ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ತರುವಲ್ಲಿ ಶಾಸಕ ಬಾಗವಾನ್‌ ವಿಫಲ: ಟೀಕೆ

ನಗರಾಭಿವೃದ್ಧಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಹುದ್ದೆ ತ್ಯಜಿಸಲು ಪಾಲಿಕೆ ಸದಸ್ಯ ಲೋಣಿ ಒತ್ತಾಯ
Last Updated 22 ಮಾರ್ಚ್ 2017, 7:13 IST
ಅಕ್ಷರ ಗಾತ್ರ

ವಿಜಯಪುರ: ಸ್ಥಾನಮಾನಕ್ಕಾಗಿ ದೊರೆ ತಿರುವ ನಗರಾಭಿವೃದ್ಧಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿ ಎಂದು ಮಹಾ ನಗರ ಪಾಲಿಕೆಯ ಪಕ್ಷೇತರ ಸದಸ್ಯ ರವೀಂದ್ರ ಲೋಣಿ, ನಗರ ಶಾಸಕ ಡಾ.ಮಕ್ಬೂಲ್ ಎಸ್.ಬಾಗವಾನ ಅವರನ್ನು ಆಗ್ರಹಿಸಿದರು.

ವಿಜಯಪುರ ನಗರದ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ತರಲು ವಿಫಲವಾಗಿರುವ ನಗರಾಭಿವೃದ್ಧಿ ಇಲಾಖೆಯ ಸಂಸದೀಯ ಕಾರ್ಯದರ್ಶಿ, ನಗರ ಶಾಸಕ ಡಾ.ಮಕ್ಬೂಲ್ ಎಸ್.ಬಾಗ ವಾನ ವಿರುದ್ಧ ಮಂಗಳವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ ಲೋಣಿ, ಕಿಂಚಿತ್‌ ಜನಪರ ಕಾಳಜಿ ಎಂಬುದಿದ್ದರೆ ರಾಜ್ಯ ಸರ್ಕಾರ ದಿಂದ ನಗರಕ್ಕೆ ನಿರಂತರವಾಗಿ ನಡೆಯು ತ್ತಿರುವ ಅನ್ಯಾಯ ಖಂಡಿಸಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ, ಜನರ ಹೃದಯದಲ್ಲಿ ಸ್ಥಾನಗಿಟ್ಟಿಸಿ ಎಂದು ಹೇಳಿದರು.

ಚಾರಿತ್ರಿಕ ವಿಜಯಪುರ ನಗರ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಹಲವು ಯೋಜನೆ ಘೋಷಣೆಯಾದರೂ ಸಕಾಲಕ್ಕೆ ಜಾರಿಯಾಗುತ್ತಿಲ್ಲ. ನಗರದ ಎಲ್ಲ ವಾರ್ಡ್‌ಗಳಿಗೂ ದಿನದ 24 ತಾಸು ನೀರು ಪೂರೈಸುವ ಯೋಜನೆಗೆ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆ ಪೂರ್ಣ ಗೊಂಡು ಮೂರು ತಿಂಗಳು ಗತಿಸಿದರೂ, ಕಾಮಗಾರಿ ಆರಂಭಗೊಂಡಿಲ್ಲ.

ಈಗಾಗಲೇ ಬೇಸಿಗೆ ಆರಂಭ ಗೊಂಡಿದೆ. 8–10 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಆಲಮಟ್ಟಿ ಜಲಾ ಶಯದಲ್ಲೂ ನೀರು ಇಳಿಮುಖವಾಗು ತ್ತಿದ್ದು, ಮೇ ತಿಂಗಳಲ್ಲಿ ಸಮಸ್ಯೆ ಬಿಗಡಾ ಯಿಸುವ ಲಕ್ಷಣಗಳಿವೆ. ಸಚಿವರು ಸೂಚಿ ಸಿದರೂ ಭೂತನಾಳ ಕೆರೆಯ ಬಳಿ ಮತ್ತೊಂದು ಹೊಸ ಮೋಟರ್ ಕೂರಿಸು ವಲ್ಲಿ ಪಾಲಿಕೆ ಆಡಳಿತವಾಗಲಿ, ನಗರ ಶಾಸಕರಾಗಲೀ ಸೂಕ್ತ ಕ್ರಮ ತೆಗೆದು ಕೊಂಡಿಲ್ಲ.

ನಗರಕ್ಕೆ ಸಮರ್ಪಕ ನೀರು ಪೂರೈಕೆ ಗಾಗಿ ಇದೇ 31ರೊಳಗೆ 24X7 ಕಾಮ ಗಾರಿ ಆರಂಭಿಸದಿದ್ದರೆ ಏ 1ರಂದು ಸಮಾನ ಮನಸ್ಕರೊಂದಿಗೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಲೋಣಿ ಇದೇ ಸಂದರ್ಭ ಎಚ್ಚರಿಕೆ ನೀಡಿ ದರು.

2016ರ ನವೆಂಬರ್ 2ರಂದು ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಮ್ಯಾರಥಾನ್ ಸಭೆ ನಡೆಸಿದ್ದರು. ಈ ಸಭೆಯಲ್ಲೇ ಪಾಲಿಕೆ ವಶದಲ್ಲಿರುವ 16 ರಸ್ತೆಗಳನ್ನು ಮರಳಿ ಲೋಕೋಪ ಯೋಗಿ ಇಲಾಖೆ ವ್ಯಾಪ್ತಿಗೆ ತರಲು ಅಗತ್ಯವಿರುವ ಪ್ರಸ್ತಾವನೆಯನ್ನು ನಗರಾ ಭಿವೃದ್ಧಿ ಇಲಾಖೆ ಮೂಲಕ ಕ್ಯಾಬಿನೆಟ್‌ಗೆ ಬರುವಂತೆ ನೋಡಿಕೊಳ್ಳಿ. ಮುಂದಿನ ಕೆಲಸವನ್ನು ನಾನು ಮಾಡಿಸುವೆ ಎಂದು ನಗರ ಶಾಸಕ ಡಾ.ಮಕ್ಬೂಲ್ ಬಾಗವಾನ ಅವರಿಗೆ ಸೂಚಿಸಿದ್ದರು.

ಆದರೆ ನಾಲ್ಕುವರೆ ತಿಂಗಳು ಗತಿಸಿದರೂ ಈ ನಿಟ್ಟಿನಲ್ಲಿ ಇದುವರೆಗೂ ಯಾವುದೇ ಕಾರ್ಯವಾಗಿಲ್ಲ. ಮಾಸ್ಟರ್ ಪ್ಲ್ಯಾನ್‌ ಕಾಮಗಾರಿ ಸೇರಿದಂತೆ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹಲ ಕಾಮಗಾರಿಗಳು ಕಳಪೆಯಿಂದ ಕೂಡಿವೆ. ಥರ್ಡ್‌ ಪಾರ್ಟಿ ಪರಿಶೀಲನೆಯೂ ಸಮರ್ಪಕವಾಗಿ ನಡೆದಿಲ್ಲ. ದಿನದಿಂದ ದಿನಕ್ಕೆ ದುರಾಡಳಿತ ಹೆಚ್ಚುತ್ತಿದೆ ಎಂದು ಲೋಣಿ ದೂರಿದರು.

ವಿಜಯಪುರ ಮಹಾನಗರ ಪಾಲಿಕೆ ಆಡಳಿತ ಅಸಮರ್ಥತೆಯಿಂದ ಕೂಡಿದೆ. ಹೊಂದಾಣಿಕೆ ರಾಜಕಾರಣಕ್ಕೆ ಪ್ರಾಧಾನ್ಯತೆ ಪಡೆದಿದೆ. ಪ್ರಶ್ನಿಸುವವರೇ ಇಲ್ಲವಾಗಿದ್ದಾರೆ. ಒಂದೊಂದು ಅವಧಿಗೆ ಒಬ್ಬೊಬ್ಬರು ಕೈ ಮಿಲಾಯಿಸಿ ಕೊಳ್ಳು ತ್ತಿದ್ದಾರೆ. ಇದರಿಂದ ವಿಜಯಪುರದ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರ ಶಾಸಕ ಬಾಗವಾನರಿಗೆ ಯಾವುದೇ ಸಾಮಾಜಿಕ ಕಳಕಳಿಯಿಲ್ಲ ದಾಗಿದೆ. ಇದರ ಪರಿಣಾಮ ರಾಜ್ಯ ಬಜೆಟ್‌ನಲ್ಲಿ ಯಾವುದೇ ಅನುದಾನ ಇದುವರೆಗೂ ಪಾಲಿಕೆ ಆಡಳಿತಕ್ಕೆ ಸಿಗದಾಗಿದೆ.

ಭೂತನಾಳ ಕೆರೆಯಿಂದ ನಗರದ 60–70 ಸಾವಿರ ಜನರಿಗೆ ಎರಡು ದಿನಕ್ಕೊಮ್ಮೆ ನೀರು ಪೂರೈಸಲು ಅನುಕೂಲವಾಗುವಂತೆ ₹ 1.5–2 ಕೋಟಿ ವೆಚ್ಚದಲ್ಲಿ ನೂತನ ಯಂತ್ರ ಅಳ ವಡಿಸುವಂತೆ ಸಚಿವರು ಕೆರೆ ತುಂಬುವ ಸಮಯದಲ್ಲಿ ಸೂಚಿಸಿದ್ದರೂ, ನಗರ ಶಾಸಕ, ಮೇಯರ್‌ ನಿರ್ಲಕ್ಷ್ಯದಿಂದ ಇದುವರೆಗೂ ಈ ಕಾರ್ಯ ನಡೆದಿಲ್ಲ ಎಂದು ಲೋಣಿ ದೂರಿದರು.

ರಾಜ್ಯ ಬಜೆಟ್‌ನಲ್ಲಿ ನಗರೋತ್ಥಾನ ನಾಲ್ಕನೇ ಹಂತ ಜಾರಿಯಾಗಿಲ್ಲ. ಮಾಸ್ಟರ್‌ ಪ್ಲ್ಯಾನ್‌ಗೆ ವಿಶೇಷ ಅನುದಾನ ದೊರೆತಿಲ್ಲ. ಹಿಂದಿನ ಯೋಜನೆ ಮುಂದುವರೆಸಿಲ್ಲ. 16ರಸ್ತೆ ಮಾಸ್ಟರ್‌ ಪ್ಲ್ಯಾನ್‌ನಡಿ ಬಂದರೂ ಇದುವರೆಗೂ ಮೂರು ರಸ್ತೆಯೂ ಲೋಕಾರ್ಪಣೆ ಗೊಂಡಿಲ್ಲ.

ಈ ಎಲ್ಲ ವೈಫಲ್ಯಗಳ ನೇರ ಹೊಣೆ ನಗರ ಶಾಸಕರದ್ದು. ಆದ್ದರಿಂದ ಶಾಸಕರು ತಾವು ಸ್ಥಾನಮಾನಕ್ಕಾಗಿ ಹೊಂದಿರುವ ನಗರಾಭಿವೃದ್ಧಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಲೋಣಿ ಆಗ್ರಹಿಸಿ ದರು. ನಿವೃತ್ತ ಪ್ರಾಂಶುಪಾಲ ಎನ್‌.ಕೆ.ಮನಗೊಂಡ, ಕರವೇ ಜಿಲ್ಲಾ ಗೌರವಾಧ್ಯಕ್ಷ ಸೋಮು ಗಣಾಚಾರಿ ಪತ್ರಿಕಾಗೋಷ್ಠಿಯಲ್ಲಿದ್ದರು.

*
ಹೊಂದಾಣಿಕೆ ರಾಜಕಾರಣಕ್ಕೆ ವಿಜಯಪುರ ನಗರದ ಅಭಿವೃದ್ಧಿ ಬಲಿಯಾಗುತ್ತಿದೆ. ನಗರ ಶಾಸಕರಿಗೆ ಕಿಂಚಿತ್ತೂ ಸಾಮಾಜಿಕ ಕಾಳಜಿಯಿಲ್ಲ.
-ರವೀಂದ್ರ ಲೋಣಿ,
ಮಹಾನಗರ ಪಾಲಿಕೆ ಪಕ್ಷೇತರ  ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT