ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡದಿದ್ದರೆ ಅಪಾಯ!

Last Updated 21 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಆಂಡ್ರಾಯ್ಡ್‌, ಆ್ಯಪಲ್‌, ವಿಂಡೋಸ್‌ ಸೇರಿದಂತೆ ಯಾವುದೇ ಆಪರೇಟಿಂಗ್‌ ಸಿಸ್ಟಂಗಳಲ್ಲಿ ಕಾರ್ಯನಿರ್ವಹಿಸುವ ಸಾಧನಗಳಿಂದ ಮಾಹಿತಿಯನ್ನು ಸೋರಿಕೆ ಮಾಡಬಲ್ಲ ಹ್ಯಾಕಿಂಗ್‌ (ಮಾಹಿತಿ ಕದಿಯುವಿಕೆ) ಸಾಧ್ಯತೆಗಳ ಬಗ್ಗೆ ಅಮೆರಿಕದ ಗುಪ್ತಚರ ಸಂಸ್ಥೆಯಾದ ‘ಸಿಐಎ’ ಕಾರ್ಯಪ್ರವೃತ್ತವಾಗಿದೆ ಎಂಬ ಸಂಗತಿಯನ್ನು ವಿಕಿಲೀಕ್ಸ್‌ ಇತ್ತೀಚಿಗೆ ಬಹಿರಂಗಪಡಿಸಿತು. ಈ ಸಂಬಂಧ 8,761 ದಾಖಲೆಗಳನ್ನು ಬಿಡುಗಡೆ ಮಾಡಿತು.

ಐಫೋನ್‌, ಆಂಡ್ರಾಯ್ಡ್ ಉಪಕರಣಗಳು, ವೈ–ಫೈ ರೂಟರ್‌, ಸ್ಯಾಮ್ಸಂಗ್‌ ಸ್ಮಾರ್ಟ್‌ ಟಿವಿ ಸೇರಿದಂತೆ ಸಾಕಷ್ಟು ಸುರಕ್ಷಾ ವಿಧಾನಗಳನ್ನು ಅಳವಡಿಸಿಕೊಂಡ ಅತ್ಯಾಧುನಿಕ ಡಿವೈಸ್‌ಗಳಿಂದ ಸಿಐಎ ಹೇಗೆ ಮಾಹಿತಿ ಕದ್ದಿದೆ ಎಂಬ ವಿವರಗಳನ್ನೂ ಈ ದಾಖಲೆಗಳು ಬಹಿರಂಗಪಡಿಸಿವೆ.
ಹೊಸ ಡಿವೈಸ್‌; ಹಳೆಯ ಸಾಫ್ಟ್‌ವೇರ್‌ ಪ್ರಪಂಚದೆಲ್ಲೆಡೆ ಇಂದಿಗೂ ಲಕ್ಷಾಂತರ ಗ್ರಾಹಕರು ಸ್ಮಾರ್ಟ್‌ಫೋನ್‌ ಸೇರಿದಂತೆ ತಮ್ಮ ಡಿವೈಸ್‌ಗಳಲ್ಲಿ ಹಳೆಯ ಅಂದರೆ ವಾಯಿದೆ ಮುಗಿದ ಸಾಫ್ಟ್‌ವೇರ್‌ಗಳನ್ನು ಬಳಸುತ್ತಿದ್ದಾರೆ. ಬಳಸುತ್ತಿರುವ ಗ್ಯಾಜೆಟ್‌ ಹೊಸತಾದರೂ ಅದರಲ್ಲಿರುವ ಸಾಫ್ಟ್‌ವೇರ್‌ ಅಥವಾ ಕಾರ್ಯನಿರ್ವಹಣಾ ತಂತ್ರಾಂಶ ಹಳೆಯ ಆವೃತ್ತಿಯದಾಗಿರುತ್ತದೆ. ಆಗಾಗ್ಗೆ ಆಪರೇಟಿಂಗ್‌ ಸಿಸ್ಟಂ ಅಪ್‌ಡೇಟ್‌ ಮಾಡಿಕೊಳ್ಳದಿದ್ದರೆ, ಇಂತಹ ಡಿವೈಸ್‌ಗಳನ್ನು ಹ್ಯಾಕ್‌ ಮಾಡುವುದು ಸುಲಭ. ಸಿಐಎ ಕೂಡ ಮಾಹಿತಿ ಸೋರಿಕೆ ಮಾಡಲು ಇದೇ ತಂತ್ರ ಅನುಸರಿಸುತ್ತಿದೆ ಎನ್ನುತ್ತದೆ ವಿಕಿಲೀಕ್ಸ್‌ ವರದಿ. ಅಂದರೆ, ವಿಕಿಲೀಕ್ಸ್‌ ಬಹಿರಂಗಪಡಿಸಿರುವ ದಾಖಲೆಗಳಲ್ಲಿ 2013ರಿಂದ 2016ರ ನಡುವೆ, ಗ್ರಾಹಕರ ಬೇರೆ ಬೇರೆ ಡಿವೈಸ್‌ಗಳಿಂದ ಸೋರಿಕೆ ಮಾಡಿರುವ ದತ್ತಾಂಶಗಳಿವೆ. ಇವೆಲ್ಲವೂ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿಕೊಳ್ಳದ ಅಂದರೆ 2011ಕ್ಕಿಂತಲೂ ಹಿಂದೆ ಅಭಿವೃದ್ಧಿಯಾದ ಆಪರೇಟಿಂಗ್‌ ಸಿಸ್ಟಂ ಆವೃತ್ತಿ ಬಳಸುತ್ತಿದ್ದ ಡಿವೈಸ್‌ಗಳಿಂದ ಕದ್ದಿರುವ ಮಾಹಿತಿ ಎನ್ನುವುದು ಗಮನೀಯ.

‘ಸಿಐಎ’ ಹೊಂದಿರುವ ಹ್ಯಾಕಿಂಗ್‌ ಸಾಧ್ಯತೆಗಳ ಬಗ್ಗೆ ಭಯಪಡುವುದಕ್ಕಿಂತಲೂ, ಸಾಫ್ಟ್‌ವೇರ್‌ ಅಪ್‌ಡೇಟ್ ಮಾಡಿಕೊಳ್ಳದಿದ್ದರೆ ನಾವು ಬಳಸುವ ಡಿವೈಸ್‌ ಎಷ್ಟೊಂದು ಅಸುರಕ್ಷಿತ ಮತ್ತು ಇಂತಹ ಅಪಾಯಗಳಿಗೆ ಸದಾ ಆಹ್ವಾನ ನೀಡಿದಂತೆ ಎನ್ನುವುದನ್ನು ಗ್ರಾಹಕರು ಗಮನಿಸಬೇಕು ಎನ್ನುತ್ತಾರೆ ಗ್ಯಾಜೆಟ್‌ ತಜ್ಞರು.

ಲಕ್ಷಾಂತರ ಆಂಡ್ರಾಯ್ಡ್‌ ಬಳಕೆದಾರರು ಇಂದಿಗೂ ಹಳೆಯ ಗೂಗಲ್ ಮೊಬೈಲ್ ಆಪರೇಟಿಂಗ್ ಸಿಸ್ಟಂ ಬಳಸುತ್ತಿದ್ದಾರೆ. ವಿಕಿಲೀಕ್ಸ್‌ ಬಿಡುಗಡೆ ಮಾಡಿದ ದಾಖಲೆಗಳಲ್ಲಿ 7,818 ವೆಬ್‌ ಪುಟಗಳು ಮತ್ತು 943 ಇ–ಮೇಲ್‌ ಕಡತಗಳು ಸೇರಿವೆ. ಇವೆಲ್ಲವೂ ಆಂಡ್ರಾಯ್ಡ್‌ನ ಹಳೆಯ ಆವೃತ್ತಿ ಅಂದರೆ ಆಂಡ್ರಾಯ್ಡ್‌ 4.0 (ಐಸ್‌ಕ್ರೀಂ ಸ್ಯಾಂಡ್‌ವಿಚ್‌) ಆಪರೇಟಿಂಗ್‌ ಸಿಸ್ಟಂ ಬಳಸುತ್ತಿದ್ದ ಡಿವೈಸ್‌ಗಳಿಂದ ಕದ್ದಿರುವ ಮಾಹಿತಿ. ಈ ಆಪರೇಟಿಂಗ್‌ ಸಿಸ್ಟಂ ಬಿಡುಗಡೆಯಾಗಿ 6 ವರ್ಷಗಳೇ ಕಳೆದಿವೆ. ಆದರೆ, ಇಂದಿಗೂ ಶೇ 30ರಷ್ಟು ಆಂಡ್ರಾಡ್ಡ್‌ ಬಳಕೆದಾರರು ಅಂದರೆ ಅಂದಾಜು 420 ದಶಲಕ್ಷ ಜನರು, ಆಂಡ್ರಾಯ್ಡ್‌ ಐಸ್‌ಕ್ರೀಂ ಸ್ಯಾಂಡ್‌ವಿಚ್‌ ಆವೃತ್ತಿಯನ್ನೇ ಬಳಸುತ್ತಿದ್ದಾರೆ.

ಇದಕ್ಕೂ ಮುನ್ನ ಅಂದರೆ 2010ರಲ್ಲಿ ಆಂಡ್ರಾಯ್ಡ್‌ 2.3 ಆವೃತ್ತಿ ಅಥವಾ ಜಿಂಜರ್‌ ಬ್ರೆಡ್‌ ಎನ್ನುವ ಆಪರೇಟಿಂಗ್‌ ಸಿಸ್ಟಂ ಪರಿಚಯಿಸಿತು. ಸ್ಮಾರ್ಟ್‌ಫೋನ್‌ ಯುಗದ ಆರಂಭದಲ್ಲಿ ಜನಪ್ರಿಯವಾಗಿದ್ದ ಈ ಆಪರೇಟಿಂಗ್‌ ಸಿಸ್ಟಂ ಬಳಸುವ ಅಂದರೆ ಹೊಸ ಆವೃತ್ತಿಗೆ ಅಪ್‌ಡೇಟ್‌ ಆಗದ ಮಂದಿ ಈಗಲೂ ಇದ್ದಾರೆ.

ವಿಕಿಲೀಕ್ಸ್‌ ವರದಿ ಬಿಡುಗಡೆ ಆದ ನಂತರ ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ನಮ್ಮ ಗ್ರಾಹಕರಿಗೆ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದೇವೆ. ನಾವು ಬಳಸುವ ಡಿವೈಸ್‌ಗಳಲ್ಲಿ ಸಾಫ್ಟ್‌ವೇರ್‌ ಮತ್ತು ಅಪ್ಲಿಕೇಷನ್ಸ್‌ಗಳನ್ನು ಸದಾ ಪರಿಷ್ಕರಣೆ ಮಾಡಿಕೊಳ್ಳುತ್ತಿರಬೇಕು ಎನ್ನುತ್ತಾರೆ ಎಲೆಕ್ಟ್ರಾನಿಕ್‌ ಫ್ರಂಟಿಯರ್‌ ಫೌಂಡೇಷನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕ್ರಟ್‌ ಓಪ್ಸಾ. ಕಂಪ್ಯೂಟರ್‌ ಬಳಕೆದಾರರಾದರೆ, ಹೊಸ ಅಪರೇಟಿಂಗ್‌ ಸಿಸ್ಟಂಗೆ ಬದಲಾಗಬೇಕು ಮತ್ತು ಪರವಾನಗಿ ಇರುವ ಆ್ಯಂಟಿ ವೈರಸ್‌ ಬಳಸಬೇಕು ಎನ್ನುತ್ತಾರೆ ಅವರು.

ಹಾಗಂತ, ತುಂಬಾ ಹಳೆಯ ಆವೃತ್ತಿ ಅಪರೇಟಿಂಗ್‌ ಸಿಸ್ಟಂ ಬಳಸುತ್ತಿರುವವರು ಹೊಸ ಆವೃತ್ತಿಗೆ ಅಪ್‌ಡೇಟ್‌ ಮಾಡಿಕೊಳ್ಳುವುದು ಅಷ್ಟೊಂದು ಸರಳವಲ್ಲ. ಉದಾಹರಣೆಗೆ ಸ್ಯಾಮ್ಸಂಗ್‌ ಗ್ಯಾಲಕ್ಸಿ ಎಸ್‌–3 ಹ್ಯಾಂಡ್‌ಸೆಟ್‌ನಲ್ಲಿ ಹೊಸ ಆಂಡ್ರಾಯ್ಡ್‌ ಆವೃತ್ತಿ ಡೌನ್‌ಲೋಡ್‌ ಆಗುವುದಿಲ್ಲ. ಹಾಗಾಗಿ ತೀರಾ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿರುವವರಿಗೆ, ಗೂಗಲ್‌ ಫಿಕ್ಸಲ್‌ನಂತಹ ಹೊಸ ಸ್ಮಾರ್ಟ್‌ಫೋನ್‌ಗೆ, ಹೊಸ ಆಪರೇಟಿಂಗ್‌ ಸಿಸ್ಟಂಗೆ ಬದಲಾಗಲು ಇದು ಸಕಾಲ. ಹೊಸ ಸ್ಮಾರ್ಟ್‌ಫೋನ್‌ಗೆ ಅಪ್‌ಡೇಟ್‌ ಆಗುವ ಜತೆಯಲ್ಲೇ, ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಲಾಕ್‌ ಸ್ಕ್ರೀನ್‌ ಆಯ್ಕೆ ಮತ್ತು ಪಿನ್‌ ಕೋಡ್‌ ನಂಬರ್‌ ಬಳಕೆ ಬಗ್ಗೆಯೂ ಗ್ರಾಹಕರು ಗಮನ ಹರಿಸಬೇಕು. ಹ್ಯಾಕಿಂಗ್‌ ದಾಳಿಯನ್ನು ತಡೆಯಲು ಇದು ಕೂಡ ಸುರಕ್ಷಿತ ವಿಧಾನ. ಇದರ ಜತೆಯಲ್ಲೇ ವೆರಿಫೈ ಆ್ಯಪ್ಸ್‌ ಎನ್ನುವ ಆಯ್ಕೆಯನ್ನು ಸೆಟ್ಟಿಂಗ್ಸ್‌ನಲ್ಲಿ ಎನೇಬಲ್‌ ಮಾಡಿಕೊಳ್ಳುವುದರಿಂದ ಕುತಂತ್ರಾಂಶಗಳ ದಾಳಿಯಿಂದ ಇದು ರಕ್ಷಣೆ ನೀಡುತ್ತದೆ ಎನ್ನುತ್ತದೆ ಗೂಗಲ್‌.

ಐಫೋನ್: ಸಾಫ್ಟ್‌ವೇರ್‌ ಅಪ್‌ಡೇಟ್‌ ವಿಚಾರದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಹೋಲಿಸಿದರೆ, ಐಫೋನ್‌ ಬಳಕೆದಾರರು ಹೆಚ್ಚು ಅಪ್‌ಡೇಟ್‌ ಆಗಿರುತ್ತಾರೆ. ಕೆಲವೇ ಕೆಲವು ಐಫೋನ್‌ಗಳಲ್ಲಿ ಮಾತ್ರ ಹಳೆಯ ಆವೃತ್ತಿಯ ಆಪರೇಟಿಂಗ್ ಸಿಸ್ಟಂ ಇದೆ. ವಿಕಿಲೀಕ್ಸ್‌ ಬಿಡುಗಡೆ ಮಾಡಿರುವ ದತ್ತಾಂಶಗಳಲ್ಲಿ, ಐಫೋನ್‌ 8.2 ಆವೃತ್ತಿ ಆಪರೇಟಿಂಗ್‌ ಸಿಸ್ಟಂ ಬಳಸುತ್ತಿದ್ದ ಹ್ಯಾಂಡ್‌ಸೆಟ್‌ನಲ್ಲಿನ ಕೆಲವು ಮಾಹಿತಿಗಳಿವೆ. ಶೇ 80ರಷ್ಟು ಐಫೋನ್‌ ಬಳಕೆದಾರರು ಐಒಎಸ್‌ 10 ಆವೃತ್ತಿ ಬಳಸುತ್ತಿದ್ದಾರೆ. ಕೇವಲ ಶೇ 5ರಷ್ಟು ಗ್ರಾಹಕರು ಮಾತ್ರ ಹಳೆಯ ಐಒಎಸ್‌ 9 ಆವೃತ್ತಿ ಬಳಸುತ್ತಿದ್ದಾರೆ. 2012ರಲ್ಲಿ ಬಿಡುಗಡೆಯಾದ ಐಫೋನ್‌ 5 ಮತ್ತು ಐಪಾಡ್‌ ಏರ್‌, ಐಪಾಡ್‌ ಮಿನಿ ಗ್ರಾಹಕರು ಹೊಸ ಆವೃತ್ತಿಯನ್ನು ಅಪ್‌ಡೇಟ್‌ ಮಾಡಿಕೊಳ್ಳಬಹುದು. ಅದಕ್ಕಿಂತಲೂ ಹಳೆಯದಾದ ಹ್ಯಾಂಡ್‌ಸೆಟ್‌ ಬಳಸುತ್ತಿದ್ದರೆ ಹೊಸದನ್ನು ಖರೀದಿಸಬಹುದು.

ಸ್ಯಾಮ್ಸಂಗ್‌ ಸ್ಮಾರ್ಟ್‌ ಟಿವಿ ಸರಣಿಯ ಎಫ್‌8000 ಮಾದರಿಯ ಮೇಲೆ ಇತ್ತೀಚೆಗೆ ಹ್ಯಾಕರ್‌ಗಳ ದಾಳಿ ನಡೆದಿತ್ತು. ಈ ಸಿಸ್ಟಂಗಳಲ್ಲಿ ವಾಯಿಸ್‌ ಕಂಟ್ರೋಲ್‌ಗಾಗಿ ಮೈಕ್ರೊಫೋನ್‌ ಬಳಸಲಾಗುತ್ತದೆ. ಈ ವ್ಯವಸ್ಥೆಯನ್ನು ಬಳಸಿಕೊಂಡು ಅಂದರೆ, ಸ್ಮಾರ್ಟ್‌ ಟಿವಿಗಳು ಇದ್ದಕ್ಕಿದ್ದಂತೆ ಸ್ವಯಂ ಚಾಲಿತವಾಗಿ ಸ್ಥಗಿತಗೊಳ್ಳುವಂತೆ ಮಾಡಲಾಗುತ್ತದೆ. ಇದಕ್ಕಾಗಿ ಹ್ಯಾಕರ್‌ಗಳು ‘ಫೇಕ್‌ ಆಫ್‌ ಮೂಡ್‌’ ಎಂಬ ಪ್ರೋಗ್ರಾಂ ಬಳಸುತ್ತಾರೆ. ಟಿವಿ ಸ್ಥಗಿತಗೊಂಡಿದೆ ಎಂದು ಭಾವಿಸುವ ಗ್ರಾಹಕ, ಸಹಜವಾಗಿ ಇನ್ನಿತರ ಕೆಲಸಗಳತ್ತ ಗಮನ ಹರಿಸುತ್ತಾನೆ. ಜತೆಗೆ ಬೇರೆ ಯಾರಾದರೂ ಇದ್ದರೆ ಅವರ ಜತೆಗೆ ಸಂಭಾಷಣೆಯಲ್ಲಿ ತೊಡಗುತ್ತಾನೆ. ಆದರೆ, ಟಿವಿ ಆಫ್‌ ಆಗಿರುವುದಿಲ್ಲ. ಬದಲಿಗೆ, ಇದರಲ್ಲಿರುವ ಮಾಲ್‌ವೇರ್‌, ಈ ಸಂಭಾಷಣೆಯನ್ನು ರಹಸ್ಯವಾಗಿ ರೆಕಾರ್ಡ್‌ ಮಾಡಿ, ಅದನ್ನು ‘ಸಿಐಎ’ ಸರ್ವರ್‌ ಕಂಪ್ಯೂಟರ್‌ಗೆ ಕಳುಹಿಸಿಕೊಡುತ್ತದೆ. ಇದು ಒಂದು ರೀತಿಯಲ್ಲಿ ದೂರವಾಣಿ ಕದ್ದಾಲಿಕೆಯ ಆಧುನಿಕ ರೂಪ. ಸ್ಮಾರ್ಟ್‌ ಟಿವಿ ಮಾತ್ರವಲ್ಲ, ಸ್ಮಾರ್ಟ್‌ಹೋಂ ತಂತ್ರಜ್ಞಾನದಲ್ಲಿ ಬಳಸುವ ಹಲವು ಡಿವೈಸ್‌ಗಳ ಮೇಲೆ ಹ್ಯಾಕರ್‌ಗಳು ಈ ರೀತಿ ದಾಳಿ ನಡೆಸಿ ಮಾಹಿತಿ ಸೋರಿಕೆ ಮಾಡುತ್ತಾರೆ.

-ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT