋಜನೆಗಳು, ಸೌಲಭ್ಯಗಳ ಮಾಹಿತಿಯನ್ನು ಪ್ರದರ್ಶಿಸಿದವು. ರೈತರು, ಯುವಜನತೆ ಆಸಕ್ತಿಯ ಕ್ಷೇತ್ರದ ಕುರಿತು ಮಾಹಿತಿ ಪಡೆದರು.

ದಶಕಗಳ ಹಿಂದೆ ಹಾವೇರಿಯಲ್ಲಿದ್ದ ಕಲಾ ಶಾಲೆಯ ಮಿತ್ರರು ಒಡಗೂಡಿ ಹಮ್ಮಿಕೊಂಡ ಚಿತ್ರಕಲಾ ಪ್ರದರ್ಶನ ಆಕರ್ಷಣೆಯ ಕೇಂದ್ರದಲ್ಲೊಂದು. ಸವಣೂರಿನ ಕೆ.ಡಿ. ಕುಲಕರ್ಣಿ, ಹಾವೇರಿಯವರಾದ ಎಸ್.ಡಿ. ರೋಖಡೆ, ಶ್ರೀಕಾಂತ ಪೂಜಾರ, ಅಶೋಕ ಎಣ್ಣಿಯವರ, ವೀರೇಂದ್ರ ಮಾಳಿ, ಪ್ರಭು ಹೂಗಾರ, ಎಂ.ಎಸ್. ಕರ್ಜಗಿ, ಶಿವಾನಂದ ಪುರದ ದೇವಗರಿ, ರಾಜು ಕಾಟೇನಹಳ್ಳಿ ಮತ್ತಿತರರು ಜಲವರ್ಣ, ತೈಲ ವರ್ಣ, ಪೆನ್ಸಿಲ್‌ ಆರ್ಟ್, ಅಕ್ರಾಲಿಕ್‌ ಮತ್ತಿತರ ಮಾಧ್ಯಮಗಳ ಮೂಲಕ ನಿಸರ್ಗ, ನೈಜಕಲೆ, ಅಮೂರ್ತ, ವಸ್ತು ಚಿತ್ರಣ ಕಲಾಕೃತಿ ರಚಿಸಿ ಕಲಾ ಕಂಪು ನೀಡಿದರು. ಸ್ಥಳದಲ್ಲೇ ಚಿತ್ರ ಬಿಡಿಸಿದರು.

ಬಣ್ಣ ಹಾಗೂ ನೇಕಾರಿಕೆಯವರು, ಜವಳಿ ಉದ್ಯಮದಲ್ಲಿ ತೊಡಗಿದವರೂ ತಮ್ಮ ಕೌಶಲ ಮೆರೆದರು. ಸುಮಾರು 12 ವರ್ಷಗಳಿಂದ ಅಡುಗೆ ಉತ್ಪನ್ನಗಳನ್ನು ತಯಾರು ಮಾಡುವ ಮೂಲಕ ಸ್ವಾವಲಂಬಿ ಮಹಿಳೆಯಾದ ಧಾರವಾಡದ ಗಿರಿಜಾ ಇಬ್ರಾಹಿಂಪುರ ಹಾಗೂ ಕಸೂತಿ, ಹೊಲಿಗೆಯ ಮೂಲಕವೇ ದಶಕದಿಂದ ದುಡಿಮೆಯಲ್ಲಿ ತೊಡಗಿಸಿಕೊಂಡ ಲೀಲಾವತಿ ಯಂಡಿಗೇರಿ ಸ್ವ ಉದ್ಯೋಗದ ಬಗ್ಗೆ ಮಹಿಳೆಯರಿಗೆ ಮಾದರಿಯಾದರು.

ಹೀಗೆ ಸುಮಾರು 100 ಮಳಿಗೆಗಳಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಎನ್ನುವಂತೆ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ಮೂಲಕ ನೋಡುಗರಿಗೆ ಮಾಹಿತಿ, ಕುತೂಹಲ, ಮಾದರಿಗಳನ್ನು ನೀಡಿತು.

*
ಜಿಲ್ಲಾ ಕೇಂದ್ರದಲ್ಲಿ ಕಲೆ, ಸಂಸ್ಕೃತಿ, ಮಾಹಿತಿಗಳ ‘ದರ್ಶನ’ ಉತ್ತಮ ವೇದಿಕೆಯಾಗಿದೆ.
-ಅಶೋಕ ಎಣ್ಣಿಯವರ,
ಕಲಾವಿದ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT