ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಕ್ಷಾತೀತ ಹೋರಾಟಕ್ಕೆ ಕೈ ಜೋಡಿಸಿ’

Last Updated 22 ಮಾರ್ಚ್ 2017, 8:44 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಅವಳಿ ಜಿಲ್ಲೆಯ ಮುಳಗಡೆ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಪಕ್ಷಾತೀಯ ಮುಳುಗಡೆ ಹೋರಾಟ ಸಮಿತಿ ಹುಟ್ಟಿಕೊಂಡಿದೆ. ಅದರಲ್ಲಿ ಯಾವುದೇ ರಾಜಕೀಯ ಬೆರೆಸಬೇಡಿ’ ಎಂದು ರೈತ ಮುಖಂಡ ಹೊಳೆಬಸು ಬಾಳಶೆಟ್ಟಿ ಮನವಿ ಮಾಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಹಿತರಕ್ಷಣಾ ಹೋರಾಟ ಸಮಿತಿ ವಾಸಣ್ಣ ದೇಸಾಯಿ ಅವರ ನೇತೃತ್ವದಲ್ಲಿ ಪಕ್ಷಾತೀತವಾಗಿ ಜನ್ಮತಾಳಿದೆ. ಅವರ ನಿಧನದ ನಂತರ ಬೀಳಗಿ ಶಾಸಕ ಜೆ.ಟಿ.ಪಾಟೀಲ ತಮ್ಮ ಸಹೋದರನನ್ನು ಅಧ್ಯಕ್ಷರನ್ನಾಗಿ ಮಾಡಿ ಹೋರಾಟದಲ್ಲಿ ರಾಜಕೀಯ ಬೆರೆಸುತ್ತಿದ್ದಾರೆ ಎಂದು ಆರೋಪಿಸಿದರು.

ಯೋಜನೆಗಾಗಿ ಅವಳಿ ಜಿಲ್ಲೆಯ ಜನರು ಆಸ್ತಿ–ಪಾಸ್ತಿ, ಮನೆ ಮಠ ಕಳೆದುಕೊಂಡಿದ್ದಾರೆ. ಸರ್ಕಾರದ ಕಣ್ಣು ತೆರೆಸಲು ಉಗ್ರ ಹೋರಾಟ ರೂಪಿಸುವ ಅನಿವಾರ್ಯತೆ ಎದುರಾಗಿದೆ. ಈ ಹೋರಾಟಕ್ಕೆ ರಾಜಕೀಯೇತರ ನೇತೃತ್ವ ವಹಿಸಿಕೊಳ್ಳಲಿ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ವಾಸಣ್ಣ ದೇಸಾಯಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕಾಗಿದೆ ಎಂದರು.

ರಾಜೀನಾಮೆ ಸೂಕ್ತವಲ್ಲ: ಸಂತ್ರಸ್ತರಿಗೆ ನೀಡಬೇಕಾದ ನ್ಯಾಯಯುತ ಪರಿಹಾರ ಕೊಡಿಸುವಲ್ಲಿ ವಿಫಲವಾದರೆ ಮೂರು ತಿಂಗಳಲ್ಲಿ ಶಾಸಕ ಜೆ.ಟಿ.ಪಾಟೀಲ ಅವರಿಂದ ರಾಜೀನಾಮೆ ಕೊಡಿಸುವುದಾಗಿ ಬೆಂಬಲಿಗರು ಹೇಳಿಕೆ ನೀಡಿರುವುದು ಸೂಕ್ತವಲ್ಲ. ಶಾಸಕರು ತಮ್ಮ ಬೆಂಬಲಿಗರಿಂದ ಇಂತಹ ಹೇಳಿಕೆ ಕೊಡಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಿದ್ದಣ್ಣ ದೇಸಾಯಿ, ವಿಜಯಲಕ್ಷ್ಮಿ ಪಾಟೀಲ, ಸಿದ್ಧಣ್ಣಗೌಡ ವಲಿಗೌಡ, ಶಂಕರಗೌಡ ಪಾಟೀಲ, ಸಿ.ವಿ. ಕೋಟಿ, ಮಲ್ಲಪ್ಪ ಪೂಜಾರಿ, ಜಿ.ಡಿ. ದೇಸಾಯಿ, ಜಿತೇಂದ್ರ ಪಾಟೀಲ (ಯಡಹಳ್ಳಿ), ಬೆಣ್ಣಪ್ಪ ಬೀಳಗಿ, ಬಸವರಾಜ ಕುಂಬಾರ, ಇತರರು ಇದ್ದರು.

‘ಶಾಸಕರ ಮೊಸಳೆ ಕಣ್ಣೀರು ಸಲ್ಲ’
‘ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದು ಬಿಟ್ಟು ಶಾಸಕ ಜೆ.ಟಿ. ಪಾಟೀಲ ಮೊಸಳೆ ಕಣ್ಣೀರು ಹಾಕುತ್ತಾ ನಾಟಕ ಮಾಡುತ್ತಿದ್ದಾರೆ’ ಎಂದು ಮಾಜಿ ಸಚಿವ ಮುರಗೇಶ ನಿರಾಣಿ ಟೀಕಿಸಿದರು.

‘ಕಳೆದ ನಾಲ್ಕು ವರ್ಷದಿಂದ ಅಧಿಕಾರದಲ್ಲಿರುವ ಅವರು ಯಾವುದೇ ಕೆಲಸ ಮಾಡಿಲ್ಲ. ಸರ್ಕಾರ ಅವರದ್ದೇ ಇದ್ದರೂ ಸ್ವಗ್ರಾಮ ಯಡಹಳ್ಳಿಯ ರೈತರಿಗೆ ₹ 6.40 ಲಕ್ಷ ಪರಿಹಾರ ಕೊಡಿಸಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಕೂಡಗಿ ಎನ್‌ಟಿಪಿಸಿ ಸ್ಥಾವರಕ್ಕೆ ಭೂಮಿ ಕೊಟ್ಟ ರೈತರಿಗೆ ಖುಷ್ಕಿ ಜಮೀನಿಗೆ ₹ 9 ಲಕ್ಷ. ನೀರಾವರಿಗೆ ₹ 12 ಲಕ್ಷ ಪರಿಹಾರ ನೀಡಿದ್ದೆವೆ. ಯಾರು ರೈತ ಪರ ಎಂಬುದು ಇದರಿಂದ ಗೊತ್ತಾಗುತ್ತದೆ’ ಎಂದರು.

‘ಹಂಚಿನಾಳದಲ್ಲಿ ನಮ್ಮ ಕುಟುಂಬಕ್ಕೆ ಸೇರಿದ 300 ಎಕರೆಗೂ ಹೆಚ್ಚು ಭೂಮಿ ಮುಳಗಡೆಯಾಗಿದೆ. ನಾನು ಯಾವುದೇ ಕಾರಣಕ್ಕೂ ಸಂತ್ರಸ್ತರ ಹೆಸರಲ್ಲಿ ರಾಜಕಾರಣ ಮಾಡುತ್ತಿಲ್ಲ.  ಕೈಗಾರಿಕೆ ಸಚಿವನಿದ್ದಾಗ ಭಗವತಿ ಹಾಗೂ ಕೆರೂರು ಬಳಿ ಬೃಹತ್ ಕಂಪೆನಿ ಸ್ಥಾಪಿಸಲು ಮುಂದಾಗಿದ್ದೆನು. ಇವರೇ ರೈತರನ್ನು ಎತ್ತಿ ಕಟ್ಟಿ ಹೋರಾಟ ಮಾಡಿಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT