ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಲೇವಾರಿಯಾಗದ ಕಸ, ಸೊಳ್ಳೆಗಳ ಕಾಟ

‘ಸಿಎಂಸಿ ಕಾಲೊನಿ’ಗೇ ಇಲ್ಲ ಮೂಲಸೌಕರ್ಯ!
Last Updated 20 ಮಾರ್ಚ್ 2017, 7:50 IST
ಅಕ್ಷರ ಗಾತ್ರ

ಬೀದರ್:  ನಗರಸಭೆಯೇ ನಿರ್ಮಿಸಿರುವ ನಗರದ ಮೈಲೂರು ಸಮೀಪದ ಸಿಎಂಸಿ ಕಾಲೊನಿ ಮೂಲಸೌಕರ್ಯಗಳಿಂದ ವಂಚಿತವಾಗಿದೆ.
ಕಾಲೊನಿ ಜನರಿಗೆ ರಸ್ತೆ, ಚರಂಡಿ, ಕುಡಿಯುವ ನೀರು, ದಾರಿದೀಪ ಮತ್ತಿತರ ಸೌಕರ್ಯಗಳು ಈಗಲೂ ಮರೀಚಿಕೆಯಾಗಿವೆ.

ಪ್ರಸ್ತುತ ಸಣ್ಣಪುಟ್ಟ ಗ್ರಾಮಗಳಲ್ಲಿಯೂ ಸಿಸಿ ರಸ್ತೆ, ಚರಂಡಿಗಳು ನಿರ್ಮಾಣಗೊಳ್ಳುತ್ತಿವೆ. ಆದರೆ, ಮೂರು ದಶಕಗಳ ಹಿಂದೆ ನಗರಸಭೆಯೇ ಬಡವರಿಗೆ ನಿವೇಶನ ಒದಗಿಸಿ ನಿರ್ಮಿಸಿದ ಕಾಲೊನಿಗೆ ಮಾತ್ರ ಆ ಭಾಗ್ಯ ಇಲ್ಲವಾಗಿದೆ.

ವಾರ್ಡ್ ಸಂಖ್ಯೆ  27 ಮತ್ತು 28 ರ ವ್ಯಾಪ್ತಿಯಲ್ಲಿನ ಸಿಎಂಸಿ ಕಾಲೊನಿಯ ಮೈಲೂರಿನಿಂದ ಗುಂಪಾಗೆ ಸಂಪರ್ಕ ಕಲ್ಪಿಸುವ ರಿಂಗ್ ರಸ್ತೆಯಲ್ಲಿರುವ ಆಬೆದಿನ್ ಮಸೀದಿ ಹಿಂಬದಿಯ ಪ್ರದೇಶ, ಸಿದ್ಧಾರ್ಥ ಗಾರ್ಡ್‌ನ ಪಶ್ಚಿಮ ಭಾಗ ಸೇರಿದಂತೆ ಕಾಲೊನಿಯ ವಿವಿಧೆಡೆ ಸರಿಯಾದ ರಸ್ತೆ ಇಲ್ಲದ ಕಾರಣ ನಾಗರಿಕರು ತೊಂದರೆ ಅನುಭವಿಸಬೇಕಾಗಿದೆ. ಮಳೆಗಾಲದಲ್ಲಿ ಜನ ಓಡಾಟಕ್ಕೆ ಸಮಸ್ಯೆ ಎದುರಿಸಬೇಕಾಗಿದೆ.

ಕಾಲೊನಿಯ ವಿವಿಧೆಡೆ ಚರಂಡಿ ಇಲ್ಲದೇ ಇರುವುದರಿಂದ ಹೊಲಸು ನೀರು ರಸ್ತೆ ಮೇಲೆಯೇ ನಿಂತುಕೊಳ್ಳುತ್ತಿದೆ. ನಗರಸಭೆ ಸಿಬ್ಬಂದಿ ಕಸ ವಿಲೇವಾರಿ ಮಾಡುತ್ತಿಲ್ಲ. ಮಾಲಿನ್ಯದಿಂದಾಗಿಸೊಳ್ಳೆಗಳ ಕಾಟ ವಿಪರೀತವಾಗಿದೆ. ಸಾಂಕ್ರಾಮಿಕ ರೋಗಗಳು ಹರಡಬಹುದಾದ ಭೀತಿ ಉಂಟಾಗಿದೆ ಎಂದು ಹೇಳುತ್ತಾರೆ ಕಾಲೊನಿಯ ಪವನಕುಮಾರ.

ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳೇ ಹೆಚ್ಚಿರುವ ಕಾಲೊನಿಯಲ್ಲಿ ಏನೇನೂ ಸೌಕರ್ಯಗಳಿಲ್ಲ. ಸಮಸ್ಯೆಗಳ ನಡುವೆ ಜನ ಬದುಕು ಸಾಗಿಸಬೇಕಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.  ಕಳೆದ ಬಾರಿ ವಿಧಾನಸಭೆಯ ಉಪ ಚುನಾವಣೆ ಇತ್ತು.

ರಹೀಂಖಾನ್‌ ಅವರು ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಿದ್ದರು. ಚುನಾವಣೆಯಲ್ಲಿ ಗೆದ್ದ ಮೇಲೆ ಅವರು ಮುಖತೋರಿಸಿಲ್ಲ. ನಗರಸಭೆ ವತಿಯಿಂದ ಕಾಲೊನಿಗೆ ವಿವಿಧ ಸೌಕರ್ಯ ಕಲ್ಪಿಸಿ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸುತ್ತಾರೆ ಕಾಲೊನಿಯ ಮಹಿಳೆಯರು.

‘ಅಗತ್ಯ  ಕ್ರಮ’
ನಗರೋತ್ಥಾನ ಯೋಜನೆ ಅಡಿಯಲ್ಲಿ ನಗರದ ಕೆಲ ಪ್ರದೇಶದಲ್ಲಿ ಈಗಾಗಲೇ ರಸ್ತೆ ಮತ್ತಿತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.  ಸಿಎಂಸಿ ಕಾಲೊನಿಗೂ ಅಗತ್ಯ ಸೌಕರ್ಯ ಒದಗಿಸಲಾಗುವುದು ಎನ್ನುತ್ತಾರೆ ನಗರಸಭೆ ಆಯುಕ್ತ ನರಸಿಂಹಮೂರ್ತಿ.

ನೀರಿಲ್ಲದ ಟ್ಯಾಂಕ್‌ಗಳು
ರಡು ಕಿರು ನೀರು ಸರಬರಾಜು ಟ್ಯಾಂಕ್‌ಗಳಲ್ಲಿ ಇವತ್ತಿಗೂ ಹನಿ ನೀರೂ ಸಂಗ್ರಹವಾಗಿಲ್ಲ. ಕಾಲೊನಿಯ ಆಬೆದಿನ್ ಮಸೀದಿಯ ಹಿಂಬದಿಯ ಪ್ರದೇಶದಲ್ಲಿ ನಾಲ್ಕು ವರ್ಷಗಳ ಹಿಂದೆ ಕಿರು ನೀರು ಸರಬರಾಜು ಟ್ಯಾಂಕ್ ಕಟ್ಟಲಾಗಿದೆ. ಫಹಿಮ್‌ ಅವರ ಕಿರಾಣಾ ಅಂಗಡಿ ಎದುರು ಇನ್ನೊಂದು ಟ್ಯಾಂಕ್ ನಿರ್ಮಿಸಿ ಎಂಟು ತಿಂಗಳು ಕಳೆದಿದೆ. ಆದರೆ, ಎರಡಕ್ಕೂ ಕೊಳವೆಬಾವಿಯಿಂದ ನೀರಿನ ಸಂಪರ್ಕ ಕಲ್ಪಿಸಿಲ್ಲ ಎಂದು ದೂರುತ್ತಾರೆ ಕಾಲೊನಿ ಜನ.

*
ನಗರೋತ್ಥಾನ ಯೋಜನೆ ಅಡಿಯಲ್ಲಿ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಿಎಂಸಿ ಕಾಲೊನಿಗೂ ಅಗತ್ಯ ಸೌಕರ್ಯ ಒದಗಿಸಲಾಗುವುದು.
-ನರಸಿಂಹಮೂರ್ತಿ,
ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT