ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಯೂ ಇಲ್ಲ; ಕೂಲಿಯೂ ಸಿಗುತ್ತಿಲ್ಲ

ಬರದ ಬವಣೆಯಿಂದ ಉದ್ಯೋಗ ಅರಸಿ ಗುಳೆ ಹೋಗುತ್ತಿರುವ ರೈತರು, ಕೃಷಿ ಕೂಲಿ ಕಾರ್ಮಿಕರು
Last Updated 20 ಮಾರ್ಚ್ 2017, 9:20 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಾದ್ಯಂತ ಬೆಳೆ ನಷ್ಟ, ಸಾಲದ ಶೂಲ, ಕುಡಿಯುವ ನೀರಿಗೆ ತತ್ವಾರ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಜೊತೆಗೆ ಕೂಲಿ ಸಿಗದಿರುವುದು ಸವಾಲಾಗಿ ಪರಿಣಮಿಸಿದೆ. ಗ್ರಾಮೀಣ ಭಾಗದ ಕೆಲ ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಗುಳೆ ಹೋಗುತ್ತಿದ್ದಾರೆ.

ಫಸಲು ನಾಶವಾಗಿರುವುದರಿಂದ ಕೆಲವರಿಗೆ ಬಿತ್ತನೆಯ ಅಸಲು ಕೂಡ ಕೈಸೇರಿಲ್ಲ. ನಷ್ಟವಾದ ಬೆಳೆಗೆ ಇದುವರೆಗೆ ಪರಿಹಾರ ಸಿಗದಿರುವುದು ರೈತರ ಜೀವನವನ್ನು ದುಸ್ತರಗೊಳಿಸಿದೆ. ಸಾಲ ಮಾಡಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ವೈಫಲ್ಯದಿಂದಾಗಿ ಜಮೀನುಗಳಲ್ಲಿ ಕೂಲಿ ಇಲ್ಲದಿರುವುದರಿಂದ ಕೃಷಿ ಕೂಲಿ ಕಾರ್ಮಿಕರಿಗೆ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಸಿಗುತ್ತಿಲ್ಲ.

ವಿವಿಧ ತಾಲ್ಲೂಕುಗಳಿಂದ ನಿತ್ಯ ಸಾವಿರಾರು ಮಂದಿ ಉದ್ಯೋಗ ಅರಸಿ ನಗರಗಳಿಗೆ ಎಡತಾಕುತ್ತಿದ್ದಾರೆ. ಕೆಲವರು ಮೇವು ಹುಡುಕಿಕೊಂಡು ಜಾನುವಾರು ಸಮೇತ ಗುಳೆ ಹೋಗುತ್ತಿದ್ದಾರೆ.

ಮೈಸೂರು ಹಾಗೂ ನಂಜನಗೂಡು ತಾಲ್ಲೂಕಿನ ಕೆಲ ರೈತರು ತಮ್ಮ ಜಮೀನು ಗಳನ್ನು ಕೃಷಿಯೇತರ ಚಟುವಟಿಕೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ರಿಯಲ್ ಎಸ್ಟೇಟ್‌ನ ಆಮಿಷ ಹಾಗೂ ಬರದ ಪರಿಣಾಮ ತೀವ್ರವಾಗಿರುವುದು ಕೃಷಿ ಭೂಮಿ ಮಾರಲು ರೈತರಿಗೆ ನೆಪವಾಗಿ ಪರಿಣಮಿಸಿದೆ.

ನರೇಗಾ ಸಮಸ್ಯೆ: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ ಸರಿಯಾಗಿ ಅನುಷ್ಠಾನವಾಗ ದಿರುವುದು ಸಮಸ್ಯೆಗೆ ಕಾರಣ. ಯೋಜನೆಯಡಿ ಕೈಗೊಳ್ಳುವ ಕೆಲಸಗಳಿಗೆ ಸಾಮಗ್ರಿ ಪೂರೈಸಿದವರಿಗೆ ಸಕಾಲದಲ್ಲಿ ಹಣ ನೀಡುತ್ತಿಲ್ಲ.

ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ₹ 2 ಕೋಟಿ ಮೊತ್ತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳ ಬೇಕು ಎಂಬ ಸೂಚನೆ ಇದೆ. ಉದಾ ಹರಣೆಗೆ ಎಚ್‌.ಡಿ.ಕೋಟಿ ತಾಲ್ಲೂಕಿನಲ್ಲಿ 39 ಗ್ರಾಮ ಪಂಚಾಯಿತಿಗಳಿವೆ. ಇಲ್ಲಿ ₹ 78 ಕೋಟಿ ಖರ್ಚು ಮಾಡಬಹುದು.

ಸ್ಮಶಾನ, ಆಟದ ಮೈದಾನ, ಕಣ, ಶಾಲಾ ಕಾಂಪೌಂಡ್‌ ನಿರ್ಮಾಣ, ಸಸಿ ನೆಡುವ ಕೆಲಸ ಮಾಡಿಸಬಹುದು. ಆದರೆ, ಅದು ಸರಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಸಕಾಲಕ್ಕೆ ಹಣ ಬಿಡುಗಡೆಯಾಗದಿ ರುವುದರಿಂದ ಈ ಸಮಸ್ಯೆ ಉದ್ಭವಿಸಿದೆ.

‘ಬರ ಪರಿಹಾರದ ಹಣ ಬಿಡುಗಡೆ ಮಾಡಿ ರೈತರ ನೆರವಿಗೆ ಧಾವಿಸಬೇಕು. ರೈತರು, ಕೂಲಿ ಕಾರ್ಮಿಕರ ವಲಸೆ ತಪ್ಪಿಸಲು ನರೇಗಾ ಅಡಿಯಲ್ಲಿ ದಿನಗೂಲಿ ಕೆಲಸ ಕಲ್ಪಿಸಬೇಕು. ಕೆರೆ ಕಟ್ಟೆ ಹೂಳೆತ್ತಿಸಿ ಜಲ ಸಂರಕ್ಷಣೆ ಕಾರ್ಯ ಕೈಗೆತ್ತಿಕೊಳ್ಳಬೇಕು’ ಎಂಬುದು ರೈತ ಮುಖಂಡರ ಆಗ್ರಹ.

ಕೇರಳಕ್ಕೆ ವಲಸೆ: ಎಚ್.ಡಿ.ಕೋಟೆ ತಾಲ್ಲೂಕಿನ ಜನರು ತಮ್ಮ ಜೀವನ ನಿರ್ವಹಣೆಗಾಗಿ ಕೂಲಿ ಅರಸಿ ಕೊಡಗು, ಬೆಂಗಳೂರು ಅಲ್ಲದೆ ಪಕ್ಕದ ರಾಜ್ಯ ಕೇರಳಕ್ಕೆ ವಲಸೆ ಹೋಗುತ್ತಿದ್ದಾರೆ. ಕೆಲ ರೈತರು ವ್ಯವಸಾಯ ತೊರೆದು ರೆಸಾರ್ಟ್‌ಗಳಿಗೆ ಕೆಲಸಕ್ಕೆ ತೆರಳುತ್ತಿದ್ದಾರೆ. ಕಬಿನಿ ಹಿನ್ನೀರಿನಲ್ಲಿ 15ಕ್ಕೂ ಹೆಚ್ಚು ರೆಸಾರ್ಟ್‌ಗಳಿವೆ. ಎರಡು ತಿಂಗಳಿನಿಂದ ನಿರಂತರ ವಾಗಿ ವೃದ್ಧರು, ಮಕ್ಕಳು, ಪುರುಷರ ಹಾಗೂ ಮಹಿಳೆಯರು ವಾಹನಗಳಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ.

‘ನರೇಗಾ ಯೋಜನೆಯಡಿ ಉದ್ಯೋಗ ನೀಡಲು ನಿರಾಕರಿಸುವ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಮೇಲೆ ದೂರು ದಾಖಲಿಸಿ ಶಿಸ್ತುಕ್ರಮ ಜರುಗಿಸಲಾಗು ವುದು. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸೂಚನೆ ನೀಡಲಾಗಿದೆ’ ಎನ್ನುತ್ತಾರೆ ಎಚ್‌.ಡಿ.ಕೋಟೆ ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಶ್ರೀಕಂಠ ರಾಜೇ ಅರಸ್.

ದೊರೆಯದ ಕಿರು ಉತ್ಪನ್ನ: ಕಾಡಲ್ಲಿ ದೊರೆಯುವ ಜೇನುತುಪ್ಪ, ಮರಾಟಿ ಮೊಗ್ಗು, ಪಾಚಿ, ಕಾಡುನೆಲ್ಲಿ ಇನ್ನಿತರ ಉತ್ಪನ್ನ ಸಂಗ್ರಹಿಸಿ ಮಾರಾಟ ಮಾಡಿ ಗಿರಿಜನರು ಜೀವನ ಸಾಗಿಸುತ್ತಾರೆ. ಆದರೆ, ಕಾಡು ಒಣಗಿರುವುದು, ಕಾಳ್ಗಿಚ್ಚಿನಿಂದ ಕಿರು ಉತ್ಪನ್ನಗಳು ದೊರೆಯುತ್ತಿಲ್ಲ. ಅವರೆಲ್ಲಾ ಕೊಡಗಿಗೆ ವಲಸೆ ಹೊರಟಿದ್ದಾರೆ.

‘ಕಾಡಿನಲ್ಲಿ ಬೆಳೆಯುವ ಲಂಟಾನ ದಂಥ ಕಳೆಯ ಗುತ್ತಿಗಳನ್ನು ಸ್ವಚ್ಛ ಗೊಳಿಸಿ ಕಾಳ್ಗಿಚ್ಚು ಹರಡದಂತೆ ತಡೆ ಯುವ ಯೋಜನೆ ರೂಪಿಸಬಹುದು. ಆದಿವಾಸಿಗಳ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಕೈಗೆತ್ತಿಕೊಳ್ಳ ಬಹುದು. ಬದುಗಳ ನಿರ್ಮಾಣ ಮಾಡಿಸ ಬಹುದು’ ಎಂದು ಸಲಹೆ ನೀಡುತ್ತಾರೆ ಗಿರಿಜನ ಮುಖಂಡ ಶೈಲೇಂದ್ರ.

ಹುಣಸೂರು ತಾಲ್ಲೂಕಿನ 42 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಚಟುವಟಿಕೆ ತಾತ್ಕಾಲಿಕವಾಗಿ ಸ್ಥಗಿತ ಗೊಂಡಿದೆ. ಕೃಷಿಯನ್ನೇ ಅವಲಂಬಿಸಿ ರುವ ರೈತ ಕುಟುಂಬಗಳು ಹೈನುಗಾರಿಕೆ ಹಾಗೂ ಕೂಲಿ ಮೂಲಕ  ಜೀವನ ಸಾಗಿ ಸುತ್ತಿದ್ದಾರೆ. ಬಿಳಿಕೆರೆ, ಗಾವಡಗೆರೆ ಹೋಬಳಿ ಭಾಗದಲ್ಲಿ ಕೃಷಿ ಕೂಲಿ ಕಾರ್ಮಿಕರು ನರೇಗಾ ಯೋಜನೆಯಡಿ ದುಡಿಯುತ್ತಿದ್ದಾರೆ.

ಕೃಷಿ ಸಹಾಯಕ ಅಧಿಕಾರಿಗಳು ನೀಡುವ ಅಂಕಿ ಅಂಶದಂತೆ ಒಟ್ಟು 15 ಸಾವಿರ ಹೆಕ್ಕೇರ್‌ ಪ್ರದೇಶ ಈ ಸಾಲಿನಲ್ಲಿ ಬೇಸಾಯ ಇಲ್ಲದೆ ಪಾಳು ಬಿದ್ದಿದೆ.
‘ತಾಲ್ಲೂಕಿನಲ್ಲಿ 3.48 ಲಕ್ಷ ಮಾನವ ದಿನಗಳನ್ನು 2016ರ ಏಪ್ರಿಲ್‌ನಿಂದ ಮಾರ್ಚ್ 2017ರವರಗೆ ಸೃಷ್ಟಿಸಿ ಗುಳೆ ಹೋಗದಂತೆ ತಡೆಯಲು ಕ್ರಮಕೈಗೊಳ್ಳ ಲಾಗಿದೆ’ ಎಂದು ತಾ.ಪಂ ಕಾರ್ಯನಿರ್ವ ಹಣಾಧಿಕಾರಿ ಕೃಷ್ಣ ಕುಮಾರ್‌ ಹೇಳುತ್ತಾರೆ.

ನರೇಗಾ ಯೋಜನೆಯಲ್ಲಿ ದಿನಗೂಲಿ ಕಾರ್ಮಿಕರಿಗೆ ದಿನವೊಂದಕ್ಕೆ ₹ 224 ನೀಡಲಾಗುತ್ತಿದ್ದು, ಏಪ್ರಿಲ್‌ ನಿಂದ ₹ 236 ನೀಡಲು ನಿರ್ಧರಿಸ ಲಾಗಿದೆ. ಕೊಟ್ಟಿಗೆ, ಚರಂಡಿ, ಕುಡಿಯುವ ನೀರಿನ ತೊಟ್ಟಿ, ಜಾನುವಾರು ತೊಟ್ಟಿ, 13 ಅಂಗನವಾಡಿ, 15 ಸ್ಮಶಾನ, ತೋಟಗಾರಿಕೆ ವಿಸ್ತೀರ್ಣ, ಚೆಕ್‌ ಡ್ಯಾಂ, ಮೀನು ಸಾಕಣೆ ತೊಟ್ಟಿ ನಿರ್ಮಿಸಲು ಬಳಸಿಕೊಳ್ಳಲಾಗುತ್ತಿದೆ. 

ತಿ.ನರಸೀಪುರ ತಾಲ್ಲೂಕಿನಲ್ಲಿ ಜಾನುವಾರುಗಳ ನೀರಿಗಾಗಿ ನರೇಗಾ ಯೋಜನೆಯಡಿ ಗ್ರಾ. ಪಂ.ವ್ಯಾಪ್ತಿಯ ಗ್ರಾಮಗಳಲ್ಲಿ 100ಕ್ಕೂ ಹೆಚ್ಚು ನೀರಿನ ತೊಟ್ಟಿ ನಿರ್ಮಿಸಿ ಕೊಳಾಯಿ ಸಂಪರ್ಕ ಕಲ್ಪಿಸಲಾಗಿದೆ.
(ಪೂರಕ ಮಾಹಿತಿ; ಎಚ್‌.ಎಸ್‌.ಸಚ್ಚಿತ್, ರವಿಕುಮಾರ್, ಬಿ.ಎನ್‌.ಸಂದೀಪ್‌)

*
ರೈತರು ತಮ್ಮ ಹೊಲಗಳಲ್ಲಿ ಕೃಷಿ ಗುಂಡಿ ನಿರ್ಮಿಸುತ್ತಿದ್ದಾರೆ. ಇದರಿಂದ ನೀರಿನ ಸಮಸ್ಯೆ ಬಗೆ ಹರಿಯುತ್ತದೆ, ಕೂಲಿ ಸಿಕ್ಕಿದಂತಾಗಿದೆ. ನರೇಗಾದಡಿ ಹಣ ನೀಡಲಾಗುತ್ತಿದೆ.
-ಪಿ.ಶಿವಶಂಕರ್‌,
ಸಿಇಒ, ಜಿಲ್ಲಾ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT