ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್ ಕಾರ್ಡ್‌ ನೋಂದಣಿಗಾಗಿ ಪರದಾಟ

ಗಂಟೆಗಟ್ಟೆಲೆ ಕಾಯುತ್ತಾ ಕುಳಿತುಕೊಳ್ಳುವ ಮಹಿಳೆಯರು
Last Updated 22 ಮಾರ್ಚ್ 2017, 7:37 IST
ಅಕ್ಷರ ಗಾತ್ರ

ಬಳ್ಳಾರಿ: ಹೊಸದಾಗಿ ಆಧಾರ್ ಕಾರ್ಡ್ ನೋಂದಣಿ, ಹೆಸರು ತಿದ್ದುಪಡಿ, ಮೊಬೈಲ್ ಸಂಖ್ಯೆ ಸೇರ್ಪಡೆ, ವಿಳಾಸ ಬದಲಾವಣೆ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ಅಡಿಯಲ್ಲಿ ಅರ್ಜಿ ಸಲ್ಲಿಸಲು ನಗರದ ನೂರಾರು ಮಂದಿ ಪರದಾಡುತ್ತಿದ್ದಾರೆ.

ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯ ವಾಣಿಜ್ಯ ಸಂಕೀರ್ಣ ಕಟ್ಟಡ­ದಲ್ಲಿರುವ ‘ಬಳ್ಳಾರಿ ಒನ್‌’ ಕೇಂದ್ರವು ಇಂಥದೊಂದು ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.
‘ಸರ್ವರ್‌ ಡೌನ್‌ ಆಗಿದೆ. ಸ್ಪಲ್ಪ­ಹೊತ್ತು ಕಾಯಿರಿ’ ಎದು ಹೇಳಿದ ಆಧಾರ್ ನೋಂದಣಿ ಕೇಂದ್ರದ ಸಿಬ್ಬಂದಿಯು, ನಗರವೂ ಸೇರಿದಂತೆ ತಾಲ್ಲೂಕಿನ ವಿವಿಧ ಮಹಿಳೆಯರನ್ನು ಕೇಂದ್ರದ ಮುಂಭಾಗ ನೆಲದ ಮೇಲೆ ಕುಳ್ಳಿರಿಸಿ ಗಂಟೆಗಟ್ಟಲೇ ಕಾಯಿಸಿದ ಘಟನೆ ಮಂಗಳವಾರ ನಡೆಯಿತು.

ತಾಲ್ಲೂಕಿನ ಮೋಕಾ, ಅಸುಂಡಿ, ಯರಗುಡಿ, ಹೊಸ ಮೋಕಾ, ಕಾರೇ­ಕಲ್ಲು, ವೀರಾಪುರ ಸೇರಿದಂತೆ ನಗರದ ಕಾರ್ಕಲ ತೋಟ, ಕೆಇಬಿ ವಸತಿಗೃಹಗಳ ಕಾಲೊನಿಯ ಹಿಂಭಾಗದ ಪ್ರದೇಶ, ಆಂದ್ರಾಳು ಪ್ರದೇಶದ ನಿವಾಸಿಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ಕಾಯುತ್ತಾ ಕುಳಿತಿದ್ದರು.

‘ಪಡಿತರ ಅಕ್ಕಿ ವಿತರಣೆ, ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಲು, ಬ್ಯಾಂಕ್ ಖಾತೆ, ವೃದ್ಧಾಪ್ಯ, ವಿಧವೆಯರ, ಅಂಗ­ವಿಕಲರ ವೇತನ ಪಾವತಿಸಲೂ ಆಧಾರ್ ಕಾರ್ಡ್ ಅನ್ನು ಕಡ್ಡಾಯ ಗೊಳಿಸಲಾಗಿದೆ. ನಮಗ ಅಷ್ಟೊಂದು ಒದಾಕ ಬರಂಗಿಲ್ರೀ.

ಚೊಲೊ ಒದಾಕ  ಬರ್ರೋರ್ ಬಳಿ ಬರೆಸಿಕೊಂಡು ಬಂದ್ರೆ, ನೋಂದಣಿ ಕೇಂದ್ರದವರು ಏನರ ಒಂದ್ ತಪ್ಪು ಮಾಡಿರ್ತಾರ್ರಿ. ಮೊಬೈಲ್ ಸಂಖ್ಯೆನೇ ಬಿಟ್ಟಾರ್ರಿ. ಅದ್ಕ ಕೆಲ್ಸ, ಬಗ್ಸೆ ಬಿಟ್ಟು ದಿನಾ ಬಳ್ಳಾರಿಗೆ ಬರೋಂಗಾಗೈತ್ರೀ’ ಎನ್ನುತ್ತಾರೆ ತಾಲ್ಲೂಕಿನ ಮೋಕಾ ಗ್ರಾಮದ ಮಲ್ಲೇಶ್ವರಿ.

‘ನಾನು ತುಂಬು ಗರ್ಭೀಣಿ ಅದೀನ್ರೀ. ಆದ್ರೂ ಬರಬೇಕ್ರೀ. ಯಾಕಂದ್ರಾ ನಮಗ ರೇಷನ್ ಕಾರ್ಡ್ ಅದೆ. ಅಕ್ಕಿ ತಗೊಂಡ್ರೆ ಮಾತ್ರ ಹೊಟ್ಟೆ ತುಂಬಾ ಊಟರ್ರೀ. ಇಲ್ಲೆ ಕೂತ್ಕೊಂಡು ಮೊಬೈಲ್ ಸಂಖ್ಯೆ, ಹೆಸರು ತಿದ್ದುಪಡಿ ಮಾಡ್ಸಿಕೊಂಡು ಹೋಗ್ತೀನ್ರೀ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಸರು ತಪ್ಪಾಗಿದೆ: ‘ರೇಷನ್ ಕಾರ್ಡ್, ಗುರುತಿನ ಚೀಟಿ ಸೇರಿದಂತೆ ಇತರೆ ದಾಖಲೆಗಳಲ್ಲಿ ಹೆಸರು ಒಂದಿದ್ದರೆ, ಆಧಾರ್ ಕಾರ್ಡಿನಲ್ಲಿ ಮತ್ತೊಂದು ಹೆಸರು ನಮೂದಾಗೈತ್ರೀ. ನೋಂದಣಿ ಕೇಂದ್ರದ ಸಿಬ್ಬಂದಿ ತಪ್ಪಿನಿಂದಾಗಿ ಇಂಥಹ ಅವಘಡ ಅಗೈತ್ರೀ. ಕಳೆದ ಮೂರು ದಿನದಿಂದ ಮೋಕಾ – ಬಳ್ಳಾರಿಗೆ ಅಲೆದಾಟ ನಡೆದೈತ್ರೀ’ ಎಂದು ಮೋಕಾ ಗ್ರಾಮದ ಆಶ್ರಯ ಕಾಲೊನಿಯ ನಿವಾಸಿ ಮಂಗಮ್ಮ ತಮ್ಮ ಕೈಯಲ್ಲಿದ್ದ ಆಧಾರ್ ಕಾರ್ಡ್, ಗುರುತಿನ ಚೀಟಿಯನ್ನು ತೋರಿಸಿದರು.

ವ್ಯವಸ್ಥೆ ಸರಿಯಿಲ್ಲ
‘ಆಧಾರ್ ಕೇಂದ್ರದಲ್ಲಿ ವ್ಯವಸ್ಥೆ ಸರಿಯಾಗಿಲ್ಲ. ಕೇಂದ್ರದ ಸಿಬ್ಬಂದಿ ಮನಬಂದಂತೆ ವರ್ತಿಸುತ್ತಿದ್ದಾರೆ. ಆಧಾರ್ ಕಾರ್ಡಿನಲ್ಲಿ ನಮೂದಾಗಿರುವ ವಿಳಾಸ ಬದಲಾವಣೆಗೆ ಕಳೆದ ಮೂರು ದಿನದಿಂದ ಕೇಂದ್ರಕ್ಕೆ ಅಲೆದಾಡುತ್ತಿದ್ದೇನೆ. ಈವರೆಗೂ ವಿಳಾಸ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ನನ್ನೊಂದಿಗೆ ಮಹಿಳೆ­ಯರು, ಯುವತಿಯರು ಬಂದಿದ್ದಾರೆ. ಅವರ ಕೆಲಸವೂ ಮುಗಿದಿಲ್ಲ’ ಎಂದು ಅಸುಂಡಿ ಗ್ರಾಮದ ವೆಂಕಟನಾರಾಯಣ ದೂರಿದರು.

ಭದ್ರತೆಯಿಲ್ಲ: ’ಆಧಾರ್ ನೋಂದಣಿ ಸಂದರ್ಭ ನೂಕುನುಗ್ಗಲು ಏರ್ಪಡುತ್ತದೆ. ತಾಮುಂದು, ನಾಮುಂದು ಎಂದು ಹಲವರು ಕಲಹಕ್ಕೆ ಇಳಿಯುತ್ತಾರೆ. ನಿಯಂತ್ರಣಕ್ಕೆ ಯಾವೊಬ್ಬ ಸಿಬ್ಬಂದಿ ಮುಂದಾಗುವುದಿಲ್ಲ. ಕೇಂದ್ರಕ್ಕೆ ಭದ್ರತೆ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು’ ಎಂದು ಅಸುಂಡಿ ಗ್ರಾಮದ ಸುಧಾಕರ ಅಭಿಪ್ರಾಯಪಟ್ಟರು.
-ವೀರೇಶ ಕಟ್ಟೆಮ್ಯಾಗಳ

*
‘ಬಳ್ಳಾರಿ ಒನ್‌’ ಕೇಂದ್ರದ ಆಧಾರ್ ನೋಂದಣಿ ಕೇಂದ್ರ­ದಲ್ಲಿ ಜನರಿಗೆ ಸಮಸ್ಯೆ ಆಗುತ್ತಿರು­ವುದರಿಂದ, ಪರ್ಯಾಯ ಕೇಂದ್ರ ಸ್ಥಾಪಿಸಲು ಯತ್ನಿಸಲಾಗುವುದು
-ಮಂಜುನಾಥ ಕೆ.ನಲವಡಿ ,
ಆಯುಕ್ತರು, ಮಹಾನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT