ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

900 ಹುದಿ– ಬದು ಮಾಡಿದ ಜಾದೂ !

Last Updated 22 ಮಾರ್ಚ್ 2017, 6:18 IST
ಅಕ್ಷರ ಗಾತ್ರ

ಚಿತ್ರದುರ್ಗ: ‘1994ರಲ್ಲಿ 250 ಅಡಿ ಕೊಳವೆಬಾವಿ ಕೊರೆಸಿದ್ದೆ. ಈ ಬರದಲ್ಲೂ ಒಂದೂವರೆ ಇಂಚು ನೀರು ಇದೆ. ಎಂಟು ವರ್ಷಗಳಿಂದ 900 ಟ್ರೆಂಚ್‌ ಹುದಿ – ಬದು (ಟ್ರೆಂಚ್ ಕಮ್ ಬಂಡ್) ಗಳಲ್ಲಿ ಮಳೆ ನೀರು ಇಂಗಿದ್ದೇ, ಈ ಅಂತರ್ಜಲ ಸುಸ್ಥಿರತೆಯ ಜಾದೂಗೆ ಕಾರಣ’

ನೈಸರ್ಗಿಕ ಕೃಷಿ ಪದ್ಧತಿಯಲ್ಲಿ  ಮಾವು ಬೆಳೆಯುತ್ತಿರುವ ಕೃಷಿಕ ಮಹಾವೀರ ಜೈನ್, ತಮ್ಮ ತೋಟದಲ್ಲಿ ಅಳವಡಿಸಿಕೊಂಡಿರುವ ಮಳೆ ನೀರು ಸಂರಕ್ಷಣೆ ಹಾಗೂ ಅಂತರ್ಜಲ ಸುಸ್ಥಿರತೆ ತಂತ್ರಜ್ಞಾನ ಕುರಿತು ಹೀಗೆ ಸಾಕ್ಷ್ಯಗಳನ್ನಿಟ್ಟುಕೊಂಡು ಮಾತನಾಡುತ್ತಾರೆ.

ಮುಚ್ಚಿಗೆ ಬೆಳೆಯೇ ಜಲರಕ್ಷಕ: ನೀರು ನಿರ್ವಹಣೆ ಸಮರ್ಪಕವಾಗಿದ್ದರೆ, ಬೇಸಿಗೆಯಲ್ಲೂ ತೋಟ ರಕ್ಷಿಸಬಹುದು. ಬೆಳೆ ಗಳಿಗೆ ಎಷ್ಟು ಜವಾಬ್ದಾರಿ­ಯಿಂದ ನೀರು ಪೂರೈಸುತ್ತೇವೆಯೋ, ಹಾಗೆಯೇ ಪೂರೈಸಿದ ನೀರು, ಆ ಬೆಳೆಗಳಿಗೆ ಅಷ್ಟೇ ಪ್ರಮಾಣದಲ್ಲಿ ತಲುಪಿ, ಹೆಚ್ಚುವರಿಯಾ­ದರೆ, ನಮ್ಮ ತೋಟದಲ್ಲೇ ಉಳಿಯು ವಂತಹ ತಾಂತ್ರಿಕತೆ ಅಳವಡಿಸಿ ಕೊಳ್ಳಬೇಕು’ ಎನ್ನುವುದು ಮಹಾವೀರ್ ಅನುಭವದ ನುಡಿ.

ಪ್ರತಿ ವರ್ಷ ಮಳೆಗಾಲಕ್ಕೆ ಮುನ್ನ ತೋಟಕ್ಕೆ ದ್ವಿದಳ ಧಾನ್ಯಗಳ ಬೀಜ ಬಿತ್ತಿ, ಮುಚ್ಚಿಗೆ  ಬೆಳೆ ಬೆಳೆಸುತ್ತಾರೆ. ಮಾವಿನ ಗಿಡಗಳಿಗೆ ಜೀವಾಮೃತ ಕೊಡುವಾಗ, ಮುಚ್ಚಿಗೆ ಗಿಡಕ್ಕೂ ಸಿಂಪಡಿಸುತ್ತಾರೆ.  ಬೆಳೆ ಸೊಂಪಾಗಿದ್ದು, ನೆಲದ ತೇವ ರಕ್ಷಿಸಿ, ಮಣ್ಣಿಗೆ ಸಾರಜನಕ ಸ್ಥಿರೀಕರಿಸುತ್ತವೆ. ನೀರು ಹಿಡಿದಿಡುವ ಶಕ್ತಿ ಹೆಚ್ಚಿಸುತ್ತವೆ.

ತೇವದ ವಾತಾವರಣದಲ್ಲಿ ಜೀವಿಸುವ ಎರೆಹುಳುಗಳು, ತೋಟದ ತುಂಬಾ ಹರಡಿಕೊಂಡು, ಮಣ್ಣನ್ನು ಸಡಿಲಗೊಳಿಸುತ್ತವೆ.  ಎರೆಹುಳು ಕೃಷಿಯಿಂದಾಗಿ  ಹನಿ ಮಳೆ ನೀರು, ಭೂಮಿಯಲ್ಲಿ ಇಂಗುತ್ತದೆ.

ಹದಿಮೂರು ವರ್ಷದ ಪರಿಶ್ರಮ: 13 ವರ್ಷಗಳಿಂದ ಮಹಾವೀರ್ ಈ ಪ್ರಕ್ರಿಯೆ ಮುಂದುವರಿಸಿಕೊಂಡು ಬಂದಿದ್ದಾರೆ. ಅದರ ಫಲಿತಾಂಶ ಈಗ ಕಾಣುತ್ತಿದೆ. ಮಹಾವೀರ್ ತೋಟದ ಆಸುಪಾಸಿನಲ್ಲಿ 700–800 ಅಡಿ  ಕೊರೆಸಿರುವ 50 ರಿಂದ 60 ಕೊಳವೆಬಾವಿಗಳಿವೆ. ಆದರೂ, ಇವರ ತೋಟದಲ್ಲಿರುವ 250 ಅಡಿ ಆಳದ ಕೊಳವೆ ಬಾವಿಯಲ್ಲಿ ಒಂದೂವರೆ ಇಂಚು ನೀರು ಇದೆ. 

‘ಅದೇ ನೀರಿನಲ್ಲೇ ಈ ಬರದ ಬೇಗೆಯಲ್ಲೂ 900 ಮಾವಿನ ಗಿಡ ಗಳಿರುವ ತೋಟವನ್ನು ಕಾಪಾಡಿ ಕೊಂಡಿದ್ದೇನೆ.  250 ಅಡಿ ಕೊಳವೆ ಬಾವಿಯಲ್ಲಿ ತೋಟ ರಕ್ಷಿಸಿದ್ದೇನೆ’ ಎನ್ನುತ್ತಾರೆ ಮಹಾವೀರ್.

*
ತೋಟಗಳಲ್ಲಿ ಟ್ರೆಂಚ್ ತೆಗೆಸುವುದು ವ್ಯರ್ಥವಲ್ಲ. ಟ್ರೆಂಚ್‌ಗಳಲ್ಲಿ ಇಂಗುವ ನೀರು, ನಾವು ಗಳಿಸುವ ಅದೆಷ್ಟೋ ಲಾಭಕ್ಕಿಂತ ದೊಡ್ಡದು .
–ಮಹಾವೀರ್ ಜೈನ್, ಮಾವು ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT