ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಗೆ ಮಳೆ ನೀರಿನ ಲೆಕ್ಕ ಬೇಕು

ನಗರದಲ್ಲಿ 1.5 ಟಿಎಂಸಿ ಅಡಿ ನೀರು ಉತ್ಪತ್ತಿ; ಹೊಸ ಯೋಜನೆಗೆ ಬೇಕಿದೆ ಇಚ್ಛಾಶಕ್ತಿ
Last Updated 22 ಮಾರ್ಚ್ 2017, 6:00 IST
ಅಕ್ಷರ ಗಾತ್ರ

ತುಮಕೂರು: ಇಂದು ವಿಶ್ವ ಜಲ ದಿನಾಚರಣೆ. ಹನಿ ನೀರಿಗೂ ಕಷ್ಟಪಡುವಂಥ ಸ್ಥಿತಿಗೆ ಬಂದಿರುವ ತುಮಕೂರು ಮಹಾ ನಗರದ ಜನರಿಗೆ ಪಾಲಿಕೆ, ಜಿಲ್ಲಾಡಳಿತ ಮಳೆ ನೀರಿನ ಲೆಕ್ಕ ಕೊಡಬೇಕಾಗಿದೆ.

  ಮಹಾ ನಗರ ಕುಡಿಯುವ ನೀರಿಗೆ ಹೇಮಾವತಿ ನದಿ ನೀರಿನ ಮೇಲೆಯೇ ಸಂಪೂರ್ಣವಾಗಿ ಅವಲಂಬಿಸಿದೆ. ಆದರೆ ನಗರದಲ್ಲಿ ಬೀಳುವ ಮಳೆ ನೀರೇ ನಗರದ ಜನರಿಗೆ ಕುಡಿಯಲು, ಬಳಕೆಗೆ ಸಾಕಾಗುವಷ್ಟಿದೆ ಎನ್ನುತ್ತಿದ್ದಾರೆ ಜಲ ತಜ್ಞರು.

ನಗರದಲ್ಲಿ ಬೀಳುವ ಮಳೆ ನೀರು ಎಲ್ಲಿಗೆ ಹೋಗುತ್ತಿದೆ ಎಂಬುದಕ್ಕೆ ಯಾವ ಇಲಾಖೆಯಲ್ಲೂ ಮಾಹಿತಿ ಇಲ್ಲವಾಗಿದೆ. ನಗರದ ಚರಂಡಿಗಳ ಜಾಲವೂ ಸರಿ ಇಲ್ಲವಾಗಿದೆ. ಬಹುತೇಕ ಚರಂಡಿಗಳ ನೀರು ಕೆರೆ ಸೇರುತ್ತಿಲ್ಲ.  ಎಲ್ಲೆಲ್ಲೋ ನಿಂತು, ಎಲ್ಲೆಲ್ಲಿಗೂ ಹರಿದು ಹೋಗಿ ಮಳೆ ನೀರು ಪೋಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಹಳ್ಳಿಗಳಿಗಿಂತಲೂ ನಗರದ ಮಳೆ ನೀರಿನ ಲೆಕ್ಕವನ್ನು ಬೇರೆ ರೀತಿಯಲ್ಲೇ ನೋಡಬೇಕು ಎನ್ನುತ್ತಾರೆ ಹೇಮಾವತಿ ನಾಲಾ ವಲಯದ ಎಂಜಿನಿಯರೊಬ್ಬರು.
ನಗರದಲ್ಲಿ ಕಾಂಕ್ರೀಟ್‌, ಡಾಂಬರು ರಸ್ತೆಗಳು, ಮನೆಗಳ ಸಂಖ್ಯೆಯೇ ಹೆಚ್ಚು. ಹೀಗಾಗಿ ಮಳೆ ನೀರು ಭೂಮಿಯಲ್ಲಿ ಇಂಗಿ ಹೋಗುವ ಪ್ರಮಾಣ ಕಡಿಮೆ ಇರುತ್ತದೆ. ಹೀಗಾಗಿ ಈ ಮಳೆ ನೀರು ನಗರದ ಕೆರೆಗಳಿಗೆ ಹೋಗುವಂತೆ ಮಾಡಿದರೆ ನಗರದ ನೀರಿನ ಸಮಸ್ಯೆಯೇ ಬಗೆಹರಿಯಲಿದೆ ಎನ್ನುತ್ತಾರೆ ಅವರು.

‘ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಕಟ್ಟಡಗಳನ್ನು ಕಟ್ಟುವುದು ಮುಖ್ಯವಲ್ಲ, ನಗರದ ಉಷ್ಣಾಂಶ ಎಷ್ಟು ಕಡಿಮೆ ಮಾಡುತ್ತೇವೆ. ಪರಿಸರ ಎಷ್ಟು ಸುಧಾರಿಸುತ್ತೇವೆ ಎಂಬುದು ಮುಖ್ಯವಾಗಬೇಕು. ಮಳೆ ನೀರು, ಕೊಳಚೆ ನೀರಿನಿಂದ ನಗರದ ಎಲ್ಲ ಕೆರೆಗಳನ್ನು ತುಂಬಿಸುವ ಯೋಜನೆ ಸಿದ್ಧಪಡಿಸಿ ಎಂಬ ನನ್ನ ಮಾತಿಗೆ ಮನ್ನಣೆ ಸಿಗಲಿಲ್ಲ’ ಎಂದು ಸ್ಮಾರ್ಟ್‌ ಸಿಟಿ ಸಲಹಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್‌ ಬೇಸರ ವ್ಯಕ್ತಪಡಿಸಿದರು.

1 ಟಿಎಂಸಿ ಅಡಿ ಮಳೆ ನೀರು: ತುಮಕೂರು ನಗರವು 50 ಚದರ ಕಿಲೋ ಮೀಟರ್‌ ಸುತ್ತಳತೆ ಹೊಂದಿದೆ. ವಾಡಿಕೆ ಮಳೆಯು 540 ಮಿಲಿ ಮೀಟರ್‌ ಆಗಿದೆ. ವಾಡಿಕೆ ಮಳೆಗಿಂತ ಅರ್ಧದಷ್ಟು ಕಡಿಮೆ ಮಳೆಯಾದರೂ ವರ್ಷದಲ್ಲಿ 1.5 ಟಿಎಂಸಿ ಅಡಿ ನೀರು ನಗರದಲ್ಲಿ ಸಿಗಲಿದೆ. ಇದರಲ್ಲಿ 0.5 ಟಿಎಂಸಿ ಅಡಿ ನೀರು ವ್ಯರ್ಥವಾದರೂ ಇನ್ನೂ 1 ಟಿಎಂಸಿ ಅಡಿ ನೀರು ಸಿಗಲಿದೆ ಎಂದು ಅಂದಾಜಿಸುತ್ತಾರೆ ನಿವೃತ್ತ ಎಂಜಿನಿಯರ್‌ ರಾಮಚಂದ್ರಯ್ಯ.

1 ಟಿಎಂಸಿ ಅಡಿ ನೀರು ಇದ್ದರೆ ತುಮಕೂರು ನಗರದಲ್ಲಿರುವ ಎಲ್ಲ ಕೆರೆಗಳನ್ನು ತುಂಬಿಸಬಹುದು. ತುಮಕೂರು ನಗರಕ್ಕೆ ಕುಡಿಯಲು ಮಳೆ ನೀರಷ್ಟೆ ಸಾಕಾಗಲಿದೆ. ಹೇಮಾವತಿ ನೀರಿನ ಅಗತ್ಯವೇ ಇಲ್ಲ ಎನ್ನುತ್ತಾರೆ ಅವರು.

ಕೊಳಚೆ ನೀರು: ಮೊದಲ ಮತ್ತು ಎರಡನೇ ಒಳ ಚರಂಡಿ ಯೋಜನೆಯಡಿ 1 ಟಿಎಂಸಿ ಅಡಿಯಷ್ಟು ಕೊಳಚೆ ನೀರು ನಗರದಲ್ಲಿ ಉತ್ಪತ್ತಿಯಾಗುತ್ತದೆ. ಈ ನೀರನ್ನು ಶುದ್ಧೀಕರಿಸಿ ನಗರದ ಎಲ್ಲ ಕೆರೆಗಳನ್ನು ತುಂಬಿಸಬಹುದು ಎನ್ನುತ್ತಾರೆ ಕುಂದರನಹಳ್ಳಿ ರಮೇಶ್‌.

ಮಳೆ ನೀರಿಗಾಗಿ ಪ್ರತ್ಯೇಕ ಮಾರ್ಗ
ನಗರದ ಮನೆಗಳ ಮೇಲೆ ಬೀಳುವ ಮಳೆಯ ನೀರನ್ನು ಹಿಡಿದಿಡಲು ಪ್ರತ್ಯೇಕ ಕೊಳವೆ ಮಾರ್ಗವನ್ನು ರೂಪಿಸುವ ಮಾರ್ಗೋಪಾಯವು ಇದೆ. ಈ ಬಗ್ಗೆ ಸ್ಮಾರ್ಟ್‌ ಸಿಟಿ ಸಲಹೆಗಾರರು ಚಿಂತಿಸಬೇಕು ಎನ್ನುತ್ತಾರೆ ಹಲವು ಎಂಜಿನಿಯರ್‌ಗಳು.

ಅಮಾನಿಕೆರೆ ಸೇರಿ ನಗರದ ಒಳಭಾಗದಲ್ಲಿರುವ ಎಲ್ಲ ಕೆರೆಗಳನ್ನು ತುಂಬಿಸಲು ಈ ಯೋಜನೆ ವರದಾನವಾಗಲಿದೆ. ಸಾಧ್ಯಸಾಧ್ಯತೆಗಳನ್ನು ಅಧ್ಯಯನ ಮಾಡಬೇಕು. ಸಾಧ್ಯವಿರುವ ಕೆರೆಗಳಿಗೆ ಮಳೆ ನೀರಿನ ಕೊಳವೆ ಮಾರ್ಗ ಹಾಕುವ ಬಗ್ಗೆ ಚಿಂತಿಸಬೇಕು ಎನ್ನುತ್ತಾರೆ ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ರಾಘವೇಂದ್ರ.

‘ತಮ್ಮ ಮನೆಗಳ ಚಾವಣೆ ನೀರನ್ನು ಮಳೆ ನೀರು ಕೊಳವೆ ಮಾರ್ಗಕ್ಕೆ ಮನೆಗಳ ಮಾಲೀಕರು ಸಂರ್ಕಿಸಬೇಕು. ಈ ಯೋಜನೆ ಕಡ್ಡಾಯ ಮಾಡಿದರೂ ನಗರದ ಕೆರೆಗಳನ್ನು ತುಂಬಿಸಬಹುದು. ಮಳೆ ನೀರು ಪೋಲಾಗುವುದನ್ನು ತಡೆಯಬಹುದು’ ಎಂದು ವಿಶ್ಲೇಷಿಸಲಾಗಿದೆ.

ಕಳೆದಹೋಗಿರುವ ತುಮಕೂರು ನಗರದ ಕೆರೆಗಳು
* ಅಂತರಸನಹಳ್ಳಿ ಕೆರೆ (ಎಪಿಎಂಸಿ, ಬಸ್‌ ಡಿಪೊ ಆಗಿದೆ)
* ಬಾಳನಕಟ್ಟೆ ಕೆರೆ (ರಂಗ ಮಂದಿರ, ಮಾರುಕಟ್ಟೆ ಆಗಿದೆ)
* ಅಕ್ಕ–ತಂಗಿ ಕೆರೆ ( ಪಾರ್ಕ್‌ ಆಗಿದೆ)
*ಅಳಶೆಟ್ಟಿಕೆರೆ (ಸರ್ಕಾರಿ ಕಚೇರಿಗಳನ್ನು ಕಟ್ಟಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT