ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ವಿ. ವಿಯಲ್ಲಿ ಬಾಯಾರಿಕೆ ನೀಗಿಸಿದ ‘ವ್ಯರ್ಥ’ ನೀರು

ಮಳೆ ನೀರು ಕೊಯ್ಲು, ನೀರಿನ ಪುನರ್ಬಳಕೆ ತಾಂತ್ರಿಕತೆ ಅಳವಡಿಕೆ
Last Updated 22 ಮಾರ್ಚ್ 2017, 8:52 IST
ಅಕ್ಷರ ಗಾತ್ರ

ಬಾಗಲಕೋಟೆ: ಮಳೆಕೊಯ್ಲು ಹಾಗೂ ವ್ಯರ್ಥ ನೀರು ಪುನರ್ಬಳಕೆ ತಾಂತ್ರಿಕತೆ ಅಳವಡಿಕೆಯಿಂದ ಕ್ಯಾಂಪಸ್‌ನ ನೀರಿನ ಬೇಡಿಕೆ ಈಡೇರಿಸಿಕೊಳ್ಳುವಲ್ಲಿ ತೋಟ­ಗಾ­ರಿಕೆ ವಿಶ್ವವಿದ್ಯಾಲಯ ಯಶಸ್ವಿ­ಯಾಗಿದೆ.

ವಿವಿಯ ಜಲಯಜ್ಞದಿಂದಾಗಿ ನಿತ್ಯ ಐದು ಲಕ್ಷ ಲೀಟರ್ ನೀರು ಕ್ಯಾಂಪಸ್‌ ಬಳಕೆಗೆ ಸಿಗುತ್ತಿದೆ. 150 ಎಕರೆ ಪ್ರದೇಶ­ದಲ್ಲಿನ ಉದ್ಯಾನ, ಕೈ ತೋಟಗಳು, ಪ್ರಾಯೋಗಿಕ ತಾಕುಗಳಲ್ಲಿನ ಹಣ್ಣು, ತರಕಾರಿ ಹಾಗೂ ಸುಗಂಧ ದ್ರವ್ಯದ ಗಿಡಗಳು ಬಿರು ಬೇಸಿಗೆಯಲ್ಲೂ ಹಸಿರಿ­ನಿಂದ ನಳನಳಿಸುತ್ತಿವೆ. ಒಂದೂವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿಯ ದೈನಂದಿನ ಅಗತ್ಯ ಈ ನೀರು ಪೂರೈಸುತ್ತಿದೆ.

ಎರಡು ಕೆರೆಗಳ ನಿರ್ಮಾಣ: ಕ್ಯಾಂಪಸ್‌­ನಲ್ಲಿ ನೀರು ಸಂಗ್ರಹಿಸಲು ವಿವಿ ಆವರಣ­ದಲ್ಲಿಯೇ  60x60 ಹಾಗೂ 65x90 ಮೀಟರ್ ವಿಸ್ತೀರ್ಣದ ಎರಡು ಕೆರೆ ನಿರ್ಮಿಸಲಾಗಿದೆ. ಅದರಲ್ಲಿ ಒಂದು 65 ಲಕ್ಷ ಲೀ., ಮತ್ತೊಂದು 1.5 ಕೋಟಿ ಲೀ. ನೀರು ಸಂಗ್ರಹಣೆ ಸಾಮರ್ಥ್ಯ ಹೊಂದಿದೆ.

ಮಳೆ ಕೊಯ್ಲು: ವಿಶ್ವವಿದ್ಯಾಲಯದ ಆವರಣ, ಹಿಂಭಾಗದ ಗುಡ್ಡ, ನವನಗರ ಯುನಿಟ್‌ 2ರಲ್ಲಿ ಸುರಿದು ಹರಿದು ಹೋಗುತ್ತಿದ್ದ ಮಳೆಯ ನೀರು ವ್ಯರ್ಥ­ವಾಗದಂತೆ ಕಾಲುವೆ ಮೂಲಕ ಕೆರೆಗೆ ಹರಿಸಲಾಗುತ್ತಿದೆ.

ನೀರಿನ ಪುನರ್ಬಳಕೆ: ವಿವಿ ಕ್ಯಾಂಪಸ್‌ ಬಳಿಯ ಸೀಮಿಕೇರಿಯಲ್ಲಿ ಬಾಗಲ­ಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ (ಬಿಟಿಡಿಎ) ಜಲ ಶುದ್ಧೀಕರಣ ಘಟಕ ಇದೆ. ಘಟಪ್ರಭಾ ನದಿ ನೀರನ್ನು ಅಲ್ಲಿ ಸಂಗ್ರಹಿಸಿ, ಶುದ್ಧೀಕರಿಸಲಾಗುತ್ತದೆ.

ಈ ಪ್ರಕ್ರಿಯೆ ವೇಳೆ ಫಿಲ್ಟರ್‌ ಬೆಡ್‌ಗಳನ್ನು ತೊಳೆಯಲಾಗುತ್ತದೆ. ಇದಕ್ಕೆ ನಿತ್ಯ 5 ಲಕ್ಷ ಲೀಟರ್‌ಗೂ ಹೆಚ್ಚು ನೀರು ಬೇಕು. ಅದು ನಂತರ ಚರಂಡಿಗೆ ಬಿಡಲಾಗುತ್ತಿತ್ತು. ಅದನ್ನು ಪೈಪ್‌ಲೈನ್ ಮೂಲಕ ಕ್ಯಾಂಪಸ್‌ನ ಕೆರೆಗೆ ಹರಿಸಿಕೊಂಡು  ಪುನರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.

15 ಲಕ್ಷ ಲೀಟರ್ ಬೇಡಿಕೆ: ‘ಕುಡಿಯುವ ನೀರಿಗೆ 65 ಸಾವಿರ ಲೀಟರ್ ಸೇರಿದಂತೆ ಕ್ಯಾಂಪಸ್‌ನ ಬೇಡಿಕೆ ನಿತ್ಯ 15 ಲಕ್ಷ ಲೀಟರ್‌. ಅದರಲ್ಲಿ 5ಲಕ್ಷ ಲೀಟರ್‌ ಮಳೆಕೊಯ್ಲು, ಪುನರ್ಬ­ಳಕೆ­ಯಿಂದ ಸಿಗುತ್ತಿದೆ. ಉಳಿದ ಬೇಡಿಕೆ ಕೊಳವೆಬಾವಿಗಳು ಈಡೇರಿಸುತ್ತವೆ’ ಎಂದು ವಿಶ್ವವಿದ್ಯಾಲಯ ಎಸ್ಟೇಟ್ ಅಧಿ­ಕಾರಿ ಜೆ.ವಿಜಯಕುಮಾರ ಹೇಳುತ್ತಾರೆ.

ಮೆಶ್ ಅಳವಡಿಕೆಗೆ ನಿರ್ಧಾರ: ‘ವಿಶ್ವ­ವಿದ್ಯಾಲಯ ಆರಂಭದ ವರ್ಷಗಳಲ್ಲಿ ಅನುಭವಿಸಿದ ನೀರಿನ ತೊಂದರೆ ಈ ತಾಂತ್ರಿಕತೆ ಬಳಕೆಗೆ ಸ್ಫೂರ್ತಿಯಾಗಿದೆ. ಈಗ ಎರಡೂ ಕೆರೆಗಳಲ್ಲಿನ ನೀರಿನಲ್ಲಿ  ಶೇ 20ರಷ್ಟು ಆವಿ­­ಯಾ­ಗುತ್ತಿದೆ. ಅದನ್ನು  ತಡೆಯಲು ಮೇಲ್ಭಾಗದಲ್ಲಿ ತೆಳುವಾದ ಮೆಶ್ ಅಳವಡಿ­ಸಲಾಗುತ್ತಿದೆ. ಜೊತೆಗೆ ನೀರು ಇಂಗುವಿಕೆ ತಡೆಯಲು ಕಡಿಮೆ ವೆಚ್ಚದ ಪ್ಲಾಸ್ಟಿಕ್ ಲೈನಿಂಗ್ ಮಾಡಲು ನಿರ್ಧರಿಸ­­ಲಾಗಿದೆ’ ಎಂದು ಡಾ.ಮಹೇಶ್ವರ್ ತಿಳಿಸಿದರು.

*
ಕ್ಯಾಂಪಸ್‌ನ ಎರಡೂ ಕೆರೆಗಳಲ್ಲಿ ವರ್ಷವಿಡೀ ನೀರು ಸಂಗ್ರಹವಾಗುವ ಕಾರಣ ಅಲ್ಲಿ ಮೀನು ಸಾಕಣೆ ಮಾಡಿ ವಿಶ್ವವಿದ್ಯಾಲಯಕ್ಕೆ ಆದಾಯ ತಂದುಕೊಡಲು ನಿರ್ಧರಿಸಲಾಗಿದೆ.
-ಡಾ.ಡಿ.ಎಲ್.ಮಹೇಶ್ವರ್,
ತೋಟಗಾರಿಕೆ ವಿ.ವಿ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT