ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘನತೆ ಕಳೆದುಕೊಂಡ ಪಾಲಿಕೆ; ವ್ಯಾಪಕ ಟೀಕೆ

ಶತಮಾನದ ಐತಿಹ್ಯ ಹೊಂದಿದ ಭೂತನಾಳ ಕೆರೆ ಆವರಣದಲ್ಲಿ ವಿಜಯಪುರ ಮಹಾನಗರ ಪಾಲಿಕೆಯ ಬಜೆಟ್‌ ಸಭೆ
Last Updated 22 ಮಾರ್ಚ್ 2017, 7:18 IST
ಅಕ್ಷರ ಗಾತ್ರ

ವಿಜಯಪುರ: ‘ಅಸಾಧ್ಯ ಎಂಬುದು ವಿಜಯಪುರ ಜಿಲ್ಲೆಯ ಮಟ್ಟಿಗೆ ಅಪ ವಾದವಿದ್ದಂತೆ. ಇಲ್ಲಿ ಮಾತ್ರ ಎಲ್ಲವೂ ಸಾಧ್ಯ’ ಎಂಬುದಕ್ಕೆ ನಗರದ ಹೊರ ವಲಯದಲ್ಲಿನ ಶತಮಾನದ ಐತಿಹ್ಯ ಹೊಂದಿರುವ ಭೂತನಾಳ ಕೆರೆ ಆವರಣ ದಲ್ಲಿ ಸೋಮವಾರ ನಡೆದ ವಿಜಯಪುರ ಮಹಾನಗರ ಪಾಲಿಕೆಯ ಬಜೆಟ್‌ ಸಭೆ ಮತ್ತಷ್ಟು ಪುಷ್ಟಿ ಒದಗಿಸಿದೆ ಎಂಬ ಮಾತುಗಳು ಜಿಲ್ಲೆಯ ಪ್ರಜ್ಞಾವಂತ ವಲಯದಿಂದ ವ್ಯಾಪಕವಾಗಿ ಕೇಳಿ ಬರುತ್ತಿವೆ.

ಮಹಾನಗರ ಪಾಲಿಕೆ ಆಡಳಿತ ಮಂಡಿಸಿದ ಮೂರನೇ ಬಜೆಟ್‌ ಇದು. ಇದೇ ಮೊದಲ ಬಾರಿಗೆ ಭೂತನಾಳ ಕೆರೆಯ ಆವರಣದಲ್ಲಿ ಮಂಡನೆಯಾ ಯಿತು. ಈ ಹಿಂದಿನ ಎರಡೂ ಬಜೆಟ್‌ಗಳು ಪಾಲಿಕೆಯ ಕಚೇರಿಯಲ್ಲೇ ಮಂಡನೆಯಾಗಿದ್ದವು.

ನಗರಸಭೆಯ ಅವಧಿಯಲ್ಲಿ ಬಜೆಟ್‌ ಸಭೆ ಭೂತನಾಳ ಕೆರೆ ಆವರಣದಲ್ಲಿ ನಡೆಯುವುದು ಅಲಿಖಿತ ನಿಯಮ. ಸಂಪ್ರದಾಯವಾಗಿ ಪರಿವರ್ತನೆಗೊಂ ಡಿತ್ತು. ರಾಜ್ಯದ ಯಾವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈ ರೀತಿ ಸಭೆ ನಡೆಯದಿದ್ದರೂ ವಿಜಯಪುರ ನಗರ ಸಭೆಯ ಬಜೆಟ್‌ ಸಭೆ ಮಾತ್ರ ವಾರ್ಷಿಕ ಪಿಕ್‌ನಿಕ್‌ ರೀತಿ ಕೆರೆಯ ಆವರಣದಲ್ಲಿ ನಡೆಯುತ್ತಿತ್ತು.

ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಅದಕ್ಕೆ ಮನ್ನಣೆ ನೀಡು ತ್ತಿರಲಿಲ್ಲ. ನಗರಸಭೆ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಬಳಿಕ 2014ರಿಂದ ಚುನಾಯಿತ ಜನಪ್ರತಿನಿಧಿಗಳ ಆಡಳಿತಕ್ಕೆ ಚಾಲನೆ ದೊರಕುತ್ತಿದ್ದಂತೆ ಈ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿತ್ತು.

2015–16, 2016–17ನೇ ಸಾಲಿನ ಬಜೆಟ್‌ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲೇ ನಡೆದಿದ್ದವು. ಆದರೆ ಈ ಬಾರಿ ಈ ಹಿಂದಿನ ಸಂಪ್ರದಾಯ ಮುಂದುವರೆಸಲಿಕ್ಕಾಗಿ, ಸದಸ್ಯರು ಒಂದು ದಿನದ ಮೋಜು ನಡೆಸಲಿಕ್ಕಾಗಿ ಅಧಿಕಾರಿ ವರ್ಗದ ಮೇಲೆ ಒತ್ತಡ ಹಾಕಿ ಭೂತನಾಳ ಕೆರೆ ಆವರಣದಲ್ಲಿ 2017–18ನೇ ಸಾಲಿನ ಬಜೆಟ್‌ ಸಭೆ ನಡೆಸಿದ್ದಾರೆ.

ಇದು ಪಾಲಿಕೆಯ ಘನತೆಯನ್ನು ಬೀದಿಗೆ ತಂದಂತಾಗಿದೆ. ಕಚೇರಿ ಸಭಾಂಗಣದಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆಗೆ ಎಲ್ಲರಿಗೂ ಮುಕ್ತ ಪ್ರವೇಶ ಇರುತ್ತಿತ್ತು. ಇನ್ನೂ ಬಯಲಲ್ಲಿ ಪೆಂಡಾಲ್‌ ಹಾಕಿಸಿ ನಡೆಸಿದ ಬಜೆಟ್‌ ಸಭೆಯ ಬಗ್ಗೆ ಏನೆಂದು ಹೇಳಬೇಕು ಎಂಬುದೇ ತೋಚದು ಎಂದು ಶಂಕರ ರಾಠೋಡ ‘ಪ್ರಜಾವಾಣಿ’ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಕ್ರಿಯೆ ಅಸಾಧ್ಯ– ಲೋಣಿ: ವಿಜಯಪುರ ಮಹಾನಗರ ಪಾಲಿಕೆಯ ಬಜೆಟ್‌ ಕುರಿತು ಏನೆಂದು ಪ್ರತಿಕ್ರಿಯಿಸಬೇಕು ಎಂಬುದು ತಿಳಿಯದಾಗಿದೆ. ಪ್ರತಿಕ್ರಿಯೆ ನೀಡುವುದು ಸಾಧ್ಯವಿಲ್ಲ ಎಂಬಂತಾಗಿದೆ ಎಂದು ಪಾಲಿಕೆಯ ಪಕ್ಷೇತರ ಸದಸ್ಯ ರವೀಂದ್ರ ಲೋಣಿ ಅಸಮಾಧಾನ ವ್ಯಕ್ತಪಡಿಸಿದರು.

ಕಾಟಾಚಾರಕ್ಕೆ ಎಂಬಂತೆ ಬಜೆಟ್‌ ಮಂಡನೆಯಾಗಿದೆ. ಅಪೂರ್ಣ ಮಾಹಿತಿಯೇ ತುಂಬಿದೆ. ಬಜೆಟ್ ಗಾತ್ರ ಎಷ್ಟು, ಕೊರತೆ ಅಥವಾ ಉಳಿತಾಯ ಬಜೆಟ್ ಎಂಬುದೇ ಅರಿವಾಗದಾಗಿದೆ. ಪೂರ್ವ ತಯಾರಿಯಿಲ್ಲದೆ ಮಂಡಿಸಿದ ಬಜೆಟ್‌ ಇದು. ಮಂಡನೆಯಲ್ಲೂ ನೂರೆಂಟು ನ್ಯೂನ್ಯತೆ.

ಹಿಂದಿನ ವರ್ಷದ ಬಜೆಟ್‌ನ ಅಂಕಿ–ಅಂಶಗಳಿಗೆ ಶೇ 20ರಷ್ಟು ಸೇರಿಸಿ ಬಜೆಟ್ ಮಂಡಿಸಲಾಗಿದೆ ಎಂಬುದನ್ನು  ಅಧಿಕಾರಿ ಗಳೇ ಒಪ್ಪಿಕೊಂಡಿದ್ದಾರೆ. ಪಾಲಿಕೆಗೆ ಎಷ್ಟು ಆದಾಯ ಬರುತ್ತದೆ. ಎಷ್ಟನ್ನು ಯಾವ ಕೆಲಸಕ್ಕೆ ಖರ್ಚು ಮಾಡಲಾಗು ತ್ತದೆಂಬ ಮಾಹಿತಿಯೇ ಇಲ್ಲ. ಒಟ್ಟಾರೆ ಗೊತ್ತುಗುರಿ ಇಲ್ಲದೆ ಬಜೆಟ್ ಮಂಡಿಸ ಲಾಗಿದೆ. ಒಂದೇ ಒಂದು ಹೊಸ ಕ್ರಿಯಾ ಯೋಜನೆ ರೂಪಿಸಿಲ್ಲ ಎಂದು ಲೋಣಿ ದೂರಿದರು.

*
ವನ ಮಹೋತ್ಸವ ನಡೆಸುವ ಸ್ಥಳದಲ್ಲಿ ಮಹಾನಗರ ಪಾಲಿಕೆಯ ಬಜೆಟ್‌ ಸಭೆ ನಡೆಸಿದ್ದು ಸರಿಯಿಲ್ಲ. ಪಾಲಿಕೆ ಆಡಳಿತ ಗಂಭೀರತೆ ಅರ್ಥ ಮಾಡಿಕೊಳ್ಳಬೇಕು.
-ರವೀಂದ್ರ ಲೋಣಿ,
ಪಾಲಿಕೆ ಪಕ್ಷೇತರ ಸದಸ್ಯ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT