ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಚಿ ಸ್ವಚ್ಛತೆ ಕಾಮಗಾರಿಗೆ ವಿರೋಧ

ದೊಡ್ಡ ಕೆರೆಯಲ್ಲಿ ಕೆಲಸಕ್ಕೆ ರೈತರ ಅಡ್ಡಿ; ಪ.ಪಂ. ಅಧಿಕಾರಿಗಳು, ಗುತ್ತಿಗೆದಾರ ವಿರುದ್ಧ ಅಸಮಾಧಾನ
Last Updated 22 ಮಾರ್ಚ್ 2017, 8:46 IST
ಅಕ್ಷರ ಗಾತ್ರ

ಬೈಲಹೊಂಗಲ: ಪಟ್ಟಣದ ಇತಿಹಾಸ ಪ್ರಸಿದ್ದ ದೊಡ್ಡ ಕೆರೆಯ ಪಾಚಿ ತೆಗೆಯುವ ಕಾರ್ಯ ಕಾಟಾಚಾರದಿಂದ ನಡೆಸಲಾಗುತ್ತಿದೆ. ಮೇಲ್ನೋಟಕ್ಕೆ ಕಸಗಡ್ಡಿ, ಪಾಚಿ ತೆಗೆದು ಸರ್ಕಾರ ಮತ್ತು ಸಾರ್ವಜನಿಕರಿಗೆ ವಂಚಿಸುವ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಆರೋಪಿಸಿ ರೈತರು ಮಂಗಳವಾರ ಕಾಮಗಾರಿಯನ್ನು ತಡೆದರು.

ಹಣಮಂತ ದೇವರ ಗುಂಡಿ ಹಿಂದೆ ಇರುವ ದೊಡ್ಡ ಕೆರೆಗೆ ದಿಢೀರ್ ಭೇಟಿ ನೀಡಿದ ರೈತರು ಕಾಟಾಚಾರಕ್ಕೆ ಪಾಚಿ ತೆಗೆಯುವ ಕಾರ್ಯ ಕಂಡು ಅಸಮಾಧಾನ ವ್ಯಕ್ತಪಡಿಸಿದರು.

ಕೆರೆಯಲ್ಲಿ ಎದೆ ಎತ್ತರಕ್ಕೆ ಬೆಳೆದು ನಿಂತಿರುವ ಗಿಡಗಂಟಿ, ಪಾಚಿಯನ್ನು ಅರ್ಧ ತೆಗೆದು, ಇನ್ನರ್ಧ ಹಾಗೆ ಬಿಡುವದನ್ನು ಗಮನಿಸಿದ ರೈತರು ಸಂಬಂಧಿಸಿದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಸುಮಾರು 19 ಎಕರೆ ಪ್ರದೇಶ ಹೊಂದಿರುವ ಕೆರೆಗೆ ಬೆರಳೆಣಿಕೆಯಷ್ಟು ಜನರಿಂದ ಪಾಚಿ ತೆಗೆಯುವ ಕೆಲಸ ನಡೆಸಿರುವುದು ಸರಿಯಲ್ಲ.

ಕೆರೆಯ ಮಧ್ಯದಲ್ಲಿ ಸಾಕಷ್ಟು ಗಲೀಜು, ಕಸಗಡ್ಡಿ, ತ್ಯಾಜ್ಯದ ನೀರು ಸಂಗ್ರಹವಾಗಿದೆ. ಇದರಿಂದ ಕೆರೆ ನೀರು ಕಲುಷಿತಗೊಂಡು ದುರ್ನಾತ ಹರಡಿದೆ. ಈ ಬಗ್ಗೆ ಗಮನ ಕೊಡದೆ ಕಾಟಾಚಾರಕ್ಕೆ ಪಾಚಿ ತೆಗೆಯುವ ಕೆಲಸ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಪುರಸಭೆ ಸದಸ್ಯರಾದ ಮಡಿವಾಳಪ್ಪ ಹೋಟಿ, ಮಹೇಶ ಹರಕುಣಿ ಅವರನ್ನು ಸ್ಥಳಕ್ಕೆ ಕರೆಯಿಸಿ ಸಮಸ್ಯೆ ತಿಳಿಸಿದರು. ರೈತರ ಸಮಸ್ಯೆಗೆ ಸ್ಪಂದಿಸಿದ ಅವರು ಕೆರೆಯ ಸುತ್ತಮುತ್ತ, ಕೆರೆ ಮಧ್ಯ ಬೆಳೆದಿರುವ ಪಾಚಿಯನ್ನು ಸಂಪೂರ್ಣವಾಗಿ ಬುಡ ಸಮೇತ ತೆಗೆದು ಹಾಕಬೇಕು. ಕಾಟಾಚಾರದ ಕೆಲಸ ಮಾಡಬಾರದು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ರೈತ ಬಸಪ್ಪ ಬೈಲವಾಡ, ಮಹಾಂತೇಶ ಮಿಸಿಗೇರಿ ಮಾತನಾಡಿ, ‘ಜನರಿಗೆ, ಜಾನುವಾರುಗಳಿಗೆ ಕಾಮಧೇನು, ಕಲ್ಪವೃಕ್ಷವಾಗಿರುವ ದೊಡ್ಡ ಕೆರೆಯನ್ನು ಸಮಗ್ರ ಅಭಿವೃದ್ಧಿ ಪಡಿಸಿ ಜನರಿಗೆ, ಜಾನುವಾರುಗಳಿಗೆ ಅನುಕೂಲ ಕಲ್ಪಿಸುವ ಮನಸ್ಸು, ಪ್ರಾಮಾಣಿಕ ಪ್ರಯತ್ನ ಪುರಸಭೆಗೆ, ಅಧಿಕಾರಿಗಳಿಗೆ ಇಲ್ಲವಾಗಿದೆ. ಇದರಿಂದ ಕೆರೆಯ ಸುತ್ತಮುತ್ತ ಅತಿಕ್ರಮಣ, ಎದೆ ಎತ್ತರಕ್ಕೆ ಬೆಳೆದಿರುವ ಕಸ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿವೆ ಎಂದು ಅವರು ತಿಳಿಸಿದರು.

ಕೆರೆ ಹೂಳೆತ್ತಲು ಹೋರಾಟ ಮಾಡಿದರೂ ಗಮನ ಹರಿಸಲಿಲ್ಲ. ಕೆರೆ ಅಭಿವೃದ್ಧಿಗೆ ಕೋಟ್ಯಂತರ ಅನುದಾನ ಬಂದಿದ್ದರೂ ಸದ್ಬಳಕೆ ಮಾಡಿಕೊಳ್ಳಲಿಲ್ಲ. ಆದರೆ ಈಗ ಪಾಚಿ ತೆಗೆಯುವ ನೆಪದಲ್ಲಿ ಅನುದಾನದ ದುರ್ಬಳಕೆ ಆಗುತ್ತಿದೆ ಎಂದು ಆಪಾದಿಸಿದರು.

ಪುರಸಭೆ ಮುಖ್ಯಾಧಿಕಾರಿಗಳು ಕೆರೆ ಸುತ್ತಮುತ್ತ ಸಸಿ ನೆಟ್ಟು ಕೆರೆ ಅಂದ ಹೆಚ್ಚಿಸುವುದಾಗಿ ತಿಳಿಸಿದ್ದರು. ಇದುವರೆಗೂ ಒಂದೇ ಸಸಿ ನೆಡಲಾಗಿಲ್ಲ. ಕೆರೆ ಅಭಿವೃದ್ಧಿ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ರೈತರಾದ ಸೋಮಪ್ಪ ಬೆಳಗಾವಿ, ಮಹಾಂತೇಶ ಮಿಸಿಗೇರಿ, ಶಿವು ಕುರಬರ, ಶ್ರೀಕಾಂತ ಶಿರಹಟ್ಟಿ, ಬಸವರಾಜ ದೊಡಮನಿ, ಶಿವಪುತ್ರಪ್ಪ ದೊಡವಾಡ, ಅಜಯ ಚಲವಾದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT