ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ‘ಸಿದ್ಧ’ವಿದ್ದರೂ ಸವಲತ್ತು ಇಲ್ಲ!

ಒಳಚರಂಡಿ ಸಂಪರ್ಕ ಹಾಗೂ ನೀರಿನ ಪೂರೈಕೆ ಕೊರತೆ: ದುಷ್ಕರ್ಮಿಗಳಿಂದ ಬಾಗಿಲು ಧ್ವಂಸ
Last Updated 20 ಮಾರ್ಚ್ 2017, 7:19 IST
ಅಕ್ಷರ ಗಾತ್ರ

ಬಾಗಲಕೋಟೆ: ಬಯಲು ಮಲ ವಿಸರ್ಜನೆ ತಪ್ಪಿಸಿ ಸಾರ್ವಜನಿಕ ಸ್ಥಳದಲ್ಲಿ ಮಲ–ಮೂತ್ರ ವಿಸರ್ಜನೆ ತಡೆಯಲು ಇಲ್ಲಿನ ನಗರದ ವಿವಿಧೆಡೆ ನಗರಸಭೆ ಆಡಳಿತ ಅಳವಡಿಸಿದ್ದ ಸಿದ್ಧಶೌಚಾಲಯಗಳು ನಿರ್ವಹಣೆ ಕೊರತೆಯಿಂದ ಹಾಳಾಗಿವೆ.

ಕೆಲವೆಡೆ ಶೌಚಾಲಯಗಳನ್ನು ನೆಪ ಮಾತ್ರಕ್ಕೆ ಇರಿಸಲಾಗಿದೆ. ಅವುಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸದ ಕಾರಣ ಬಳಕೆಯಾಗುತ್ತಿಲ್ಲ. ಇನ್ನೂ ಕೆಲವು ಕಡೆ ನೀರಿನ ವ್ಯವಸ್ಥೆ ಇಲ್ಲ. ಜೊತೆಗೆ ಶೌಚಾಲಯಗಳ ಬಾಗಿಲು ಹಾಗೂ ಒಳಗಿನ ಪರಿಕರಗಳನ್ನು ದುಷ್ಕರ್ಮಿಗಳು ಒಡೆದು ಹಾಕಿದ್ದಾರೆ.

ವರ್ಷದ ಹಿಂದೆ ಅಳವಡಿಕೆ: ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಒಳಗೊಂಡ ₹ 35 ಸಾವಿರ ವೆಚ್ಚದ ಸಿದ್ಧ ಶೌಚಾಲಯಗಳನ್ನು ವರ್ಷದ ಹಿಂದೆ ಅಳವಡಿಸಲಾಗಿದೆ. ನಗರಸಭೆ ಕಚೇರಿ, ಜಿಲ್ಲಾ ಆಸ್ಪತ್ರೆ, ಬಸ್‌ ನಿಲ್ದಾಣ, ರೈಲು ನಿಲ್ದಾಣ ರಸ್ತೆ, ಜಿಲ್ಲಾಡಳಿತ ಭವನ, ತಹಶೀಲ್ದಾರ್ ಕಚೇರಿ, ಕಾಯಿಪಲ್ಲೆ ಮಾರ್ಕೆಟ್, ಕೆರೂಡಿ, ದಡ್ಡೇನವರ ದವಾಖಾನೆ, ಡ್ರೀಮ್ಸ್ ಹೋಟೆಲ್ ಬಳಿಯ ರಸ್ತೆಯ ಆಸುಪಾಸು, ಸ್ಮಶಾನ ಹೀಗೆ ಸಾರ್ವಜನಿಕರಿಗೆ ಅಗತ್ಯವಿರುವ 32 ಕಡೆ ಈ ಶೌಚಾಲಯಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಮಲವಿಸರ್ಜನೆ ಹಾಗೂ ಶೌಚಕ್ಕೂ ಅವಕಾಶವಿದೆ.

ಬೆದರು ಬೊಂಬೆಗಳು: ಸಿದ್ಧಶೌಚಾಲಯಗಳು ನಗರದ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಬೆದರು ಬೊಂಬೆಗಳಂತೆ ಭಾಸವಾಗುತ್ತಿವೆ. ಆದರೆ ಅವುಗಳ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆದಿಲ್ಲ. ಜೊತೆಗೆ ನಿರ್ವಹಣೆ ಸರಿಯಾಗಿ ಇಲ್ಲ ಎಂದು ವಿದ್ಯಾಗಿರಿ ನಿವಾಸಿ ರವೀಂದ್ರ ಹೊಸಮಠ ಹೇಳುತ್ತಾರೆ.

ಸಿದ್ಧ ಶೌಚಾಲಯಗಳನ್ನು ಖರೀದಿಸಿ ತಂದು ಸಾರ್ವಜನಿಕ ಸ್ಥಳದಲ್ಲಿ ಇಟ್ಟ ನಗರಸಭೆ ಆಡಳಿತ ಅವುಗಳ ರಕ್ಷಣೆ ಹಾಗೂ ನಿರ್ವಹಣೆಯ ಕೆಲಸ ಮಾತ್ರ ಮರೆತುಬಿಟ್ಟಿದೆ. ಅವು ಇದ್ದೂ ಬಳಕೆಗೆ ಇಲ್ಲದಂತಾಗಿವೆ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಇದು ಜನರ ಆಸ್ತಿ: ಬಯಲು ಮಲವಿಸರ್ಜನೆ ತಪ್ಪಿಸಿ ಊರಿನ ಆರೋಗ್ಯ ಕಾಪಾಡಲು ಸಿದ್ಧ ಶೌಚಾಲಯಗಳನ್ನು ಅಳವಡಿಸಲಾಗಿದೆ. ದುಷ್ಕರ್ಮಿಗಳು ಕೆಲವು ಕಡೆ ಒಡೆದು ಹಾಕಿದ್ದಾರೆ. ಕೆಲವೆಡೆ ರಾತ್ರಿ ವೇಳೆ ಅನೈತಿಕ ಚಟುವಟಿಕೆಗೂ ಬಳಕೆಯಾಗುತ್ತಿವೆ. ಇದು ನಮ್ಮ ಆಸ್ತಿ ಎಂಬ ಮನೋಭಾವನೆ ಜನರಲ್ಲೂ ಬರಬೇಕಿದೆ. ಅವರೂ ಕೂಡ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಹೊಸಮಠ ಕಿವಿಮಾತು ಹೇಳುತ್ತಾರೆ.

‘ನಗರಸಭೆ ಆಡಳಿತ ಹಾಳಾಗಿರುವ ಶೌಚಾಲಯಗಳನ್ನು ಕೂಡಲೇ ದುರಸ್ತಿಗೊಳಿಸಲಿ. ಒಳಚರಂಡಿ ಸಂಪರ್ಕ ಕಲ್ಪಿಸುವ ಮೂಲಕ ಸಾರ್ವಜನಿಕರ ಬಳಕೆಗೆ ದೊರೆಯುವಂತೆ ಮಾಡಲಿ ಎಂದು ಆಗ್ರಹಿಸುವ ಅವರು, ನಿರ್ಜನ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಮೂಲಕ ಸಾರ್ವಜನಿಕ ಆಸ್ತಿ ರಕ್ಷಣೆಗೂ ಮುಂದಾಗಲಿ’ಎಂದು ಸಲಹೆ ನೀಡುತ್ತಾರೆ.

ನಮ್ಮ ಗಮನಕ್ಕೂ ಬಂದಿದೆ: ‘ಶೌಚಾಲಯಗಳ ನಿರ್ವಹಣೆ ನಮ್ಮದೇ ಹೊಣೆ. ಕೆಲವು ಕಡೆ ದುಷ್ಕರ್ಮಿಗಳು ಅವುಗಳನ್ನು ಒಡೆದು ಹಾಕಿರುವುದು ನಮ್ಮ ಗಮನಕ್ಕೂ ಬಂದಿದೆ. ಇನ್ನು ಮುಂದೆ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗುವುದು’ ಎನ್ನುತ್ತಾರೆ ನಗರಸಭೆ ಪರಿಸರ ಅಧಿಕಾರಿ ಹನುಮಂತ ಕಲಾದಗಿ.

*
ನಗರದ ಕೆಲವು ಕಡೆ ಸಿದ್ಧ ಶೌಚಾಲಯಗಳನ್ನು ಒಡೆದು ಹಾಕಲಾಗಿದೆ. ಶೀಘ್ರ ಅವುಗಳನ್ನು  ಸ್ಥಳಾಂತರಿಸಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು.
-ಹನುಮಂತ ಕಲಾದಗಿ,
ನಗರಸಭೆ ಪರಿಸರ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT