ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದ್ರದಾಳದಲ್ಲಿ ‘ವಿರಾಟ್‌’ ಸ್ಮಾರಕ

ಸ್ಕೂಬಾ ಡೈವಿಂಗ್ ತಾಣವಾಗಿಸಲು ಮಹಾರಾಷ್ಟ್ರ ಸರ್ಕಾರದ ಚಿಂತನೆ
Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಭಾರತೀಯ ನೌಕಾಪಡೆಯ ಸೇವೆಯಿಂದ ನಿವೃತ್ತವಾಗಿರುವ ಐಎನ್‌ಎಸ್‌ ವಿರಾಟ್‌ ಯುದ್ಧವಾಹಕ ನೌಕೆಯನ್ನು ಸಮುದ್ರದಾಳದ ಸ್ಮಾರಕವಾಗಿ ರೂಪಿಸಲು ಮಹಾರಾಷ್ಟ್ರ ಸರ್ಕಾರ ಆಸಕ್ತಿ ತೋರಿಸಿದೆ.
 
‘ಮಹಾರಾಷ್ಟ್ರದ ಕೊಂಕಣ ತೀರದಲ್ಲಿನ ಸಿಂಧುದುರ್ಗದ ಬಳಿ ಸಮುದ್ರದಲ್ಲಿ  ಐಎನ್‌ಎಸ್‌ ವಿರಾಟ್‌ ಅನ್ನು ಮುಳುಗಿಸಲಾಗುವುದು. ನಂತರ ಆ ಸ್ಥಳದಲ್ಲಿ ಸ್ಕೂಬಾ ಡೈವಿಂಗ್‌ಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆ, ರಾಜ್ಯ ಸರ್ಕಾರದ ಮುಂದೆ ಪ್ರಸ್ತಾವ ಇರಿಸಿದೆ.

ಮುಖ್ಯಮಂತ್ರಿ ದೇವೇಂದ್ರ ಪಢಣವೀಸ್‌ ಅವರು ಈ ಪ್ರಸ್ತಾವದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
**
ಪ್ರಸ್ತಾವದ ವಿವರ
- ಭಾರತದಲ್ಲಿ ರೆಕ್‌ ಡೈವಿಂಗ್‌ ಇಲ್ಲ
- ಈ ಯೋಜನೆ ಕಾರ್ಯಗತವಾದರೆ ಪ್ರವಾಸಿಗರನ್ನು ಆಕರ್ಷಿಸಲಿದೆ
- ಇದು ಜಗತ್ತಿನ ಎರಡನೇ ಅತಿದೊಡ್ಡ ಕೃತಕ ರೆಕ್‌ ಡೈವಿಂಗ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ
- ನೌಕೆಯನ್ನು ಗುಜರಿಗೆ ಹಾಕುವುದಕ್ಕಿಂತ ಸಮುದ್ರದಾಳದ ಸ್ಮಾರಕವಾಗಿ ಬದಲಿಸಿದರೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಒಟ್ಟು 4,500 ಉದ್ಯೋಗಗಳು ಸೃಷ್ಟಿಯಾಗುತ್ತವೆ
 
ರೆಕ್ ಡೈವಿಂಗ್
ಸಮುದ್ರದಾಳದಲ್ಲಿರುವ ಹಡಗುಗಳ ಅವಶೇಷಗಳ ಬಳಿ ಸ್ಕೂಬಾ ಡೈವಿಂಗ್‌ ಮಾಡುವುದನ್ನು ‘ರೆಕ್ ಡೈವಿಂಗ್‌’ ಎಂದು ಕರೆಯಲಾಗುತ್ತದೆ. ವಿಶ್ವದ ಹಲವೆಡೆ ಇಂತಹ ಅವಶೇಷಗಳಿವೆ. ಆದರೆ ಮೊದಲ ಬಾರಿ ಉದ್ದೇಶಪೂರ್ವಕವಾಗಿ ಹಡಗುಗಳನ್ನು ಮುಳುಗಿಸಿ, ರೆಕ್‌ ಡೈವಿಂಗ್‌ಗೆ ಅವಕಾಶ ಸಲ್ಲಿಸಿದ್ದು ಅಮೆರಿಕ.

ಅಮೆರಿಕ ನೌಕಾಪಡೆ ಸೇವೆಯಿಂದ ನಿವೃತ್ತಿಯಾಗಿದ್ದ ಯುಎಸ್‌ಎಸ್‌ ಒರಿಸ್ಕನಿ ನೌಕೆಯನ್ನು ಫ್ಲಾರಿಡಾದ ಪೆನ್ಸಕೋಲಾ ಬಳಿ ಸಮುದ್ರದಲ್ಲಿ ಮುಳುಗಿಸಲಾಗಿದೆ. ಇದು ಈಗ ಜಗತ್ತಿನ ಜನಪ್ರಿಯ ರೆಕ್‌ ಡೈವಿಂಗ್‌ಗಳಲ್ಲಿ ಮೊದಲ ಸ್ಥಾನದಲ್ಲಿದೆ. ಹೀಗೆ ಮುಳುಗಿರುವ ಹಡಗುಗಳು ದೀರ್ಘಕಾಲದಲ್ಲಿ ಕೃತಕ ಹವಳದ ದಿಬ್ಬಗಳಾಗಿ ಬದಲಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT