ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಪಂಚಾಯಿತಿ ಬಳಿ ಜೆಡಿಎಸ್ ಧರಣಿ

ಅಧ್ಯಕ್ಷರ ಕೊಠಡಿ ಕಾಂಗ್ರೆಸ್ ಮುಖಂಡರು ದುರುಪಯೋಗ ಮಾಡಿಕೊಂಡ ಆರೋಪ
Last Updated 22 ಮಾರ್ಚ್ 2017, 5:52 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಕೊಠಡಿಯನ್ನು ಕಾಂಗ್ರೆಸ್‌ ಮುಖಂಡರು ದುರ್ಬಳಕೆ ಮಾಡಿ ಕೊಂಡು ಹುಟ್ಟುಹಬ್ಬ ಆಚರಿಸಿಕೊಳ್ಳುವ ಜತೆಗೆ ಅಲ್ಲಿಯೇ ಮದ್ಯಪಾನ ಮಾಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್‌ ಕಾರ್ಯಕರ್ತರು ಮಂಗಳವಾರ ತಾಲ್ಲೂಕು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.

ಕಾನೂನು ಬಾಹಿರವಾಗಿ ಸರ್ಕಾರಿ ಕಚೇರಿಯನ್ನು ದುರುಪಯೋಗ ಮಾಡಿಕೊಂಡವರ ವಿರುದ್ಧ ಪ್ರಕರಣ ದಾಖಲಿಸುವ ಜತೆಗೆ ಕರ್ತವ್ಯಲೋಪ ಎಸಗಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ (ಇಒ) ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ, ಪಂಚಾಯಿತಿ ಕಚೇರಿ ಬಾಗಿಲು ಮತ್ತು ಅಧ್ಯಕ್ಷರ ಕೊಠಡಿ ಮುಂದೆ ಬಿಯರ್‌ ಬಾಟಲಿಗಳನ್ನು ಕಟ್ಟಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಅವರು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ,‘ರಜೆ ದಿನವಾದ ಭಾನುವಾರ ಕಾಂಗ್ರೆಸ್ ಮುಖಂಡರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಕಚೇರಿಯನ್ನು ತಮ್ಮ ಮೋಜಿನ ಕೂಟಕ್ಕೆ ಬಳಸಿಕೊಂಡು ಜೆಸಿಬಿ ಮಂಜುನಾಥ್ ಎಂಬುವರ ಹುಟ್ಟುಹಬ್ಬ ಆಚರಿಸುವ ಜತೆಗೆ ಮದ್ಯಪಾನ ಮಾಡಿರುವುದು ಖಂಡನಾರ್ಹ. ಇದರ ನೈತಿಕ ಹೊಣೆ ಹೊತ್ತು ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಅವರು ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಇಒ ಗಿರಿಜಾ ಶಂಕರ್‌ ಅವರ ಬೇಜವಾಬ್ದಾರಿಯಿಂದ ಇಂತಹ ಘಟನೆ ನಡೆದಿದೆ. ಮಾಧ್ಯಮಗಳಲ್ಲಿ ಈ ಕುರಿತು ವರದಿ ಬಂದಾಗಲೂ ಅವರು ಎಚ್ಚೆತ್ತು ಕೊಂಡು ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲು ಮುಂದಾ ಗಿಲ್ಲ. ಹೀಗಾಗಿ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಹೇಳಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ‘ತಾಲ್ಲೂಕು ಪಂಚಾಯಿತಿ ಸದಸ್ಯ ತಿರು ಮಳಪ್ಪ, ಎಪಿಎಂಸಿ ಉಪಾಧ್ಯಕ್ಷ ವೆಂಕಟ ಕೃಷ್ಣಪ್ಪ, ಯುವ ಕಾಂಗ್ರೆಸ್ ಮುಖಂಡ ಎಸ್‌.ಪಿ. ಶ್ರೀನಿವಾಸ್ ಅವರು ಅಧ್ಯಕ್ಷರ ಕೊಠಡಿಯಲ್ಲಿ ನಿರ್ಭಿತಿಯಿಂದ ಹುಟ್ಟು ಹಬ್ಬ ಆಯೋಜಿಸುವ ಮೂಲಕ ಕ್ಷೇತ್ರದ ಜನತೆ ತಲೆ ತಗ್ಗಿಸುವಂತೆ ಮಾಡಿದ್ದಾರೆ.

ತಿರುಮಳಪ್ಪ ಮತ್ತು ವೆಂಕಟಕೃಷ್ಣಪ್ಪ ಅವರ ಸದಸ್ಯತ್ವವನ್ನು ರದ್ದುಪಡಿಸಿ, ಪ್ರಕರಣದಲ್ಲಿ ಭಾಗಿಯಾದ ಪ್ರತಿಯೊಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ. ರಾಜಾಕಾಂತ್, ‘ಇಂತಹ ಕೃತ್ಯಗಳಿಂದ ಸಾರ್ವಜನಿಕರಿಗೆ ಕೆಟ್ಟ ಸಂದೇಶ ರವಾನೆ ಯಾಗುತ್ತದೆ. ಇದಕ್ಕೆ ಅವಕಾಶ ಮಾಡಿ ಕೊಡಬಾರದು.  ಸರ್ಕಾರಿ ಕಚೇರಿ ದುರು ಪಯೋಗ ಮಾಡಿಕೊಂಡವರ ವಿರುದ್ಧ ಕ್ರಮ ಜರುಗಿ ಸಲೇ ಬೇಕು’ ಎಂದರು.

ಜಿ.ಪಂ ಸದಸ್ಯ ಕೆ.ಎಂ.ಮುನೇಗೌಡ, ತಾ.ಪಂ ಸದಸ್ಯ ಸತೀಶ್, ಲಾಯರ್ ನಾರಾಯಣಸ್ವಾಮಿ, ಶಿವ ಕುಮಾರ್, ಸತೀಶ್ ವೆಂಕಟೇಶ್, ಬಾಬು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

*
ಕ್ಷೇತ್ರದಲ್ಲಿ ತುಘಲಕ್ ಆಡಳಿತ ನಡೆಯುತ್ತಿದೆ. ಅದರಲ್ಲಿ ಕಾಂಗ್ರೆಸ್ ಮುಖಂಡರ ಅಂದಾ ದರ್ಬಾರ್ ಮಿತಿ ಮೀರಿದೆ. ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಗಳಾಗಿ ವರ್ತಿಸುತ್ತಿದ್ದಾರೆ.
-ಕೆ.ವಿ.ನಾಗರಾಜ್, ಜೆಡಿಎಸ್ ಜಿಲ್ಲಾ  ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT