ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿದೆ 24X7 ನೀರಿನ ಸೆಲೆ

ತೆರೆದ ಬಾವಿಗಳ ಬೆನ್ನ ಹಿಂದಿನ ಕಥೆ ಆಲಿಸುತ್ತಾ... 30 ಅಡಿಗೆಲ್ಲ ಉಕ್ಕುತ್ತಿದೆ ನೀರು
Last Updated 22 ಮಾರ್ಚ್ 2017, 6:09 IST
ಅಕ್ಷರ ಗಾತ್ರ

ತುಮಕೂರು:  ಎರಡು ದಶಕಗಳ ಹಿಂದೆ ಸಾಮಾನ್ಯವಾಗಿ ತೆರೆದ ಬಾವಿಗಳಿಂದ ನೀರನ್ನು ಸೇದಿಕೊಂಡು ಬಳಕೆ ಮಾಡುತ್ತಿದ್ದುದನ್ನು ಗ್ರಾಮಗಳಲ್ಲಷ್ಟೇ ಅಲ್ಲ. ನಗರ ಪ್ರದೇಶಗಳಲ್ಲೂ ಕಂಡು ಬರುತ್ತಿತ್ತು.

ಆದರೆ, ಅಂತರ್ಜಲ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿದು ಪಾತಾಳ ಕಂಡಿದ್ದು, ಸಕಾಲಕ್ಕೆ ಮಳೆ ಆಗದೇ ಇರುವುದು ತೆರೆದ ಬಾವಿಗಳು ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತ ಬಂದವು.

ಆಗಿನ ಶುದ್ಧ ಕುಡಿಯುವ ನೀರು ಘಟಕಗಳೆಂದರೆ ಈ ತೆರೆದ ಬಾವಿಗಳೇ ಆಗಿದ್ದವು. ಯತೇಚ್ಛ ನೀರು ಇದ್ದುದ್ದರಿಂದ ಕುಡಿಯಲು ಮತ್ತು ಬಳಕೆ ಮಾಡಲು ಈ ಬಾವಿಗಳಿಂದ ನೀರನ್ನು ಪಡೆಯುತ್ತಿದ್ದ ಜನರು ಅವುಗಳನ್ನು ಅಷ್ಟೇ ಕಾಳಜಿಪೂರ್ವಕವಾಗಿ ರಕ್ಷಣೆ ಮಾಡಿಕೊಂಡು ಬಂದಿದ್ದರು. ಕಸಕಡ್ಡಿ ಹಾಕದಂತೆ, ಕಲುಷಿತವಾಗದಂತೆ, ಕಾಲ ಕಾಲಕ್ಕೆ ಸ್ವಚ್ಛಗೊಳಿಸುವುದು, ಹೊರ ಮೈಯಲ್ಲಿ ಸುಣ್ಣ, ಬಣ್ಣ, ಬಳಿಸಿ ರಕ್ಷಿಸಿಕೊಂಡಿದ್ದರು.

ಆದರೆ, ಈಗ ಆ ಬಾವಿಗಳು ಕಸದ ತೊಟ್ಟಿಗಳಂತೆ ಗೋಚರಿಸುತ್ತಿವೆ. ಒಂದು ಕಾಲದಲ್ಲಿ ಜೀವಜಲ ಕೊಟ್ಟು ಬದುಕಿಸಿದ್ದ ತೆರೆದ ಬಾವಿಯ ಬಾಯಿಗೆ ಈಗ ಜನರು ಕಸಕಡ್ಡಿ, ಮನೆಯ ತ್ಯಾಜ್ಯ ವಸ್ತು ತಂದು ಸುರಿಯುತ್ತಿದ್ದಾರೆ. ಅಷ್ಟೇ ಯಾಕೆ ಸತ್ತ ಪ್ರಾಣಿಗಳನ್ನು ಎಸೆಯುತ್ತಿದ್ದಾರೆ.

ಇಂತಹ ಪರಿಸ್ಥಿತಿಯಲ್ಲೂ ತುಮಕೂರು ಮಹಾನಗರದ ಕೆಲ ಬಡಾವಣೆಯಲ್ಲಿ ತೆರೆದ ಬಾವಿಗಳು ಆ ಬಡಾವಣೆಯ ಜನರ ಕಾಳಜಿಯಿಂದ ಜೀವ ಹಿಡಿದು ಬದುಕಿವೆ. ಬಡಾವಣೆಯ ನಿವಾಸಿಗಳಿಗೆ ಆಸರೆಯಾಗಿವೆ.

ಮಹಾನಗರ ಪಾಲಿಕೆ, ಖಾಸಗಿ ವ್ಯಕ್ತಿಗಳು 800ರಿಂದ 1000 ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಆದರೆ, ಇಲ್ಲಿ 40ರಿಂದ 50 ವರ್ಷಗಳಷ್ಟು ಹಳೆಯದಾದ ತೆರೆದ ಬಾವಿಗಳು ಈಗಲೂ ನೀರು ತುಂಬಿಕೊಂಡು ಅಸ್ತಿತ್ವ ಉಳಿಸಿಕೊಂಡಿವೆ.

ತೆರೆದ ಬಾವಿಗಳು ಇರುವ ಬಡಾವಣೆ ನಿವಾಸಿಗಳು ನೀರಿನ ವಿಷಯದಲ್ಲಿ ನಿರಮ್ಮಳವಾಗಿದ್ದಾರೆ. 24X7 ರೀತಿ ಯತೇಚ್ಛ ನೀರು ತೆರೆದ ಬಾವಿಗಳಿಂದ ದೊರಕುತ್ತಿರುವುದೇ ಕಾರಣವಾಗಿದೆ. ನೀರು ಬೇಕೆಂದರೆ ಬಾವಿಗೆ ಹಗ್ಗ ಬಿಟ್ಟು ಸೇದುವ ಶಕ್ತಿ ಇದ್ದರೆ ಸಾಕಷ್ಟೇ. ಇನ್ನೇನೂ ಕಷ್ಟ ಪಡಬೇಕಿಲ್ಲ.

ಏಲ್ಲೆಲ್ಲಿವೆ ಬಾವಿಗಳು: ನಗರದ 24ನೇ ವಾರ್ಡ್‌ನ ಉಪ್ಪಾರಹಳ್ಳಿ ಬಡಾವಣೆಯ 2ನೇ ಕ್ರಾಸ್‌ನಲ್ಲಿರುವ ಉಪ ಮೇಯರ್‌ ಫರ್ಜಾನಾ ಖಾನಂ ಅವರ ಮನೆ ಆವರಣದಲ್ಲಿ 43ವರ್ಷಗಳ ಹಿಂದಿನ ಬಾವಿ ಇದೆ. 

‘ನಮ್ಮ ಅಜ್ಜ ಅಹಮ್ಮದ್ ಖಾನ್ ಶಿರಾನಿ ಅವರು 1974ರಲ್ಲಿ ಈ ಬಾವಿ ತೋಡಿಸಿದ್ದರು. ಹಿಂದೆ ಹೇಗೆ ನೀರಿತ್ತೊ ಅದೇ ರೀತಿ ನೀರು ಇದೆ. ಬಡಾವಣೆಯ ಮಂದಿಗೆ ಅನುಕೂಲವಾಗಿದೆ. ಅದನ್ನು ಸಂರಕ್ಷಣೆ ಮಾಡುವುದು ಮುಖ್ಯವಾಗಿದೆ’ ಎಂದು ಉಪಮೇಯರ್ ಫರ್ಜಾನ್ ಖಾನಂ ಅವರ ಪುತ್ತ ಖಲಂದರ್ ಖಾನ್ ಪ್ರಜಾವಾಣಿಗೆ ತಿಳಿಸಿದರು.

‘ಬೇರೆ ಬಡಾವಣೆ, ಓಣಿಗಳಲ್ಲಿ ಜನ ನೀರಿಗೆ ಪರದಾಡುತ್ತಿದ್ದಾರೆ. ನಮ್ಮಲ್ಲಿ ಬಾವಿ ಇರುವ ಕಾರಣ ನೀರಿನ ಸಂಕಷ್ಟವೇ ಗೊತ್ತಿಲ್ಲ’ ಎನ್ನುತ್ತಾರೆ. ಬಡಾವಣೆಯ ನಿವಾಸಿಗಳಾದ ಶಂಕರಮ್ಮ, ದಿಲ್‌ಷಾದಾ ಹಾಗೂ ವಸಂತಕುಮಾರ್ .

ಇದೇ ವಾರ್ಡ್‌ನ ಆಟೊ ಸರ್ಕಲ್‌ ಹತ್ತಿರವೂ ರಸ್ತೆ ನಡುವೆಯೇ ಒಂದು ತೆರೆದ ಬಾವಿ ಇದೆ.  ಸುಮಾರು 40 ವರ್ಷಗಳ ಹಿಂದೆಯೇ ಸರ್ಕಾರ ತೆಗೆಸಿದ್ದು. ಹೀಗಾಗಿ ಇದಕ್ಕೆ ಸರ್ಕಾರಿ ಬಾವಿ ಎಂದು ಹೆಸರು ಬಂದಿದೆ.

ಅಂದಾಜು 30 ಅಡಿ ಆಳದ ಬಾವಿಯಲ್ಲಿ ನೀರು ಕಡಿಮೆಯಾಗಿದ್ದೇ ನಾವು ನೋಡಿಲ್ಲ ಎಂದು ಇಲ್ಲಿನ ನಿವಾಸಿಗಳಾದ ಪ್ರಭು, ಸಿದ್ದಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ನಮ್ಮ ಬದುಕಿಗೆ ಆಧಾರ: ಇನ್ನು ಕ್ಯಾತ್ಸಂದ್ರದ ಗಿರಿನಗರ ಬಡಾವಣೆಯ ಸುಭಾಷ್‌ನಗರ ಕಾಲೊನಿಯಲ್ಲಿ  1977ರಲ್ಲಿಯೇ ಆಗಿನ ಮಂಡಲ ಪಂಚಾಯಿತಿ ವತಿಯಿಂದ ಕೊರೆಸಿದ ಬಾವಿ ಇನ್ನೂ ಜೀವಂತವಾಗಿದೆ.  25 ಅಡಿ ಆಳದ ಈ ಬಾವಿಗೆ ಎರಡು ಮಾರು ಹಗ್ಗಕ್ಕೆ ಕೊಡ ಕಟ್ಟಿ ಬಿಟ್ಟರೆ ನೀರು ಸಿಗುತ್ತದೆ.

‘ಈ ಬಾವಿ ಇರುವುದರಿಂದ ನಾವೆಲ್ಲ ನಿಶ್ಚಿಂತೆಯಾಗಿದ್ದೇವೆ. ಕರೆಂಟ್ ಬೇಕು ಎಂದಿಲ್ಲ. ಅಗತ್ಯವಿದ್ದಾಗ ಸೇದಿಕೊಂಡು ಹೋಗುತ್ತೇವೆ. ಬಾವಿ ರಸ್ತೆ ಪಕ್ಕವೇ ಇರುವುದರಿಂದ ಮಕ್ಕಳು ಸಂಚರಿಸುತ್ತವೆ. ಬಾವಿ ಸುತ್ತಮುತ್ತ ಆಡುತ್ತವೆ. ಹೀಗಾಗಿ, ಅಪಾಯದ ಭೀತಿ ಇದೆ. ಮಹಾನಗರ ಪಾಲಿಕೆಯು ಬಾವಿಗೆ ಜಾಲರಿ ಹಾಕಿಸಿಕೊಟ್ಟರೆ ಅನುಕೂಲವಾಗುತ್ತದೆ’ ಎಂದು ನಿವಾಸಿಗಳಾದ ಅಂಬಿಕಾ, ಆನಂದ್, ಶಾಹೀಬ್ ಮನವಿ ಮಾಡುತ್ತಾರೆ.

ಬಡ್ಡಿಹಳ್ಳಿ, ಗುಂಡ್ಲಮ್ಮನ ಕೆರೆಗಳು ಪಕ್ಕದಲ್ಲಿಯೇ ಇರುವುದರಿಂದ ಅಲ್ಲಿನ ಬಸಿ ನೀರೇ ಬಾವಿಗೆ ಆಧಾರವಾಗಿದೆ. ಎಷ್ಟೇ ಕಷ್ಟವಾದರೂ ಬಾವಿ ಸಂರಕ್ಷಣೆ ಮಾಡಿಕೊಳ್ಳುತ್ತೇವೆ’ ಎಂದು ತಿಳಿಸಿದರು.

ಚಿಕ್ಕಪೇಟೆ ಸೇರಿ ಹಳೆಯ ತುಮಕೂರು ಬಡಾವಣೆಯಲ್ಲಿ ಅನೇಕರ ಮನೆಗಳ ಬಾವಿಗಳು ಇಂದಿಗೂ ಜೀವಂತವಾಗಿವೆ. ಕೆಲವು ಒಣಗಿವೆ. ಅಮಾನಿಕೆರೆ ತುಂಬಿದರೆ ಒಣಗಿದ ಬಾವಿಗಳಲ್ಲೂ ನೀರು ಬರಬಹುದೆಂಬ ಆಸೆಯಿಂದ ಕಾಯವವರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT