ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘಿಸಿದರೆ ಮನೆಗೆ ನೋಟಿಸ್!

ಸಿಸಿಟಿವಿ ಕ್ಯಾಮೆರಾ ಕಣ್ಗಾವಲು; ಪೊಲೀಸರಿಗೆ ಸ್ಮಾರ್ಟ್‌ಫೋನ್‌ ವಿತರಣೆ ಶೀಘ್ರ– ನಗರದಲ್ಲಿ ಮೂರು ಲಕ್ಷ ವಾಹನ
Last Updated 20 ಮಾರ್ಚ್ 2017, 7:00 IST
ಅಕ್ಷರ ಗಾತ್ರ

ಬೆಳಗಾವಿ: ಟ್ರಾಫಿಕ್‌ ಸಿಗ್ನಲ್‌ ಜಂಪ್‌ ಮಾಡಿದರೆ.... ಹೆಲ್ಮೆಟ್‌ ಧರಿಸದಿದ್ದರೆ... ಏಕಮುಖ ಮಾರ್ಗದಲ್ಲಿ ಎದುರು ಬದಿಯಿಂದ ವಾಹನಗಳನ್ನು ಚಲಾಯಿಸಿ ದರೆ ಇನ್ನು ಮುಂದೆ ಚಾಲಕರ ಮನೆಗೆ ನೋಟಿಸ್‌ ಬರುತ್ತದೆ!

ಹೌದು, ಇನ್ನು ಮುಂದೆ ರಸ್ತೆಯ ಮೇಲೆ ಪೊಲೀಸರು ಕೈ ಮಾಡಿ, ವಾಹನ ಗಳನ್ನು ತಡೆದು ದಂಡ ವಿಧಿಸುವ ಪ್ರಕ್ರಿಯೆ ತಪ್ಪಲಿದೆ. ಬೆಲ್‌ ಟ್ರ್ಯಾಕ್‌ ಯೋಜನೆಯಡಿ 120 ಸಿಸಿಟಿವಿ ಕ್ಯಾಮೆರಾಗಳನ್ನು ನಗರದ ಪ್ರಮುಖ ವೃತ್ತಗಳಲ್ಲಿ ಅಳವಡಿಸಲಾಗುತ್ತಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿ­ಸುವವರನ್ನು ಸಿಸಿಟಿವಿ ಕ್ಯಾಮೆರಾ ಮೂಲಕ ಪತ್ತೆ ಮಾಡಿ, ನೋಟಿಸ್‌ ನೀಡಲು ಬೆಳಗಾವಿ ನಗರ ಪೊಲೀಸರು ಮುಂದಾಗಿದ್ದಾರೆ.

ನಗರದಲ್ಲಿ ಹೆಚ್ಚುತ್ತಿರುವ ವಾಹನ ಗಳ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು   ಟ್ರಾಫಿಕ್‌ ಟ್ರಾನ್ಸ್‌ ಮಿಷನ್‌ ಕೇಂದ್ರವನ್ನು ಸೌಥ್‌ ಟ್ರಾಫಿಕ್‌ ಪೊಲೀಸ್‌ ಠಾಣೆಯಲ್ಲಿ ತೆರೆಯಲಾಗುತ್ತಿದೆ. ಬೆಲ್‌ ಟ್ರ್ಯಾಕ್‌ ಯೋಜನೆಯಡಿ ಸುಮಾರು ₹1.5 ಕೋಟಿ ವೆಚ್ಚದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ನಗರದ ವಿವಿಧೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಮೇಲ್ವಿಚಾರಣೆ ನಡೆಸುವ ಕೇಂದ್ರದಲ್ಲಿ ದೊಡ್ಡ ಮಾನಿಟರ್‌ ಅಳವಡಿಸುವುದು ಇದರಲ್ಲಿ ಸೇರಿ ಕೊಂಡಿದೆ.

ಈಗಾಗಲೇ ಟೆಂಡರ್‌ ನೀಡಲಾಗಿದ್ದು, ಸದ್ಯದಲ್ಲಿಯೇ ನಗರದ ಪ್ರಮುಖ ವೃತ್ತಗಳಲ್ಲಿ ಕ್ಯಾಮೆರಾಗಳ ಅಳವಡಿಕೆ ಕಾರ್ಯ ನಡೆಯಲಿದೆ ಎಂದು ಡಿಸಿಪಿ (ಅಪರಾಧ– ಸಂಚಾರ) ಅಮರನಾಥ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರ ಪ್ರವೇಶಿಸುವ ಎಲ್ಲ ಮಾರ್ಗ ದಲ್ಲಿ, ರಾಣಿ ಚನ್ನಮ್ಮ ವೃತ್ತ, ಬೋಗಾರ ವೇಸ್‌, ಗೋವಾವೇಸ್‌, ಹುತಾತ್ಮ ಚೌಕ, ಆರ್‌ಪಿಡಿ ವೃತ್ತ, ಕಾಕತಿವೇಸ್‌, ಕೊಲ್ಹಾಪುರ ವೃತ್ತ ಸೇರಿದಂತೆ ಪ್ರಮುಖ 30 ಸ್ಥಳಗಳಲ್ಲಿ 120 ಸಿಸಿಟಿವಿ ಕ್ಯಾಮೆರಾ ಅಳವಡಿಕೆಯಾಗಲಿವೆ.

ಈ ಕ್ಯಾಮೆರಾಗಳು ತಮ್ಮ ಸುತ್ತ 180 ಡಿಗ್ರಿಯವರೆಗೆ ತಿರುಗುವ ಶಕ್ತಿ ಹೊಂದಿವೆ. ದಿನದ 24 ಗಂಟೆಯೂ ಇವು ಕಾರ್ಯ ನಿರ್ವಹಿಸುತ್ತವೆ. ಎಲ್ಲ ಕ್ಯಾಮೆರಾಗಳು ಸೆರೆಹಿಡಿಯುವ ದೃಶ್ಯಾ ವಳಿಗಳನ್ನು ಟ್ರಾಫಿಕ್‌ ಟ್ರಾನ್ಸ್‌ಮಿಷನ್‌ ಕೇಂದ್ರದಲ್ಲಿ ವೀಕ್ಷಿಸಬಹುದಾಗಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಹೋಗುವ ವಾಹನಗಳ ನೋಂದಣಿ ಸಂಖ್ಯೆಯನ್ನು ವೀಕ್ಷಿಸಿ, ಆ ವಾಹನದ ಮಾಲೀಕರ ಮನೆಗೆ ನೋಟಿಸ್‌ ರವಾನಿಸಲಾಗುತ್ತದೆ.

ನಿಯಮ ಉಲ್ಲಂಘಿಸಿದ ಬಗ್ಗೆ ವಿವರ, ಉಲ್ಲಂಘಿಸಿದ ದಿನ, ವಿಧಿಸ ಲಾದ ದಂಡದ ವಿವರವನ್ನು ನೋಟಿಸ್‌ ನಲ್ಲಿ ನೀಡಲಾಗಿರುತ್ತದೆ. ನ್ಯಾಯಾ ಲಯಕ್ಕೆ ಹಾಜರಾಗಿ, ದಂಡ ಕಟ್ಟುವಂತೆ ಎಚ್ಚರಿಕೆ ನೀಡಲಾಗುತ್ತದೆ.

ಟ್ರಾಫಿಕ್‌ ಪೊಲೀಸ್‌ ಠಾಣೆ ಹಾಗೂ ಆರ್‌ಟಿಒ ಕಚೇರಿಯ ಡಾಟಾ ಜೊತೆ ನೆಟ್‌ವರ್ಕ್‌ ಲಿಂಕ್‌ ಮಾಡಲಾಗಿರುತ್ತದೆ. ವಾಹನ ನೋಂದಣಿಯಲ್ಲಿ ನೀಡಲಾದ ಮಾಲೀಕರ ಮನೆ ವಿಳಾಸಕ್ಕೆ ನೋಟಿಸ್‌ ರವಾನಿಸಲಾಗುತ್ತದೆ. 

ಹೊಸ ಮೊಬೈಲ್‌: ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಸ್ಥಳದಲ್ಲಿಯೇ ದಂಡ ವಿಧಿಸಲು ಜಿಪಿ ಆರ್‌ಎಸ್‌ ಸೌಲಭ್ಯದ ಹೊಸ ಸ್ಮಾರ್ಟ್‌ ಫೋನ್‌ಗಳನ್ನು ನೀಡಲು ನಿರ್ಧರಿಸಲಾ ಗಿದೆ. ಸದ್ಯಕ್ಕೆ ಬ್ಲ್ಯಾಕ್‌ಬೆರ್ರಿ ಫೋನ್‌ಗಳನ್ನು ಎಸ್‌ಐ ಹಾಗೂ ಅವರ ಮೇಲಿನ ಅಧಿಕಾರಿಗಳಿಗೆ ನೀಡಲಾಗಿದೆ. ಸ್ಮಾರ್ಟ್‌ ಫೋನ್‌ಗಳನ್ನು ಎಸ್‌ಐ ಅವರ ಕೆಳಗಿನ ಮಟ್ಟದ ಪೊಲೀಸರಿಗೆ ನೀಡಲು ತೀರ್ಮಾನಿಸಲಾಗಿದೆ.

3 ಲಕ್ಷ ವಾಹನ: ‘ಬೆಳಗಾವಿ ನಗರ ಕಮಿಷನರೇಟ್‌ ವ್ಯಾಪ್ತಿಯಲ್ಲಿ 2.50 ಲಕ್ಷ ಬೈಕ್‌ಗಳಿವೆ, 40 ಸಾವಿರ ಕಾರು–ಜೀಪ್‌ಗಳಿವೆ. 6 ಚಕ್ರದ ವಾಹನಗಳು 20 ಸಾವಿರ ಇವೆ. ವಾಹನಗಳ ಚಲಾವಣೆ ಯಲ್ಲಿ ಶಿಸ್ತುಬದ್ಧ ತರಲು ಪ್ರಯತ್ನಿಸಲಾ ಗುತ್ತದೆ. ವಾಹನ ಸವಾರರು ಕೂಡ ನಿಯಮಕ್ಕೆ ಅನುಗುಣವಾಗಿ ವಾಹನ ಗಳನ್ನು ಓಡಿಸಬೇಕು. ನಿಯಮ ಪಾಲನೆ ಬಗ್ಗೆ ಸವಾರರಲ್ಲಿ ಜಾಗೃತಿ ಮೂಡು ವುದು ಬಹಳ ಮುಖ್ಯ’ ಎಂದು ಡಿಸಿಪಿ ಅಮರನಾಥ ರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT