ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡಕ್ಕೆ ಮಣಿದು ತಾಲ್ಲೂಕುಗಳ ರಚನೆ: ಪಾಟೀಲ

ಕೆಂಭಾವಿ ತಾಲ್ಲೂಕು ಘೋಷಣೆಗೆ ಆಗ್ರಹಿಸಿ ಸತ್ಯಾಗ್ರಹ ಆರಂಭ
Last Updated 20 ಮಾರ್ಚ್ 2017, 8:37 IST
ಅಕ್ಷರ ಗಾತ್ರ

ಕೆಂಭಾವಿ: ಕೆಂಭಾವಿಯನ್ನು ತಾಲ್ಲೂಕು ಕೇಂದ್ರವಾಗಿ ಮಾಡುವ ವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಶಾಸಕ ಗುರು ಪಾಟೀಲ ಶಿರವಾಳ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಭಾನುವಾರ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ಸರ್ಕಾರ ಘೋಷಣೆ ಮಾಡಿರುವ ತಾಲ್ಲೂಕುಗಳಲ್ಲಿ ಹಲವಾರು ತಾಲ್ಲೂಕುಗಳು ಗ್ರಾಮ ಪಂಚಾಯಿತಿಗಳಾಗಿವೆ. ರಾಜಕೀಯ ಒತ್ತಡದಿಂದ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ ಕೆಂಭಾವಿಯಂತಹ  ಪುರಸಭೆ ಹೊಂದಿರುವ ಪ್ರದೇಶಗಳಿಗೆ ಅನ್ಯಾಯವಾಗಿದೆ ಎಂದರು.

ದಶಕಗಳಿಂದ ಜನತೆ ತಾಲ್ಲೂಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಕೆಂಭಾವಿ ತಾಲ್ಲೂಕು ಕೇಂದ್ರವಾಗಲು ಎಲ್ಲ ಅರ್ಹತೆಗಳನ್ನು ಹೊಂದಿದೆ. ಈ ಕುರಿತು ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದಾರೆ. ಆದರೆ, ಮುಖ್ಯಮಂತ್ರಿ ತಮಗೆ  ಬೇಕಾದಂತಹ ಪ್ರದೇಶಗಳನ್ನು ಮಾತ್ರ ತಾಲ್ಲೂಕುಗಳಾಗಿ ಘೋಷಣೆ ಮಾಡಿದ್ದಾರೆ ಎಂದು ಅಪಾದಿಸಿದರು.

ಮುಖ್ಯಮಂತ್ರಿ ಮುಂಗಡ ಪತ್ರದಲ್ಲಿ ಭೌಗೋಳಿಕ ಹಾಗೂ ಆಡಳಿತಾತ್ಮಕ ಅಗತ್ಯತೆ ಪರಿಗಣಿಸಿ ಹೊಸ ತಾಲ್ಲೂಕುಗಳನ್ನು ರಚನೆ ಮಾಡಲಾಗುವುದು ಎಂದು ತಿಳಿಸಿದ್ದಾರೆಯೇ ಹೊರತು ಹೊಸ ತಾಲ್ಲೂಕುಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಇದು ಬರೀ ಘೋಷಣೆ ಮಾತ್ರ ಎಂದರು.

ಯಾದಗಿರಿ ಜಿಲ್ಲೆ ಸತತವಾಗಿ ನಿರ್ಲಕ್ಷಕ್ಕೆ ಒಳಪಟ್ಟಿದೆ. ಕಲಂ 371(ಜೆ) ಅನ್ವಯ ಅತಿ ಹಿಂದುಳಿದ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೊಡಬೇಕಾದ ಸರ್ಕಾರ ಜನರ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಕೆಂಭಾವಿಯು ಆಡಳಿತಾತ್ಮಕವಾಗಿ, ಭೌಗೋಳಿಕವಾಗಿ ಹಾಗೂ ಆರ್ಥಿಕವಾಗಿ ತಾಲ್ಲೂಕು ಆಗಲು ಎಲ್ಲ ಅರ್ಹತೆ ಹೊಂದಿದೆ. ಅಧಿವೇಶನದಲ್ಲಿ ಈ ಕುರಿತು ಮುಖ್ಯಮಂತಿ ಗಮನ ಸೆಳೆಯುತ್ತೇನೆ ಎಂದರು.

ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಸಿದ್ದನಗೌಡ ಪೋಲೀಸ ಪಾಟೀಲ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ 7 ತಾಲ್ಲೂಕುಗಳನ್ನು 15 ರಿಂದ 20 ಕಿ.ಮೀ ಅಂತರದಲ್ಲಿ ಮಾಡಿದ್ದಾರೆ. ಸರ್ಕಾರವೇ ರಚಿಸಿದ ಯಾವುದೇ ಸಮಿಯ ವರದಿಯನ್ನು ಪರಿಗಣಿಸದೆ 9ರಿಂದ 10 ಸಾವಿರ ಜನಸಂಖ್ಯೆ ಇರುವ ಗ್ರಾಮಗಳಿಗೆ ತಾಲ್ಲೂಕು ಕೇಂದ್ರ ಘೋಷಿಸಲಾಗಿದೆ. ಮಂಗಳವಾರದಿಂದ ಕೆಂಭಾವಿ ಸೇರಿದಂತೆ ಸುತ್ತಲಿನ ಜನತೆ  ಉಪವಾಸ ನಡೆಸಲಿದ್ದಾರೆ ಎಂದರು.

ಹಿರಿಯರಾದ ಲಿಂಗನಗೌಡ ಮಾಲಿ ಪಾಟೀಲ, ಮಶಾಕಸಾಬ್ ಸಾಸನೂರ, ವಾಮನರಾವ ದೇಶಪಾಂಡೆ, ಸಂಗಣ್ಣ ತುಂಬಗಿ, ಹಣಮಂತ್ರಾಯ, ರಾಜಶೇಖರ ಗೂಗಲ್, ನಗನೂರು ಗ್ರಾ.ಪಂ ಅಧ್ಯಕ್ಷ ಶಾಂತಣ್ಣ ಚನ್ನೂರ, ಮಹಿಪಾಲರೆಡ್ಡಿ ಡಿಗ್ಗಾವಿ, ಪ್ರಕಾಶ ಸೊನ್ನದ ಇದ್ದರು.

*
ಸತ್ಯಾಗ್ರಹಕ್ಕೆ ನನ್ನ ಬೆಂಬಲವಿದೆ. ಮುಂದೆ ನಡೆಯುವ ಬಜೆಟ್ ಮೇಲಿನ ಚರ್ಚೆಯಲ್ಲಿ ಕೆಂಭಾವಿಯನ್ನು ತಾಲ್ಲೂಕು ಕೆಂದ್ರವನ್ನಾಗಿ ಮಾಡಲು ಒತ್ತಾಯಿಸುವೆ.
-ಗುರು ಪಾಟೀಲ ಶಿರವಾಳ,
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT