ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಸಮಸ್ಯೆಗೆ ಸುಧಾರಿತ ತಳಿ ಬಿತ್ತನೆ ಅಗತ್ಯ

ಸಸ್ಯತಳಿಗಳ ಸಂರಕ್ಷಣೆ, ರೈತರ ಹಕ್ಕುಗಳ ಕಾಯ್ದೆ ಮಾಹಿತಿ, ತರಬೇತಿ ಶಿಬಿರ
Last Updated 22 ಮಾರ್ಚ್ 2017, 6:22 IST
ಅಕ್ಷರ ಗಾತ್ರ

ದಾವಣಗೆರೆ: ‘ವೇಗವಾಗಿ ಬೆಳೆಯುತ್ತಿ ರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆಯ ಅಗತ್ಯವಿದ್ದು, ಸುಧಾರಿತ ತಳಿಗಳ ಬಿತ್ತನೆಯತ್ತ ರೈತರು ಚಿಂತನೆ ನಡೆಸುವ ಅಗತ್ಯವಿದೆ’ ಎಂದು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಗಂಗಾಪ್ರಸಾದ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ನವದೆಹಲಿಯ ಸಸ್ಯತಳಿಗಳ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಐಸಿಎಆರ್‌– ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ  ಸಸ್ಯತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆ ಮಾಹಿತಿ, ತರಬೇತಿ ಕಾರ್ಯಕ್ರಮದಲ್ಲಿ ಅವರು ಪ್ರಾತ್ಯಕ್ಷಿಕೆ ನೀಡುವ ಮೂಲಕ ಮಾತನಾಡಿದರು.

‘ಜನಸಂಖ್ಯೆಯು ವೇಗವಾಗಿ ಬೆಳೆಯುತ್ತಿದೆ. ಆದರೆ, ಆಹಾರ ಉತ್ಪಾದನೆಯು ಒಂದಂಕಿ  ಮಟ್ಟದಲ್ಲಿ ಬೆಳೆಯುತ್ತಿದೆ. ಇದು ಹೀಗೆಯೇ ಮುಂದುವರಿದಲ್ಲಿ ಆಹಾರದ ಕೊರತೆಯಿಂದಾಗಿ ಸಾಕಷ್ಟು ಜನರು ಮೃತರಾಗುವ ಸಾಧ್ಯತೆ ಇರುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ರೈತರು ಸುಧಾರಿತ ನೂತನ ತಳಿಗಳ ಬಿತ್ತನೆಯತ್ತ ಗಮನಹರಿಸಬೇಕು. ಜತೆಗೆ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಪದ್ಧತಿ ಅಳವಡಿಸಿಕೊಳ್ಳುವ ತುರ್ತು ಇದೆ. ಇದಕ್ಕಾಗಿಯೇ ‘ಸಸ್ಯತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆಯು ರೈತರ ಹಿತಾಸಕ್ತಿ ಕಾಪಾಡುವಲ್ಲಿ ಮಹತ್ವ ಪಡೆದುಕೊಂಡಿದೆ’ ಎಂದು ಹೇಳಿದರು.

‘ರೈತರು ಸುಧಾರಿತ ತಳಿಗಳ ನೋಂದಣಿ ಮಾಡುವ ಮೂಲಕ ಆ ತಳಿಯ ಮೇಲಿನ ಮಾಲೀಕತ್ವವನ್ನು ತಮ್ಮದಾಗಿಸಿಕೊಳ್ಳಬಹುದು. ಸಸ್ಯತಳಿ ಎನ್ನುವುದು ಬೌದ್ಧಿಕ ಆಸ್ತಿ. ಇದರಿಂದ ರೈತರಿಗೆ ಹಾಗೂ ವಿಜ್ಞಾನಿಗಳಿಗೂ ಹೆಚ್ಚು ಉಪಯುಕ್ತ’ ಎಂದರು.

‘ಸುಧಾರಿತ ತಳಿಗಳು ಸುಲಭ ನಿರ್ವಹಣೆಯೊಂದಿಗೆ ಕಡಿಮೆ ಫಲವತ್ತತೆಯ ಮಣ್ಣಿನಲ್ಲಿಯೂ ಬೆಳೆಯುವ ಗುಣ ಹೊಂದಿರುತ್ತವೆ. ಜತೆಗೆ ಬದಲಾಗುವ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ. ಹೆಚ್ಚು ಇಳುವರಿ ಕೂಡ ನೀಡುತ್ತವೆ. ರೈತರು ತಮ್ಮಲ್ಲಿರುವ ಹೊಸ ತಳಿಗಳನ್ನು ಕೃಷಿ ಇಲಾಖೆಯಲ್ಲಿ ನೋಂದಣಿ ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

‘ಸಸ್ಯತಳಿ ಬಿತ್ತನೆ ಬೀಜದ ಮೇಲೆ ಸಂಬಂಧಪಟ್ಟ ರೈತರಿಗೆ ಹಕ್ಕುಗಳಿವೆ. ಆದರೆ, ಆ ಬಿತ್ತನೆ ಬೀಜವನ್ನು ಬ್ರ್ಯಾಂಡ್‌ ಮಾಡಿ, ಮಾರಾಟ ಮಾಡುವಂತಿಲ್ಲ’ ಎಂದು ಅವರು ಎಚ್ಚರಿಸಿದರು.

‘ರೈತರಿಗೆ ಉತ್ತಮ ಗುಣಮಟ್ಟಣದ ಬಿತ್ತನೆ ಬೀಜ ಪೂರೈಕೆ ಮಾಡುವಲ್ಲಿ  ಬಿತ್ತನೆ ಬೀಜ ಉದ್ಯಮವನ್ನು ಪ್ರೋತ್ಸಾಹಿಸುವ ಅವಶ್ಯವಿದೆ. ಇದು ಸಸ್ಯತಳಿ ಸಂರಕ್ಷಣೆ ಅತ್ಯಗತ್ಯ’ ಎಂದರು.

ರೈತ ಎ.ಎನ್‌.ಆಂಜನೇಯ ಅವರು, ಸಸ್ಯತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕುರಿತು ಮಾತನಾಡಿದರು. ಐಸಿಎಆರ್‌–ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಎನ್‌. ದೇವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕುಂದೂರು ಹನುಮಂತಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಹೊನ್ನಾಳಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದನಗೌಡ, ವೇದಮೂರ್ತಿ, ಆರ್‌.ತಿಪ್ಪೇಸ್ವಾಮಿ, ಎಂ.ಜಿ.ಬಸವನ ಗೌಡ, ಜೆ.ರಘುರಾಜ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT