ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಸುವ್ಯವಸ್ಥೆಯಲ್ಲಿ ರಾಜಿ ಬೇಡ: ಡಿಜಿಪಿಗೆ ಸೂಚನೆ

ಉತ್ತರ ಪ್ರದೇಶ: ಹಿರಿಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಭೆ
Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಲಖನೌ: ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದಂತೆ ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಡಿಜಿಪಿ ಜಾವೀದ್‌ ಅಹಮದ್‌ ಅವರಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
 
ಅಲಹಾಬಾದ್‌ ಬಳಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖಂಡ ಮೊಹಮ್ಮದ್‌ ಶಮಿ (60) ಎಂಬುವವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ ಕೆಲವೇ ಗಂಟೆಗಳಲ್ಲಿ ಆದಿತ್ಯನಾಥ ಅವರು ಈ ಸೂಚನೆ ನೀಡಿದ್ದಾರೆ.
 
ಕಳೆದ ರಾತ್ರಿ ನಡೆದಿರುವ ಈ ಕೃತ್ಯಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಆದಿತ್ಯನಾಥ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮರುಸ್ಥಾಪಿಸುವುದು ತಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ಹೇಳಿದ್ದಾರೆ.
 
ರಾಜ್ಯದಲ್ಲಿರುವ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಹಾಗೂ ಇತರ ಆಡಳಿತಾತ್ಮಕ ವಿಚಾರಗಳನ್ನು ಪರಿಶೀಲನೆ ನಡೆಸುವುದಕ್ಕಾಗಿ ಎಲ್ಲ 75 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚರ್ಚಿಸುವಂತೆಯೂ ಅವರು ಡಿಜಿಪಿಗೆ ಸೂಚಿಸಿದ್ದಾರೆ.
 
ಸಭೆ: ರಾಜ್ಯದ ಮುಖ್ಯ ಕಾರ್ಯದರ್ಶಿ ರಾಹುಲ್‌ ಭಟ್ನಾಕರ್‌, ಡಿಜಿಪಿ ಜಾವೀದ್‌ ಅಹಮದ್‌ ಮತ್ತು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ದೇಬಶಿಷ್‌ ಪಾಂಡಾ ಅವರು ಸೋಮವಾರ ಮುಖ್ಯಮಂತ್ರಿ ಆದಿತ್ಯನಾಥ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಆ ನಂತರ ಆದಿತ್ಯನಾಥ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.
 
ಭೇಟಿ: ಈ ಮಧ್ಯೆ ಉಪಮುಖ್ಯಮಂತ್ರಿಗಳಾದ ಕೇಶವ ಪ್ರಸಾದ ಮೌರ್ಯ ಮತ್ತು ದಿನೇಶ್ ಶರ್ಮ ಅವರು ಆದಿತ್ಯನಾಥ ಅವರನ್ನು ಭೇಟಿ ಮಾಡಿದರು.
ರೈತರ ಸಾಲ ಮನ್ನಾ, ಕಸಾಯಿಖಾನೆಗಳಿಗೆ ನಿರ್ಬಂಧ ಸೇರಿದಂತೆ ಬಿಜೆಪಿಯ ‘ಸಂಕಲ್ಪ ಪತ್ರ’ದಲ್ಲಿ  ಪ್ರಸ್ತಾಪಿಸಲಾಗಿರುವ ಎಲ್ಲ ಪ್ರಮುಖ ವಿಚಾರಗಳನ್ನು ಮೊದಲ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸುದ್ದಿಗಾರರಿಗೆ ಮೌರ್ಯ ತಿಳಿಸಿದರು.
 
‘ರಾಜ್ಯದ ಜನರ ಕಲ್ಯಾಣಕ್ಕಾಗಿ ನಾವು ಹುರುಪಿನಿಂದ ಕೆಲಸ ಮಾಡುತ್ತೇವೆ. ಮಾಡಿರುವ ಕೆಲಸ ಕಣ್ಣಿಗೆ ಕಾಣುವಂತೆ ನೋಡಿಕೊಳ್ಳುತ್ತೇವೆ’ ಎಂದು ಅವರು ಹೇಳಿದರು.
 
ಖಾತೆ ಹಂಚಿಕೆ ಶೀಘ್ರ: ಆದಿತ್ಯನಾಥ ಅವರ ಸಂಪುಟ ಸದಸ್ಯರಿಗೆ ಶೀಘ್ರದಲ್ಲಿ ಖಾತೆ ಹಂಚಿಕೆಯಾಗಲಿದೆ. ಇಬ್ಬರು ಉಪಮುಖ್ಯಮಂತ್ರಿಗಳು ಸೇರಿದಂತೆ 47 ಸದಸ್ಯರ ಮಂತ್ರಿ ಪರಿಷತ್‌ ಭಾನುವಾರ ಅಸ್ವಿತ್ವಕ್ಕೆ ಬಂದಿತ್ತು. 
 
**
ಮುಚ್ಚಲಿವೆ ಕಸಾಯಿಖಾನೆಗಳು
ಉತ್ತರ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನ ಬಿಜೆಪಿ ಸರ್ಕಾರ ರಾಜ್ಯದಲ್ಲಿರುವ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಲು ಮುಂದಾಗಿದೆ.

ರಾಜ್ಯದ ವಿವಿಧ ಭಾಗಗಳಲ್ಲಿರುವ ಅಕ್ರಮ ಕಸಾಯಿಖಾನೆಗಳನ್ನು ಗುರುತಿಸಿ ಅವುಗಳನ್ನು ಮುಚ್ಚಲು ಸರ್ಕಾರ ಶೀಘ್ರದಲ್ಲಿ ಕಾರ್ಯಕ್ರಮ ಜಾರಿಗೊಳಿಸಲಿದೆ ಎಂದು ಅಧಿಕಾರಿಗಳು  ಹೇಳಿದ್ದಾರೆ.

ಭಾನುವಾರ ಅಲಹಾಬಾದ್‌ನಲ್ಲಿ ಎರಡು ಅಕ್ರಮ ಕಸಾಯಿಖಾನೆಗಳನ್ನು ಸ್ಥಳೀಯ ಆಡಳಿತ ಬಲವಂತವಾಗಿ ಮುಚ್ಚಿಸಿದೆ. ‘ಮುಂದಿನ ದಿನಗಳಲ್ಲಿ ಮತ್ತಷ್ಟು ಕಸಾಯಿಖಾನೆಗಳನ್ನು ಮುಚ್ಚಬೇಕಾಗಬಹುದು’ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ.
 
ಮುಖ್ಯಮಂತ್ರಿ ಆದಿತ್ಯನಾಥ ಅವರೊಂದಿಗೆ ಸೋಮವಾರ ನಡೆದ ಸಭೆಯ ಸಂದರ್ಭದಲ್ಲಿ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿ ಹುದ್ದೆಗಳಲ್ಲಿರುವ ಹಿರಿಯ ಐಎಎಸ್‌ ಅಧಿಕಾರಿಗಳಿಗೆ ಬಿಜೆಪಿಯ ಚುನಾವಣಾ ಪ್ರಣಾಳಿಕೆ ‘ಸಂಕಲ್ಪ ಪತ್ರ’ವನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಂಕಲ್ಪ ಪತ್ರವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ಅದರಲ್ಲಿ ಪ್ರಸ್ತಾಪಿಸಲಾಗಿರುವ ವಿಷಯಗಳನ್ನು ತಕ್ಷಣ ಜಾರಿಗೆ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚಿಸಿದೆ ಎಂದು ಅವರು ವಿವರಿಸಿದ್ದಾರೆ.

ಭರವಸೆ: ರಾಜ್ಯದಲ್ಲಿರುವ ಕಸಾಯಿಖಾನೆಗಳನ್ನು ಮುಚ್ಚುವ ಭರವಸೆಯನ್ನು ಬಿಜೆಪಿಯು ಚುನಾವಣೆ ಸಂದರ್ಭದಲ್ಲಿ ನೀಡಿತ್ತು. ಒಂದು ವೇಳೆ ಬಿಜೆಪಿ ಸರ್ಕಾರ ರಚಿಸಿದರೆ ಕಸಾಯಿಖಾನೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಪ್ರಚಾರದ ಸಂದರ್ಭದಲ್ಲಿ ಘೋಷಿಸಿದ್ದರು.

‘ರಾಜ್ಯದಲ್ಲಿರುವ ಬಹುತೇಕ ಕಸಾಯಿಖಾನೆಗಳು ಪರವಾನಗಿ ಇಲ್ಲದೇ ಕಾರ್ಯನಿರ್ವಹಿಸುತ್ತಿವೆ. ಅವುಗಳನ್ನು ಮುಚ್ಚಿದರೆ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗಬಹುದು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆರ್‌ಎಸ್ಎಸ್ ಹಸ್ತಕ್ಷೇಪವಿಲ್ಲ’:  ಆದಿತ್ಯನಾಥ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡು ವಲ್ಲಿ ಆರ್ಎಸ್ಎಸ್ ಹಸ್ತಕ್ಷೇಪ ಮಾಡಿಲ್ಲ ಎಂದು ಉತ್ತರ ಪ್ರದೇಶ ಶಾಸಕಾಂಗ ಪಕ್ಷದ ಸಭೆಗೆ ಕೇಂದ್ರ ವೀಕ್ಷಕರಾಗಿ ತೆರಳಿದ್ದ ವೆಂಕಯ್ಯ ನಾಯ್ಡು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT