ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕ್ಫ್ ಮಂಡಳಿ ವಶಕ್ಕೆ ಆಡಳಿತ:ಆಗ್ರಹ

ಶಿರಸಿಯ ಸುಲ್ತಾನಿಯಾ, ಮದೀನಾ ಮಸೀದಿಗಳ ಆಡಳಿತಾಧಿಕಾರಿಯಿಂದ ಅವ್ಯವಹಾರ ಆರೋಪ
Last Updated 22 ಮಾರ್ಚ್ 2017, 8:55 IST
ಅಕ್ಷರ ಗಾತ್ರ

ಶಿರಸಿ: ನಗರದ ಸುಲ್ತಾನಿಯಾ ಮತ್ತು ಮದೀನಾ ಮಸೀದಿಗಳ ಆಡಳಿತಾಧಿಕಾರಿ ಯಾಗಿ ಅಧಿಕಾರ ವಹಿಸಿಕೊಂಡ ಶಫಿ ಮುಲ್ಲಾ ಅವರ ಮೇಲೆ ಬಹು ಹಿಂದಿನಿಂದಲೇ ಅವ್ಯವಹಾರದ ಆರೋಪವಿದೆ. ಹೀಗಾಗಿ ವಕ್ಫ್ ಆಸ್ತಿ ಸಂರಕ್ಷಿಸುವ ಉದ್ದೇಶದಿಂದ ಇವೆರಡು ಮಸೀದಿಗಳ ಆಡಳಿತವನ್ನು ಸರ್ಕಾರ ತನ್ನ ವಶಕ್ಕೆ ಪಡೆದು ನಿರ್ವಹಣೆ ಮಾಡಬೇಕು ಎಂದು ನಿಕಟಪೂರ್ವ ಆಡಳಿತಾಧಿಕಾರಿ ಹಾಗೂ ಈ ಹಿಂದಿನ ಆಡಳಿತ ಮಂಡಳಿ ಸದಸ್ಯರು ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರ ಮಾಜಿ ಆಡಳಿತಾಧಿಕಾರಿ ಅಬ್ದುಲ್ ಮುಳಗುಂದ ಅವರು  ‘2001ರಿಂದ 2004ರವರೆಗೆ ಮೌಲಾ ಕೆ. ಬುಡನ್ ಎಂಬುವರು ಸುಲ್ತಾನಿಯಾ ಮತ್ತು ಮದೀನಾ ಮಸೀದಿಗಳ ಅಧ್ಯಕ್ಷರಾಗಿ ಮಸೀದಿಗಳ ವ್ಯವಹಾರ ನಡೆಸಿ ಅವರ ತಮ್ಮಂದಿರಿಗೆ ಸಿ.ಪಿ. ಬಜಾರದಲ್ಲಿ ಎರಡು ದೊಡ್ಡ ಅಂಗಡಿಗಳನ್ನು ಬಾಡಿಗೆ ಮೂಲಕ ನೀಡಿದ್ದಾರೆ.

ನಂತರ ವಕ್ಫ್ ಬೋರ್ಡಿಗೆ ತಿಳಿಸದೇ ಅವಧಿ ಮುಗಿದ ನಂತರ ಇಕ್ಬಾಲ್ ಇಸ್ಮಾಯಿಲ್ ಶೇಖ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ. 2004ರಿಂದ 2014ರವರೆಗೆ 10 ವರ್ಷಗಳ ಕಾಲ ಮಸೀದಿ ಆಡಳಿತವನ್ನು ಇಕ್ಬಾಲ್ ಶೇಖ್ ಬಿಳಗಿ ಮತ್ತು ಸಂಗಡಿ ಗರು ನಡೆಸಿದರು. ಈ ಅವಧಿಯಲ್ಲಿ ಯಾವುದೇ ಲೆಕ್ಕವನ್ನು ಅವರು ಬಹಿರಂಗ ಪಡಿಸಲಿಲ್ಲ ಹಾಗೂ ಯಾವ ಬಾಡಿಗೆದಾರನಿಗೂ ಬಾಡಿಗೆ ಹೆಚ್ಚಿಸುವ ಪ್ರಯತ್ನ ಸಹ ಮಾಡಲಿಲ್ಲ.

ಎರಡು ಅಂಗಡಿಗಳ ಮುಂಗಡ ಹಣವನ್ನು ಮಸೀದಿಯ ಖಾತೆಯಲ್ಲಿ ಜಮಾ ಮಾಡಿರಲಿಲ್ಲ. 14 ವರ್ಷಗಳಲ್ಲಿ ನಡೆಸಿದ ಅವ್ಯವಹಾರ ಗೊತ್ತಾಗಿ ವಕ್ಫ್ ಬೋರ್ಡ್ 2015ರ ಆಗಸ್ಟ್ 16ರಂದು ಆಡಳಿತಾಧಿ ಕಾರಿಯಾಗಿ ನನ್ನನ್ನು (ಅಬ್ದುಲ್ ಮುಳಗುಂದ) ನೇಮಿಸಿತ್ತು’ ಎಂದರು.

‘ಬಾಡಿಗೆ ದರ ಹೆಚ್ಚಿಸುವಂತೆ ನೋಟಿಸ್ ಕಳುಹಿಸಿದಾಗ ಕೆಲವೊಂದು ಬಾಡಿಗೆದಾರರು ಹಾಗೂ ಹಳೆಯ ಸ್ವಯಂಘೋಷಿತ ಕಮಿಟಿಯವರು ಸೇರಿ ವಕ್ಫ್ ಬೋರ್ಡಿಗೆ ತಪ್ಪು ಮಾಹಿತಿ ಕೊಟ್ಟು ತಮಗೆ ಬೇಕಾಗಿರುವ ಕಸ್ತೂರಬಾ ನಗರದ ಶಫಿ ಮುಲ್ಲಾ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಕೊಂಡರು.

ಆತ ಕಸ್ತೂರಬಾ ನಗರದ ಮಸೀದಿಯ ಅಧ್ಯಕ್ಷನಾಗಿದ್ದಾಗ ಅವ್ಯವಹಾರ ನಡೆಸಿದ್ದರಿಂದ ಕಸ್ತೂರಬಾ ನಗರದ ನೂರ್ ಮಸೀದಿ ಮತ್ತು ಖಾಜಾಗರೀಬ್ ನವಾಜ್ ಎರಡೂ ಮಸೀದಿಯ ಮುಖಂಡರು ಸೇರಿ ಈತ ಯಾವುದೇ ಜವಾಬ್ದಾರಿಯ ಸ್ಥಾನಕ್ಕೆ ಯೋಗ್ಯನಲ್ಲ ಎಂದು ಠರಾವು ಮಾಡಿ ಹೊರಹಾಕಿದ್ದಾರೆ. 

ಅಭಿವೃದ್ಧಿ ಕಮಿಟಿಯ ಅಧ್ಯಕ್ಷನೆಂದು ಹೇಳಿಕೊಂಡಿರುವ ಇಮ್ತಿಯಾಜ್ ಶೇಖ್ ಬಿಳಗಿ ಅವರು ಚಂದಾಹಣವನ್ನು ತುಂಬಿದ ಲೆಕ್ಕ ನೀಡದೇ ಆ ರಸೀದಿಯನ್ನು ಸುಟ್ಟು ಹಾಕಿದ್ದಾರೆ. ಅರೆಬರೆ ಸುಟ್ಟಿರುವ ರಸೀದಿಗಳು ನಮ್ಮಲ್ಲಿವೆ’ ಎಂದರು. ಈ ವೇಳೆ ಪ್ರಮುಖರಾದ ಗೌಸ್‌ಖಾನ್ ಅಕ್ಬರ್ ಖಾನ್, ಹನನ್‌ಬೇಗ್ ಸಲೀಂ ಖಾನ್, ಅಹಮದ್ ಖಾನ್ ಬನವಾಸಿ, ಅನಿಸ್ ಖಾನ್, ಮುನ್ನಾ ಪಠಾಣ, ಹನೀಫ್ ಪಠಾಣ, ಮುಬಿನ್ ಚೌಧರಿ, ಜಾವೇದ್ ಚೌಧರಿ ಇದ್ದರು.

*
ಸುಲ್ತಾನಿಯಾ ಹಾಗೂ ಮದೀನಾ ಮಸೀದಿಗಳ ನೋಡಿಕೊಳ್ಳುವ ವಕ್ಫ್ ಆಸ್ತಿಯನ್ನು ಸರ್ಕಾರ ತಕ್ಷಣ ವಶಕ್ಕೆ ಪಡೆಯಬೇಕು.
-ಅಬ್ದುಲ್ ಮುಳಗುಂದ,
ಮಾಜಿ ಆಡಳಿತಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT