ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿಗಳ ದಾಹ ನೀಗಿಸಲು ಕೆರೆಗೆ ನೀರು

ಕೊಳವೆ ಬಾವಿಯೊಂದರಿಂದ ತಿಮ್ಮಣ್ಣನಾಯಕನ ಕೆರೆಗೆ ನಿತ್ಯ ನೀರು
Last Updated 22 ಮಾರ್ಚ್ 2017, 6:13 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಳೆ ಕೊರತೆಯಿಂದಾಗಿ ನೀರಿಲ್ಲದೆ ಒಣಗಿ ಹೋಗಿದ್ದ ಐತಿಹಾಸಿಕ ತಿಮ್ಮಣ್ಣನಾಯಕನ ಕೆರೆಗೆ ಕೊಳವೆ ಬಾವಿಯೊಂದರ ಮೂಲಕ ನೀರು ಹರಿಸುವ ಪ್ರಯತ್ನ ಆರು ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿದೆ. ಪ್ರಸ್ತುತ ಈ ನೀರು ಕೆಲ ಪ್ರಾಣಿಗಳ ಬಾಯಾರಿಕೆ ನೀಗಿಸಲು ಸಹಕಾರಿಯಾಗುತ್ತಿದೆ.

ಮೂರು ವರ್ಷಗಳ ಬರದಿಂದಾಗಿ ಚಿತ್ರದುರ್ಗದ ಅನೇಕ ಕೆರೆಗಳು, ಹೊಂಡಗಳು ನೀರಿಲ್ಲದೆ ಒಣಗುತ್ತಿವೆ. ಕೆಲವು ಖಾಲಿ ಆಗಿವೆ. ಇದರಿಂದಾಗಿ ಕೆರೆ, ಹೊಂಡಗಳನ್ನು ಅವಲಂಬಿಸಿದ್ದ ಪ್ರಾಣಿಗಳಿಗೆ ದಾಹ ನೀಗಿಸಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣ ಆಗಿದೆ. ಅದರಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿನ ತಿಮ್ಮಣ್ಣನಾಯಕನ ಕೆರೆಯೂ ಒಂದು.

ತಿಮ್ಮಣ್ಣನಾಯಕನ ಕೆರೆ ಸಮೀಪ ಅಡ್ಡಾಡುವ ವಾಯುವಿಹಾರಿಗಳು, ಚೌಡೇಶ್ವರಿ ದೇಗುಲಕ್ಕೆ ಬರುವ ಭಕ್ತರು ಗಮನಿಸಿ ನಗರಸಭೆ ಸದಸ್ಯರ ಸಹಕಾರ ಕೋರಿದ್ದಾರೆ. ಇದಕ್ಕೆ ತಕ್ಷಣ ಸ್ಪಂದಿಸಿದ ಪರಿಸರಾಸಕ್ತ ನಗರಸಭೆ ಸದಸ್ಯರು ಕೊಳವೆಬಾವಿಯಿಂದ ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.
‘ಕೆಲ ಸದಸ್ಯರು ಈ ಪ್ರದೇಶದಲ್ಲಿ ಕೊಳವೆ ಬಾವಿ ಕೊರೆಸಿದರೆ  ನೀರು ಸಿಗುವುದು ಕಷ್ಟ ಎಂಬ ಅಪಸ್ವರ ಎತ್ತಿದರು.

ಈ ನಡುವೆಯೂ ಧೈರ್ಯ ಮಾಡಿ ವೈಯಕ್ತಿಕವಾಗಿ ಹಣ ವ್ಯಯಿಸಿ ಕೊಳವೆಬಾವಿ ಕೊರೆಸಿದೆ. ನಾಲ್ಕು ಇಂಚು ನೀರು ಬಂದಿದೆ. ಅಲ್ಲದೆ, ನಗರಸಭೆ ಅಧ್ಯಕ್ಷರ ಸಹಕಾರದೊಂದಿಗೆ ಅನುದಾನ ಪಡೆದು ಸುತ್ತಲಿನ ಪ್ರದೇಶ ಅಭಿವೃದ್ಧಿ ಗೊಳಿಸಲಾಗುತ್ತಿದೆ’ ಎನ್ನುತ್ತಾರೆ ನಗರಸಭೆ ಸದಸ್ಯ ಬಿ.ಕಾಂತರಾಜ್‌.

ಪ್ರಾಣಿಗಳ ದಾಹ ನೀಗಿಸಲು ಸಹಕಾರ:  ಕೊಳವೆ ಬಾವಿಯಿಂದ ಕೆರೆಗೆ ಪೈಪ್‌ಲೈನ್ ಹಾಕಿಸಿ ಆರು ತಿಂಗಳಿನಿಂದ  ಎಂಟು ಗಂಟೆ ನೀರು ಹರಿಸಲಾಗುತ್ತಿದೆ. ಇದ ರಿಂದ ಕೆರೆಯ ಒಂದು ಭಾಗದ ತಳದಲ್ಲಿ ಎರಡು ಅಡಿಯಷ್ಟು ನೀರು ತುಂಬಿದೆ.

ನೀರಿನ ವಾಸನೆ ಕಂಡು ಕೊಂಡ ನವಿಲು, ಚಿರತೆ, ಕರಡಿ, ದನ, ಎಮ್ಮೆ, ಮಂಗ ಹೀಗೆ ವಿವಿಧ ಪ್ರಾಣಿಗಳು ಈ ಮಾರ್ಗ ದಲ್ಲಿ ಸಂಚರಿಸುವಾಗ  ನೀರಿನ ದಾಹ ನೀಗಿಸಿ ಕೊಳ್ಳುತ್ತಿವೆ ಎನ್ನುತ್ತಾರೆ ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ.

500 ಲೀಟರ್‌ನ ನೀರಿನ ತೊಟ್ಟಿ:  ಕೆರೆ ಏರಿ ಮೇಲೆ ಜಾನುವಾರುಗಳಿಗೆ ಅನುಕೂಲವಾಗಲೆಂದು 500 ಲೀಟರ್‌ ಸಾರ್ಮಥ್ಯದ ನೀರಿನ ತೊಟ್ಟಿಯನ್ನು ದಾನಿಗಳ ಸಹಾಯದಿಂದ ನಿರ್ಮಿಸ ಲಾಗಿದೆ. ಇದರಿಂದ ನಿತ್ಯ ಜೋಗಿಮಟ್ಟಿ ರಸ್ತೆ ಮಾರ್ಗ, ಸುಣ್ಣದ ಗುಮ್ಮಿಯಿಂದ ಮೇವು ಅರಸಿ ಬರುವ ಜಾನುವಾರು ನೀರಿನ ದಾಹ ನೀಗಿಸಿಕೊಳ್ಳುತ್ತಿವೆ.

ಅಷ್ಟೇ ಅಲ್ಲದೇ, ನೆರಳಿಗೆ ಸಾಲು ಮರಗಳನ್ನು ನೆಡಲಾಗಿದೆ. ಇದರಿಂದ ಮುಂದಿನ ದಿನ ಗಳಲ್ಲಿ ಪಕ್ಷಿಗಳ ಸಂಖ್ಯೆ ವೃದ್ಧಿಸುವ ಸಾಧ್ಯತೆ ಇದೆ ಎನ್ನುತ್ತಾರೆ ನಗರಸಭೆ ಸದಸ್ಯ ಸಿ.ಟಿ.ರಾಜೇಶ್.

ಚೌಡೇಶ್ವರಿ ದೇಗುಲದ ಮುಂದೆ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಜತೆಗೆ ಕೋಡಿ ಆಂಜನೇಯಸ್ವಾಮಿ ದೇಗುಲ ದವರೆಗೆ ಬೀದಿ ದೀಪದ ವ್ಯವಸ್ಥೆ ಮಾಡಿದ್ದಾರೆ  ಎನ್ನುತ್ತಾರೆ  ಚೌಡೇಶ್ವರಿ ದೇಗುಲದ ಧರ್ಮದರ್ಶಿ ತಿಮ್ಮಣ್ಣ, ಪರಿಸರಪ್ರೇಮಿಗಳಾದ  ಸುರೇಶ್, ಬಸವರಾಜ್, ಮೋಹನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT