ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣ ಮೇವಿಗೆ ರೈತರ ಅಸಮಾಧಾನ

Last Updated 22 ಮಾರ್ಚ್ 2017, 6:12 IST
ಅಕ್ಷರ ಗಾತ್ರ

ಹಿರಿಯೂರು: ‘ಮಾಲುದಂಡೆ ಜೋಳದ ಸಿಪ್ಪೆ ತಂದರೆ ಜಾನುವಾರು ತಿನ್ನುವುದಿಲ್ಲ. ಅದರಲ್ಲಿ ಏನೂ ಸತ್ವ ಇಲ್ಲ. ಸಿಪ್ಪೆಯ ಸಿಬಿರು ರಾಸುಗಳ ಬಾಯಿಗೆ ಚುಚ್ಚುವ ಕಾರಣ ಗಾಯಗಳಾಗುತ್ತದೆ.

ದಯವಿಟ್ಟು ಹಸಿರು ಮೇವು ಇಲ್ಲವೇ ಬೇರೆ ಹುಲ್ಲು ತರಿಸಿ, ಮೊನ್ನೆ ರಾಸುಗಳು ತಿನ್ನದ ಮೇವು ತಂದಿದ್ದರಿಂದ ಲಾರಿಯನ್ನು ಹಿಂದಕ್ಕೆ ಕಳಿಸಿದ್ದೇವೆ. ಇದರಲ್ಲಿ ಬೇರೆ ಉದ್ದೇಶ, ರಾಜಕೀಯ ಖಂಡಿತಾ ಇಲ್ಲ’.

‘ರಾಜ್ಯದಲ್ಲಿ ಎಲ್ಲೂ ಮೇವು ಸಿಗುತ್ತಿಲ್ಲ. ಆಂಧ್ರ ಪ್ರದೇಶದಿಂದ ನಮ್ಮ ರಾಜ್ಯಕ್ಕೆ ಮೇವು ಸಾಗಣೆ ಮಾಡುವುದನ್ನು ನಿಷೇಧಿಸಿರುವ ಕಾರಣ ಗುತ್ತಿಗೆದಾರರು ಕದ್ದು ಮುಚ್ಚಿ ಮೇವು ತರಬೇಕಿದೆ.  ಮೇವಿನ ಲಾರಿಯನ್ನು ಹಿಂದಕ್ಕೆ ಕಳುಹಿಸಿದರೆ ಗೋಶಾಲೆಯನ್ನು ಹೇಗೆ ನಿರ್ವಹಿಸಲಿ ?ಮೂಕ ಪ್ರಾಣಿಗಳಿಗೆ ಉತ್ತಮ ಗುಣಮಟ್ಟದ ಮೇವು ಕೊಡಬೇಕು ಎಂಬ ಬಯಕೆ ನಮಗೂ ಇದೆ. ಎಲ್ಲಿಯಾದರೂ ಮೇವು ಸಿಗುವ ಮಾಹಿತಿ ಇದ್ದರೆ ತಿಳಿಸಿ’.

–ಹೀಗೆ ಚರ್ಚೆ ನಡೆದದ್ದು ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ ಸಮೀಪ ತಾಲ್ಲೂಕು ಆಡಳಿತ ನಡೆಸುತ್ತಿರುವ ಗೋಶಾಲೆಯಲ್ಲಿ.  ತಹಶೀಲ್ದಾರ್ ವೆಂಕಟೇಶಯ್ಯ ಅವರೊಂದಿಗೆ ಗೋಶಾಲೆ ವ್ಯಾಪ್ತಿಯ ಜಿಲ್ಲಾ ಪಂಚಾಯ್ತಿ ಸದಸ್ಯ ಸಿ.ಬಿ. ಪಾಪಣ್ಣ ಭೇಟಿ ನೀಡಿದ್ದ ಸಂದರ್ಭದಲ್ಲಿ.

ಗೋಶಾಲೆಯಲ್ಲಿ ಪ್ರಸ್ತುತ 1,300  ರಾಸುಗಳಿವೆ. ವ್ಯವಸ್ಥೆ ಚೆನ್ನಾಗಿದೆ ಎಂದು ಸಿರಾ ತಾಲ್ಲೂಕಿನಿಂದ ನೂರಾರು ರಾಸುಗಳನ್ನು ರೈತರು ತಂದಿದ್ದಾರೆ. ರಾಸುಗಳು ನಿಲ್ಲಲು ನೆರಳು, ನೀರಿನ ವ್ಯವಸ್ಥೆ ಉತ್ತಮವಾಗಿದೆ.

ಗರಿಯ ಹೊದಿಕೆ ಇರುವ ಶೆಡ್‌ಗಳು ಸುರಕ್ಷಿತ ಅಲ್ಲ ಎಂದು ಶಾಶ್ವತ ಕಟ್ಟಡ ನಿರ್ಮಿಸಲು ಆರಂಭಿಸಿರುವುದು ಸಂತಸದ ವಿಚಾರ. ಆದರೆ ಕೆಲವೊಮ್ಮೆ ರಾಸುಗಳು ತಿನ್ನದ ಮೇವು ತರಲಾಗುತ್ತಿದೆ. ಅದೇ ಬೇಸರದ ಸಂಗತಿ ಎಂದು ರೈತರು ಅಳಲು ತೋಡಿಕೊಂಡರು.

ಜಿಲ್ಲಾಧಿಕಾರಿ ನೀಡಿರುವ ಸೂಚನೆಯಂತೆ ಪ್ರತಿದಿನ 7 ಕೆಜಿ ಮೇವು ಕೊಡುತ್ತಿದ್ದೇವೆ. ಹಸಿಮೇವು ತೂಕ ಹೆಚ್ಚಿದ್ದು, ರಾಸುಗಳಿಗೆ ಸಾಕಾಗುವುದಿಲ್ಲ. ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕು.

ಸ್ವಲ್ಪ ಮಳೆ ಬಂದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಪಾಪಣ್ಣ ರೈತರಲ್ಲಿ ಮನವಿ ಮಾಡಿದರು. ತಹಶೀಲ್ದಾರರು ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯರ ಮನವಿಯಿಂದ ಬಹಳಷ್ಟು ರೈತರು ಒಲ್ಲದ ಮನಸ್ಸಿನಿಂದ ಒಪ್ಪಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT