ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ತವರಿನಲ್ಲೂ ನೀರಿಗೆ ತತ್ವಾರ

ಭವಿಷ್ಯದ ಬಗ್ಗೆ ನಾಗರಿಕರಿಗೆ ಚಿಂತೆ
Last Updated 22 ಮಾರ್ಚ್ 2017, 6:35 IST
ಅಕ್ಷರ ಗಾತ್ರ

ಶಿವಮೊಗ್ಗ: ಮಳೆಯ ತವರು ಎಂದೇ ಖ್ಯಾತಿ ಹೊಂದಿರುವ ಮಲೆನಾಡು ಭಾಗದಲ್ಲೂ ಈ ಬಾರಿ ತೀವ್ರ ಬರದ ಛಾಯೆ ಆವರಿಸಿದೆ. ಹಲವು ಭಾಗಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಆರಂಭವಾಗಿದೆ.

ವಾಡಿಕೆಯಂತೆ ಪ್ರತಿ ವರ್ಷ ವಾರ್ಷಿಕ 2,237 ಮಿ.ಮೀ. ಮಳೆಯಾಗುತ್ತದೆ. ಆದರೆ, 2016ರಲ್ಲಿ ಬಿದ್ದ ಮಳೆ ಪ್ರಮಾಣ 1,660 ಮಿ.ಮೀ. ಮಾತ್ರ. 557 ಮಿ.ಮೀ. ಮಳೆ ಕೊರತೆಯಾಗಿದೆ. ಮಳೆ ಕೊರತೆಯ ಪರಿಣಾಮ ಭೂಮಿಯ ಅಂತರ್ಜಲ ಮಟ್ಟವೂ ಪಾತಾಳ ತಲುಪಿದೆ.

ಜಲಾಶಯಗಳು ಭರ್ತಿಯಾಗದ ಕಾರಣ ಭದ್ರಾ ಅಚ್ಚುಕಟ್ಟು ಪ್ರದೇಶದ 80 ಸಾವಿರ ಹೆಕ್ಟೇರ್‌ ಭತ್ತದ ಗದ್ದೆಗಳು ಬೀಳು ಬಿದ್ದಿವೆ. 5 ಲಕ್ಷ ಟನ್‌ ಇಳುವರಿ ಖೋತಾ ಆಗಿದೆ.

214 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಏಪ್ರಿಲ್‌ ಆರಂಭಕ್ಕೂ ಮೊದಲೇ ಸಮಸ್ಯೆ ಇರುವ ಗ್ರಾಮಗಳ ಸಂಖ್ಯೆ ಗಣನೀಯವಾಗಿ ಏರುವ ಆತಂಕ ಎದುರಾಗಿದೆ.

ಜಲಾಶಯಗಳ ಹಿನ್ನೀರು ಕಡಿಮೆಯಾದ ಕಾರಣ, ನೈಸರ್ಗಿಕ ನೀರಿನ ಝರಿಗಳು, ಕೆರೆ, ತೊರೆಗಳು ಬತ್ತಿದ ಪರಿಣಾಮ ಕಾಡು ಪ್ರಾಣಿ, ಪಕ್ಷಿಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸಂಜೆಯ ವೇಳೆಗೆ ಹಲವು ಪ್ರಾಣಿಗಳು ಕಾಡು ತೊರೆದು ನೀರು ಹುಡಿಕಿಕೊಂಡು ಗ್ರಾಮಗಳತ್ತ ಬರುತ್ತಿವೆ.

ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಈಗಾಗಲೇ ಜಿಲ್ಲೆಯ 201 ಗ್ರಾಮಗಳನ್ನು ಕುಡಿಯುವ ನೀರಿನ ಅತಿ ಸಮಸ್ಯೆ ಇರುವ ಗ್ರಾಮಗಳು ಎಂದು ಗುರುತಿಸಿದ್ದಾರೆ. ಈ ಸಂಖ್ಯೆ ಮುಂದಿನ ದಿನಗಳಲ್ಲಿ ದ್ವಿಗುಣಗೊಳ್ಳುವ ಆತಂಕ ಇದೆ.

ಶಿವಮೊಗ್ಗ ತಾಲ್ಲೂಕಿನಲ್ಲಿ 26, ಭದ್ರಾವತಿ 8, ಸಾಗರ 24, ತೀರ್ಥಹಳ್ಳಿ 32, ಹೊಸನಗರ 6, ಶಿಕಾರಿಪುರ 40 ಹಾಗೂ ಸೊರಬ ತಾಲ್ಲೂಕು ವ್ಯಾಪ್ತಿಯಲ್ಲಿ 65 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳು ಎಂದು ಗುರುತಿಸಲಾಗಿದೆ. ಏಪ್ರಿಲ್‌ನಲ್ಲಿ ನೀರಿನ ಸಮಸ್ಯೆ ಎದುರಾಗಬಹುದಾದ 1,634 ಗ್ರಾಮಗಳ ಪಟ್ಟಿ ಸಿದ್ದಪಡಿಸಲಾಗಿದೆ.

ನಾಲ್ಕು ವರ್ಷಗಳಲ್ಲಿ 3,025 ಕೊಳವೆಬಾವಿ: ಜಿಲ್ಲೆಯಲ್ಲಿ 2013–14ನೇ ಸಾಲಿನಿಂದ ಇಲ್ಲಿಯವರೆಗೆ ಸರ್ಕಾರದ ವಿವಿಧ ಯೋಜನೆ
ಗಳ ಅಡಿ 3025 ಕೊಳವೆಬಾವಿ ಕೊರೆಸಲಾಗಿದೆ.

ಗ್ರಾಮೀಣ ನೀರು ಸರಬರಾಜು ಯೋಜನೆ ಮೂಲಕ 1,485 ಕೊಳವಬಾವಿ ಕೊರೆಸಲಾಗಿತ್ತು. ಅವುಗಳಲ್ಲಿ 231 ಕೊಳವೆಬಾವಿ ವಿಫಲವಾಗಿವೆ. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಮೂಲಕ 909 ಕೊಳವೆಬಾವಿ ಕೊರೆಸಲು ಸರ್ಕಾರ ಅನುಮತಿ ನೀಡಿತ್ತು. ಅವುಗಳಲ್ಲಿ 818 ಕೊರೆಸಲಾಗಿದೆ. 91 ಬಾಕಿ ಇವೆ.

ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮೂಲಕ 294 ಕೊಳವಬಾವಿ ಕೊರೆಸಲು ಅನುಮತಿ ನೀಡಲಾಗಿತ್ತು. 203 ಕೊರೆಸಲಾಗಿದೆ. 91 ಕೊರೆಸಬೇಕಿದೆ. ದೇವರಾಜ ಅರಸು ಅಭಿವೃದ್ಧಿ ನಿಗಮದ ಮೂಲಕ 737 ಕೊಳವೆಬಾವಿ ಕೊರೆಸಲು ಅನುಮತಿ ದೊರಕಿತ್ತು. 218 ಬಾಕಿ ಇವೆ. ಕೃಷಿ, ವಾಣಿಜ್ಯ, ತೋಟಗಾರಿಕಾ ಬೆಳೆಗಳಿಗೆ ಅನುಮತಿ ಇಲ್ಲದೇ ಸಾವಿರಾರು ಕೊಳವೆಬಾವಿ ಕೊರೆಸಲಾಗಿದೆ. 916 ಕೊಳವೆ ಬಾವಿಗಳು ವಿಫಲವಾಗಿವೆ.

ಪಾತಾಳ ತಲುಪಿದ ಅಂತರ್ಜಲ: ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯ ಅಂತರ್ಜಲ ಮಟ್ಟ ಪಾತಾಳ ತಲುಪಿದೆ.  ಭೂಗರ್ಭದ ಅಂತರ್ಜಲ ಪತ್ತೆ ಹಚ್ಚಲು 32 ಅಧ್ಯಯನ ಕೊಳವೆಬಾವಿ ಹಾಗೂ ತೆರೆದ ಬಾವಿಗಳಿವೆ. ಜಿಲ್ಲಾ ಅಂತರ್ಜಲ ಕಚೇರಿ ಅಧಿಕಾರಿಗಳು ಈ ಬಾವಿಗಳ ಸಹಾಯದಿಂದ ಅಂತರ್ಜಲ ಮಟ್ಟ ಅಳತೆ ಮಾಡುತ್ತಾರೆ.

ಭದ್ರಾವತಿ ತಾಲ್ಲೂಕಿನಲ್ಲಿ 2, ಶಿವಮೊಗ್ಗ 5, ಶಿಕಾರಿಪುರ 6, ಹೊಸನಗರ 3, ಸೊರಬ 6, ಸಾಗರ 5, ತೀರ್ಥಹಳ್ಳಿ 5 ಅಧ್ಯಯನ ಬಾವಿಗಳಿವೆ. ಈ ಅಧ್ಯಯನ ಅಂಕಿ–ಅಂಶಗಳ ಪ್ರಕಾರ ಪ್ರತಿ ವರ್ಷವೂ ಅಂತರ್ಜಲ ಮಟ್ಟ ತೀವ್ರ ಕುಸಿದಿದೆ. ಜಲಾಶಯಗಳು, ನದಿ ತೀರಗಳು, ನಾಲೆಗಳು, ಸಾಕಷ್ಟು ನೀರಿನ ಸಂಗ್ರಹ ಇರುವ ಕೆರೆ–ಕಟ್ಟೆಗಳ ಕೆಲವು ಭಾಗಗಳಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT