ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರಿನ ಮನೆಗಳು...

Last Updated 22 ಮಾರ್ಚ್ 2017, 6:06 IST
ಅಕ್ಷರ ಗಾತ್ರ

ತುಮಕೂರು: ‘ಅಪ್ಪಾ, ಇಂಥ ಸ್ಥಿತಿ ಯಾರಿಗೂ ಬರಬಾರದು. ನನಗಂತೂ ರೇಜಿಗೆ ಹುಟ್ಟಿದೆ. ಮನೆ ಪಾತ್ರೆ ಬೆಳಗಿಲ್ಲ, ಸ್ನಾನ ಮಾಡಿಲ್ಲ, ಮಕ್ಕಳಿಗೆ ತಿಂಡಿ ಮಾಡಲೂ ಸಾಧ್ಯವಾಗಿಲ್ಲ. ಮನೆಯಲ್ಲಿ ಒಂದು ಹನಿ ನೀರಿಲ್ಲ’...

ಇಂಥ ಮಾತುಗಳಿಗೆ ಇವರೆಲ್ಲ ನಗಾಡಿದರು. ನಗರದ ಈ ಮನೆಗಳ ಗೃಹಿಣಿಯರಿಗೆ ನೀರಿನ ಕಷ್ಟವೇ ಗೊತ್ತಿಲ್ಲ. ಹೌದು; ಇವರೆಲ್ಲ ಮಳೆ ನೀರು ಸಂಗ್ರಹಿಸಿಕೊಂಡ ಸಾಧಕಿಯರು.

ಪಾಲಿಕೆ ಪೂರೈಸುವ ನೀರು, ಕೊಳವೆ ಬಾವಿ ನೀರನ್ನು ನೆಚ್ಚಿಕೊಳ್ಳದೇ ನಮಗೆ ಬೇಕಾದ ನೀರಿನ ವ್ಯವಸ್ಥೆ ನಾವೇ ಮಾಡಿಕೊಳ್ಳಬಹುದು. ಇದಕ್ಕಾಗಿ ಮಳೆ ನೀರು ಇದೆಯಲ್ಲ  ಎಂಬುದು ಬಹುತೇಕರ ವಾದ.

ತುಮಕೂರಿನಲ್ಲಿ 150ಕ್ಕೂ ಹೆಚ್ಚು ಮನೆಗಳಲ್ಲಿ  ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಂಡಿದ್ದಾರೆ.  ಮಳೆ ನೀರನ್ನು ಕೆಲವರು ಕುಡಿಯಲು  ಮಾತ್ರ ಬಳಸುತ್ತಿದ್ದರೆ, ಮತ್ತೆ ಕೆಲವರು ಗೃಹಪಯೋಗಿ ಬಳಕೆ ಸೇರಿ ಎಲ್ಲ ರೀತಿಯ ಚಟುವಟಿಕೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಕುಡಿಯಲಷ್ಟೇ ಮಳೆ ನೀರು ಬಳಸಿಕೊಳ್ಳುತ್ತಿರುವರ ಮನೆಗಳಲ್ಲಿ ಇಂಥ ಬೇಸಿಗೆಯಲ್ಲೂ ಮಳೆ ನೀರನ್ನು ಬಳಸಲಾಗುತ್ತಿದೆ! ಎಲ್ಲ ಬಳಕೆಗೂ ಮಳೆ ನೀರು ಬಳಸಿಕೊಂಡವರು ಯಾಕಾದರೂ ಮಳೆ ನೀರು ಅತಿಯಾಗಿ ಬಳಕೆ ಮಾಡಿಕೊಂಡೆವು ಎಂದು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.

ಈಚೆಗೆ ನಗರದಲ್ಲಿ ಬಂದ ಅರ್ಧ ಗಂಟೆಯ ಮಳೆ ಕೆಲವರ ಮನೆಗಳಲ್ಲಿ  ತಿಂಗಳಿಗಾಗುವಷ್ಟು ನೀರು ಸಂಗ್ರಹವಾಗಿದೆ. ಮತ್ತೆ ಕೆಲವು ಮನೆಗಳಲ್ಲಿ ನಾಲ್ಕೈದು ದಿನಗಳ ದಾಹ ನೀಗಿಸಿದೆ.

ಕೆಲವು ಮನೆಯವರು  ಸಂಪ್‌ನಲ್ಲೆ ಮಳೆ ನೀರನ್ನು ಸಂಗ್ರಹಿಸುತ್ತಿದ್ದರೆ, ಮತ್ತೆ ಕೆಲವರು ಟ್ಯಾಂಕ್‌ನಲ್ಲೆ  ನೀರನ್ನು ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ.
ಮಳೆಗಾಲದ ಸಂದರ್ಭದಲ್ಲಿ ನೀರಿನ ಸಮಸ್ಯೆ ಕಾಣುವುದಿಲ್ಲ. ಜತೆಗೆ ಬೇಸಿಗೆಯಲ್ಲೂ ಮಳೆಗಾಲದಲ್ಲಿ ಬಂದಿದ್ದ ಮಳೆ ನೀರನ್ನು ಮೂರು ತಿಂಗಳು ತನಕ ಶೇಖರಣೆ ಮಾಡಿ ಬಳಕೆ ಮಾಡಬಹುದು ಎಂಬುದು ಈ ಜನರ ಮಾತು.

‘ಇಲ್ಲಿಗೆ ಬಂದಾಗ ಇಲ್ಲಿ ಉಪ್ಪು ನೀರು ಸಿಗುತ್ತಿತ್ತು. ಹೀಗಾಗಿ 8 ವರ್ಷದ ಹಿಂದಿನಿಂದಲೇ ಮನೆಯಲ್ಲಿ ಮಳೆ ನೀರು ಸಂಗ್ರಹ ಮಾಡಿ ಬಳಕೆ ಮಾಡಿಕೊಳ್ಳುತ್ತಿದ್ದೇನೆ. ನನ್ನದು ಚಿಕ್ಕ ಮನೆ,  ಕುಡಿಯುವ ನೀರಿನ ಉದ್ದೇಶಕ್ಕಾಗಿಯೇ ಮಳೆ ನೀರು ಸಂಗ್ರಹ ಮಾಡುತ್ತಿದ್ದೇವೆ’ ಎನ್ನುವರು ಕ್ಯಾತ್ಸಂದ್ರದಲ್ಲಿ ವಾಸವಿರುವ ನಿವೃತ್ತ ಸಬ್‌ ಇನ್‌ಸ್ಪೆಕ್ಟರ್ ಕೆ.ವಿ.ಕೃಷ್ಣಮೂರ್ತಿ.

‘ಬಂದ ಮಳೆ ನೀರು ಸುಮ್ಮನೆ ಚರಂಡಿಗಳಿಗೆ ವ್ಯರ್ಥವಾಗುವ ಬದಲು ಸಂಗ್ರಹ ಮಾಡಿಕೊಂಡರೆ ಸುತ್ತಮುತ್ತಲೂ ಗಿಡ ಮರಗಳನ್ನು ಬೆಳೆಸಿಕೊಳ್ಳಬಹುದು. ಈ ಗಿಡಗಳಿಂದ ನಮಗೆ ಶುದ್ಧ ಗಾಳಿಯೂ ಸಿಗುತ್ತದೆ ಇಂಥ ಬೇಸಿಗೆಯಲ್ಲೂ ನಮ್ಮ ಮನೆಗೆ  ನೀರಿನ ಸಮಸ್ಯೆ ಬಂದಿಲ್ಲ’ ಎಂದು ನಸು ನಕ್ಕರು.

‘ಎಲ್ಲರೂ ಹಣ ನೀಡಿ ಶುದ್ಧೀಕರಿಸಿದ ನೀರನ್ನು ತಂದು ಕುಡಿಯುತ್ತಾರೆ. ನಮಗೆ ಈ ಉಸಾಬರಿಯೇ ಬೇಡ ಎಂದು ಈಚೆಗಷ್ಟೆ ಕಟ್ಟಿಸಿದ ಹೊಸ ಮನೆಗೆ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಿಕೊಂಡೆವು. ಮಳೆ ನೀರಿಗಿಂತ ಶುದ್ಧ ನೀರು ಬೇಕೆ ಎಂದು ಹೆಮ್ಮೆಯಿಂದ ಪ್ರಶ್ನಿಸುತ್ತಾರೆ ಕ್ಯಾತ್ಸಂದ್ರದ ಗೃಹಿಣಿ ನಾಗರತ್ನಾ.
–ರಾಜು. ಆರ್‌

₹ 40 ಸಾವಿರ ಖರ್ಚು ಮಾಡಿದರೆ ಸಾಕು
ಮಳೆ ನೀರು ಸಂಗ್ರಹ ಅನುಸರಿಸಬೇಕಾದರೆ ಸಂಪ್‌ ವ್ಯವಸ್ಥೆ ಹೊಂದಿದ್ದು, ಪೈಪ್‌ಗಳು ಹಾಗೂ ಇತರೆ ಸಾಮಗ್ರಿಗಳಿಗೆ ಕನಿಷ್ಠ ₹ 40 ಸಾವಿರದವರೆಗೂ ಖರ್ಚು ಬರುತ್ತದೆ ಎನ್ನುತ್ತಾರೆ  ಜಿಲ್ಲಾ ಫ್ಲಂಬರ್‌ ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಜೆ.ಮಂಜುನಾಥ್‌.

‘ನಾವು ಇದುವರೆಗೂ ತುಮಕೂರು ನಗರದಲ್ಲಿ 150 ಮನೆಗಳಿಗೆ ಮಳೆ ನೀರು ಸಂಗ್ರಹಣೆಯನ್ನು ಅಳವಡಿಸಿದ್ದೇವೆ.  ಅಸೋಸಿಯೇಷನ್‌ನಿಂದ ರಿಯಾಯಿತಿ ದರದಲ್ಲೂ ಮಳೆ ನೀರಿನ ವ್ಯವಸ್ಥೆ ಮಾಡಿಕೊಡಲಾಗುವುದು’ ಎಂದರು.

1 ಗಂಟೆ ಮಳೆ ಬಿದ್ದರೆ 3 ದಿನ ನೀರು
‘ಈಚೆಗೆ ಬಂದು ಗಂಟೆ ಬಂದ ಮಳೆಗೆ ಮೂರು ದಿನಕ್ಕಾಗುವಷ್ಟು ಬಳಕೆಗೆ ಹಾಗೂ ಕುಡಿಯಲು ನೀರು ಸಿಕ್ಕಿತು‘ ಎಂದು ಸಂಭ್ರಮಪಟ್ಟರು  ನಾಗರತ್ನಾ.

ಮಳೆ ನೀರು ಸಂಗ್ರಹಿಸಿಟ್ಟುಕೊಂಡರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯೇ ಕಾಣಿಸಿದು.  ಮನೆಯಲ್ಲಿ ಪಾತ್ರೆ ತೊಳೆದ ನೀರನ್ನು ಸಹ ವ್ಯರ್ಥ ಮಾಡದೇ ಗಿಡಗಳಿಗೆ ಹಾಕುತ್ತೇನೆ ಎಂದರು.

*
ಮಳೆ ನೀರು ಸಂಗ್ರಹಿಸಿ, ಶುದ್ಧೀಕರಿಸಿ ಕುಡಿದರೆ ಅನಾರೋಗ್ಯದ ಮಾತೇ ಇಲ್ಲ.
-ಕೆ.ವಿ.ಕೃಷ್ಣಮೂರ್ತಿ,
ನಿವೃತ್ತ ಸಬ್‌ ಇನ್‌ಸ್ಪೆಕ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT