ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26 ಕೊಳವೆ ಬಾವಿ ವಿಫಲ: ಜಲಸಂರಕ್ಷಣೆ ಪ್ರಯೋಗ ಸಫಲ

Last Updated 22 ಮಾರ್ಚ್ 2017, 7:08 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ನೆಲ, ಜಲ ಉಳಿಸಿ’ ಇದು ಅವರ ಘೋಷ ವಾಕ್ಯ. ಒಂದು ಯಶಸ್ಸಿನ ಹಿಂದೆ ನೂರಾರು ಸೋಲು ಗಳೂ ಅಡಗಿರುತ್ತವೆ. ಹೌದು, ಆದರೆ, ಒಮ್ಮೆ ಸೋತೆವೆಂದು ಕೈಕಟ್ಟಿ ಕುಳಿತರೆ ಗೆಲುವು, ಯಶಸ್ಸಿನ ಮಾರ್ಗ ಗೋಚರಿ ಸುವುದೇ ಇಲ್ಲವೇನೋ!

ಇದೇ ಕಾಫಿ ಕಣಿವೆ ಮೂಲದ ಮೈಕೆಲ್‌ ಸದಾನಂದ ಬ್ಯಾಪ್ಟಿಸ್ಟ್‌ ಹೆಸರು ಎಲ್ಲರಿಗೂ ಚಿರಪರಿ ಚಿತ. ಕಾಫಿ, ಮೆಣಸು ಹಾಗೂ ತೋಟ ಗಾರಿಕೆ ಬೆಳೆಯಲ್ಲಿ ಹನಿ ನೀರಾವರಿ ಸೌಲಭ್ಯ ಅಳವಡಿಸಿ ಕೊಂಡಿ ರುವ ಬೆಳೆಗಾರರಿಗೆ ಈ ಹೆಸರು ಇನ್ನೂ ಚಿರ ಪರಿಚಿತ! ನಗರದ ನಲ್ಲೂರು ಗೇಟ್‌ ನಲ್ಲಿರುವ ‘ವಾಟರ್‌ ಜೆಟ್‌ ಎಂಜಿನಿಯರಿಂಗ್‌’ ಸಂಸ್ಥಾಪಕ.

ನಗರದ ಆದಿಶಕ್ತಿ ನಗರದ ಬ್ಯಾಪ್ಟಿಸ್ಟ್‌ ಅವರಿಗೆ ಆಧಿಶಕ್ತಿ ನಗರದಲ್ಲಿ 6 ಎಕರೆ ಕೃಷಿ ಭೂಮಿ ಇದೆ. ಒಂದೂವರೆ ದಶಕಗಳ ಹಿಂದೆ ಸರಿಯಾದ ಮಳೆ ಇಲ್ಲದೆ ಜಮೀನಿನಲ್ಲಿ ಬೆಳೆ ಒಣಗುತ್ತಿ ದ್ದಾಗ ಬೆಳೆ ಉಳಿಸಿಕೊಳ್ಳಲು ಹತ್ತಿರದಲ್ಲಿ ಎಲ್ಲೂ ಕೆರೆ, ತೊರೆ, ಹಳ್ಳದ ನೀರು ಲಭ್ಯವಿರಲಿಲ್ಲ.

ಅವರು ಸಹ ಇಂದು ಬಹುತೇಕ ರೈತರು ಯೋಚಿಸುವಂತೆ ಅವರ ಭೂಮಿಯಲ್ಲಿ ಕೊರೆಸಿದ್ದು ಬರೋಬ್ಬರಿ 26 ಕೊಳವೆ ಬಾವಿಗಳು. ಆದರೆ, ಒಂದೇ ಒಂದು ಕೊಳವೆ ಬಾವಿ ಯಲ್ಲಿ ಜಮೀನಿನಲ್ಲಿದ್ದ ಬೆಳೆ ಉಳಿಸು ವಂತಹ ನೀರು ಬರಲಿಲ್ಲ! ಇಂತಹ ದೊಂದು ಕೊಳವೆ ಬಾವಿಯ ಸರಣಿ ಸೋಲು ಅವರನ್ನು ಕೈಕಟ್ಟಿ ಕುಳಿತುಕೊಳ್ಳಲು ಬಿಡಲಿಲ್ಲ.

ಸಾಲದ ಸುಳಿಗೆ ಸಿಲುಕಿದ, ಕೊಳವೆ ಬಾವಿ ವಿಫಲವಾದ ಕಾರಣಕ್ಕೆ ಹಣೆ ಬರಹ ಹಣಿಯುತ್ತಾ, ಆತ್ಮಹತ್ಯೆಯ ಕಡೆ ಯೋಚಿಸುವ ರೈತನ ಹತಾಶೆಯ ಆಲೋಚನೆಗಳು ಇವರ ಬಳಿ ಸುಳಿ ಯಲಿಲ್ಲ. ನಗರದ ಡಿಎಸಿಜಿ ಪಾಲಿಟೆಕ್ನಿಕ್‌ನಲ್ಲಿ ಗಳಿಸಿದ್ದ ಮೆಕ್ಯಾನಿಕಲ್‌ ಡಿಪ್ಲೊಮಾ ಶಿಕ್ಷಣ, ಬತ್ತಿದ ಕೊಳವೆ ಬಾವಿಗಳಲ್ಲಿ ಜೀವಗಂಗೆ ಉಕ್ಕಿಸಲು ತಾಂತ್ರಿಕ, ವೈಜ್ಞಾನಿಕ ಆವಿಷ್ಕಾರಕ್ಕೆ, ಭಗಿರಥನ ಪ್ರಯತ್ನಕ್ಕೆ ಇಳಿಯುವಂತೆ ಮಾಡಿತು. ಆರಂಭದಲ್ಲಿ ಇಂಗುಗುಂಡಿ, ಕೃಷಿ ಹೊಂಡ ಇನ್ನಿತರ ಪ್ರಯೋಗ ನಡೆಸಿ ದರು. ಅಷ್ಟಾಗಿ ತ್ವರಿತ ಫಲಕೊಡಲಿಲ್ಲ.

ಕಲಿತ ಶಿಕ್ಷಣ, ಹೊಸ ಆವಿಷ್ಕಾರದತ್ತ ಹೊರಳಿದ ಸಂಶೋಧನಾ ಮನಸ್ಸು ಇಂದು ಅವರನ್ನು ರಾಜ್ಯವಷ್ಟೇ ಅಲ್ಲ, ಹೊರ ರಾಜ್ಯಗಳೂ ‘ರತ್ನಗಂಬಳಿ’ ಹಾಸಿ ಕರೆಯುವಂತೆ ಮಾಡಿದೆ. ಅವರ ಕೊಳವೆ ಬಾವಿ ಪುನಃಶ್ಚೇತನಗೊಳಿಸಲು ಆವಿಷ್ಕರಿಸಿರುವ ‘ವಿ ವೈರ್‌’ ತಂತ್ರಜ್ಞಾನ ವಿಶ್ವದ ಗಮನವನ್ನೂ ಸೆಳೆಯುತ್ತಿದೆ.

ಅಲ್ಲದೆ, ಮಳೆ ನೀರು ಸಂಗ್ರಹ ಮತ್ತು ಉಪಯೋಗಕ್ಕೆ ಕಂಡುಹಿಡಿದಿರುವ ‘ಫಿಲ್ಟರ್‌’ಗೆ ಪೇಟೆಂಟ್‌ ಕೂಡ ಲಭಿಸಿದೆ. ಅವರ ಸಾಧನೆಗೆ ರಾಷ್ಟ್ರೀಯ, ಅಂತರ ರಾಷ್ಟ್ರೀಯಮಟ್ಟದ ಪ್ರಶಸ್ತಿಗಳು ಅರಸಿ ಬಂದಿವೆ.

ವೀ ವೈರ್‌ ತಂತ್ರಜ್ಞಾನವನ್ನು ಬಳಸಿ ಬತ್ತಿದ ಕೊಳವೆ ಬಾವಿಗಳನ್ನು ಪುನಃ ಶ್ಚೇತನಗೊಳಿಸಲು ರಾಜ್ಯವಷ್ಟೇ ಅಲ್ಲ, ಒಡಿಶಾ, ಮಹಾರಾಷ್ಟ್ರ ಸರ್ಕಾರಗಳು ಮೈಕೆಲ್‌ ಸದಾನಂದ ಬ್ಯಾಪ್ಟಿಸ್ಟ್‌ ಅವರ ‘ಫಾರ್ಮಾಲ್ಯಾಂಡ್‌ ರೈನ್‌ ವಾಟರ್‌ ಹಾರ್ವೆಸ್ಟಿಂಗ್‌ ಸಿಸ್ಟಮ್‌’ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ.

ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿ ಅಲ್ಲಿನ ಸರ್ಕಾರಗಳು ವೀ ವೈರ್‌ ತಂತ್ರಜ್ಞಾನ ಬಳಸಿ ಕೊಳವೆ ಬಾವಿಗಳಿಗೆ ಮಳೆನೀರು ಮರುಪೂರಣ ಮಾಡುವ ಯೋಜನೆ ಗಳಿಗೆ ಸಹಾಯಧನ ನೀಡುವ ಮುಖೇನ ಪ್ರೋತ್ಸಾಹ ನೀಡುತ್ತಿವೆ. ರಾಜ್ಯದಲ್ಲೂ ಗ್ರಾಮೀಣಾಭಿವೃದ್ಧಿ ಇಲಾಖೆ ಈ ಸಂಸ್ಥೆ ಜತೆಗೆ ಸೇರಿ ಕುಡಿಯುವ ನೀರಿನ ಕೊಳವೆ ಬಾವಿಗಳನ್ನು ಪುನಶ್ಚೇತನಗೊಳಿಸುವ ಕೆಲಸ ಮಾಡುತ್ತಿದೆ.

ಮನೆ ಮೇಲ್ಚಾವಣಿಯಿಂದ ಸಂಗ್ರಹಿ ಸುವ ಮಳೆ ನೀರನ್ನು ಶುದ್ಧೀಕರಿಸಲು ಫಾರ್ಮಾಲ್ಯಾಂಡ್‌ ರೈನ್‌ವಾಟ್‌ ಹಾರ್ವೆಸ್ಟಿಂಗ್‌ ಸಿಸ್ಟಮ್‌ ಸಂಸ್ಥೆ ಯಲ್ಲಿ ತಯಾರಾದ ‘ರೈನಿ ಫಿಲ್ಟರ್‌’ಗಳನ್ನು ಇಂದು ದೇಶದಾದ್ಯಂತೆ 75 ಸಾವಿರಕ್ಕೂ ಹೆಚ್ಚು ಮಂದಿ ಅಳವಡಿಸಿಕೊಂಡಿದ್ದಾರೆ.

ಈ ಸಂಸ್ಥೆಗೆ 2009ರಲ್ಲಿ ಕಾನ್ಫೆಡರೇಷನ್‌ ಆಫ್‌ ಇಂಡಿಯನ್‌ ಇಂಡಸ್ಟ್ರೀಯ (ಸಿಐಐ) ‘ಮೋಸ್ಟ್‌ ಇನ್ನೋವೆಟಿವ್‌ ವಾಟರ್‌ ಸೇವಿಂಗ್‌ ಪ್ರೊಡಕ್ಟ್‌’ ಪ್ರಶಸ್ತಿ ಮತ್ತು ದಿ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆ ಮತ್ತು ಜೆಎಸ್‌ಡಬ್ಲ್ಯು ಸಂಸ್ಥೆ ‘ಅರ್ಥ್‌ ಕೇರ್‌ ಅವಾರ್ಡ್‌ ಫಾರ್‌ ಇನ್ನೋವೇಷನ್‌ ಫಾರ್‌ ಕ್ಲೈಮೇಟ್‌ ಪ್ರೊಟೆಕ್ಷನ್‌’ ಪ್ರಶಸ್ತಿ 2010ರಲ್ಲಿ ನೀಡಿ ಗೌರವಿಸಿವೆ. ಇಂಡಿಯನ್‌ ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್‌ನ ಪ್ರತಿಷ್ಠಿತ ‘ಗ್ರೀನ್‌ ಚಾಂಪಿಯನ್ಸ್‌ ಅವಾರ್ಡ್‌’ ಕೂಡ ಸಂಸ್ಥೆಗೆ ಒಲಿದಿದೆ.

ಅಲ್ಲದೆ, ಮೈಕೆಲ್‌ ಸದಾನಂದ ಬ್ಯಾಪ್ಟಿಸ್ಟ್‌ ಅವರು ತಮ್ಮ ಉದ್ಯಮ ಪಾಲುದಾರರಾದ ವಿಜಯ್‌ ರಾಜ್‌ ಹಾಗೂ ಸುನೀಲ್‌ ಬ್ಯಾಪ್ಟಿಸ್ಟ್‌ ಅವರೊಂದಿಗೆ ದಿ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆ ಮತ್ತು ಜೆಎಸ್‌ಡಬ್ಲ್ಯು ಸಂಸ್ಥೆ ಅಂತರ್ಜಲ ಮರುಪೂರಣಕ್ಕೆ ತಂತ್ರಜ್ಞಾನ ಕೊಡುಗೆ ಕೊಟ್ಟಿರುವುದನ್ನು ಪರಿಗಣಿಸಿ 2014ರಲ್ಲಿ ಗೆ ‘ಇನ್ನೋವೇಷನ್‌ ಫಾರ್‌ ಕ್ಲೈಮೇಟ್‌ ಪ್ರೊಟೆಕ್ಷನ್‌’ ಪ್ರಶಸ್ತಿ ನೀಡಿ ಸನ್ಮಾನಿಸಿದೆ.

‘ನಾವು ಆವಿಷ್ಕರಿಸಿದ ತಂತ್ರಜ್ಞಾನ ಇಂದು ಜಲ, ನೆಲ ರಕ್ಷಿಸಲು ಬಳಕೆ ಯಾಗುತ್ತಿರುವುದು ಹೆಮ್ಮೆ ಎನಿಸಿದೆ. ನಾವು ಕೇವಲ ವಾಣಿಜ್ಯ ಉದ್ದೇಶಕ್ಕೆ ನಮ್ಮ ತಂತ್ರಜ್ಞಾನ ಮೀಸಲಿಟ್ಟಿಲ್ಲ. ಇಡೀ ದೇಶದಾದ್ಯಂತ ಸಂಚಾರ ಮಾಡಿ, ಜನರಿಗೆ ಅಂತರ್ಜಲ ಸಂರಕ್ಷಣೆ, ಭೂಮಿ ರಕ್ಷಣೆ, ಕೃಷಿ ಉಳಿವಿನ ಮಹತ್ವದ ಬಗ್ಗೆ ಅರಿವು ಅರಿವು ಮೂಡಿಸುತ್ತಿದ್ದೇವೆ.

ಜನರಿಗೆ ತರಬೇತಿ ನೀಡಿ, ರೈನಿ ಫಿಲ್ಟರ್‌, ವಿ ವೈರ್‌ ತಂತ್ರಜ್ಞಾನ ಪೂರೈಕೆ ಮಾಡು ತ್ತಿದ್ದೇವೆ. ನಮ್ಮ ದೇಶವಷ್ಟೇ ಅಲ್ಲ, ಯುರೋಪ್‌ ಒಕ್ಕೂಟ, ಉತ್ತರ ಅಮೆರಿಕಾ ರಾಷ್ಟ್ರ ದಿಂದ ನಮ್ಮ ತಂತ್ರ ಜ್ಞಾನಕ್ಕೆ ಬೇಡಿಕೆ’ ಎನ್ನುತ್ತಾರೆ ಮೈಕೇಲ್‌ ಸದಾನಂದ ಬ್ಯಾಪ್ಟಿಸ್ಟ್‌.

‘ರಾಜ್ಯ ಬರಪೀಡಿತ ಜಿಲ್ಲೆಗಳು ಸೇರಿದಂತೆ ದೇಶದಾದ್ಯಂತ ಈಗಾಗಲೇ 5,000 ಕೊಳವೆ ಬಾವಿಗಳಿಗೆ ವಿ ವೈರ್‌ ತಂತ್ರಜ್ಞಾನ ಬಳಸಿ ಅಂತರ್ಜಲ ಮರುಪೂರಣ ಮಾಡುವ ಕೆಲಸಗಳು ಪೂರ್ಣಗೊಂಡಿವೆ. ಸಂಪೂರ್ಣ ಬತ್ತಿ ಹೋಗಿದ್ದ ಕೊಳವೆ ಬಾವಿಗಳು ನೀರು ನೀಡುತ್ತಿವೆ. ಒಂದು ಕೊಳವೆ ಬಾವಿಗೆ ಮಳೆ ನೀರು ಮರುಪೂರಣಗೊಳಿಸುವ ಕಾಮಗಾರಿಗೆ ಅಂದಾಜು ₹16,000 ದಿಂದ ₹20,000 ವೆಚ್ಚ ತಗುಲುತ್ತದೆ’ ಎನ್ನುತ್ತಾರೆ ಅವರು.

ಏನಿದು ವಿ–ವೈರ್‌ ತಂತ್ರಜ್ಞಾನ
ಕೊಳವೆ ವಾವಿ ಪಕ್ಕದಲ್ಲಿ 50 ಅಡಿ ಆಳದ ಇಂಗು ಗುಂಡಿ ನಿರ್ಮಿಸಿ, ಆ ಗುಂಡಿಗೆ ಎಚ್‌ಡಿ ಪೈಪ್‌ ಅಳವಡಿಸಬೇಕು. ಇಂಗುಗುಂಡಿಯ ಬಾವಿಗೆ ಸಿಮೆಂಟ್‌ ರಿಂಗ್‌ಗಳನ್ನು ಅಳವಡಿಸಿ, ಒಳಭಾಗದಲ್ಲಿ ಸಿಮೆಂಟ್‌ ಪ್ಲಾಸ್ಟಿಂಗ್‌ ಮಾಡಬೇಕು. ನೀರಿನ ಒಳ ಹರಿವು ಗಮನಿಸಿ, ಮೇಲ್ಭಾಗದ ಒಂದು ರಿಂಗ್‌ನಲ್ಲಿ ನೀರಿನ ಶುದ್ಧೀಕರಣಕ್ಕಾಗಿ ದಪ್ಪ ಜಲ್ಲಿ, ಇದ್ದಿಲು ಹಾಗೂ ಮರಳನ್ನು ಮಿಶ್ರಣ ಮಾಡಿ ಹಾಕಬೇಕು. ಮಳೆ ನೀರು ಮತ್ತೊಂದು ಸಿಲ್ಟ್‌ ಟ್ರ್ಯಾಪ್‌ ಚೇಂಬರ್‌ಗೆ ಬಂದು ಅಲ್ಲಿ ಶುದ್ಧೀಕರಣವಾಗುತ್ತದೆ.

ಭೂಮಿ ಮೇಲೆ ಬಿದ್ದ ಮಳೆ ನೀರು ಸೇರಿದಂತೆ ಅನಾವಶ್ಯಕವಾಗಿ ಹರಿದು ಹೋಗುವ ನೀರನ್ನು ಈ ತಂತ್ರಜ್ಞಾನದ ಮೂಲಕ ಕೊಳವೆ ಬಾವಿಗೆ ಹರಿದು ಬರುವಂತೆ ಮಾಡಬಹುದು. ಇದರಿಂದ ಕೊಳವೆ ಬಾವಿಗಳ ಅಂತರ್ಜಲಮಟ್ಟ ಹೆಚ್ಚುತ್ತದೆ.

ಗಡುಸು ನೀರು ಮೆದುವಾಗುತ್ತದೆ. ನೀರಿನಲ್ಲೂ ಫ್ಲೋರೈಡ್‌ ಅಂಶವೂ ಕಡಿಮೆಯಾಗುತ್ತದೆ. ಪ್ರತಿ ವರ್ಷ ಸರಾಸರಿ 10 ಲಕ್ಷ ಲೀಟರ್‌ ಮಳೆ ನೀರನ್ನು ಪ್ರತಿ ಕೊಳವೆ ಬಾವಿಗೆ ಮರುಪೂರಣ ಮಾಡಬಹುದು. ಶಾಶ್ವತ ಬರಪೀಡಿತ ಪ್ರದೇಶಗಳಿಗೆ ಈ ತಂತ್ರಜ್ಞಾನ ಒಂದು ವರದಾನ ಎನ್ನುವುದು ಬ್ಯಾಪ್ಟಿಸ್ಟ್‌ ಅವರ ವಿಶ್ವಾಸದ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT