ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳ ಉಳಿವಿಗೆ ಬೇಕಿದೆ ಜನರ ಇಚ್ಛಾಶಕ್ತಿ

ಇಂದು ವಿಶ್ವ ಜಲ ದಿನ; ನೀರಿನ ಮೂಲಗಳ ಸಂರಕ್ಷಣೆಗೆ ತೊಡೋಣ ಪಣ
Last Updated 22 ಮಾರ್ಚ್ 2017, 9:45 IST
ಅಕ್ಷರ ಗಾತ್ರ

ರಾಮನಗರ: ರೇಷ್ಮೆ ನಗರಿಯ ಒಳಗಿನ ಜನರ ಅಗತ್ಯಗಳನ್ನು ಪೂರೈಸುತ್ತಿದ್ದ ಜಲಮೂಲಗಳು ಇಂದು ಅವಸನದ ಹಾದಿ ಹಿಡಿದಿವೆ.

ಜಲಾಂದೋಲನಗಳಂತಹ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ನಗರದ ಒಳಗೆ ಕೆರೆಗಳಿಗೂ ಕಾಯಕಲ್ಪ ನೀಡಬೇಕಾದ ಕಾರ್ಯವು ತುರ್ತಾಗಿ ಆಗಬೇಕಿದೆ.

ಕೆರೆಗಳಿಗೂ ಪಟ್ಟಣಗಳಿಗೂ ಅವಿನಾಭಾವ ನಂಟಿದೆ. ದಶಕಗಳ ಹಿಂದಿನವರೆಗೂ ಇವು ಇಲ್ಲಿನ ಜನರಿಗೆ ನೀರು ಪೂರೈಕೆ ಮಾಡುತ್ತಲೇ ಬಂದಿದ್ದವು. ಯಾವಾಗ ಮನೆಮನೆಗೆ ನೀರಿನ ನಲ್ಲಿಗಳು ಕಾಲಿಟ್ಟವೋ ಆಗಿನಿಂದಲೇ ಇವುಗಳ ಅವಸಾನ ಆರಂಭಗೊಂಡಿತು. ನಿರ್ವಹಣೆ ಇಲ್ಲದ ಕಾರಣ ಕ್ರಮೇಣ ಸೊರಗುತ್ತ ಪ್ರಸ್ತುತದಲ್ಲಿ ಒತ್ತುವರಿಯ ಭೂತ, ಮರಳುಕೋರರ ಕಾಟದಿಂದ ನಲುಗುತ್ತಿವೆ.

‘ಮೈಸೂರು ಸಂಸ್ಥಾನದ ಭಕ್ಷಿ ಬಾಲಾಜಿರಾಯರು ಎಂಬುವರು ಈ ಕೆರೆಯನ್ನು ಕಟ್ಟಿಸಿದರು ಎಂದು ಹೇಳಲಾಗುತ್ತಿದೆ. ಇಂದಿಗೂ ಜನರು ಈ ಕೆರೆಯನ್ನು ಭಕ್ಷಿ ಕೆರೆ ಎಂದೇ ಗುರುತಿಸುತ್ತಾರೆ. ಇಲ್ಲಿ ವರ್ಷ ಪೂರ್ತಿ ನೀರು ತುಂಬಿ ಹರಿಯುತ್ತಿತ್ತು.

ಕೆರೆಯ ಕೋಡಿ ಬಿದ್ದ ಸಿಹಿ ನೀರು ಸರಾಗವಾಗಿ ಹರಿದುಹೋಗಲು ಹಳ್ಳವನ್ನು ನಿರ್ಮಿಸಲಾಗಿತ್ತು. ಅದನ್ನು ಸಿಹಿ ನೀರಿನ ಹಳ್ಳ ಎಂದೇ ಗುರುತಿಸಲಾಗುತ್ತಿತ್ತು. ಈ ಹಳ್ಳದ ಮೂಲಕ ಜಮೀನುಗಳಿಗೆ ನೀರಾವರಿ ವ್ಯವಸ್ಥೆಗೂ ಯೋಜಿಸಲಾಗಿತ್ತು’ ಎಂದು ಸ್ಥಳೀಯರಾದ ಉಪನ್ಯಾಸಕ ಜಿ. ಶಿವಣ್ಣ ನೆನಪು ಮಾಡಿಕೊಳ್ಳುತ್ತಾರೆ.

ಕಾಲ ಕ್ರಮೇಣ ಕೆರೆಯು ಒತ್ತುವರಿಯಾಗಿ, ಮರಳು, ಮಣ್ಣು ಲೂಟಿಯಾಗುತ್ತ ಇದರ ಅಸ್ತಿತ್ವವೇ ಕಣ್ಮರೆ ಆಗುತ್ತಿದೆ. ಸಿಹಿ ನೀರು ಹರಿಯಬೇಕಿದ್ದ ಹಳ್ಳ ಈಗ ‘ಸೀರಳ್ಳ’ವಾಗಿ ಇಲ್ಲಿ ನಗರದ ನಾಲ್ಕಾರು ವಾರ್ಡುಗಳ ಹೊಲಸು ನೀರು ತುಂಬಿಕೊಂಡು ನದಿಯ ಒಡಲು ಸೇರುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

ನೂರಾರು ವರ್ಷಗಳಷ್ಟು ಇತಿಹಾಸ ಹೊಂದಿರುವ ಐಜೂರಿನ ಮಲ್ಲೇಶ್ವರ ಕೆರೆ  ಒಂದು ಕಾಲದಲ್ಲಿ ಈ ಭಾಗದ ಜನರ ನೀರಿನ ಅಗತ್ಯವನ್ನು ಪೂರೈಸುತ್ತಿತ್ತು. ಸುತ್ತಲೂ ಬೃಹತ್‌ ಬಂಡೆಗಳಿಂದ ಅವೃತವಾಗಿರುವ ಕಾರಣ ಮಳೆಗಾಲದಲ್ಲಿ ಇಲ್ಲಿ ನೀರಿನ ಹರಿವು ಸಹಜವಾಗಿಯೇ ಹೆಚ್ಚಾಗಿರುತ್ತದೆ. ಆದರೆ ಆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಇದು ಕಳೆದುಕೊಳ್ಳುತ್ತಾ ಬಂದಿದೆ. ಇಡೀ ಕೆರೆಯ ತುಂಬ ಜೊಂಡು ಹುಲ್ಲು, ಪಾಚಿ ಬೆಳೆದು ನಿಂತಿದೆ.

ವರ್ಷದ ಹಿಂದೆ ಕೆಲವು ಸಂಘಟನೆಗಳು ಇದಕ್ಕೆ ಪುನಶ್ಚೇತನ ನೀಡುವ ಕಾರ್ಯಕ್ಕೆ ಮುಂದಾಗಿದ್ದವು. ಬಳಿಕ ನಗರಸಭೆಯೇ ಇದರ ಅಭಿವೃದ್ಧಿ  ಉಸ್ತುವಾರಿ ವಹಿಸಿಕೊಂಡು ಮುಂದುವರಿಯುವುದಾಗಿ ಹೇಳಿತ್ತು. ಆದರೆ ಆ ಕಾರ್ಯ ನನೆಗುದಿಗೆ ಬಿದ್ದಿದ್ದು, ವರ್ಷವಾದರೂ ಒಂದಿಷ್ಟು ಕಾರ್ಯ ಸಾಗಿಲ್ಲ.

ಚಾಮುಂಡಿಪುರ ಬಳಿ ಇರುವ ಬೋಳಪ್ಪನ ಕೆರೆಯು ಹತ್ತಾರು ಹೆಕ್ಟೇರ್‌ನಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿದೆ. ಹಿಂದೊಮ್ಮೆ ಇಡೀ ಕೆರೆಯಲ್ಲಿ ನೀರು ತುಂಬಿದ್ದನ್ನು, ಇಲ್ಲಿ ಈಜಾಡುತ್ತಾ ಇದ್ದುದನ್ನು ಹಿರಿಯರು ನೆನಪು ಮಾಡಿಕೊಳ್ಳುತ್ತಾರೆ.

ಆದರೆ ಇಂದು ಕೆರೆಯ ನಾಲ್ಕನೇ ಒಂದು ಭಾಗದಷ್ಟು ಜಾಗ ಒತ್ತುವರಿಗೆ ಒಳಪಟ್ಟಿದೆ. ಇಟ್ಟಿಗೆ ಕಾರ್ಖಾನೆಗಳು ಇಲ್ಲಿನ ನೀರನ್ನು ಹೀರಿಕೊಂಡು ಬೆಳೆಯತೊಡಗಿವೆ. ಮತ್ತೊಂದೆಡೆ ಫಿಲ್ಟರ್‌ ಮರಳು ದಂಧೆಕೋರರ ಕಾಟ ವಿಪರೀತವಾಗಿದೆ.

ಕೆರೆಯ ಮಧ್ಯಭಾಗದಲ್ಲಿಯೇ ರಾಜಾರೋಷವಾಗಿ ಮರಳು ಫಿಲ್ಟರ್ ಕಾರ್ಯ ನಡೆಯುತ್ತಿದ್ದರೂ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಮಾತ್ರ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಇರುವ ಅಲ್ಪ ಪ್ರಮಾಣದ ನೀರೂ ಮಣ್ಣನ್ನು ತೊಳೆಯಲು ಬಳಕೆಯಾಗುತ್ತಿದೆ. ಹೀಗೆ ಮುಂದುವರಿದಲ್ಲಿ ಜಾನುವಾರಿಗಳಿಗೆ ಕುಡಿಯಲೂ ನೀರು ಇಲ್ಲದ ಪರಿಸ್ಥಿತಿ ಉದ್ಭವವಾಗಲಿದೆ ಎನ್ನುವುದು ಸ್ಥಳೀಯರ ಆತಂಕವಾಗಿದೆ.

ಇನ್ನೂ ನಗರದ ಹೊರವಲಯದಲ್ಲಿ ಇರುವ ಚನ್ನಮಾನಹಳ್ಳಿ ಕೆರೆ ಕೂಡ ಮೂಲದಲ್ಲಿ ಸಾಕಷ್ಟು ವಿಸ್ತಾರವಾಗಿದ್ದು, ಒತ್ತುವರಿಯಿಂದಾಗಿ ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತಿದೆ. ಕನಿಷ್ಠ ಇದನ್ನು ಅಭಿವೃದ್ಧಿ ಪಡಿಸಿದ್ದೇ ಆದಲ್ಲಿ ಸುತ್ತಲಿನ ಅಂತರ್ಜಲ ವೃದ್ಧಿಯಾಗಲಿದೆ.  ರಂಗರಾಯರ ದೊಡ್ಡಿ ಕೆರೆ ತನ್ನ ಅಸ್ತಿತ್ವ  ತಕ್ಕಮಟ್ಟಿಗೆ ಉಳಿಸಿಕೊಂಡಿದೆ. ನಗರಾಭಿವೃದ್ಧಿ ಪ್ರಾಧಿಕಾರ ಇದನ್ನು  ಸುಂದರವಾಗಿ ರೂಪಿಸಿದ ಕಾರಣ ಇಂದು ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದುತ್ತಲಿದೆ.

ಆಗಬೇಕಾದದ್ದು ಏನು?
ರಾಮನಗರದ ನಗರ ಪ್ರದೇಶದಲ್ಲಿ ಮನೆಗೆ ಒಂದರಂತೆ ಕೊಳವೆ ಬಾವಿಗಳಿವೆ. ಇದಲ್ಲದೆ ಕುಡಿಯುವ ನೀರು ಪೂರೈಕೆಯ ಸಲುವಾಗಿಯೇ ನಗರಸಭೆ ಹತ್ತಾರು ಕೊಳವೆಬಾವಿಗಳನ್ನು ಕೊರೆಯುತ್ತಲಿದೆ. ಮಿತಿಮೀರಿದ ಬಳಕೆಯ ಪರಿಣಾಮ ಅಂತರ್ಜಲ ಮಟ್ಟ ಪಾತಾಳಕ್ಕೆ ತಲುಪಿದೆ.

ನಗರದ ಕೆರೆಗಳ ಅಭಿವೃದ್ಧಿಗೆ ಇಲ್ಲಿನ ಸ್ಥಳೀಯ ಸಂಸ್ಥೆಯಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಪರಿಣಾಮಕಾರಿ ಯೋಜನೆಯನ್ನು ಕಾರ್ಯಗತಗೊಳಿಸಿಲ್ಲ. ಇನ್ನಾದರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಒತ್ತುವರಿಯನ್ನು ತಡೆಗಟ್ಟಿ, ಪ್ರತಿ ಕೆರೆಯ ಗಡಿಯನ್ನು ಗುರುತಿಸಿ ಸಂರಕ್ಷಿಸಬೇಕು.

ಅವುಗಳ ನೀರಿನ ಮೂಲಗಳನ್ನು ಗುರುತು ಹಚ್ಚಿ, ಮಳೆ ನೀರು ಕೆರೆ ಸೇರುವಂತೆ ನೋಡಿಕೊಳ್ಳಬೇಕು. ಈ ಮೂಲಕ ಜಲಮೂಲಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವ ಕಾರ್ಯ ನಡೆಯಬೇಕಿದೆ ಎನ್ನುವುದು ಇಲ್ಲಿನ ಪರಿಸರಪ್ರಿಯರ ಆಗ್ರಹವಾಗಿದೆ.

*
ಜಲ ನಾಶದಿಂದ ಜನ ನಾಶ ಆರಂಭ ಎಂಬ ಮಾತು ಅಕ್ಷರಶಃ ಸತ್ಯ. ಇನ್ನಾದರೂ ನಾವು ನಮ್ಮಲ್ಲಿನ ಕೆರೆ, ಕಟ್ಟೆಗಳನ್ನು ಉಳಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಬೇಕಿದೆ.
-ಜಿ. ಶಿವಣ್ಣ ಕೊತ್ತೀಪುರ,
ಪರಿಸರ ಪ್ರಿಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT