ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಣ್ಣಿನ ರಾಜ’ ಬಲು ದುಬಾರಿ

ಬರಗಾಲ, ನೀರಿನ ಅಭಾವ, ಹವಾಮಾನ ವೈಪರೀತ್ಯದಿಂದ ಫಸಲು ಇಳಿಕೆ
Last Updated 20 ಮಾರ್ಚ್ 2017, 7:15 IST
ಅಕ್ಷರ ಗಾತ್ರ

ಕಾರವಾರ: ‘ಹಣ್ಣಿನ ರಾಜ’ ಮಾವಿನ ಆಳ್ವಿಕೆ ಶುರುವಾಗಿದೆ. ನಗರದಲ್ಲಿರುವ ಎಲ್ಲ ಹಣ್ಣಿನ ಮಳಿಗೆಗಳಲ್ಲೂ ಈಗ ಈ ‘ರಾಜ’ನದ್ದೇ ದರ್ಬಾರು.
ಒಂದರ ಮೇಲೊಂದನ್ನು, ಕಣ್ಣು ಕುಕ್ಕುವ ಹಾಗೆ ಅಚ್ಚುಕಟ್ಟಾಗಿ ಅಂಗಡಿಗಳಲ್ಲಿ ಮಾವಿನ ಹಣ್ಣನ್ನು ಜೋಡಿಸಿ ಮಾರಾಟಗಾರರು ಗ್ರಾಹಕರನ್ನು ಸೆಳೆಯುತ್ತಿದ್ದಾರೆ.

ಗ್ರಾಹಕರಲ್ಲಿ ಇನ್ನೂ ಕೆಲವರಂತು ಮಾವು ಹೊರಸೂಸುವ ಪರಿಮಳಕ್ಕೆ ಅಂಗಡಿಯ ಬಳಿಗೆ ಎಡತಾಕುತ್ತಿದ್ದಾರೆ. ಈಗ ಎಲ್ಲರ ಮನಸ್ಸಿನಲ್ಲೂ ಮಾವಿನ ರುಚಿ ನೋಡಲೇಬೇಕು ಎನ್ನುವ ಆಸೆಯ ಜತೆ ಅಹಂ ಕೂಡ ಬೀಜ ಬಿತ್ತುತ್ತಿದೆ.

ನಗರದ ಗಾಂಧಿ ಬಜಾರ್, ಸವಿತಾ ವೃತ್ತ, ಶಿವಾಜಿ ವೃತ್ತ ಹಾಗೂ ಸಂಡೇ ಮಾರ್ಕೆಟ್‍ನಲ್ಲಿ ಸ್ಥಳೀಯ ಅಪೂಸ್, ಬಾದಾಮ್, ಕರಿ ಇಶಾಡ್ ನ ತಳಿಗಳು ಬಿಕರಿಯಾಗುತ್ತಿದೆ. ಪಯರಿ, ಆಲ್ಫಾನ್ಸೋ, ಮಲ್‍ಗೋವಾ, ರಸಪುರಿ, ಬಂಗನಪಲ್ಲಿ, ಮಲ್ಲಿಕಾ, ಹಿಮಾಯತ್, ಸೇಂದ್ರಾ, ತೋತಾಪುರಿ ಹೀಗೆ ವಿವಿಧ ತಳಿಗಳ ಮಾವಿನ ಹಣ್ಣುಗಳು ಕೆಲವೇ ದಿನಗಳಲ್ಲಿ ಇಲ್ಲಿನ ಮಾರುಕಟ್ಟೆ ಪ್ರವೇಶಿಸಲಿದೆ.

ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಬೆಳಂಬರ, ಮುಂಡಗೋಡದ ಮಳಗಿ, ಶಿರಸಿಯ ಬನವಾಸಿಗಳಿಂದ ಅಲ್ಲದೇ ನೆರೆ ರಾಜ್ಯ ಗೋವಾ, ಮಹಾರಾಷ್ಟ್ರದಿಂದಲೂ ಸಹ ಮಾವಿನ ಹಣ್ಣುಗಳು ಇಲ್ಲಿನ ಮಾರುಕಟ್ಟೆಗೆ ಬರಲಿವೆ.

ಬಲು ದುಬಾರಿ: ಮಾರುಕಟ್ಟೆಗೆ ಅದಾಗಲೇ ಲಗ್ಗೆ ಇಟ್ಟಿರುವ ಅಪೂಸ್ ಹಾಗೂ ಬದಾಮ್ ತಳಿಯ ಹಣ್ಣಿನ ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ. ಆದರೂ ಸಹ ಈ ಬಾರಿ ಹಣ್ಣಿನ ರಾಜನನ್ನು ಜನ ಸಾಮಾನ್ಯರು ಮಾತನಾಡಿಸಲು ಹಿಂಜರಿಯುತ್ತಿದ್ದಾರೆ. ಕಾರಣ ಬೆಲೆ ಬಹಳ ತುಟ್ಟಿ. ಬರಗಾಲ, ನೀರಿನ ಅಭಾವ, ಹವಾಮಾನ ವೈಪರೀತ್ಯದಿಂದ ಈ ಬಾರಿ ಮಾವು ಬೆಳೆಯ ಫಸಲಿನಲ್ಲಿ ಇಳಿಕೆಯಾಗಿದೆ.

ಅಕಾಲಿಕ ಮಳೆಯೂ ಸಹ ಹಣ್ಣಿನ ಬೆಲೆ ದುಬಾರಿಯಾಗಲು ಕಾರಣ. ಆದರೆ ‘ಏಪ್ರಿಲ್ ತಿಂಗಳ ಆರಂಭಕ್ಕೆ ಕಾಲಿಡುತ್ತಿದ್ದ ಸ್ಥಳೀಯ ಮಾವು ಎರಡು, ಮೂರು ವಾರ ಮುನ್ನವೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಹಿಂದಿಗಿಂತಲೂ ಈ ಬಾರಿ ಹೆಚ್ಚಿನ ಹಣ್ಣುಗಳು ಮಾರುಕಟ್ಟೆಗೆ ಬರಬಹುದು’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಮಹಮ್ಮದ್.

ನಗರದ ಹಣ್ಣಿನ ಅಂಗಡಿ ತುಂಬೆಲ್ಲಾ ಸದ್ಯ ಅಪೂಸ್ ಹಾಗೂ ಬದಾಮ್ ಮಾವಿನ ಪರಿಮಳ ಹಬ್ಬಿಕೊಂಡಿದೆ. ಜನರು ಇದರ ರುಚಿಗೆ ಮನಸೋತಿ ದ್ದಾರೆ. ಹಾಗಾಗಿ ಇವುಗಳ ರುಚಿಗೆ ತಕ್ಕಂತೆ ಬೆಲೆ ಏರಿದೆ. ಅಪೂಸ್ ಕೇಜಿಗೆ ₹100–200, ಬದಾಮ್ ಡಜನ್‌ಗೆ  ₹80–150 ಇದೆ. ದರ ದುಬಾರಿ ಯಾಗಿದ್ದರೂ ಮಾವಿನ ಪ್ರಿಯರು ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದಾರೆ.

ಪ್ರತಿ ವರ್ಷ ಮಾವಿನ ಸೀಜನ್ ಪ್ರಾರಂಭವಾಗುತ್ತಿದ್ದಂತೆ ಮಾವಿನ ದರ ಏರಿಕೆಯಲ್ಲಿದ್ದು, ಕ್ರಮೇಣ ಕಡಿಮೆಯಾಗುತ್ತದೆ. ಅದರಂತೆ ಸ್ಪಲ್ಪ ದಿನ ಕಳೆದರೆ ಹಣ್ಣುಗಳ ದರ ಕಡಿಮೆಯಾಗಬಹುದು ಎಂಬುದು ಗ್ರಾಹಕರ ಹಾಗೂ ವ್ಯಾಪಾರಿಗಳ ಅನಿಸಿಕೆ.

ಸುಳಿವೇ ಇಲ್ಲದ ಅಪ್ಪೆಮಿಡಿ: ಜಿಲ್ಲೆಯಲ್ಲಿ ಮಾವಿನ ಖುತು ಬಂತೆಂದರೆ ಪ್ರತಿ ಯೊಂದು ಮನೆಯ ತಿಂಡಿ–ತಿನಿಸು ಗಳಲ್ಲಿಯೂ ಹಣ್ಣಿನದ್ದೇ ಕಾರುಬಾರು. ರಸಾಯನ, ಅಡಂಗಾಯ್, ಪಾಯಸ, ಬರ್ಫಿ, ಮಿಲ್ಕ್‍ಶೇಕ್, ಸ್ವ್ಕ್ಯಾಶ್, ಐಸ್‍ಕ್ರೀಂ ಹೀಗೆ ನಾನಾ ವಿಧದ ತಿನಿಸು ಹಾಗೂ ಪೇಯಗಳನ್ನು ತಯಾರು ಮಾಡಲಾಗುತ್ತದೆ. ಅತೀ ಹೆಚ್ಚಾಗಿ ಜಿಲ್ಲೆಯ ವಿಶೇಷ ತಳಿ ಅಪ್ಪೆಮಿಡಿಯಿಂದ ಬಹುತೇಕ ಮನೆಗಳಲ್ಲಿ ಉಪ್ಪಿಕಾಯಿ ತಯಾರಿಸಲಾಗುತ್ತದೆ. ‘ಆದರೆ ಈ ಬಾರಿ ಅಪ್ಪೆಮಿಡಿ ಕೈಕೊಟ್ಟಿದೆ’ ಎನ್ನುತ್ತಾರೆ ಗೃಹಿಣಿ ಶ್ರೀನಿಧಿ ನಾಯ್ಕ.

ಎಲ್ಲಿಯೂ ಸಹ ಅಪ್ಪೆಮಿಡಿಯ ಸುಳಿವೇ ಇಲ್ಲದಂತಾಗಿದೆ. ವಿಭಿನ್ನ ರುಚಿ ಹೊಂದಿರುವ ಈ ತಳಿಯನ್ನು ಜಿಲ್ಲೆಯ ಕರಾವಳಿಯ ಗ್ರಾಮಿಣ ಭಾಗಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಬಗ್ಗೆ ಮಾರಾಟಗಾರರನ್ನು ಕೇಳಿದರೆ, ‘ಮೇ, ಜೂನ್ ತಿಂಗಳಿನಲ್ಲಿ ಬರಬಹುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
– ದೇವರಾಜ ಭಟ್ಕಳ

ವ್ಯಾಪಾರ ಅಷ್ಟಕಷ್ಟೇ ..!
‘ಅಂಕೋಲಾದಿಂದ ಕಾರವಾರ ಮಾರುಕಟ್ಟೆಗೆ ಮಾವಿನ ಹಣ್ಣುಗಳು ಬಂದಿವೆ. ಸಗಟು ವ್ಯಾಪಾರಿಗಳಿಂದ ಖರೀದಿಸಿ ನಾವು ಮಾರಾಟ ಮಾಡುತ್ತಿದ್ದೇವೆ. ಈ ಬಾರಿ ಮಾವಿನ ಹಣ್ಣಿನ ಬೆಲೆ ಅಲ್ಪ ದುಬಾರಿಯಾಗಿದೆ. ಆದರೂ ಮಾವು ಪ್ರಿಯರು ಬೆಲೆಯನ್ನು ಲೆಕ್ಕಿಸದೇ ಖರೀದಿಗೆ ಮುಂದಾಗಿದ್ದಾರೆ. ಆದರೂ ಸಹ ವ್ಯಾಪಾರ ಅಷ್ಟಕಷ್ಟೇ ಆಗಿದೆ. ಬೆಳಿಗ್ಗೆಯಿಂದ ಸುಮಾರು 300 ಹಣ್ಣುಗಳು ಮಾರಾಟವಾಗಿದೆ ಎಂದು ಬೀದಿ ಬದಿಯ ಮಾವಿನ ಹಣ್ಣಿನ ವ್ಯಾಪಾರಿ ಅಹ್ಮದ್ ಖ್ವಾಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT