ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಕ್ಕೆ ಬೆನ್ನು ತೋರಿಸದೆ ಬಾಳುತ್ತಿರುವ ರೈತ

ಹೊಂಡದಲ್ಲಿ ನೀರು ಸಂಗ್ರಹಿಸಿಕೊಂಡು ಕೃಷಿಯಲ್ಲಿ ‘ಖುಷಿ’ ಕಂಡುಕೊಂಡ ಚಿಕ್ಕಸೀತಪ್ಪ
Last Updated 22 ಮಾರ್ಚ್ 2017, 5:56 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬಿರುಬಿಸಿಲಿನ ನಡುವೆ ಹಸಿರು ಮುಕ್ಕಳಿಸುತ್ತಿದ್ದ ಆ ತೋಟದೊಳಗೆ ಅಡಿಯಿಡುತ್ತಿದ್ದಂತೆ ಆಹ್ಲಾದಕರ ವಾತಾವರಣ. ತೋಟದೊಳಗೆ ಪ್ರವೇಶಿಸಿದ ಅಪರಿಚಿತನನ್ನು ಕಂಡು ಬಳಿ ಸಾರಿದ ಹೊಲದೊಡೆಯ ಚಿಕ್ಕಸೀತಪ್ಪ ಅವರು, ಭೇಟಿಯ ಉದ್ದೇಶ ತಿಳಿಯುತ್ತಿದ್ದಂತೆ ಮಂದಹಾಸದ ನಗೆ ಯೊಂದಿಗೆ ತೋಟದೊಳಗೆ ಬರಮಾಡಿಕೊಳ್ಳುವ ಜತೆಗೆ ತಾವು ‘ಬರ’ ಮೆಟ್ಟಿ ನಿಲ್ಲುವ ದಿಸೆಯಲ್ಲಿ ಮಾಡಿರುವ ಕೆಲಸವನ್ನು ತೋರಿಸಿದರು.

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಚಿಕ್ಕ ದೊಂದು ಊರಿನವರಾದ ಚಿಕ್ಕಸೀತಪ್ಪ, ಮೇಲ್ದರ್ಜೆಗೇರಿದ ವಿಮಾನ ನಿಲ್ದಾಣ ತಮ್ಮ ಊರನ್ನು  ಆಪೋಶನ ಮಾಡಿಕೊಳ್ಳುತ್ತಿದ್ದಂತೆ ಸಂಸಾರದೊಂದಿಗೆ ಹುಟ್ಟೂರು ತೊರೆದವರು. ಕೈಗೆ ಸಿಕ್ಕಷ್ಟು ಪರಿಹಾರ ಹಣದಲ್ಲಿ 17 ವರ್ಷಗಳ ಹಿಂದೆ ತಾಲ್ಲೂಕಿನ ದಿಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕನಾಯಕನಹಳ್ಳಿಯಲ್ಲಿ ಜಮೀನು ಖರೀದಿಸಿದ ಅವರು ಅಲ್ಲಿಯೇ ನೆಲೆ ಕಂಡುಕೊಂಡವರು.

13 ಎಕರೆ ಜಮೀನು ಹೊಂದಿ ರುವ ಈ ರೈತ, ಕೃಷಿ ಉದ್ದೇಶಕ್ಕಾಗಿಯೇ ಕಳೆದ 17 ವರ್ಷಗಳಲ್ಲಿ ಒಂದರ ನಂತರ ಒಂದರಂತೆ ಈವರೆಗೆ 19 ಕೊಳವೆಬಾವಿ ಕೊರೆಯಿಸಿದ್ದಾರೆ. ಸದ್ಯ ಅವರ 2 ಕೊಳವೆ ಬಾವಿಗಳಲ್ಲಿ ಮಾತ್ರ ಅಲ್ಪಸ್ವಲ್ಪ ನೀರು ಸಿಗುತ್ತಿದೆ. ಸಿಕ್ಕ ನೀರನ್ನೇ ಕೃಷಿ ಹೊಂಡ ದಲ್ಲಿ ಸಂಗ್ರಹಿಸಿಟ್ಟುಕೊಂಡು ಮಿತಬಳಕೆ ಯಲ್ಲಿ ಅಚ್ಚುಕಟ್ಟಾಗಿ ವ್ಯವಸಾಯ ಮಾಡುತ್ತಿರುವ ಚಿಕ್ಕಸೀತಪ್ಪ ಅವರ ಕುಟುಂಬ ವರ್ಷಪೂರ್ತಿ ಹಸಿರ ನಡುವೆ ಹರ್ಷದಿಂದ  ಬದುಕುತ್ತಿದೆ.

ತಮ್ಮ ಜಮೀನಿನಲ್ಲಿ ವಿವಿಧ ಬಗೆಯ ತರಕಾರಿ ಜತೆಗೆ ರಾಗಿ, ಜೋಳದಂತಹ ಧ್ಯಾನಗಳನ್ನು ಬೆಳೆಯುವ ಈ ರೈತ, ವಾಣಿಜ್ಯ ಬೆಳೆಗಳಾದ ಗುಲಾಬಿ, ರೇಷ್ಮೆಯನ್ನು ಕೂಡ ಬೆಳೆಯುತ್ತಿದ್ದಾರೆ. ಇದೀಗ ಹೊಸದಾಗಿ 2 ಎಕರೆಯಲ್ಲಿ ದ್ರಾಕ್ಷಿ ತೋಟ ನಿರ್ಮಿಸುವ ಕಾರ್ಯ ಭರದಿಂದ ನಡೆದಿದೆ.

‘ಕೃಷಿ ಭಾಗ್ಯ’ ಯೋಜನೆಯಡಿ ಎರಡು ವರ್ಷಗಳ ಹಿಂದೆ ಜಮೀನಿನಲ್ಲಿ ನಿರ್ಮಿಸಿಕೊಂಡ ಕೃಷಿ ಹೊಂಡ ಇವರ ಪಾಲಿಗೆ ಸದ್ಯ ಅಕ್ಷರಶಃ ‘ಭಾಗ್ಯ’ವೇ ಆಗಿದೆ. ಅಂತರ್ಜಲ ಕುಸಿತ, ಬರದಿಂದ ಬೋರ್‌ವೆಲ್‌ಗಳು ಬತ್ತಿ ‘ಕೃಷಿ ಬಿಕ್ಕಟ್ಟು’ ಎದುರಿಸುತ್ತಿರುವ ರೈತರು ಮುಂದೇನು ಎಂದು ತಲೆ ಮೇಲೆ ಕೈಹೊತ್ತು ಕುಳಿತು ಕೊಳ್ಳುತ್ತಿರುವ ಈ ಹೊತ್ತಿನಲ್ಲಿ, ತಾವು ಬೆಳೆಯುವ ಉತ್ತಮ ಬೆಳೆಗಳಿಗೆ ತಕ್ಕು ದಾದ ಬೆಲೆ ಸಿಗುತ್ತಿಲ್ಲ ಎನ್ನುವ ನೋವು ಚಿಕ್ಕಸೀತಪ್ಪ ಅವರನ್ನು ಬಾಧಿಸುತ್ತಿದೆ.

ಮಳೆ ನೀರು ಸಂಗ್ರಹ: ಚಿಕ್ಕಸೀತಪ್ಪ ಅವರ ಜಮೀನಿನಲ್ಲಿರುವ ಸುಮಾರು 30*40 ಅಡಿ ಅಳತೆಯ 12 ಅಡಿ ಆಳದ ಕೃಷಿ ಹೊಂಡಕ್ಕೆ ಪ್ಲಾಸ್ಟಿಕ್ ಹೊದಿಕೆ ಮಾಡಲಾಗಿದೆ. ಇದರಿಂದಾಗಿ ನೀರು ಭೂಮಿಯಲ್ಲಿ ಇಂಗುವ ಸಮಸ್ಯೆ ಇಲ್ಲ.

ಮಳೆ ಸುರಿದಾಗ ಜಮೀನಿನಲ್ಲಿ ವ್ಯರ್ಥ ವಾಗಿ ಹರಿದು ಹೋಗುತ್ತಿದ್ದ ನೀರನ್ನು ಕಾಲುವೆ ಮೂಲಕ ಹೊಂಡಕ್ಕೆ ಹರಿಸಿ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಸ್ವಲ್ಪ ಮಳೆಯಾದರೂ ಇವರ ಹೊಂಡದಲ್ಲಿ ನೀರು ಸಂಗ್ರಹವಾಗುತ್ತದೆ.

ಇಡೀ ಜಮೀನಿನಲ್ಲಿ ವ್ಯವಸ್ಥಿತವಾಗಿ ಪೈಪ್‌ಲೈನ್ ಅಳವಡಿಸಿರುವ ಈ ರೈತ ಅದಕ್ಕೆ ಹೊಂಡದಲ್ಲಿ ಅಳವಡಿಸಿರುವ ಮೋಟರ್‌ ಸಂಪರ್ಕ ಕಲ್ಪಿಸಿದ್ದಾರೆ. ಅದರ ಮೂಲಕ ಪ್ರತಿಯೊಂದು ಬೆಳೆಯನ್ನು ಹನಿ ನೀರಾವರಿ, ಸ್ಪ್ರಿಂಕ್ಲರ್‌ ಮೂಲಕ ಮಿತ ನೀರಿನ ಬಳಕೆಯಲ್ಲಿ ಬೆಳೆಯುತ್ತಾರೆ. ಆಲೂಗಡ್ಡೆ ಹೊರತುಪಡಿಸಿದಂತೆ ಇವರು ಯಾವ ಬೆಳೆಗಳಿಗೂ ನೀರು ಹರಿಸು ವುದೇ ಇಲ್ಲ.

1,500 ಅಡಿ ಕೊರೆದರೂ ನೀರಿಲ್ಲ: ‘ನಮ್ಮ ಕಥೆ ಯಾಕೆ ಕೇಳ್ತಿರಿ? ಈ ಜಮೀನಿನಲ್ಲಿ 19 ಹೋಲ್‌ ಹಾಕಿಸಿ ದ್ದೇವೆ. ಇನ್ನೇನ್‌ ಮಾಡ್ತಿರಾ? ನಾವು ರೈತರು ಬೋರ್‌ವೆಲ್‌ ಬಿಟ್ಟರೆ ವಿಧಿ ಇಲ್ಲಾ. ದೇವರು ಕೊಟ್ಟರೆ ಉಂಟು, ಇಲ್ಲದಿದ್ದರೆ ಇಲ್ಲಾ. ಈ ಭಾಗದಲ್ಲಿ ಸದ್ಯ 1,500 ಅಡಿ ಕೊರೆದರೂ ನೀರು ಸಿಗುವ ಭರವಸೆ ಇಲ್ಲ. ಒಂದು ಕೊಳವೆಬಾವಿ

ಕೊರೆಯಲು ₹ 4 ಲಕ್ಷ ವೆಚ್ಚವಾಗು ತ್ತದೆ. ನೀರು ಹೊರಗೆ ಹಾಕಬೇಕಾದರೆ ರೈತ ₹ 7 ಲಕ್ಷ ಖರ್ಚು ಮಾಡಬೇಕು. ಆ ಬೋರ್‌ವೆಲ್‌ ಕೂಡ ಎಷ್ಟು ದಿನ ಬಾಳು ತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಕೆಲವೇ ದಿನಕ್ಕೇನಾದರೂ ಅದು ಬತ್ತಿತೋ ರೈತನ ಜೀವನವೇ ಬರ್ಬಾದ್’ ಎನ್ನುತ್ತಾರೆ ಚಿಕ್ಕಸೀತಪ್ಪ.
‘ಚುನಾವಣೆಯಲ್ಲಿ ವಿವಿಧ ಯೋಜ ನೆಗಳ ಜಪ ಮಾಡುತ್ತ ಮನೆ ಬಾಗಿಲಿಗೆ ಬರುವ ಶಾಸಕರು, ಸಂಸದರು ಮತ ಪಡೆದಾದ ಬಳಿಕ ನಾಪತ್ತೆ ಯಾಗುತ್ತಾರೆ.

ಸುಮಾರು 10 ವರ್ಷಗ ಳಿಂದ ಎತ್ತಿನಹೊಳೆ ಹೆಸರು ಹೇಳುತ್ತ ರೈತರ ಮೂಗಿಗೆ ತುಪ್ಪ ಸವರುತ್ತ ಬರುತ್ತಿ ದ್ದಾರೆ. ಅದು ಈವರೆಗೆ ಕಾರ್ಯಗತ ಗೊಂಡಿಲ್ಲ. ರಾಜಕಾರಣಿಗಳು ತಮಗೆ ಬೇಕಾದಂತೆ ಬೆಳೆ ಬೇಯಿಸಿಕೊಳ್ಳುತ್ತಾರೆ.

ರೈತರ ಕಥೆ ಅಷ್ಟೇ. ಚೆನ್ನಾಗಿ ಮಳೆ ಹೋಯ್ದರೆ ಉಂಟು ಇಲ್ಲದಿದ್ದರೆ ಇಲ್ಲಾ. ರೈತರು ಇವತ್ತು ಬದುಕಬೇಕಾದರೆ ಮಳೆ ನೀರನ್ನು ಸಂಗ್ರಹಿಸಿಕೊಂಡು ಜಾಣತನ ದಿಂದ ಬಳಕೆ ಮಾಡಿಕೊಳ್ಳುವುದು ಅನಿವಾರ್ಯ’ ಎಂದು ಹೇಳುತ್ತಾರೆ.

*
ಬಯಲು ಸೀಮೆಯ ರೈತರಿಗೆ ಸದಾ ನೀರಿನ ಸಮಸ್ಯೆ ಇದ್ದದ್ದೆ. ಕೃಷಿ ಹೊಂಡ ನಿರ್ಮಿಸಿಕೊಂಡ ಬಳಿಕ ಇರುವುದರಲ್ಲಿಯೇ ಸ್ವಲ್ಪ ನೆಮ್ಮದಿಯಿಂದ ಇದ್ದೇವೆ. ಉತ್ತಮ ಬೆಳೆ ಬೆಳೆಯುತ್ತಿದ್ದೇವೆ.
-ಚಿಕ್ಕಸೀತಪ್ಪ, ಲಕ್ಕನಾಯಕನಹಳ್ಳಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT