ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿಗಳನ್ನು ಮೇಯಿಸುವ ಕಾಯಕ, ಫಲವತ್ತಾದ ಮಣ್ಣು

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಕುರಿಗಾಯಿಗಳ ದಂಡು
Last Updated 20 ಮಾರ್ಚ್ 2017, 8:54 IST
ಅಕ್ಷರ ಗಾತ್ರ

ವಿಜಯಪುರ: ನೆರೆಯ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ  ಕುರಿಗಾಯಿಗಳು ತಮ್ಮ ಕುರಿಗಳೊಂದಿಗೆ ತಾಲ್ಲೂಕಿಗೆ ವಲಸೆ ಬಂದಿದ್ದಾರೆ. ಕುರಿಗಳು ಉಚಿತವಾಗಿ ಮೇವು ತಿನ್ನುತ್ತಿಲ್ಲ. ಅವು ಇಲ್ಲಿನ ರೈತರ ಜಮೀನುಗಳನ್ನು ಫಲವತ್ತುಗೊಳಿಸುವ ಮೂಲಕ ತಮಗೆ ಉಳಿದುಕೊಳ್ಳಲು ಆಸರೆ ನೀಡಿರುವ ಜಮೀನು ಮಾಲೀಕರ ಋಣ ತೀರಿಸುತ್ತಿವೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಶಿವಣ್ಣ ಮತ್ತು 20 ಮಂದಿ ತಮ್ಮ ಎರಡು ಸಾವಿರ ಕುರಿಗಳು,  8 ಕಾವಲು ನಾಯಿಗಳು, ಸಾಮಾನು ಸರಂಜಾಮು ಸಾಗಿಸಲು 20 ಕತ್ತೆಗಳೊಂದಿಗೆ ದಂಡಿಗಾನಹಳ್ಳಿಯ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ರಾತ್ರಿಯ ವೇಳೆ ಬೀಡು ಬಿಟ್ಟು ಕುರಿಗಳನ್ನು ಮೇಯಿಸುವಂತಹ ಕಾಯಕವನ್ನು ಮಾಡುತ್ತಿದ್ದಾರೆ.

ನೆರೆಯ ತುಮಕೂರು ಜಿಲ್ಲೆಯಲ್ಲಿಯೂ ಕುರಿಗಳಿಗೆ ನೀರು, ಮೇವಿನ ಸಮಸ್ಯೆ ಉಂಟಾದಾಗ ಪ್ರತಿವರ್ಷ ಜಿಲ್ಲೆಯನ್ನು ದಾಟಿ ಈ ಭಾಗಕ್ಕೆ ಬರುವುದು ರೂಢಿಯಾಗಿದೆ. ಜಿಲ್ಲೆಯ ಗಡಿ ಸಮೀಪದ ಗ್ರಾಮಗಳಲ್ಲಿ ಮಾತ್ರವಲ್ಲ, ಸುಮಾರು ಆರು ತಿಂಗಳ ಕಾಲ ಮಳೆ ಬರುವವರೆಗೂ  ಮೂರ್ನಾಲ್ಕು  ಜಿಲ್ಲೆಗಳನ್ನು ಸುತ್ತುತ್ತಾ ಬಂದು ಕುರಿ ಮೇಯಿಸುತ್ತಾರೆ.

ಕುರಿಗಳು ಎರಡು ಸಾವಿರ ಸಂಖ್ಯೆಯಲ್ಲಿರುವುದರಿಂದ ಮೂರ್ನಾಲ್ಕು ತಂಡಗಳನ್ನಾಗಿ ಮಾಡಿಕೊಂಡಿದ್ದಾರೆ. ಪ್ರತಿಯೊಂದು ತಂಡದವರು ಯಾವುದಾದರೂ ಒಂದು ಹಳ್ಳಿಯನ್ನು ಆರಿಸಿಕೊಂಡು ಜಮೀನಿನ ಒಡೆಯನೊಂದಿಗೆ ಮಾತನಾಡಿ ರಾತ್ರಿ ಹೊತ್ತು ನೆಲೆಸುತ್ತಾರೆ.

  ರೈತರೂ ತಮ್ಮ ಹೊಲಗದ್ದೆಗಳಿಗೆ ಬಳಕೆ ಮಾಡುವಂತಹ ಕೊಟ್ಟಿಗೆ ಗೊಬ್ಬರಕ್ಕೆ ಒಂದು ಟ್ರ್ಯಾಕ್ಟರ್ ಲೋಡಿಗೆ ₹ 4000 ಗಳನ್ನು ನೀಡಿ ಖರೀದಿ ಮಾಡಬೇಕಾಗಿರುವುದರಿಂದ ಕುರಿಗಾಯಿಗಳಿಗೆ ತಮ್ಮ ಹೊಲಗಳಲ್ಲಿ ಜಾಗ ಕೊಟ್ಟು ರಾತ್ರಿಯ ಊಟ ಹಾಗೂ ಬೆಳಗಿನ ತಿಂಡಿಯ ಖರ್ಚನ್ನು ರೈತರೇ ನೋಡಿಕೊಳ್ಳುತ್ತಿದ್ದಾರೆ. ಊಟದ ಜೊತೆಗೆ ಒಂದಿಷ್ಟು ಹಣ ನೀಡಿ ಮಂದೆ ಹಾಕಿಸುವುದುಂಟು.

ಕುರಿಹಿಂಡುಗಳೊಂದಿಗೆ ಸಾಕು ನಾಯಿಯನ್ನೂ ಕರೆದುಕೊಂಡು ಬಂದಿದ್ದಾರೆ. ಕುರಿಗಳನ್ನು ನಾಯಿಗಳೇ ನಿಯಂತ್ರಿಸುತ್ತಿವೆ. ಬೆಳಿಗ್ಗೆಯಿಂದ ಸಂಜೆವರೆಗೆ ಕುರಿಗಾಯಿಗಳು ಒಟ್ಟಾಗಿ ತಮ್ಮ ಕುರಿಗಳನ್ನು ಒಂದೆಡೆ ಮೇಯಿಸಿಕೊಂಡಿರುತ್ತಾರೆ.

ರಾತ್ರಿಯ ವೇಳೆಯಲ್ಲಿ ಮರಿಗಳನ್ನು ಸಂರಕ್ಷಣೆ ಮಾಡಲು  ಬಲೆಯ ರೀತಿಯಲ್ಲಿ ಕೂಡಿಡಲು ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಈ ಕುರಿಗಾಯಿಗಳ ತಂಡದಲ್ಲಿ ಮಹಿಳೆಯರೂ  ಮನೆಗಳನ್ನು ಬಿಟ್ಟು ಮಕ್ಕಳೊಂದಿಗೆ ಕುರಿಗಳ ಸಂಗಡ ಬಂದಿದ್ದಾರೆ.

ಈ ಕುರಿಗಾಯಿಗಳು ರೈತನ ಜಮೀನಲ್ಲಿ ರಾತ್ರಿ ಹೊತ್ತು ಕುರಿಗಳನ್ನು ಮಂದೆ ಹಾಕುತ್ತಾರೆ. ನೂರಾರು ಕುರಿಗಳು ಹಾಕುವ ಹಿಕ್ಕೆಯಿಂದ ಜಮೀನು ಫಲವತ್ತಾಗುತ್ತದೆ.   ‘ನಾವು ನಾಲ್ಕು ತಂಡಗಳಾಗಿ ಒಟ್ಟು 20 ಮಂದಿ ಬಂದಿದ್ದೇವೆ. ನೆರೆಯ ತುಮಕೂರು ಜಿಲ್ಲೆಯ ಮಧುಗಿರಿಯಿಂದ  ಹೊರಟು ಎರಡು ತಿಂಗಳುಗಳಾದವು.

ದಾಬಸ್ ಪೇಟೆ, ದೊಡ್ಡಬಳ್ಳಾಪುರ, ಚಪ್ಪರಕಲ್ಲು, ದೇವನಹಳ್ಳಿ, ಮೂಲಕ ಈ ಭಾಗಕ್ಕೆ ಬಂದಿದ್ದೇವೆ. ಒಂದೊಂದು ಊರಿನಲ್ಲಿ ಒಂದು ವಾರಗಳ ಕಾಲ ಮಂದೆ ಹಾಕಿರುತ್ತೇವೆ. ಜಮೀನಿನವರು ನಮಗೆ 5 ಕೆ.ಜಿ ಅಕ್ಕಿ ಮತ್ತು ₹ 500 ಕೊಡುತ್ತಾರೆ. ಇಲ್ಲಿಂದ ಮುಂದೆ ವಿಜಯಪುರ, ದೇವನಹಳ್ಳಿ, ದೊಡ್ಡಬಳ್ಳಾಪುರ ಹೀಗೆ ಸಾಗಿ ಮಳೆಗಾಲ ಪ್ರಾರಂಭವಾಗುವಷ್ಟರಲ್ಲಿ ನಮ್ಮೂರಿನ ಸಮೀಪಕ್ಕೆ ಹೋಗುತ್ತೇವೆ’ ಎನ್ನುತ್ತಾರೆ.

‘ದೊಡ್ಡ ಮಕ್ಕಳನ್ನು ಊರಲ್ಲೇ ಬಿಟ್ಟು ಬರುತ್ತೇವೆ. ಆರು ತಿಂಗಳು ನಮ್ಮೂರಲ್ಲಿದ್ದರೆ, ಆರು ತಿಂಗಳು ಅಲೆಮಾರಿಗಳಾಗಿರುತ್ತೇವೆ’ ಎಂದು ಕುರಿ ಮಂದೆಯೊಂದಿಗೆ ಬಂದಿರುವ ಶಿವಣ್ಣ.

ತುಮಕೂರು ಹಾಗೂ ಆಂಧ್ರ ಪ್ರದೇಶಗಳ ಕಡೆಯಿಂದ ಕುರಿಗಳು ಬಂದರೆ ಇಲ್ಲಿನ ರೈತರು ಮುಗಿಬಿದ್ದು ತಮ್ಮ ಜಮೀನಲ್ಲಿ ಮಂದೆ ಹಾಕಿಸುತ್ತಾರೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬರುವ ಕುರಿಗಳು ಈ ಬಾರಿ ಬೇಗ ಬಂದಿವೆ, ತಮ್ಮ ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಮೇವಿನ ಪರಿಸ್ಥಿತಿ ಸುಧಾರಿಸುವವರೆಗೆ ಉಳಿದುಕೊಳ್ಳುತ್ತವೆ.

ಆಂಧ್ರಪ್ರದೇಶದಿಂದ ಬರುವಂತಹ ಕುರಿಗಾಯಿಗಳೂ  ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿ ವರ್ಷ ಬರುವುದರಿಂದ ಬಹುತೇಕ ತಂಡಗಳು  ಇಲ್ಲಿನ ಗ್ರಾಮೀಣ ಜನರಿಗೆ ಪರಿಚಿತರಾಗಿರುತ್ತಾರೆ. ಭಾಷೆಯ ತೊಡಕು ಇಲ್ಲದ ಕಾರಣ ಇಲ್ಲಿನ ಜನರೊಂದಿಗೆ ಬೆರೆಯುತ್ತಾರೆ. 500 ಕುರಿಗಳ ಹಿಂಡು ಒಂದು ರಾತ್ರಿ ಒಂದು ತೋಟದಲ್ಲಿ ಬೀಡು ಬಿಟ್ಟರೆ ಕನಿಷ್ಠ ಒಂದು ಎತ್ತಿನ ಗಾಡಿಯಷ್ಟು ಕುರಿ ಹಿಕ್ಕೆ ತೋಟಕ್ಕೆ ಬೀಳಲಿದೆ’ ಎಂದು ರೈತ ಸುರೇಶ್ ಅವರು ಹೇಳಿದರು.

*
ಸಾಕಷ್ಟು ಕುರಿಗಳು ಮರಿ ಹಾಕುತ್ತವೆ. ಸಿಕ್ಕಿದ್ದನ್ನು ತಿಂದು ಕೊಬ್ಬುತ್ತವೆ. ಕುರಿಗಾಯಿಗಳಿಗೆ ಒಳ್ಳೆ ಲಾಭ ತರುತ್ತವೆ. ನಮ್ಮ ತೋಟಗಳನ್ನು ಫಲವತ್ತುಗೊಳಿಸಿ ಹೋಗುತ್ತವೆ.
-ವೆಂಕಟೇಶಪ್ಪ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT