ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಶಾಲೆಗೆ ಬರುವ ರೈತರಿಗೂ ಖಾತ್ರಿ ಕೆಲಸ

ಜಿಲ್ಲಾ ಪಂಚಾಯಿತಿ ಕೆಡಿಪಿ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳಿಗೆ ಸಿ.ಇ.ಓ. ರಾಜೇಂದ್ರ ಸೂಚನೆ
Last Updated 22 ಮಾರ್ಚ್ 2017, 7:44 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗಂಡಬೊಮ್ಮನಹಳ್ಳಿ ಯಲ್ಲಿರುವ ಗೋಶಾಲೆಗೆ ಜಾನುವಾರುಗಳನ್ನು ಕರೆ­ತರುವ ಎಲ್ಲ ರೈತರಿಗೂ ಉದ್ಯೋಗಖಾತ್ರಿ ಅಡಿಯಲ್ಲಿ ಕೆಲಸ ಕೊಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ­ಕಾರ್ಯ­ನಿರ್ವಹಣಾಧಿಕಾರಿ ಡಾ.ಕೆ.ವಿ.­ರಾಜೇಂದ್ರ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತ­ನಾಡಿದ ಅವರು, ಮುಂದಿನ ನೂರು ದಿನಗಳು  ಕಷ್ಟಕರ­ವಾಗಲಿವೆ. ಹೀಗಾಗಿ ಕುಡಿಯುವ ನೀರು, ಮೇವು, ಉದ್ಯೋಗ ನೀಡುವ ವಿಷಯ­ದಲ್ಲಿ ಅಧಿಕಾರಿಗಳು ಜವಾಬ್ದಾರಿ ಅರಿತು ಕಾರ್ಯ­ನಿರ್ವಹಿಸಬೇಕು ಎಂದರು.

ಶನಿವಾರ ಸಭೆ
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ನೋಡಲ್‌ ಅಧಿಕಾರಿಗಳು ಪ್ರತಿ ಶನಿವಾರ ತಾಲ್ಲೂಕು ಕೇಂದ್ರದಲ್ಲಿ ತಹ­ಶೀಲ್ದಾರ್‌, ಕಾರ್ಯನಿರ್ವಹಣಾಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಎಂಜಿನಿಯರುಗಳ ಸಭೆ ನಡೆಸಿ ವರದಿ ಸಲ್ಲಿಸಬೇಕು ಎಂದರು.

ಜಿಲ್ಲೆಯಲ್ಲಿ ಬರಗಾಲ ಪರಿಸ್ಥಿತಿಯ ತುರ್ತು ಸಂದರ್ಭಗಳಲ್ಲಿ ವಿನಿಯೋಗಿ­ಸಲೆಂದೇ ರಾಜ್ಯ ಸರ್ಕಾರವು ಅಧ್ಯಕ್ಷರಿಗೆ ₹ 50 ಲಕ್ಷ ಹಾಗೂ ತಮಗೆ ₹ 10 ಲಕ್ಷ ನೀಡಿದೆ. ನಿಯಮಿತ ಕ್ರಿಯಾಯೋಜನೆ ಹಾಗೂ  ಟಾಸ್ಕ್‌ ಫೋರ್ಸ್‌ ಅನುದಾನ ಲಭ್ಯವಿಲ್ಲದಿದ್ದರೆ, ತುರ್ತು ಕಾರ್ಯಕ್ಕಾಗಿ ಪ್ರಸ್ತಾವನೆ ಸಲ್ಲಿಸಬೇಕು. ಕೂಡಲೇ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ವಿದ್ಯುತ್‌ ಸಂಪರ್ಕ ಕಡಿತ ಸಲ್ಲದು
ಬಿಲ್‌ ಹಣ ಪಾವತಿಸಿಲ್ಲ ಎಂಬ ಕಾರಣದಿಂದ ಸರ್ಕಾರಿ ಶಾಲೆ, ಕಾಲೇಜು, ವಿದ್ಯಾರ್ಥಿ ನಿಲಯಗಳು ಹಾಗೂ ಕುಡಿ­ಯುವ ನೀರು ಪೂರೈಸುವ ಘಟಕಗಳಿಗೆ ವಿದ್ಯುತ್‌ ಸಂಪರ್ಕವನ್ನು ಕಡಿತ ಮಾಡ­ಬಾರದು. ಬರಗಾಲವಿರು­ವುದರಿಂದ ಮತ್ತು ಕೆಲವೇ ದಿನಗಳಲ್ಲಿ ಎಸ್‌ಎಸ್‌­ಎಲ್‌ಸಿ ಪರೀಕ್ಷೆ ಆರಂಭವಾಗು­ವುದ­ರಿಂದ, ವಿದ್ಯಾರ್ಥಿಗ­ಳಿಗೆ ಮತ್ತು ರೈತರಿಗೆ ಜೆಸ್ಕಾಂ ತೊಂದರೆ ನೀಡ­ಬಾರದು ಎಂದು ಸಿಇಓ ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ 870 ಅಪೌಷ್ಟಿಕ ಮಕ್ಕಳಿದ್ದು, ಅಪೌಷ್ಟಿಕತೆ ಹೊಗ­ಲಾಡಿ­ಸುವ ನಿಟ್ಟಿನಲ್ಲಿ ವಿಶೇಷ ಕ್ರಿಯಾಯೋಜನೆ ರೂಪಿಸಬೇಕು. ನಾಲ್ಕು ತಿಂಗಳಲ್ಲಿ ಆ ಪ್ರಮಾಣವನ್ನು 400ರೊಳಗೆ ತರುವ ಕೆಲಸ ಮಾಡಬೇಕು ಎಂದು ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪೂರ್ಣ ಫಲಿತಾಂಶ
ಸರ್ಕಾರದ ವಿವಿಧ ಇಲಾಖೆಗಳ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೆಲ್ಲರೂ ಉತ್ತಮ ಫಲಿ­ತಾಂಶ ಪಡೆಯಬೇಕು. ಯಾರೊಬ್ಬರೂ ಅನುತ್ತೀರ್ಣ­ರಾಗುವಂತಿಲ್ಲ. ಅದಕ್ಕಾಗಿ ವಿಶೇಷ ತರಗತಿ, ಮಾರ್ಗದರ್ಶನ ನೀಡ­ಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಶ್ರೀಧ­ರನ್‌ ಅವರಿಗೆ ಸೂಚಿಸಿದರು. ಹಂಗಾಮಿ ಅಧ್ಯಕ್ಷ ಪಿ.ದೀನಾ ಉಪಸ್ಥಿತರಿದ್ದರು.

ನೀರಿನ ಘಟಕ ಸುಸ್ಥಿತಿಯಲ್ಲಿರಲಿ
ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಉತ್ತಮ ಸ್ಥಿತಿಯಲ್ಲಿರುವಂತೆ ಎಚ್ಚರಿಕೆ ವಹಿಸಬೇಕು. ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರು ಬಂದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಓ ರಾಜೇಂದ್ರ ಎಚ್ಚರಿಕೆ ನೀಡಿದರು.

ಜಿಲ್ಲೆಯ ಸರ್ಕಾರಿ ಶಾಲೆ, ಕಾಲೇಜು ಹಾಗೂ ವಿದ್ಯಾರ್ಥಿನಿಲಯಗಳಲ್ಲಿ ಕೈ ಮತ್ತು ಪಾತ್ರೆ ತೊಳೆಯುವ ನೀರು ವ್ಯರ್ಥಯವಾಗದ ರೀತಿಯಲ್ಲಿ ಅಡುಗೆ ಕೋಣೆಗಳ ಸಮೀಪ ಕೈತೋಟವನ್ನು ನಿರ್ಮಿಸಲು ತೋಟಗಾರಿಕೆ ಇಲಾಖೆ ಆದ್ಯತೆ ನೀಡಬೇಕು ಎಂದರು.

*
ಸರ್ಕಾರ ನಿಗದಿಪಡಿಸಿದ ದರ­ಕ್ಕಿಂತ ಹೆಚ್ಚಿನ ದರದಲ್ಲಿ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳು ನೀರನ್ನು ಮಾರಾಟ ಮಾಡಿದರೆ ನಿರ್ದಾ­ಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
-ಡಾ.ಕೆ.ವಿ.ರಾಜೇಂದ್ರ,
ಜಿಪಂ ಸಿಇಓ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT