ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲ ತಡಿಯಲಿ ವಿದೇಶಿಗರ ಕಾಯಕ

Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಧಾರ್ಮಿಕತೆ, ಆಧುನೀಕತೆ, ಸೌಂದರ್ಯ, ಮೂರೂ ಕೂಡಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಅಪಾರ ಪ್ರಮಾಣದ ವಿದೇಶಿಗರನ್ನು ಸೆಳೆಯುತ್ತಿರುವ ಕ್ಷೇತ್ರ ಎನ್ನಬಹುದು. ಇಲ್ಲಿಗೆ ಬ್ರಿಟನ್, ಫ್ರಾನ್ಸ್, ಇಟಲಿ, ಸ್ಪೇನ್, ಜರ್ಮನಿ, ಇಸ್ರೇಲ್ ಮತ್ತು ರಷ್ಯಾ ಪ್ರಜೆಗಳು ಬರುವುದು ಮಾಮೂಲು.

ಗೋಕರ್ಣದ ಬೀಚ್‌ಗಳಿಗೆ ವಿದೇಶಿಗರು ಬರುವುದು ಮೋಜು, ಮಸ್ತಿ ಮಾಡಲು, ಮಾದಕ ದ್ರವ್ಯ ಸೇವಿಸಲು ಎಂಬ ಕಲ್ಪನೆ ಬಹುತೇಕರಲ್ಲಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಅವರು ಮಾಡುತ್ತಿರುವ ಕೆಲಸಗಳು ಕುತೂಹಲ ಮೂಡಿಸುತ್ತವೆ. ಇಲ್ಲಿಯ ಜನರೊಂದಿಗೆ ಬೆರೆತು ಸ್ಥಳೀಯ ಉಡುಗೆ ತೊಡುಗೆ ರೂಢಿಸಿಕೊಂಡ ವಿದೇಶಿಗರ ದೊಡ್ಡ ದಂಡೇ ಇಲ್ಲಿದೆ. ರಾಮತೀರ್ಥದ ನೀರಿನಲ್ಲಿ ಸ್ನಾನ ಮಾಡಿ ಯೋಗ, ಧ್ಯಾನ ಮಾಡುವುದನ್ನು ಹೆಚ್ಚಿನ ವಿದೇಶಿಗರು ನಿತ್ಯದ ಕಾಯಕವಾಗಿಸಿಕೊಂಡಿದ್ದಾರೆ.

ಇವೆಲ್ಲಕ್ಕೂ ಕಲಶಪ್ರಾಯವಿಟ್ಟಂತೆ ವಿದೇಶಿಗರಿಗಾಗಿಯೇ ಇಲ್ಲೊಂದು ಸಂಸ್ಥೆ ಹುಟ್ಟಿಕೊಂಡಿದೆ. ಸಮೀಪದ ಬಂಕಿಕೊಡ್ಲದಲ್ಲಿ ವಿದೇಶಿ ಸ್ವಾಮಿ ಯೋಗರತ್ನಾರವರು ‘ಶಂಕರ ಪ್ರಸಾದ ಫೌಂಡೇಶನ್’ ಎಂಬ ಸಂಸ್ಥೆ ಹುಟ್ಟುಹಾಕಿದ್ದಾರೆ. ಈ ಸಂಸ್ಥೆ, ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೀಚ್ ಸ್ವಚ್ಛತಾ ಅಭಿಯಾನ, ಐತಿಹಾಸಿಕ ಕೆರೆ, ತೀರ್ಥಗಳ ಅಭಿವೃದ್ಧಿ ಮತ್ತು ರಕ್ಷಣೆ ಕಾರ್ಯ, ಶ್ರಮದಾನದಂತಹ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದೆ. ವಿದೇಶಿಗರಿಗಾಗಿ ಯೋಗ, ಧ್ಯಾನ ಶಿಬಿರವನ್ನು ನಡೆಸುತ್ತಿದೆ. ಸ್ಥಳೀಯ ಆಡಳಿತ  ಕೈಗೊಳ್ಳದ ಸ್ವಚ್ಛತೆಯನ್ನು ಗೋಕರ್ಣಕ್ಕೆ ಬರುವ ವಿದೇಶಿಯರು ಮಾಡುತ್ತಿರುವುದು ಸೋಜಿಗ.

(ನಾಯಿಗಳಿಗೆ ಉಚಿತವಾಗಿ ಸಂತಾನಹರಣ ಚಿಕಿತ್ಸೆ ನಡೆಸುವ ಜರ್ಮನಿಯ ಮಹಿಳೆ ಡೆನಿಸ್ ದಾಸ್)

ದೇಶ ಸುತ್ತುವ ಸಲುವಾಗಿ ಬರುವ ಕೆಲವು ವಿದೇಶಿ ಪ್ರವಾಸಿಗರು ಹಾಲಕ್ಕಿಗಳೊಂದಿಗೆ ಬೆರೆತು  ದವಸ ಧಾನ್ಯ ಬೆಳೆಯುವ, ತರಕಾರಿಗೆ ನೀರು ಹಾಕುವ, ಕೊಯ್ಯುವ ಹಾಗೂ ಭತ್ತ ಬೇರ್ಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹಾಲಕ್ಕಿಗರ ಸಾಂಪ್ರದಾಯಿಕ ಅಡುಗೆ, ಉಡುಗೆ ತೊಡುಗೆಗಳಿಗೆ ಮಾರು ಹೋಗಿರುವ ಹಲವರು ಅದನ್ನೇ ಅನುಸರಿಸುತ್ತಿದ್ದಾರೆ.

ಗೋಕರ್ಣ ಸಮೀಪದ ಭಾವಿಕೊಡ್ಲದ ರಾಮಗೌಡ ಎಂಬುವವರ ಮನೆಯಲ್ಲಿ ನೆಲೆಸಿದ್ದ ಸ್ಪೇನ್ ದೇಶದ ಕಾರ್ಲ್ ರಿಚಾರ್ಡೋ ಹಾಗೂ ಇಟಲಿಯ ರಿಜ್ವಾನ್ ಫೇಸ್, ಭತ್ತದ ಬಣವೆಯಿಂದ ಹುಲ್ಲು ಕಟ್ಟನ್ನು ಹಲಗೆ ಮೇಲೆ ಬಡಿದು ಭತ್ತ ಬೇರ್ಪಡಿಸುವುದನ್ನು ಬಹಳ ಆಸ್ಥೆಯಿಂದ ಕಲಿತಿದ್ದಾರೆ. ಪ್ರತಿವರ್ಷ ಗೋಕರ್ಣಕ್ಕೆ ಬರುವ ಜರ್ಮನಿಯ ಡೆನಿಸ್ ದಾಸ್ ಎಂಬ ಮಹಿಳೆ ಕೆಲವು ವರ್ಷಗಳಿಂದ ಬೀಡಾಡಿ ನಾಯಿಗಳು ಹಾಗೂ ಸಾಕು ನಾಯಿಗಳ ನಿಯಂತ್ರಿಸಲು ನೂರಾರು ನಾಯಿಗಳ ಸಂತಾನಹರಣ ಚಿಕಿತ್ಸೆಯನ್ನು ಉಚಿತವಾಗಿ ಮಾಡಿದ್ದಾರೆ. ಸ್ವಂತ ಖರ್ಚಿನಿಂದಲೇ ಗೋವಾಕ್ಕೆ ನಾಯಿಗಳನ್ನು ತೆಗೆದುಕೊಂಡು ಹೋಗಿ ಚಿಕಿತ್ಸೆ ನಡೆಸಿ ಪುನಃ ಗೋಕರ್ಣಕ್ಕೆ ತಂದುಬಿಡುತ್ತಿದ್ದಾರೆ!

1986ರಿಂದ ಪ್ರತಿ ವರ್ಷ ಗೋಕರ್ಣಕ್ಕೆ ಬರುತ್ತಿರುವ ಸ್ವೀಡನ್‌ನ ಹ್ಯಾರಿ ಪೆರೊನಿಯಸ್ ಎಂಬ ಪ್ರವಾಸಿಗ ಸ್ಥಳೀಯರ ಜೀವನಶೈಲಿ, ಉಡುಗೆ ತೊಡುಗೆ, ಆಚಾರ ವಿಚಾರಗಳಿಗೆ ಮನಸೋತು, ಗೋಕರ್ಣದ ವೈದಿಕ ಧರ್ಮ ಮತ್ತು ಹಾಲಕ್ಕಿ ಒಕ್ಕಲಿಗರ ಜೀವನ ಹಾಗೂ ಗೋಕರ್ಣದ ಬಗ್ಗೆ ಸಂಪೂರ್ಣವಾಗಿ ಅಭ್ಯಸಿಸಿದ್ದಾರೆ. ಈ ಅಧ್ಯಯನವನ್ನು ‘ಶಿವ ಮೂವ್ಸ್ ಆನ್ –ಇನ್ ಗೋಕರ್ಣ’ ಎಂಬ ಸಾಕ್ಷ್ಯಚಿತ್ರವನ್ನು ತಯಾರಿಸಿದ್ದಾರೆ. 1986ರಿಂದ ತೆಗೆದ ಛಾಯಾಚಿತ್ರಗಳನ್ನು ಅದರಲ್ಲಿ ದಾಖಲಿಸಿದ್ದು, ಗೋಕರ್ಣ ಹೇಗೆ ಬದಲಾಗುತ್ತಿದೆ ಎಂಬುದರ ಕುರಿತು ವಿವರಿಸಿದ್ದಾರೆ.

(ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ವಿದೇಶಿಗರು)

ಇಲ್ಲಿಯ ಕುಡ್ಲೆ ಕಡಲ ತೀರದ ಪಾದಚಾರಿ ಮಾರ್ಗಗಗಳಲ್ಲಿ ವಿದೇಶಿಯರೇ ಚಿಕ್ಕಚಿಕ್ಕ ಮಳಿಗೆ ಇಟ್ಟುಕೊಂಡಿದ್ದಾರೆ. ತೆಂಗಿನ ಕರಟದಿಂದ ಮಾಡಿದ ಕರಕುಶಲ ಸಾಮಗ್ರಿಗಳು, ಕಪ್ಪೆಚಿಪ್ಪನಿಂದ ತಯಾರಾದ ವಸ್ತುಗಳು, ವಿವಿಧ ಮಣಿಗಳ ಆಭರಣ, ವಿದೇಶಿ ತಿಂಡಿ ತಿನಿಸುಗಳು, ವಿವಿಧ ಸಂಗೀತ ವಾದನಗಳನ್ನು ಅವರು ಮಾರಾಟ ಮಾಡುತ್ತಿದ್ದಾರೆ. ಕೆಲವೊಮ್ಮೆ ಇಲ್ಲಿಯೇ ನೃತ್ಯ, ಸಂಗೀತ ಪ್ರದರ್ಶನವೂ ನಡೆಯುತ್ತದೆ. ಅನೇಕ ಸಲ ಯೋಗ ಪ್ರದರ್ಶನ, ಸರ್ಕಸ್‌ಗಳನ್ನೂ ಮಾಡುತ್ತಾರೆ.

ಸೂರ್ಯೋದಯವಾದ ಮೇಲೆ ಸಮುದ್ರದಲ್ಲಿ ಸ್ನಾನ ಮಾಡಿ, ಸೂರ್ಯನಿಗೆ ಅರ್ಘ್ಯ ಪ್ರಧಾನ ಮಾಡಿ ಯೋಗ, ಧ್ಯಾನ ಪೂರ್ತಿಗೊಳಿಸಿದ ನಂತರವೇ ತಮ್ಮ ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು. ತಾವು ಕಲಿತ ಯೋಗ, ಧ್ಯಾನವನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ ಇತರರಿಗೆ ಧಾರೆ ಎರೆಯುತ್ತಿದ್ದಾರೆ. ಗೋಕರ್ಣದ ಧಾರ್ಮಿಕತೆ, ಸಂಸ್ಕೃತಿಯನ್ನು ವಿದೇಶದಲ್ಲೂ ಪಸರಿಸಲು ಪ್ರಯತ್ನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT